ಬುಧವಾರ, ನವೆಂಬರ್ 13, 2019
23 °C

‘ಸೈನಾ ಬಯೋಪಿಕ್‌ತಪ್ಪಿದ್ದಕ್ಕೆ ಬೇಸರವಿಲ್ಲ’ ನಟಿ ಶ್ರದ್ಧಾಕಪೂರ್

Published:
Updated:

ಬಾಲಿವುಡ್‌ನ ಬ್ಯುಸಿ ನಟಿಯರ ಪಟ್ಟಿಗೆ ಈಗ ಶ್ರದ್ಧಾ ಕಪೂರ್‌ ಸೇರ್ಪಡೆಯಾಗಿದ್ದಾರೆ. ಅವರು ನಾಯಕಿಯಾಗಿ ಅಭಿನಯಿಸಿದ ‘ಸಾಹೋ’ ಹಾಗೂ ನಿತೇಶ್‌ ತಿವಾರಿ ನಿರ್ದೇಶನದ ‘ಛಿಛೋರೆ’ ಚಿತ್ರಗಳು ಬಾಕ್ಸಾಫೀಸಿನಲ್ಲಿ ಭಾರಿ ಗೆಲುವು ಕಂಡಿದ್ದು, ಭರ್ಜರಿ ಪ್ರದರ್ಶನ ಕಾಣುತ್ತಿವೆ. ಸದ್ಯ ಈ ನಟಿ ‘ಸ್ಟ್ರೀಟ್‌ ಡಾನ್ಸರ್‌ ತ್ರಿಡಿ’ ಚಿತ್ರದಲ್ಲಿ ನಟಿಸುತ್ತಿದ್ದು, ಮತ್ತೊಂದು ಚಿತ್ರ ‘ಭಾಗಿ 3’ ಸದ್ಯದಲ್ಲೇ ಸೆಟ್ಟೇರಲಿದೆ. 

ಬ್ಯಾಡ್ಮಿಂಟನ್‌ ಆಟಗಾರ್ತಿ ಸೈನಾ ನೆಹ್ವಾಲ್‌ ಅವರ ಬಯೋಪಿಕ್‌ನಲ್ಲಿ ಶ್ರದ್ಧಾ ಕಪೂರ್‌ ನಟಿಸಬೇಕಾಗಿತ್ತು. ಆದರೆ ಬಳಿಕ ಕೆಲವು ಕಾರಣಗಳಿಂದ ಅವರ ಸ್ಥಾನಕ್ಕೆ ನಟಿ ಪರಿಣಿತಿ ಚೋಪ್ರಾ ಆಯ್ಕೆಯಾಗಿದ್ದರು. ಈಚೆಗೆ ಸಂದರ್ಶನವೊಂದರಲ್ಲಿ ಆ ಚಿತ್ರದಿಂದ ಹೊರಬಂದಿರುವ ಅಸಲಿ ಕಾರಣಗಳನ್ನು ಹಂಚಿಕೊಂಡಿದ್ದಾರೆ. 

‘ಸ್ಟ್ರೀಟ್‌ ಡಾನ್ಸರ್‌ ತ್ರಿಡಿ’ ಚಿತ್ರ ಇದಕ್ಕೆ ಕಾರಣ. ಆ ಚಿತ್ರದಿಂದಾಗಿ ಸೈನಾ ನೆಹ್ವಾಲ್‌ ಬಯೋಪಿಕ್‌ ಅನ್ನು ಒಪ್ಪಿಕೊಳ್ಳಲಿಲ್ಲ. ಎರಡೂ ಚಿತ್ರಗಳ ಚಿತ್ರೀಕರಣ ಒಂದೇ ಸಮಯದಲ್ಲಿ ನಡೆಯಲಿದ್ದರಿಂದ ಆ ಚಿತ್ರ ಒಪ್ಪಿಕೊಂಡಿದ್ದರೆ ಡೇಟ್ಸ್‌ ತೊಂದರೆಯಾಗುತ್ತಿತ್ತು. ‘ಸ್ಟ್ರೀಟ್‌ ಡಾನ್ಸರ್‌ ತ್ರಿಡಿ’ ಚಿತ್ರದ ನಿರ್ದೇಶಕ ರೆಮೊ  ನನಗೆ ‘ಎಬಿಸಿಡಿ2’ ಚಿತ್ರದಲ್ಲಿ ಪಾತ್ರ ನೀಡಿದ್ದರು. ಹಾಗಾಗಿ ಅವರಿಗೆ ನಾನು ನೋ ಎಂದು ಹೇಳಲು ಆಗುವುದಿಲ್ಲ. ಇದಲ್ಲದೇ ನನಗೆ ಆ ಚಿತ್ರದ ಕತೆಯೂ ತುಂಬ ಇಷ್ಟವಾಗಿತ್ತು’ ಎಂದು ಹೇಳಿದ್ದಾರೆ. 

ರೆಮೊ ಅವರನ್ನು ಚಿತ್ರರಂಗದಲ್ಲಿ ತನ್ನ ಗುರು ಎಂದು ಹೇಳಿರುವ ಶ್ರದ್ಧಾ, ‘ಈ ಚಿತ್ರದಲ್ಲಿ ನನ್ನದು ಪ್ರಧಾನ ಪಾತ್ರ’ ಎಂದಿದ್ದಾರೆ. 

ಸೈನಾ ನೆಹ್ವಾಲ್‌ ಬಯೋಪಿಕ್‌ ಅನ್ನು ಅಮೋಲ್‌ ಗುಪ್ತಾ ನಿರ್ದೇಶಿಸುತ್ತಿದ್ದು, ಸೈನಾ ಪಾತ್ರದಲ್ಲಿ ಪರಿಣಿತಿ ಚೋಪ್ರಾ ನಟಿಸುತ್ತಿದ್ದಾರೆ. ‘ಆ ಚಿತ್ರ ತನಗೆ ತಪ್ಪಿದ್ದಕ್ಕೆ ಯಾವುದೇ ಬೇಸರವಿಲ್ಲ. ಒಂದು ವೇಳೆ ತಾನು ‘ಸ್ಟ್ರೀಟ್‌ ಡಾನ್ಸರ್‌ ತ್ರಿಡಿ’ ಚಿತ್ರೀಕರಣ ಮುಗಿಯುವ ತನಕ ಕಾಯಿರಿ ಎಂದು ನಿರ್ದೇಶಕ ಅಮೋಲ್‌ ಅವರಿಗೆ ಹೇಳಿದ್ದರೆ ಅವರಿಗೆ ನಾನು ಮಾಡುವ ಅನ್ಯಾಯ ಅದು’ ಎಂದು ಹೇಳಿದ್ದಾರೆ. 

ಶ್ರದ್ಧಾ ಕೆಲಸಮಯ ಡೆಂಗಿ ಜ್ವರದಿಂದ ಬಳಲುತ್ತಿದ್ದರು. ಹಾಗಾಗಿ ಕೆಲ ದಿನಗಳ ಕಾಲ ಅವರು ‘ಸ್ಟ್ರೀಟ್‌ ಡಾನ್ಸರ್‌ ತ್ರಿಡಿ’ ಚಿತ್ರೀಕರಣಕ್ಕೂ ರಜೆ ಹಾಕಿದ್ದರು. ಹಾಗಾಗಿ ಎರಡು ಸಿನಿಮಾಗಳನ್ನು ಒಪ್ಪಿಕೊಳ್ಳುವ ಹಾಗೇ ಇರಲಿಲ್ಲ ಎಂದು ಅವರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)