ವಿಜಯಪುರ: ಶಿವನ ಜಪದಲ್ಲಿ ಭಕ್ತ ಸಾಗರ...

ಮಂಗಳವಾರ, ಮಾರ್ಚ್ 26, 2019
22 °C
ದೇಗುಲಗಳಲ್ಲಿ ವಿಶೇಷ ಪೂಜೆ, ಮನೆಗಳಲ್ಲಿ ಇಷ್ಟಲಿಂಗಕ್ಕೆ ಅಭಿಷೇಕ; ರಾತ್ರಿಯಿಡಿ ಜಾಗರಣೆ

ವಿಜಯಪುರ: ಶಿವನ ಜಪದಲ್ಲಿ ಭಕ್ತ ಸಾಗರ...

Published:
Updated:
Prajavani

ವಿಜಯಪುರ: ನಗರವೂ ಸೇರಿದಂತೆ ಜಿಲ್ಲೆಯ ಎಲ್ಲೆಡೆ ಸೋಮವಾರ ಮಹಾ ಶಿವರಾತ್ರಿಯನ್ನು, ಭಕ್ತ ಸಮೂಹ ಶ್ರದ್ಧಾ-ಭಕ್ತಿಯಿಂದ ಆಚರಿಸಿತು.

ನಸುಕಿನಿಂದಲೇ ಶಿವ ದೇಗುಲಗಳು ಸೇರಿದಂತೆ, ಇತರೆ ದೇಗುಲಗಳಲ್ಲೂ ಮಹಾ ಶಿವರಾತ್ರಿಯ ಅಂಗವಾಗಿ ವಿಶೇಷ ಪೂಜೆ, ಲಿಂಗ ಪೂಜೆ, ರುದ್ರಾಭಿಷೇಕ, ಬಿಲ್ವಾರ್ಚನೆ, ಸಹಸ್ರ ನಾಮಾವಳಿ ಸೇರಿದಂತೆ ವಿವಿಧ ಪೂಜೆಗಳು ನಡೆದವು. ಶಿವ ದೇಗುಲಗಳಲ್ಲಿ ತ್ರಿಕಾಲ ಪೂಜೆ ನಡೆಯಿತು. ಎಲ್ಲೆಡೆ ಪಾನಕ, ಹಣ್ಣುಗಳ ವಿತರಣೆಯೂ ಗೋಚರಿಸಿತು.

ಬಹುತೇಕ ಭಕ್ತರು ನಸುಕಿನಲ್ಲೇ ದೇಗುಲಕ್ಕೆ ಭೇಟಿ ನೀಡಿ ಶಿವನ ದರ್ಶನ ಪಡೆದರು. ಕೆಲವರು ದೇಗುಲಗಳಲ್ಲೇ ವಿಶೇಷ ಪೂಜೆ ನಡೆಸಿ, ಜಪ ಕೈಗೊಂಡರು. ಇಡೀ ದಿನ ಉಪವಾಸ ವ್ರತ ಆಚರಿಸಿದರು. ಮಹಾ ಶಿವರಾತ್ರಿ ಅಂಗವಾಗಿ ರುದ್ರ ಮಂತ್ರ ಪಠಣ, ಧೂಪ, ದೀಪಗಳಿಂದ ಶಿವನಿಗೆ ಭಕ್ತಿ ಭಾವದಿಂದ ಪೂಜೆ ಸಲ್ಲಿಸಿದರು.

ನಗರದ ಹೊರ ವಲಯದಲ್ಲಿರುವ ಶಿವಗಿರಿ, ಅಡವಿ ಶಂಕರಲಿಂಗ ದೇಗುಲ, ನಗರದ ಜೋರಾಪುರ ಪೇಟೆಯಲ್ಲಿರುವ ಶಂಕರಲಿಂಗ ದೇವಾಲಯ, ಮಲ್ಲಿಕಾರ್ಜುನ ದೇವಾಲಯ, 770 ಲಿಂಗದ ಗುಡಿ, ಐತಿಹಾಸಿಕ ಸುಂದರೇಶ್ವರ ದೇವಾಲಯ, ಚಿದಂಬರ ನಗರದಲ್ಲಿನ ಚಿದಂಬರೇಶ್ವರ ದೇವಾಲಯ, ಬಿಎಲ್‌ಡಿಇ ನೌಕರರ ಬಡಾವಣೆಯ ಶಿವ ದೇಗುಲ ಸೇರಿದಂತೆ ವಿವಿಧ ಬಡಾವಣೆಗಳಲ್ಲಿರುವ ಶಿವ ದೇವಾಲಯಗಳಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ವಿವಿಧ ವಿಶೇಷ ಧಾರ್ಮಿಕ ಕಾರ್ಯಕ್ರಮ ನಡೆದವು.

ಭಕ್ತರ ಅನುಕೂಲಕ್ಕಾಗಿ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ ವತಿಯಿಂದ ನಗರದ ವಿವಿಧೆಡೆಯಿಂದ ಶಿವಗಿರಿಗೆ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಟಂಟಂ, ಕ್ರೂಸರ್, ಬೈಕ್‌ಗಳಲ್ಲಿ ಬೆಳಿಗ್ಗೆಯಿಂದಲೇ ಭಕ್ತರು ದೇಗುಲಗಳಿಗೆ ತೆರಳಿದ ದೃಶ್ಯ ನಗರದ ಎಲ್ಲೆಡೆ ಗೋಚರಿಸಿತು. ಮುಸ್ಸಂಜೆಯಾಗುತ್ತಿದ್ದಂತೆ ಮನೆಯಿಂದ ಹೊರ ಬಂದ ಭಕ್ತ ಸಮೂಹ ನೇರವಾಗಿ ದೇಗುಲಗಳತ್ತ ಹೆಜ್ಜೆ ಹಾಕಿ ಜಾಗರಣೆಯಲ್ಲಿ ತಲ್ಲೀನವಾಯಿತು.

ಮಹಾ ಶಿವರಾತ್ರಿ ಆಚರಣೆಗಾಗಿ ಎಲ್ಲ ದೇವಾಲಯಗಳು ತಳಿರು ತೋರಣಗಳಿಂದ ಸಿಂಗಾರಗೊಂಡು, ಹಬ್ಬದ ಸಂಭ್ರಮ ಇಮ್ಮಡಿಗೊಳಿಸಿದ್ದವು. ತೆಂಗು, ಬಾಳೆ, ಮಾವಿನ ತೋರಣ, ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸಿದವು.

ನಗರದ ಪ್ರತಿ ದೇಗುಲದ ಆಸುಪಾಸು ತಾತ್ಕಾಲಿಕ ಅಂಗಡಿಗಳು ತಲೆ ಎತ್ತಿದ್ದು, ತೆಂಗಿನಕಾಯಿ, ಬಾಳೆ ಹಣ್ಣು, ದ್ರಾಕ್ಷಿ ಸೇರಿದಂತೆ ಇತರ ಹಣ್ಣುಗಳು, ಊದುಬತ್ತಿ–ಕರ್ಪೂರದ ಮಾರಾಟ ಭರ್ಜರಿಯಾಗಿ ನಡೆದಿತ್ತು.

ಸಂಗೀತ ಸೇವೆ, ಭಜನೆ, ಜಾಗರಣೆ, ವಿಶೇಷ ಪೂಜೆ ಸೇರಿದಂತೆ ವಿವಿಧ ಕಾರ್ಯಕ್ರಮ ನಡೆದವು. ಕೆಲ ಭಕ್ತರು ನೋಟ್‌ ಪುಸ್ತಕಗಳಲ್ಲಿ ‘ಓಂ ನಮಃ ಶಿವಾಯ’ ಎಂಬ ಮಂತ್ರಾಕ್ಷರ ಬರೆದಿದ್ದು ಗಮನ ಸೆಳೆಯಿತು. ‘ಶಿವ ಶಿವ ಎಂದರೆ ಭಯವಿಲ್ಲ... ಶಿವ ನಾಮಕೆ ಸಾಟಿ ಬೇರಿಲ್ಲ...’ ‘ಓಂ ನಮಃ ಶಿವಾಯ...’, ‘ಹರ ಹರ ಮಹಾದೇವ’ ಎಂಬಿತ್ಯಾದಿ ಭಕ್ತಿ ಗೀತೆಗಳು ದೇಗುಲಗಳಲ್ಲಿ ಅನುರುಣಿಸಿದವು.

ಎಲ್ಲೆಡೆ ಶಿವನ ದೇಗುಲಕ್ಕೆ ಭೇಟಿ ನೀಡಿದ ಶಿವಭಕ್ತರು ದರ್ಶನ ಪಡೆದು ಧನ್ಯತಾಭಾವ ಹೊಂದಿದರು. ಮುಂಜಾನೆಯಿಂದ ಉಪವಾಸವಿದ್ದ ಭಕ್ತರು ರಾತ್ರಿ ಫಲಾಹಾರ ಸ್ವೀಕರಿಸಿ, ಜಾಗರಣೆ ನಡೆಸಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !