ಶಿವರಾಜಕುಮಾರ್ ಜನ್ಮದಿನ ಆಚರಣೆ

ಶನಿವಾರ, ಜೂಲೈ 20, 2019
23 °C
ಚಾಮುಂಡೇಶ್ವರಿಗೆ ವಿಶೇಷ ಪೂಜೆ; ಸಿಹಿ ಹಂಚಿ ಸಂಭ್ರಮಾಚರಣೆ

ಶಿವರಾಜಕುಮಾರ್ ಜನ್ಮದಿನ ಆಚರಣೆ

Published:
Updated:
Prajavani

ಮೈಸೂರು: ನಗರದಲ್ಲಿನ ವಿಶ್ವವಿಖ್ಯಾತ ಜಗನ್ಮೋಹನ ಅರಮನೆ ಬಳಿಯ ಡಾ.ರಾಜ್‌ಕುಮಾರ್ ಉದ್ಯಾನದಲ್ಲಿ ಶುಕ್ರವಾರ ನಟ ಶಿವರಾಜ್‌ಕುಮಾರ್ ಅವರ 57ನೇ ಜನ್ಮ ದಿನವನ್ನು ಬೆಂಬಲಿಗರು, ಅಭಿಮಾನಿಗಳು ಅದ್ದೂರಿಯಿಂದ ಆಚರಿಸಿದರು.

ಡಾ.ರಾಜ್‌–ಶಿವ ಸೈನ್ಯ ಹಾಗೂ ಡಾ.ರಾಜ್‌–ಶಿವರಾಜ್‌ಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ಆಯೋಜಿಸಿದ್ದ ಜನ್ಮ ದಿನ ಆಚರಣೆ ಸಮಾರಂಭಕ್ಕೆ ಮೇಯರ್ ಪುಷ್ಪಲತಾ ಜಗನ್ನಾಥ್ ಕೇಕ್‌ ಕತ್ತರಿಸುವ ಮೂಲಕ ಚಾಲನೆ ನೀಡಿದರು.

ಆಷಾಢ ಮಾಸದ ಎರಡನೇ ಶುಕ್ರವಾರವೂ ಇಂದೇ ಆಗಿದ್ದರಿಂದ ಶಿವರಾಜ್‌ ಅಭಿಮಾನಿಗಳು ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಇದೇ ಸಂದರ್ಭ ತೋಳಿನ ಚಿಕಿತ್ಸೆಗಾಗಿ ಲಂಡನ್‌ಗೆ ತೆರಳಿದ್ದ ಶಿವರಾಜ್‌ಕುಮಾರ್ ಶೀಘ್ರದಲ್ಲೇ ಚೇತರಿಸಿಕೊಳ್ಳಲಿ. ಆಯುರಾರೋಗ್ಯ ಹೆಚ್ಚಲಿ ಎಂದು ವಿಶೇಷ ಪ್ರಾರ್ಥನೆಗೈದರು.

ವಿಶೇಷ ಪೂಜೆ, ಪ್ರಾರ್ಥನೆ ಬಳಿಕ ಅಭಿಮಾನಿಗಳು ಕೇಕ್‌ ಕತ್ತರಿಸಿ ಸಂಭ್ರಮಿಸಿದರು. ನಂತರ ತರಕಾರಿ ಬಾತ್, ಕೇಸರಿಬಾತ್ ಉಪಾಹಾರವನ್ನು ಜಮಾಯಿಸಿದ ಜನರಿಗೆ ವಿತರಿಸಿದರು. ಮುಂಜಾನೆಯಿಂದ ರಾಜ್‌ಕುಮಾರ್ ಉದ್ಯಾನದಲ್ಲಿ ನಡೆದಿದ್ದ ಕಲರವ ಮುಸ್ಸಂಜೆಯವರೆಗೂ ನಿರಂತರವಾಗಿತ್ತು. ವರನಟ ರಾಜ್‌ಕುಮಾರ್ ಕುಟುಂಬದ ನಟನೆಯ ಚಲನಚಿತ್ರ ಗೀತೆಗಳು ದಿನವಿಡಿ ಅನುರಣಿಸಿದ್ದು ವಿಶೇಷವಾಗಿತ್ತು.

ಅಭಿಮಾನಿಗಳ ಸಂಘದ ಅಧ್ಯಕ್ಷ ಬಿ.ಎಸ್.ರವಿ, ಚಲನಚಿತ್ರ ನಟ ಕೆ.ಜಿ.ಕೊಪ್ಪಲು ಸೋಮಣ್ಣ, ಸಂಘದ ಪದಾಧಿಕಾರಿಗಳಾದ ದೊರೆಸ್ವಾಮಿ, ಮಹೇಶ್‌, ಮಹದೇವ್‌, ಧರ್ಮ, ಸುರೇಶ್‌ ಮತ್ತಿತರರು ಶಿವರಾಜ್‌ಕುಮಾರ್ ಜನ್ಮದಿನಾಚರಣೆ ಸಮಾರಂಭದಲ್ಲಿ ಭಾಗಿಯಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !