ಸೋಮವಾರ, ಡಿಸೆಂಬರ್ 9, 2019
17 °C
ಭಾರತೀಯ ಸಂಸ್ಕೃತಿ ಉತ್ಸವ–5ಕ್ಕೆ ಸೋಮವಾರ ವಿಧ್ಯುಕ್ತ ಚಾಲನೆ; ಕಲಾವಿದರ ಕಲರವ

ಶೋಭಾಯಾತ್ರೆಯುದ್ದಕ್ಕೂ ವಿಜೃಂಭಿಸಿದ ಕೇಸರಿ..!

ಡಿ.ಬಿ.ನಾಗರಾಜ Updated:

ಅಕ್ಷರ ಗಾತ್ರ : | |

ವಿಜಯಪುರ: ಗುಮ್ಮಟ ನಗರಿ ವಿಜಯಪುರ ಸೋಮವಾರ ಸಂಪೂರ್ಣ ಕೇಸರಿಮಯ. ಎತ್ತ ನೋಡಿದರೂ ಹಿಂದೂತ್ವದ ಪ್ರತೀಕದ ಬಣ್ಣ ಎಂದೇ ಬಿಂಬಿತವಾಗಿರುವ ಕೇಸರಿ ಎಲ್ಲೆಡೆ ವಿಜೃಂಭಿಸಿತು.

ಭಾರತ ವಿಕಾಸ ಸಂಗಮ ವಿಜಯಪುರ ತಾಲ್ಲೂಕಿನ ಕಗ್ಗೋಡದಲ್ಲಿ ಡಿ.24ರಿಂದ 31ರವರೆಗೆ ಆಯೋಜಿಸಿರುವ ಭಾರತೀಯ ಸಂಸ್ಕೃತಿ ಉತ್ಸವ–5ರ ಉದ್ಘಾಟನೆ ದಿನ, ನಗರದಲ್ಲಿ ನಡೆದ ಬೃಹತ್ ಶೋಭಾಯಾತ್ರೆಯಲ್ಲಿ ಗೋಚರಿಸಿದ ಚಿತ್ರಣವಿದು.

ಸಚಿವ ಎಂ.ಬಿ.ಪಾಟೀಲ ನಿವಾಸದ ಬಳಿಯಿಂದ ಆರಂಭಗೊಂಡ ಶೋಭಾಯಾತ್ರೆ ಬರೋಬ್ಬರಿ ನಾಲ್ಕು ತಾಸಿಗೂ ಹೆಚ್ಚಿನ ಅವಧಿ ನಡೆಯಿತು. ಯಾತ್ರೆಯುದ್ದಕ್ಕೂ ಕಲಾವಿದರ ಕಲರವ ಮೇಳೈಸಿತ್ತು. ಮಕ್ಕಳು ದಣಿವರಿಯದೆ ಅಂದಾಜು ಐದು ಕಿ.ಮೀ. ದೂರ ಉತ್ಸಾಹದಿಂದ ಹೆಜ್ಜೆ ಹಾಕಿದರು.

ತಂಡೋಪ ತಂಡವಾಗಿ ಜನಸಾಗರ ಶೋಭಾಯಾತ್ರೆಯಲ್ಲಿ ಭಾಗಿಯಾಯ್ತು. ಒಂದೊಂದು ರಸ್ತೆ ಪ್ರವೇಶಿಸುತ್ತಿದ್ದಂತೆ ಯಾತ್ರೆ ವಿಸ್ತಾರಗೊಳ್ಳುತ್ತಿತ್ತು. ರಸ್ತೆಯ ಎರಡೂ ಬದಿ ಜನಸ್ತೋಮ ಜಮಾಯಿಸಿ ತಮ್ಮೂರಿನಲ್ಲಿ ನಡೆಯುತ್ತಿರುವ ಬೃಹತ್‌ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳುವ ಜತೆ ತಮ್ಮ ಮೊಬೈಲ್‌ಗಳಲ್ಲಿ ರೆಕಾರ್ಡ್‌ ಮಾಡಿಕೊಂಡ ದೃಶ್ಯ ಹಾದಿಯುದ್ದಕ್ಕೂ ಗೋಚರಿಸಿತು.

ಕೆಲ ಯುವಕರು ಸಾಮಾಜಿಕ ಜಾಲತಾಣ ಫೇಸ್‌ಬುಕ್ ಸೇರಿದಂತೆ ಇನ್ನಿತರೆ ತಾಣಗಳಲ್ಲಿ ತಮ್ಮೂರಿನ ಕೇಸರಿ ವೈಭವವನ್ನು ನೇರಪ್ರಸಾರ ಮಾಡಿದರು. ಹಾದಿಯುದ್ದಕ್ಕೂ ಸೆಲ್ಫಿ ತೆಗೆದುಕೊಂಡು, ಜಾಲತಾಣದ ಸ್ಟೇಟಸ್‌ನಲ್ಲಿ ಅಪ್‌ಲೋಡ್‌ ಮಾಡುತ್ತಿದ್ದ ಚಿತ್ರಣ ಕಂಡು ಬಂದಿತು.

ಒಂದೊಂದು ರಸ್ತೆಯಲ್ಲಿ ಅರ್ಧ ತಾಸಿಗೂ ಹೆಚ್ಚಿನ ಅವಧಿ ಯಾತ್ರೆ ಸಾಗಿತು. ಬಹುತೇಕ ರಸ್ತೆಗಳ ಬದಿ ರಂಗೋಲಿ ಕಲೆ ಅನಾವರಣಗೊಂಡಿತ್ತು. ಎಲ್ಲೆಲ್ಲೂ ಸರ್ವರಿಗೂ ಸ್ವಾಗತ, ಶರಣು ಬನ್ನಿ ಘೋಷ ವಾಕ್ಯ ಗಮನ ಸೆಳೆದವು. ವಿಜಯಪುರದ ಆರಾಧ್ಯ ದೈವ ಸಿದ್ಧೇಶ್ವರ ದೇಗುಲದ ಮುಂಭಾಗ ರಂಗೋಲಿ ಕಲಾವಿದ ತುಕಾರಾಂ ಬೇನೂರ ಬಿಡಿಸಿದ್ದ ‘ಓಂ’ ರಂಗೋಲಿ ಕಲಾಕೃತಿ ಎಲ್ಲರ ಗಮನ ಸೆಳೆಯಿತು.

ಶೋಭಾಯಾತ್ರೆ ಸಾಗಿದ ಹಾದಿಯುದ್ದಕ್ಕೂ, ರಸ್ತೆಯ ಎರಡು ಬದಿ ನಿಂತಿದ್ದ ಜನಸ್ತೋಮ ಕುತೂಹಲದಿಂದ ವೀಕ್ಷಿಸಿತು. ಹಲವೆಡೆ ಪುಷ್ಪವೃಷ್ಟಿಗೈದು ಹರ್ಷ ವ್ಯಕ್ತಪಡಿಸಿತು. ಇನ್ನೂ ಕೆಲವೆಡೆ ಯಾತ್ರೆಯಲ್ಲಿ ಹೆಜ್ಜೆ ಹಾಕುತ್ತಿದ್ದ ಅಬಾಲ ವೃದ್ಧರಾದಿಯಾಗಿ, ಕಲಾವಿದರು, ಸ್ತಬ್ಧಚಿತ್ರಗಳ ವಾಹನ ಚಾಲಕರು ಸೇರಿದಂತೆ ಎಲ್ಲರಿಗೂ ಅವರವರ ಬಳಿಯೇ ತೆರಳಿ ನೀರು, ಶರಬತ್ತು, ರಸ್ನಾ ವಿತರಿಸಿದ್ದು ವಿಶೇಷವಾಗಿ ಗಮನ ಸೆಳೆಯಿತು.

ಉತ್ಸವ, ಶೋಭಾಯಾತ್ರೆಗಾಗಿಯೇ ವಿಜಯಪುರ ನವ ವಧುವಿನಂತೆ ಅಲಂಕೃತಗೊಂಡಿತ್ತು. ನಗರದ ಪ್ರಮುಖ ವೃತ್ತಗಳಾದ ಶಿವಾಜಿ ಚೌಕ್‌, ಗಾಂಧಿಚೌಕ್‌, ಬಸವೇಶ್ವರ ವೃತ್ತ, ಅಂಬೇಡ್ಕರ್‌ ವೃತ್ತ ಸಂಪೂರ್ಣ ಕೇಸರಿಮಯಗೊಂಡಿದ್ದವು. ಎಲ್ಲೆಡೆ ಭಗವಾ ಧ್ವಜಗಳು ಹಾರಾಡಿದವು. ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವರ ಕೈಗಳಲ್ಲೂ ಭಗವಾ ಧ್ವಜ ರಾರಾಜಿಸಿದ್ದು ವಿಶೇಷವಾಗಿತ್ತು.

ಶೋಭಾಯಾತ್ರೆ ಆರಂಭಗೊಂಡ ಸಚಿವ ಎಂ.ಬಿ.ಪಾಟೀಲ ನಿವಾಸದ ಬಳಿಯೇ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಕಲಾವಿದರಿಗಾಗಿ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು. ಆಯಾ ಶಾಲಾ–ಕಾಲೇಜುಗಳ ವಾಹನಗಳು ವಿದ್ಯಾರ್ಥಿಗಳನ್ನು ಇಲ್ಲಿಗೆ ಕರೆ ತಂದು ಇಳಿಸಿದವು.

ಮಕ್ಕಳು ಸೇರಿದಂತೆ ಯಾತ್ರೆಯಲ್ಲಿ ಭಾಗಿಯಾಗುವ ಎಲ್ಲರೂ ಉಪಾಹಾರ ಸೇವಿಸಿ, ಅಂತಿಮ ತಯಾರಿ, ತಾಲೀಮು ನಡೆಸಿಕೊಂಡು ಶೋಭಾಯಾತ್ರೆಯಲ್ಲಿನ ಪ್ರದರ್ಶನಕ್ಕೆ ಸಜ್ಜಾದರು. ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ವಿಧ್ಯುಕ್ತವಾಗಿ ಚಾಲನೆ ನೀಡುತ್ತಿದ್ದಂತೆ ಮೆರವಣಿಗೆ ಆರಂಭಗೊಂಡಿತು.

ಸೊಲ್ಲಾಪುರ ರಸ್ತೆ ಮೂಲಕ ಲಿಂಗದಗುಡಿ ತಲುಪುತ್ತಿದ್ದಂತೆ ಜನ ಸಾಗರ ಹೆಚ್ಚಿತು. ನಗರದ ಆರಾಧ್ಯದೈವ ಸಿದ್ಧೇಶ್ವರ ದೇಗುಲದ ಬಳಿ ಬರುತ್ತಿದ್ದಂತೆ ಜನ ಪ್ರವಾಹವಾಯ್ತು. ಕಾಲಿಡಲು ಸ್ಥಳಾವಕಾಶವಿಲ್ಲದಂತೆ ರಸ್ತೆ ದಟ್ಟಣೆಯಿಂದ ಕೂಡಿತು. ಗಾಂಧಿಚೌಕ್‌, ಬಸವೇಶ್ವರ ಚೌಕ್‌ನಲ್ಲೂ ಇದೇ ಚಿತ್ರಣ ಗೋಚರಿಸಿತು.

ದರಬಾರ ಪ್ರೌಢಶಾಲಾ ಮೈದಾನದಲ್ಲಿ ಶೋಭಾಯಾತ್ರೆ ಸಮಾರೋಪಗೊಂಡ ಬಳಿಕ, ಅಲ್ಲಿಂದಲೇ ಬಹುತೇಕರು ಬಸ್‌ಗಳಲ್ಲಿ ಕಗ್ಗೋಡ ಗ್ರಾಮಕ್ಕೆ ತೆರಳಿದರು. ಕಲಾವಿದರಿಗೆ ಕ್ರೀಡಾಂಗಣದ ಬಳಿ ಊಟದ ವ್ಯವಸ್ಥೆ ಮಾಡಲಾಗಿತ್ತು.

ಪ್ರತಿಕ್ರಿಯಿಸಿ (+)