ಶುದ್ಧೀಕರಣಗೊಳ್ಳದ ಕೊಳಚೆ ನೀರು

7
7 ತಿಂಗಳ ಹಿಂದೆ ಬೂದಿತಿಟ್ಟಿನಲ್ಲಿ ಘಟಕ ಆರಂಭ; ತ್ಯಾಜ್ಯ ನೀರಿನ ಕೊರತೆ

ಶುದ್ಧೀಕರಣಗೊಳ್ಳದ ಕೊಳಚೆ ನೀರು

Published:
Updated:
Deccan Herald

ಚಾಮರಾಜನಗರ: ಜಿಲ್ಲಾ ಕೇಂದ್ರ ಚಾಮರಾಜನಗರ ಸಮೀಪದ ಬೂದಿತಿಟ್ಟು ಗ್ರಾಮದಲ್ಲಿ ಸ್ಥಾಪಿಸಿರುವ ಕೊಳಚೆ ನೀರು ಸಂಸ್ಕರಣಾ ಘಟಕದಲ್ಲಿ ನೀರು ಶುದ್ಧೀಕರಣ ಪ್ರಕ್ರಿಯೆ ಪೂರ್ಣ ಪ್ರಮಾಣದಲ್ಲಿ ಇನ್ನೂ ಆರಂಭವಾಗಿಲ್ಲ. 

ಚಾಮರಾಜನಗರ ನಗರಸಭೆಯ ವ್ಯಾಪ್ತಿಯಲ್ಲಿ ಪ್ರತಿ ದಿನ ಸೃಷ್ಟಿಯಾಗುತ್ತಿರುವ ಕೊಳಚೆನೀರು ಒಳಚರಂಡಿ ಮೂಲಕ ನಿರೀಕ್ಷಿಸಿದಷ್ಟು ಪ್ರಮಾಣದಲ್ಲಿ ಈ ಘಟಕಕ್ಕೆ ಹರಿದು ಬರದೇ ಇರುವುದು ಇದಕ್ಕೆ ಕಾರಣ. ಈ ಘಟಕವನ್ನು ಈ ವರ್ಷದ ಜನವರಿ 10ರಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದ್ದರು. ಕಾರ್ಯಾರಂಭ ಮಾಡಿ 7 ತಿಂಗಳೂ ಕಳೆದರೂ ಶುದ್ಧೀಕರಿಸಿದ ನೀರು ಕಾಲುವೆಯಲ್ಲಿ ಹರಿದಿಲ್ಲ. 

ಈ ಘಟಕಕ್ಕಾಗಿ ಬೂದಿತಿಟ್ಟಿನಲ್ಲಿ 16 ಎಕರೆ ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಇದರಲ್ಲಿ 8 ಎಕರೆ ಜಾಗದಲ್ಲಿ ಘಟಕ ನಿರ್ಮಿಸಲಾಗಿದೆ. 2012ರಲ್ಲಿ ಆರಂಭವಾದ ₹26.76 ಕೋಟಿ ವೆಚ್ಚದ ಒಳಚರಂಡಿ ಯೋಜನೆಯಡಿ ಇದನ್ನು ಸ್ಥಾಪಿಸಲಾಗಿದೆ. ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮವು (ಕೆಯುಐಡಿಎಫ್‌ಸಿ) ವರ್ಷದ ಮಟ್ಟಿಗೆ ಘಟಕವನ್ನು ನಿರ್ವಹಿಸುತ್ತದೆ. ನಂತರ ನಗರಸಭೆಗೆ ಹಸ್ತಾಂತರಿಸಲಿದೆ.

60 ಲಕ್ಷ ಲೀಟರ್‌ ಉತ್ಪತ್ತಿ: ಪ್ರತಿ ದಿನ 90 ಲಕ್ಷ ಲೀಟರ್‌ ತ್ಯಾಜ್ಯ ನೀರನ್ನು ಸಂಸ್ಕರಿಸುವ ಸಾಮರ್ಥ್ಯವನ್ನು ಘಟಕ ಹೊಂದಿದೆ. ಆದರೆ, ಈಗ ದಿನಕ್ಕೆ 20 ಲಕ್ಷ ಲೀಟರ್‌ ಕೊಳಚೆ ನೀರು ಘಟಕಕ್ಕೆ ಹರಿದು ಬರುತ್ತಿದೆ. 

‘ನಗರಸಭೆಯ ವ್ಯಾಪ್ತಿಯಲ್ಲಿ ಪ್ರತಿ ದಿನ 60 ಲಕ್ಷ ಲೀಟರ್‌ ಕೊಳಚೆ ನೀರು ಉತ್ಪತ್ತಿಯಾಗುತ್ತಿದೆ. ಹೊಸದಾಗಿ ನಿರ್ಮಿಸಿರುವ ಒಳಚರಂಡಿಯಲ್ಲಿ ಅಷ್ಟು ನೀರು ಘಟಕಕ್ಕೆ ತಲುಪುತ್ತಿಲ್ಲ. ಪಟ್ಟಣದಲ್ಲಿ ಎಲ್ಲ ಮನೆ, ಮಳಿಗೆ ಹಾಗೂ ಇತರೆ ವಾಣಿಜ್ಯ ಚಟುವಟಿಕೆ ಕೇಂದ್ರಗಳು ಇನ್ನೂ ಒಳಚರಂಡಿ ಸಂಪರ್ಕ ಪಡೆದುಕೊಂಡಿಲ್ಲ. ಹೀಗಾಗಿ 20 ಲಕ್ಷ ಲೀಟರ್‌ ಮಾತ್ರ ಬರುತ್ತಿದೆ’ ಎಂದು ಕೆಯುಐಡಿಎಫ್‌ಸಿಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಎಂ.ರಮೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಇನ್ನೂ ತುಂಬದ ಹೊಂಡ: ಒಳಚರಂಡಿ ಮೂಲಕ ಬಂದ ನೀರು ಘಟಕದ ವೆಟ್‌ ವಾಲ್‌ಗೆ ಸೇರುತ್ತದೆ. ಇಲ್ಲಿ ತಲಾ 50 ಅಶ್ವಶಕ್ತಿಯ ನಾಲ್ಕು ಪಂಪ್‌ಗಳನ್ನು ಅಳವಡಿಸಲಾಗಿದೆ. ಸದ್ಯ, ಒಮ್ಮೆ ವೆಟ್‌ ವಾಲ್‌ ತುಂಬಿದರೆ ಎರಡು ಪಂಪ್‌ಗಳು 20 ನಿಮಿಷಗಳಲ್ಲಿ ಕೊಳಚೆ ನೀರನ್ನು ಪ್ರಾಥಮಿಕ ಶುದ್ಧೀಕರಣ ಘಟಕಕ್ಕೆ ರವಾನಿಸುತ್ತವೆ.

ಪ್ರಾಥಮಿಕ ಸಂಸ್ಕರಣಾ ಘಟಕದಿಂದ ಹೊರ ಬಂದ ನೀರು ಲಗೂನ್‌ (ಫಾಕಲ್ಟೇಟಿವ್‌ ಏರೇಟೆಡ್‌ ಲಗೂನ್‌) ಎಂದು ಕರೆಯಲಾಗುವ ದೊಡ್ಡ ಹೊಂಡದಲ್ಲಿ ಸಂಗ್ರಹವಾಗುತ್ತದೆ. ಆ ನೀರಿಗೆ ಆಮ್ಲಜನಕವನ್ನು ಪೂರೈಸಲಾಗುತ್ತದೆ. ಈ ಹೊಂಡದಲ್ಲಿ ನೀರು ಮತ್ತಷ್ಟು ಶುದ್ಧಗೊಂಡು, ಪಾಲಿಶಿಂಗ್‌ ಹೊಂಡಕ್ಕೆ ಹರಿಯುತ್ತದೆ. ಅಲ್ಲಿಂದ ಕ್ಲೋರಿನೇಷನ್‌ ಮಾಡಿ ನೀರನ್ನು ಮತ್ತಷ್ಟು ಶುದ್ಧೀಕರಿಸಿ ಕಾಲುವೆಗೆ ಬಿಡಲಾಗುತ್ತದೆ.

