ಸೋಮವಾರ, ಆಗಸ್ಟ್ 26, 2019
27 °C
ಆರಂಭದಲ್ಲಿ ಕೃಪೆ ತೋರಿ, ಕೊನೆಗೆ ಕೈಕೊಟ್ಟ ಮಳೆ, ಸಂಕಷ್ಟದಲ್ಲಿ ರೈತಾಪಿ ವರ್ಗ

ವರುಣನ ಮುನಿಸು: ಬಾಡಿದ ಸೂರ್ಯಕಾಂತಿ

Published:
Updated:
Prajavani

ಗುಂಡ್ಲುಪೇಟೆ: ಮಳೆಯನ್ನೇ ನಂಬಿ ಬಿತ್ತನೆ ಮಾಡಿದ್ದ ತಾಲ್ಲೂಕಿನ ರೈತಾಪಿ ವರ್ಗ ಈ ಬಾರಿ ಕೈಸುಟ್ಟುಕೊಂಡಿದ್ದಾರೆ. ವಾಡಿಕೆಗಿಂತ ಕಡಿಮೆ ಮಳೆಯಾಗಿರುವುದರಿಂದ ರೈತರ ಬೆಳೆಗಳು ನೆಲಕ್ಕಚ್ಚಿವೆ. ಸೂರ್ಯಕಾಂತಿ, ಜೋಳ, ರಾಗಿ, ಹತ್ತಿ, ಅಲಸಂದೆ, ಎಳ್ಳು ಹಾಗೂ ಕಡಲೆಕಾಯಿ ಬೆಳೆಗಳು ಶೇ 90ರಷ್ಟು ನಾಶವಾಗಿವೆ.

ತಾಲ್ಲೂಕಿನಾದ್ಯಂತ ಹೆಚ್ಚಿನ ರೈತರು ಈ ವರ್ಷ ಸೂರ್ಯಕಾಂತಿಯನ್ನು ಬಿತ್ತನೆ ಮಾಡಿದ್ದರು. ಆರಂಭದಲ್ಲಿ ಉತ್ತಮವಾಗಿ ಮಳೆ ಆಗಿತ್ತು. ಆಗ ಸೂರ್ಯಕಾಂತಿ ಬಿತ್ತನೆ ಮಾಡಿದ್ದ ರೈತರ ಬೆಳೆ ಮಾತ್ರ ಸ್ವಲ್ಪ ಭಾಗ ಉಳಿದಿದೆ. ತದ ನಂತರದಲ್ಲಿ ಬಿತ್ತನೆ ಮಾಡಿದ್ದ ರೈತರಿಗೆ ಬೆಳೆ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.  

ತಾಲ್ಲೂಕಿನಲ್ಲಿ ಜೂನ್ ತಿಂಗಳಿಂದ ಜುಲೈ ಅಂತ್ಯದವರೆಗೆ 368 ಮಿ.ಮೀ ಮಳೆಯಾಗಬೇಕಿತ್ತು. ಆದರೆ, 274 ಮಿ.ಮೀ ಮಳೆಯಾಗಿದೆ. ತೆರೆಕಣಾಂಬಿ, ಬೇಗೂರು ಹೋಬಳಿಯಲ್ಲಿ ಇನ್ನೂ ಕಡಿಮೆ ಮಳೆಯಾಗಿದೆ ಎಂದು ಹೇಳುತ್ತಾರೆ ಕೃಷಿ ಅಧಿಕಾರಿಗಳು.

ಮಳೆಯನ್ನು ನಂಬಿ ತಾಲ್ಲೂಕಿನಲ್ಲಿ 15 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸೂರ್ಯಕಾಂತಿ ಬಿತ್ತನೆ ಮಾಡಲಾಗಿತ್ತು. ಹಂಗಳ ಹೋಬಳಿಯಲ್ಲಿ 4,700 ಹೆಕ್ಟೇರ್, ತೆರಕಣಾಂಬಿ 3,400 ಹೆಕ್ಟೇರ್, ಬೇಗೂರು 2,700 ಹೆಕ್ಟೇರ್ ಹಾಗೂ ಕಸಬಾದಲ್ಲಿ 4,000 ಹೆಕ್ಟೇರ್ ಪ್ರದೇಶದಲ್ಲಿ ಸೂರ್ಯಕಾಂತಿ ಬಿತ್ತನೆ ಮಾಡಲಾಗಿದೆ.

ಜೂನ್ ಮೊದಲ ವಾರದಲ್ಲಿ ಮುಂಗಾರು ಉತ್ತಮವಾಗಿದ್ದರಿಂದ ಉತ್ತಮ ಮಳೆಯಾಗುವ ಭರವಸೆಯಲ್ಲಿ ಅನೇಕ ರೈತರು ನಂತರ ಭೂಮಿಯನ್ನು ಹದ ಮಾಡಿ ಬಿತ್ತನೆ ಮಾಡಿದ್ದರು.

‘ಕಾಡಂಚಿನಲ್ಲಿ ಇರುವ ರೈತರ ಜಮೀನಿನಲ್ಲಿ ಮಳೆಯಾಗಿರುವುದರಿಂದ ಮತ್ತು ಶೀತ ವಾತಾವರಣ ಇರುವುದರಿಂದ ಬೇರಾಂಬಾಡಿ, ಬರಗಿ, ಗೋಪಾಲಪುರ ಹಂಗಳದ ಕೆಲ ಭಾಗದಲ್ಲಿ ಬೆಳೆದಿರುವ ಸೂರ್ಯಕಾಂತಿ ಕಾಳು ಕಟ್ಟುವ ಹಂತ ತಲುಪಿದೆ. ಉಳಿದಂತೆ, ತಾಲ್ಲೂಕಿನಲ್ಲಿ ಶೇ 90ರಷ್ಟು ರೈತರ ಬೆಳೆ ಒಣಗಿ ನಷ್ಟವನ್ನು ಅನುಭವಿಸುವಂತಾಗಿದೆ’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ವೆಂಕಟೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ಅಂಕಿ ಅಂಶ

* 368 ಮಿ.ಮೀ ಜೂನ್‌ ಮತ್ತು ಜುಲೈ ತಿಂಗಳಲ್ಲಿ ತಾಲ್ಲೂಕಿನಲ್ಲಿ ಬೀಳುವ ವಾಡಿಕೆ ಮಳೆ 

* 274 ಮಿ.ಮೀ ಈ ವರ್ಷ ಬಿದ್ದಿರುವ ಮಳೆ ಪ್ರಮಾಣ

* 15 ಸಾವಿರ ಹೆಕ್ಟೇರ್‌ ಸೂರ್ಯಕಾಂತಿಯನ್ನು ಬಿತ್ತನೆ ಮಾಡಿರುವ ಪ್ರದೇಶ

 

Post Comments (+)