ಅನ್ಯರಿಗಾಗಿ ನಮ್ಮ ಮನೆ ಕಿತ್ತುಕೊಳ್ಳುವುದು ತರವೇ?

7
ಶಿವರಾಮ ಕಾರಂತ ಬಡಾವಣೆ: ಭೂಸ್ವಾಧೀನಕ್ಕೆ ರೈತರ ಆಕ್ಷೇಪ l ಬಡಾವಣೆಯ ನಿವಾಸಿಗಳಲ್ಲಿ ಆತಂಕ

ಅನ್ಯರಿಗಾಗಿ ನಮ್ಮ ಮನೆ ಕಿತ್ತುಕೊಳ್ಳುವುದು ತರವೇ?

Published:
Updated:
Deccan Herald

ಬೆಂಗಳೂರು: ‘ಬೇರೆಯವರಿಗೆ ನಿವೇಶನ ನೀಡಲು ನಮ್ಮ ಮನೆಯನ್ನು ಕಿತ್ತುಕೊಳ್ಳುವುದು ಯಾವ ನ್ಯಾಯ. ಹೈಕೋರ್ಟ್‌ ಆದೇಶವನ್ನು ನಂಬಿ ಮನೆ ಕಟ್ಟಿದ್ದೇವೆ. ಈಗ ಏಕಾಏಕಿ ಅದನ್ನು ಬಿಟ್ಟುಕೊಡಬೇಕೆಂದರೆ ಹೇಗೆ?’  -ಡಾ.ಕೆ.ಶಿವರಾಮ ಕಾರಂತ ಬಡಾವಣೆಗಾಗಿ ನೆಲೆ ಕಳೆದುಕೊಳ್ಳುವ ಆತಂಕ ಎದುರಿಸುತ್ತಿರುವ ಬ್ಯಾಲಹಳ್ಳಿ ಗ್ರಾಮಸ್ಥರ ಪ್ರಶ್ನೆ ಇದು. ಈ ಬಡಾವಣೆಗೆ 3,546 ಎಕರೆ 12 ಗುಂಟೆ ಜಾಗವನ್ನು ಸ್ವಾಧೀನಪಡಿಸಿಕೊಳ್ಳಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನವೆಂಬರ್‌ 1ರಂದು ಅಂತಿಮ ಅಧಿಸೂಚನೆ ಹೊರಡಿಸಿರುವುದು ಗ್ರಾಮಸ್ಥರ ನಿದ್ದೆಗೆಡಿಸಿದೆ.

‘ಈ ಬಡಾವಣೆಗೆ ಹತ್ತು ವರ್ಷಗಳ ಹಿಂದೆ ಪ್ರಾಥಮಿಕ ಅಧಿಸೂಚನೆ ಹೊರಡಿಸುವ ಮುನ್ನ ಇಲ್ಲಿ ಅನೇಕ ಮನೆಗಳಿದ್ದೆವು. ಈ ಅಧಿಸೂಚನೆಯನ್ನು ಹೈಕೋರ್ಟ್‌ ರದ್ದುಪಡಿಸಿದ ಬಳಿಕ ಬಿಡಿಎಯಿಂದ ನಿರಾಕ್ಷೇಪಣ ಪತ್ರ ಪಡೆದೇ ಇಲ್ಲಿ ಖಾಸಗಿ ಬಡಾವಣೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇಲ್ಲಿನ ಪ್ರತಿ ಬಡಾವಣೆಯಲ್ಲೂ ಏನಿಲ್ಲವೆಂದರೂ 50ರಿಂದ 70 ಮನೆಗಳಿವೆ. ಇವುಗಳಲ್ಲಿ ವಾಸಿಸುತ್ತಿರುವವರ ಪಾಡೇನು’ ಎಂದು ಪ್ರಶ್ನಿಸುತ್ತಾರೆ ಬ್ಯಾಲಹಳ್ಳಿಯ ಚೌಡಪ್ಪ.

ಈ ಮನೆಗಳಿಗೆ ಗ್ರಾಮ ಪಂಚಾಯಿತಿ ವತಿಯಿಂದಲೇ ಕಾಂಕ್ರಿಟ್‌ ರಸ್ತೆಗಳನ್ನು ನಿರ್ಮಿಸಲಾಗಿದೆ. ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಇಂತಹ ಅಭಿವೃದ್ಧಿ ಕಾರ್ಯಗಳಿಗಾಗಿ ಸರ್ಕಾರವೇ ಲಕ್ಷಾಂತರ ರೂಪಾಯಿ ವೆಚ್ಚ ಮಾಡಲಾಗಿದೆ.