ಬೂದಿತಿಟ್ಟಿನಲ್ಲಿರುವ ಘಟಕದಲ್ಲಿ ಎರಡು ಲಗೂನ್‌ಗಳಿದ್ದು, 2.2 ಕೋಟಿ ಲೀಟರ್‌ ನೀರು ಸಂಗ್ರಹ ಸಾಮರ್ಥ್ಯ ಹೊಂದಿವೆ. ಸದ್ಯ 1 ಕೋಟಿ ಲೀಟರ್‌ಗಳಷ್ಟು ನೀರು ಅದರಲ್ಲಿ ಸಂಗ್ರಹವಾಗಿದೆ. ಆಮ್ಲಜನಕ ಪೂರೈಸುವ ಮೋಟರ್‌ ಫ್ಯಾನ್‌ಗೆ ನೀರು ಸಿಗಬೇಕಾದರೆ, ಇನ್ನೂ ಎರಡು ಮೀಟರ್‌ಗಳಷ್ಟು ನೀರು ಲಗೂನ್‌ನಲ್ಲಿ ಸಂಗ್ರಹವಾಗಬೇಕು. ಹಾಗಾಗಿ, ಪಾಲಿಶಿಂಗ್‌ ಹೊಂಡಕ್ಕೆ ಇದುವರೆಗೆ ನೀರು ಹೋಗಿಲ್ಲ. ಇಷ್ಟು ಕಡಿಮೆ ಪ್ರಮಾಣದಲ್ಲಿ ತ್ಯಾಜ್ಯ ‌ನೀರು ಬರುತ್ತಿದ್ದರೆ, ಘಟಕ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಬೇಕಾದರೆ ಇನ್ನಷ್ಟು ತಿಂಗಳು ಬೇಕು.

ಗಿಡ ನೆಡುವುದಕ್ಕೆ ಜಾಗ: 16 ಎಕರೆ ಜಾಗದಲ್ಲಿ 8 ಎಕರೆಯಲ್ಲಿ ಘಟಕ ಇದ್ದರೆ, ಉಳಿದ ಜಾಗವನ್ನು ಹಸಿರು ಬೆಳೆಸುವ ಉದ್ದೇಶಕ್ಕೆ ಮೀಸಲಿಡಲಾಗಿದೆ. ಈಗಾಗಲೇ ಬೇವಿನ ಗಿಡಗಳನ್ನು ಬೆಳೆಯಲಾಗಿದೆ. ಇನ್ನಷ್ಟು ಗಿಡಗಳನ್ನು ನೆಡಬೇಕಾಗಿದೆ.

ಪ್ರಯೋಗಾಲಯ ಸ್ಥಾಪ‍ನೆ ಆಗಬೇಕು

‘ನೀರಿನ ಸಂಸ್ಕರಣ ಪ್ರಕ್ರಿಯೆಯಲ್ಲಿ ಎರಡು ಬಾರಿ ನೀರನ್ನು ಪರೀಕ್ಷಿಸಲಾಗುತ್ತದೆ. ಅದಕ್ಕಾಗಿ ಪ್ರಯೋಗಾಲಯ ಬೇಕು. ಆದರೆ, ಇಲ್ಲಿ ಇನ್ನೂ ಶುದ್ಧೀಕರಣ ಪ್ರಕ್ರಿಯೆ ಆಗದೇ ಇರುವುದರಿಂದ ಉಪಕರಣಗಳು ಲಭ್ಯವಿದ್ದರೂ ಅವುಗಳನ್ನು ಇನ್ನಷ್ಟೇ ಅಳವಡಿಸಬೇಕಿದೆ’ ಎಂದು ರಮೇಶ್‌ ಮಾಹಿತಿ ನೀಡಿದರು.

ಸಂಸ್ಕರಣೆಗೊಂಡ ನೀರನ್ನು ಕೃಷಿ ಉದ್ದೇಶಕ್ಕೆ ಮಾತ್ರ ಬಳಸಬಹುದು. ನೀರನ್ನು ನಾಲೆಗೆ ಹರಿಸುವುದರಿಂದ ಅಂತರ್ಜಲ ಮಟ್ಟವೂ ಹೆಚ್ಚಾಗುತ್ತದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !