‘ಅನ್ನದಾತರಿಗೆ ಅನ್ಯಾಯ ಮಾಡದಿರಿ’

7
ಶಿವರಾಮ ಕಾರಂತ ಬಡಾವಣೆ: ಭೂಸ್ವಾಧೀನ ಕೈಬಿಡಲು ಒತ್ತಾಯಿಸಿ ಪ್ರತಿಭಟನೆ

‘ಅನ್ನದಾತರಿಗೆ ಅನ್ಯಾಯ ಮಾಡದಿರಿ’

Published:
Updated:
Prajavani

ಬೆಂಗಳೂರು: ‘ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಶಿವರಾಮ ಕಾರಂತ ಬಡಾವಣೆಗೆ ಭೂಸ್ವಾಧೀನ ನಡೆಸಲು ಹೊರಡಿಸಿರುವ ಅಂತಿಮ ಅಧಿಸೂಚನೆಯನ್ನು ರದ್ದುಪಡಿಸಬೇಕು‘ ಎಂದು ಒತ್ತಾಯಿಸಿ ರೈತರು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಕೊಡಿಗೇಹಳ್ಳಿಯಿಂದ ಸಹಕಾರ ನಗರ ಮಾರ್ಗವಾಗಿ ಆನಂದರಾವ್ ವೃತ್ತದ ಗಾಂಧಿ ಪ್ರತಿಮೆವರೆಗೆ ಮೆರವಣಿಗೆಯಲ್ಲಿ ಸಾಗಿಬಂದ ರೈತರು, ಬಹಿರಂಗ ಸಭೆ ನಡೆಸಿದರು. 

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ, ‘ಬಡಾವಣೆ ನಿರ್ಮಿಸುವುದಕ್ಕಾಗಿ ರಾಜ್ಯ ಸರ್ಕಾರ 17 ಹಳ್ಳಿಗಳ ರೈತರಿಗೆ ಅನ್ಯಾಯ ಮಾಡಬಾರದು. ಭೂ ಸ್ವಾಧೀನಕ್ಕೆ ಹೊರಡಿಸಿರುವ ಅಧಿಸೂಚನೆಯನ್ನು ರದ್ದುಪಡಿಸಿ ಅನ್ನದಾತರಿಗೆ ನ್ಯಾಯ ಒದಗಿಸಬೇಕು’ ಎಂದು ಆಗ್ರಹಿಸಿದರು.

ರೈತ ಸಂಘದ ಅಧ್ಯಕ್ಷ ಕೊಡಿಗೇಹಳ್ಳಿ ಚಂದ್ರಶೇಖರ್, ‘ಬಡಾವಣೆ ನಿರ್ಮಾಣಕ್ಕಾಗಿ 17 ಗ್ರಾಮಗಳಿಗೆ ಸೇರಿದ್ದ 3,546 ಎಕರೆ 12 ಗುಂಟೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ಬಿಡಿಎ ಅಧಿಸೂಚನೆ ಹೊರಡಿಸಿತ್ತು. ಆದರೆ, ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ 257 ಎಕರೆ ಹಾಗೂ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ 446 ಎಕರೆ 7 ಗುಂಟೆ ಜಮೀನನ್ನು ಡಿನೋಟಿಫಿಕೇಷನ್ ಮಾಡಲಾಗಿದೆ. ಪ್ರಾಥಮಿಕ ಅಧಿಸೂಚನೆ ಪ್ರಕಟವಾದ ಬಳಿಕವೂ ಸುಮಾರು 1,356 ಎಕರೆಗಳಷ್ಟು ಜಾಗ ಭೂಪರಿವರ್ತನೆ ಮಾಡಲಾಗಿದೆ. ಈ ಸಂದರ್ಭದಲ್ಲಿ  ₹4,500 ಕೋಟಿಯಷ್ಟು ಭ್ರಷ್ಟಾಚಾರ ನಡೆದಿದೆ’ ಎಂದು ಆರೋಪಿಸಿದರು.

‘ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಲಾದ ಜಮೀನಿನ ಪೈಕಿ ಶೇ 80ರಷ್ಟು ಭಾಗವು ಸಂಪೂರ್ಣ ಅಭಿವೃದ್ಧಿಗೊಂಡಿದೆ. ಇಲ್ಲಿ ಸುಮಾರು 25 ಸಾವಿರ ಕಟ್ಟಡಗಳು ನಿರ್ಮಾಣವಾಗಿವೆ. ಕಟ್ಟಡ ನಿರ್ಮಿಸುವುದಕ್ಕೆ ಬಿಡಿಎ ಅಧಿಕಾರಿಗಳೇ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ನೀಡಿದ್ದಾರೆ. ಇವುಗಳಿಗೆ ಡಾಂಬರು ರಸ್ತೆ, ಕುಡಿಯುವ ನೀರು ಹಾಗೂ ವಿದ್ಯುತ್‌ ಸೌಕರ್ಯ ಕಲ್ಪಿಸಲಾಗಿದೆ. ಕೆಲವರು ಸಾಲ ಮಾಡಿ ಇಲ್ಲಿ ಮನೆ ನಿರ್ಮಿಸಿದ್ದಾರೆ. ಅವರ ಪರಿಸ್ಥಿತಿ ಏನು’ ಎಂದು ಅವರು ಪ್ರಶ್ನಿಸಿದರು.

ಈ ಬಡಾವಣೆಗೆ ತಮ್ಮ ಜಮೀನು ಬಳಸುವುದಕ್ಕೆ ಪ್ರಶ್ನಿಸಿ ಹಲವು ರೈತರು ಹೈಕೋರ್ಟ್‌ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ್ದ ಹೈಕೋರ್ಟ್, ಅಧಿಸೂಚನೆ ವಜಾಗೊಳಿಸಿ ಆದೇಶ ಮಾಡಿತ್ತು. ಇದನ್ನು ಬಿಡಿಎ, ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಹೈಕೋರ್ಟ್‌ ಆದೇಶವನ್ನು ರದ್ದುಪಡಿಸಿದ್ದ ಸುಪ್ರೀಂ ಕೋರ್ಟ್‌ ಈ ಬಡಾವಣೆಯ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಆದೇಶ ಮಾಡಿತ್ತು.

‘ಹೈಕೋರ್ಟ್ ಆದೇಶ ಹಾಗೂ ಡಿನೋಟಿಫಿಕೇಷನ್ ಸಂಗತಿಯನ್ನು ಬಿಡಿಎ ಮರೆಮಾಚಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿ ತನ್ನ ಪರ ಆದೇಶ ಪಡೆದುಕೊಂಡಿದೆ. ಆ ಆದೇಶವನ್ನೇ ಮುಂದಿಟ್ಟುಕೊಂಡು ಬಡಾವಣೆ ನಿರ್ಮಾಣಕ್ಕೆ ಮುಂದಾಗಿರುವುದು ಖಂಡನೀಯ. ಇದರಿಂದ 17 ಹಳ್ಳಿಗಳ ರೈತರು ಬೀದಿಗೆ ಬೀಳುವಂತಾಗಿದೆ’ ಎಂದು ಚಂದ್ರಶೇಖರ್‌ ದೂರಿದರು.  

 

ಗೃಹಕಚೇರಿಯಲ್ಲೇ ಜೀವ ಬೆದರಿಕೆ; ಆಯುಕ್ತರ ವಿರುದ್ಧ ದೂರು

ಭೂ ಸ್ವಾಧೀನ ಅಧಿಸೂಚನೆ ಹಿಂಪಡೆಯುವಂತೆ ಒತ್ತಾಯಿಸಲು ರೈತ ಮುಖಂಡರ ನಿಯೋಗ ಮುಖ್ಯಮಂತ್ರಿಯವರನ್ನು ಭೇಟಿಯಾಗಲು ಅವರ ಗೃಹ ಕಚೇರಿಗೆ ಹೋಗಿತ್ತು. ಅದೇ ವೇಳೆ ಬಿಡಿಎ ಆಯುಕ್ತ ರಾಕೇಶ್‌ ಸಿಂಗ್‌, ರೈತ ಮುಖಂಡ ಕೆಂಪಣ್ಣ ಎಂಬುವರಿಗೆ ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಆ ಸಂಬಂಧ ಹೈಗ್ರೌಂಡ್ಸ್ ಠಾಣೆಗೆ ದೂರು ನೀಡಿರುವ ಕೆಂಪಣ್ಣ, ‘ನನಗೆ ಜೀವ ಬೆದರಿಕೆ ಹಾಕಿರುವ ರಾಕೇಶ್‌ ಸಿಂಗ್‌ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ’ ಎಂದು ಒತ್ತಾಯಿಸಿದ್ದಾರೆ.

ಹೈಗ್ರೌಂಡ್ಸ್ ಪೊಲೀಸರು, ‘ದೂರು ಆಧರಿಸಿ ಎನ್‌ಸಿಆರ್ (ಗಂಭೀರವಲ್ಲದ ಅಪರಾಧ) ಮಾಡಿಕೊಳ್ಳಲಾಗಿದೆ. ಅದನ್ನು ನ್ಯಾಯಾಲಯದ ಗಮನಕ್ಕೆ ತಂದು, ಅದರ ನಿರ್ದೇಶನದಂತೆ ಮುಂದುವರಿಯಲಿದ್ದೇವೆ’ ಎಂದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !