ಕಂಸವಧೆಗೆ ಬರುವ ಮುರಾರಿಯ ನೋಡ ಬನ್ನಿರೋ...

7
ನಾಳೆ ಶ್ರೀಕೃಷ್ಣ ಜನ್ಮಾಷ್ಟಮಿ; ಸಡಗರದ ಆಚರಣೆಗೆ ಸಿದ್ಧತೆ

ಕಂಸವಧೆಗೆ ಬರುವ ಮುರಾರಿಯ ನೋಡ ಬನ್ನಿರೋ...

Published:
Updated:
Deccan Herald

ಯಳಂದೂರು: ನಾಳೆ ಶ್ರೀಕೃಷ್ಣ ಜನ್ಮಾಷ್ಟಮಿ. ಮನುಕುಲದ ಲೌಕಿಕ ಜಗತ್ತಿನಲ್ಲಿ ಮುರಾರಿಯ ಇರುವಿಕೆಯನ್ನು ಕಲ್ಪಿಸಿಕೊಂಡು ಸಂಭ್ರಮಿಸುವ ಗಳಿಗೆಯೂ ಹೌದು. ಬಾಲ್ಯದಿಂದ ಯೌವನದ ತನಕ ಬಾಲಕೃಷ್ಣನ ವಿನೋದಾವಳಿಗಳನ್ನು ಜನ್ಮಾಷ್ಟಮಿ ಪ್ರತಿವರ್ಷ ಸ್ಮರಣೆಗೆ ತರುತ್ತದೆ.

ತಾಲ್ಲೂಕಿನ ವಿವಿಧೆಡೆ ಕೃಷ್ಣನ ಜನುಮದಿನದ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಯಳಂದೂರು ರಾಯರಮಠ, ಬಿಳಿಗಿರಿರಂಗನ ಬೆಟ್ಟ ಮೊದಲಾದೆಡೆ ವಿವಿಧ ಭಂಗಿಗಳಲ್ಲಿ ಕಂಗೊಳಿಸುವ ಕೃಷ್ಣನ ಶಿಲ್ಪಗಳನ್ನು ಕಾಣಬಹುದು. ಕೆಲವು ಭಾಗದಲ್ಲಿ ಬೆಣ್ಣೆ ಮೆಲ್ಲುವ ಬಾಲಕೃಷ್ಣ, ಯಶೋದೆಗೆ ಬ್ರಹ್ಮಾಂಡ ತೋರಿದ ಮಗ, ತುಂಟ ಕೃಷ್ಣ, ಗೋಪಿಕೆಯರ ಪ್ರೇಮದಾಟ, ರಾಧಾಕೃಷ್ಣರ ರಂಗಿನಾಟ.. ಇವೇ ಮೊದಲಾದ ಚಿತ್ರಗಳು ಇಲ್ಲಿ ಮೈದಳೆದಿವೆ.

ಬಿಳಿಗಿರಿರಂಗನ ಬೆಟ್ಟದ ದೊಡ್ಡರಥದಲ್ಲಿ ಹತ್ತಾರು ದೇವ–ದೇವತೆಗಳ ಮರದ ವಿಗ್ರಹಗಳನ್ನು ಅಲಂಕರಿಸಲಾಗಿದೆ. ಇವುಗಳ ನಡುವೆ ಕೃಷ್ಣನ ಬಾಲಲೀಲೆಗೆ ಸಂಬಂಧಿಸಿದ ಚಿತ್ರಗಳು ಗಮನ ಸೆಳೆಯುತ್ತವೆ. ಪಟ್ಟಣದ ಮಠದ ಪುಟ್ಟ ತೇರಿನ ತಳಭಾಗದಲ್ಲೂ ಹತ್ತಾರು ಚಿತ್ರಗಳಿವೆ. ನೀತಿ ಬೋಧಕ ಕತೆಗಳನ್ನು ತಿಳಿಸುವ ಮೂಲಕ ಕೃಷ್ಣನನ್ನು ಜನರ ದೇವನನ್ನಾಗಿ ಮಾಡುವ ಆಶಯ ಇಲ್ಲಿ ವ್ಯಕ್ತವಾಗಿದೆ ಎಂದು ವಿವರಿಸುತ್ತಾರೆ ಪಟ್ಟಣದ ಗೋಪಾಲಕೃಷ್ಣ.

ಬನದಲ್ಲಿ ಕಂಸ ವಧೆ: ಪ್ರತಿ ವರ್ಷ ಬಿಳಿಗಿರಿರಂಗನಬೆಟ್ಟದ ದೇಗುಲದಲ್ಲಿ ಜನ್ಮಾಷ್ಟಮಿಯಂದು ಕೃಷ್ಣ ಕಂಸರ ಯುದ್ಧವನ್ನು ನೆನಪಿಸುವ ಧಾರ್ಮಿಕ ಉತ್ಸವವನ್ನು ಆಚರಿಸಲಾಗುತ್ತದೆ. ಆದರೆ, ದೇವಾಲಯದ ನವೀಕರಣ ಪ್ರಗತಿಯಲ್ಲಿ ಇರುವುದರಿಂದ ಈ ವರ್ಷ ಧಾರ್ಮಿಕ ಉತ್ಸವ ನಡೆಯುವುದಿಲ್ಲ. 

ಅಂದು ಸಂಜೆ ಸಿಪ್ಪೆ ತೆಗೆದ ತೆಂಗಿನ ಕಾಯಿಗಳನ್ನು ಹಗ್ಗಕ್ಕೆ ಕಟ್ಟಿ ದೇವಳದ ಸುತ್ತಲೂ ಎಳೆಯಲಾಗುತ್ತದೆ. ಭಕ್ತರು ಎರಡು ಗುಂಪುಗಳಾಗಿ ಸೇರಿ ತೆಂಗನ್ನು ಒಡೆಯಲು ಪ್ರಯತ್ನಿಸಿದರೆ, ಮತ್ತೊಂದು ಗುಂಪು ತಪ್ಪಿಸಲು ಪ್ರಯತ್ನಿಸುತ್ತದೆ. ಇದು ಕಂಸನು ಕೃಷ್ಣನನ್ನು ಕೊಲ್ಲಲು ಸಂಚು ಮಾಡುವ ಬಗೆಯನ್ನು ತಿಳಿಸುವ ಪರಂಪರೆಯನ್ನು ವಿವರಿಸುತ್ತದೆ. ನಂತರ ಕಂಸನ ವಧೆ ನಡೆಸಿದ ಆಚರಣೆಯಲ್ಲಿ ಪಾಲ್ಗೊಂಡು ಉತ್ಸವ ಮೂರ್ತಿಯನ್ನು ತೊಟ್ಟಿಲಲ್ಲಿ ಇಟ್ಟು ಮೆರವಣಿಗೆ ಮಾಡಲಾಗುತ್ತದೆ. ಈ ಬಾರಿ ದೇವಾಲಯ ನವೀಕರಣ ನಡೆಯುತ್ತಿದೆ. ಹಾಗಾಗಿ, ಮುಂದಿನ ವರ್ಷ ಚಾಲನೆ ನೀಡಲಾಗುತ್ತದೆ ಎನ್ನುತ್ತಾರೆ ಅರ್ಚಕ ರವಿಕುಮಾರ್.

ಪಟ್ಟಣದಲ್ಲಿ ಮಕ್ಕಳಿಗೆ ಕೃಷ್ಣನ ಪೋಷಾಕು ಧರಿಸಿ ಬಾಲಕೃಷ್ಣನ ಜನ್ಮದಿನ ಆಚರಿಸಲಾಗುತ್ತದೆ. ಸಂಘ–ಸಂಸ್ಥೆಗಳು ಸ್ಪರ್ಧೆಗಳನ್ನು ಆಯೋಜಿಸಿ ಪುಟ್ಟ ಕೃಷ್ಣಧಾರಿಗಳಿಗೆ ಬಹುಮಾನವನ್ನು ನೀಡುತ್ತವೆ. ಪೋಷಕರು ಹೆಣ್ಣು ಮತ್ತು ಗಂಡು ಮಕ್ಕಳಿಗೆ ಕೊಳಲು, ಪಿಳ್ಳಂಗೋವಿ, ನವಿಲುಗರಿಗಳಿಂದ ಅಲಂಕರಿಸಿ ಗಮನ ಸೆಳೆಯುತ್ತಾರೆ. ಇತ್ತೀಚಿಗೆ ಕಾನ್ವೆಂಟ್‌ಗಳಲ್ಲೂ ಕೃಷ್ಣ ಸ್ಮರಣೆ ಮಾಡುವುದು ಫ್ಯಾಷನ್‌ ಆಗಿದೆ ಎಂದು ಸಾಹಿತಿ ಗುಂಬಳ್ಳಿ ಬಸವರಾಜು ತಿಳಿಸಿದರು.

ಜಿಲ್ಲೆಯಾದ್ಯಂತ ಸಂಭ್ರಮ

ಕೃಷ್ಣ ಜನ್ಮಾಷ್ಟಮಿಯನ್ನು ಜಿಲ್ಲೆಯಾದ್ಯಂತ ಸಂಭ್ರಮದಿಂದ ಆಚರಿಸಲು ಸಿದ್ಧತೆ ನಡೆದಿದೆ. ಶಾಲೆಗಳು, ಸಂಘ ಸಂಸ್ಥೆಗಳು ಮೊಸರುಕುಡಿಕೆ, ಕೃಷ್ಣವೇಷಧಾರಿ ಸ್ಪರ್ಧೆಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತವೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 1

    Angry

Comments:

0 comments

Write the first review for this !