‘ಇಲ್ಲಿ ನಡೆದಿರುವ ಅಭಿವೃದ್ಧಿಯನ್ನು ಕಡೆಗಣಿಸಿ ಏಕಾಏಕಿ ಹೊಸ ಬಡಾವಣೆ ನಿರ್ಮಿಸಲು ಬಿಡಿಎ ಹೊರಟಿದೆ. ಸುಪ್ರೀಂ ಕೋರ್ಟ್ ಏನೇ ತೀರ್ಪು ನೀಡಿರಬಹುದು. ಆದರೆ, ಈ ನಿರ್ಧಾರದಿಂದ ಜನರಿಗೆ ಹಾಗೂ ಸರ್ಕಾರಕ್ಕೆ ಆಗುವ ನಷ್ಟವನ್ನು ಭರಿಸುವವರು ಯಾರು’ ಎಂದು ಅವರು ಪ್ರಶ್ನಿಸಿದರು.

‘ನಮಗೆ ಸೇರಿದ ಸುಮಾರು 10 ಎಕರೆ ಜಾಗವು ಈ ಬಡಾವಣೆ ಸಲುವಾಗಿ ಭೂಸ್ವಾಧೀನಕ್ಕೊಳಪಡಲಿದೆ. ನಾನು ಈ ಜಾಗವನ್ನು ಪರಭಾರೆ ಮಾಡಿದ್ದೇನೆ. ಈಗಾಗಲೇ ಇಲ್ಲಿ ಜನವಸತಿ ತಲೆ ಎತ್ತಿರುವುದರಿಂದ ಬಡಾವಣೆ ನಿರ್ಮಾಣಕ್ಕೆ ಅದೇ ಜಾಗವನ್ನು ಬಳಸಿಕೊಳ್ಳುವುದು ತರವಲ್ಲ’ ಎಂದು ಅಭಿಪ್ರಾಯಪಟ್ಟರು.

 ‘ಕೃಷಿಕಾಯಕ ಬಿಟ್ಟು ಬೇರೆ ಯಾವ ಕೆಲಸ ಗೊತ್ತಿಲ್ಲ’ 
‘ನನಗೆ ರೈತಾಪಿ ಬಿಟ್ಟು ಬೇರೆ ಉದ್ಯೋಗ ಗೊತ್ತಿಲ್ಲ. ಈಗ ಬಿಡಿಎ ನನ್ನ ಜಾಗವನ್ನು ಸ್ವಾಧೀನಪಡಿಸಿಕೊಂಡರೆ, ನನ್ನ ಬದುಕನ್ನೇ ಕಸಿದುಕೊಂಡಂತೆ’ ಎಂದು ಅಳಲು ತೋಡಿಕೊಳ್ಳುತ್ತಾರೆ ಲಕ್ಷ್ಮಿಪುರ ಗ್ರಾಮದ ರೈತ ಕೃಷ್ಣಪ್ಪ.

‘ಲಕ್ಷ್ಮಿಪುರ ಗ್ರಾಮದ ಸರ್ವೆ ನಂಬರ್‌ 55, 57, 58, 59 ಹಾಗೂ 60ರಲ್ಲಿ ನನ್ನ ಕುಟುಂಬವು 11 ಎಕರೆ ಜಮೀನು ಹೊಂದಿದೆ. ಈ ಬಡಾವಣೆಯ ಪ್ರಾಥಮಿಕ ಅಧಿಸೂಚನೆಯನ್ನು ಹೈಕೋರ್ಟ್‌ ರದ್ದುಪಡಿಸಿದ ಬಳಿಕ ನಾನು  300 ತೆಂಗಿನ ಗಿಡಗಳನ್ನು, 200 ಮಾವಿನ ಗಿಡಗಳನ್ನು ಹಾಗೂ ಸುಮಾರು 5 ಸಾವಿರ ಸಿಲ್ವರ್‌ ಓಕ್‌ ಮರಗಳನ್ನು ಬೆಳೆಸಿದ್ದೇನೆ. ಈಗ ಮತ್ತೆ ಏಕಾಏಕಿ ಜಾಗ ಬಿಟ್ಟುಕೊಡಿ ಎಂದರೆ ಹೇಗೆ’ ಎಂದು ಪ್ರಶ್ನಿಸುತ್ತಾರೆ ಅವರು.

’ಫಸಲು ನೀಡುವ 60 ತೆಂಗಿನ ಮರಗಳು ಹಾಗೂ 40 ಮಾವಿನ ಮರಗಳಿವೆ. ಅವುಗಳನ್ನೆಲ್ಲ ಕಡಿದು ಅಲ್ಲಿ ನಿವೇಶನ ಮಾಡುತ್ತಾರೆ ಎಂಬುದನ್ನು ಊಹಿಸಿಕೊಂಡಾಗಕರುಳು ಚುರುಕ್‌ ಎನ್ನುತ್ತದೆ’ ಎಂದು ಬೇಸರ ವ್ಯಕ್ತಪಡಿಸಿದರು. 

‘ಬಡಾವಣೆ ನಿರ್ಮಾಣಕ್ಕೆ ಜಾಗವನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಗುವ ಮುನ್ನ ಬಿಡಿಎ ನಮ್ಮ ಅಭಿಪ್ರಾಯವನ್ನು ಕೇಳಿಲ್ಲ. ಈಗ ರೈತರ ಭೂಮಿಯನ್ನು ಕಿತ್ತುಕೊಳ್ಳುವುದು ಅಪರಾಧವಲ್ಲವೇ’ ಎಂದರು. 

‘ಸುಪ್ರೀಂ ಕೋರ್ಟ್‌ಗೆ ವಾಸ್ತವ ತಿಳಿಸಿ’
‘ಸರ್ಕಾರದ ಗೊಂದಲಮಯ ನೀತಿಯಿಂದಲೇ ಈ ಸಮಸ್ಯೆ ಸೃಷ್ಟಿಯಾಗಿದೆ. ಈಗಲೂ ಬಿಡಿಎ ಬಳಿಯಾಗಲೀ, ಸರ್ಕಾರದ ಬಳಿಯಾಗಲೀ ಈ ಬಡಾವಣೆ ನಿರ್ಮಿಸಲು ಉದ್ದೇಶಿಸಿರುವ ಗ್ರಾಮಗಳಲ್ಲಿ ಇತ್ತೀಚೆಗೆ ಏನೆಲ್ಲ ಬೆಳವಣಿಗೆಗಳಾಗಿವೆ ಎಂಬ ಮಾಹಿತಿ ಇಲ್ಲ. ಇನ್ನು ಮುಂದಾದರೂ ಸರ್ಕಾರ ಇಲ್ಲಿನ ವಾಸ್ತವ ಪರಿಸ್ಥಿತಿಯ ಬಗ್ಗೆ ಹಾಗೂ ಹೊಸ ಬಡಾವಣೆ ನಿರ್ಮಿಸುವ ಬಗ್ಗೆ ಏನೆಲ್ಲ ಅನನುಕೂಲಗಳಾಗಲಿವೆ ಎಂಬ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡಬೇಕು. ಈ ಸಲುವಾಗಿ ಸಮಗ್ರ ಅಧ್ಯಯನ ನಡೆಸಬೇಕು’ ಎಂದು ಕೃಷ್ಣಪ್ಪ ಒತ್ತಾಯಿಸಿದರು. 

‘ಅಂಗನವಾಡಿ ಏನು ಮಾಡುತ್ತಾರೆ’
‘ಬ್ಯಾಲಹಳ್ಳಿಯಲ್ಲಿ ಭೂಸ್ವಾಧೀನಕ್ಕೆ ಒಳಪಡುವ ಜಾಗದಲ್ಲಿ ಸರ್ಕಾರವೇ ಅಂಗನವಾಡಿ ಕಟ್ಟಡ ನಿರ್ಮಿಸಿದೆ. ಈಗ ಅದನ್ನು ಕೂಡಾ ಮುಚ್ಚುತ್ತಾರೆಯೇ. ಈ ಅಂಗನವಾಡಿಗೆ ಹೋಗುವ ಮಕ್ಕಳು ಮುಂದೇನು ಮಾಡಬೇಕು’ ಎಂದು ಚೌಡಪ್ಪ ಪ್ರಶ್ನಿಸಿದರು.

*
ರಾಜಕಾರಣಿಗಳು ಹಾಗೂ ಅಧಿಕಾರಿಗಳು ಸೇರಿ ಮನಬಂದಂತೆ, ಬಿಡಿಎ ಬಡಾವಣೆ ನಿರ್ಮಿಸಲು ಮುಂದಾಗುತ್ತಾರೆ. ಇದೊಂದು ಹಣಮಾಡುವ ದಂಧೆ.
-ಕೃಷ್ಣಪ್ಪ, ಲಕ್ಷ್ಮಿಪುರ ನಿವಾಸಿ

ಬರಹ ಇಷ್ಟವಾಯಿತೆ?

 • 8

  Happy
 • 1

  Amused
 • 3

  Sad
 • 0

  Frustrated
 • 1

  Angry

Comments:

0 comments

Write the first review for this !