‘ಮಗಳು ತಪ್ಪು ಮಾಡಿ, ಕಲಿಯಲಿ’

7

‘ಮಗಳು ತಪ್ಪು ಮಾಡಿ, ಕಲಿಯಲಿ’

Published:
Updated:

ಬಾಲಿವುಡ್‌ನ ಪ್ರತಿಷ್ಠಿತ ಸೆಲೆಬ್ರಿಟಿ ಬಚ್ಚನ್ ಕುಟುಂಬದಲ್ಲಿ ಜನಿಸಿದ ಶ್ವೇತಾ ಬಚ್ಚನ್ ನಂದಾ ನೋಡಲು ಸೀದಾ ಸಾದಾ. ಅಪ್ಪ– ಅಮ್ಮನ ಜನಪ್ರಿಯತೆಯ ನೆರಳಲ್ಲಿ ಬೆಳೆದರೂ ತಮ್ಮದೇ ಸ್ವಂತ ವ್ಯಕ್ತಿತ್ವ ರೂಪಿಸಿಕೊಂಡಿರುವ ಶ್ವೇತಾ ಸಿನಿಮಾ ನಟನೆಯಿಂದ ಹರದಾರಿ ದೂರ. ಬಚ್ಚನ್ ಕುಟುಂಬ, ಅಮ್ಮ ಜಯಾ ಬಾಧುರಿ, ಮಕ್ಕಳಾದ ಅಗಸ್ತ್ಯ ಮತ್ತು ನವ್ಯಾನವೇಲಿ ಕುರಿತು ಅವರು ಮಾತುಗಳನ್ನು ಅವರ ಮಾತಲ್ಲೇ ಓದಿ...

ತುಂಬಾ ಮಂದಿ ಮಾತಾಡ್ತಾರೆ ಶ್ವೇತಾ, ಬಚ್ಚನ್ ಕುಟುಂಬದವಳು. ಅವಳಿಗೆ ನೋವಿಲ್ಲ. ನಲಿವೇ ಎಲ್ಲ ಅಂತ. ನಿಜಕ್ಕೂ ಹಾಗಿರುವುದಿಲ್ಲ. ಎಲ್ಲರೂ ಹೇಗೆ ಇರ್ತಾರೋ ನಾನು ಹಾಗೇ ಬೆಳೆದೆ. ಹಾಗಂತ ನಾನು ಕಂಫರ್ಟ್‌ ಜೋನ್‌ನಿಂದ ದೂರವಿದ್ದೆ ಅಂತ ಹೇಳಲಾರೆ. ಆದರೆ, ಅಪ್ಪ– ಅಮ್ಮನ ನೆರಳು ಶಾಶ್ವತ ಅಲ್ಲ ಅನ್ನುವ ಸತ್ಯ ನನಗೆ ಗೊತ್ತಿತ್ತು...

ಓದು ಕೈ ಹಿಡಿಯಿತು

ನಾನು ಶಾಲಾ ದಿನಗಳಲ್ಲೇ ಓದುವ ಅಭಿರುಚಿ ಬೆಳೆಸಿಕೊಂಡಿದ್ದೆ. ಮನೆಯಲ್ಲಿ ಅಜ್ಜ–ಅಜ್ಜಿ ಸಾಹಿತ್ಯಪ್ರಿಯರು. ನಮ್ಮ ಹುಟ್ಟುಹಬ್ಬಕ್ಕೆ ಅವರು ಪದ್ಯಗಳನ್ನು ಬರೆದು ಉಡುಗೊರೆಯಾಗಿ ಕೊಡುತ್ತಿದ್ದರು. ಬಹುಶಃ ಅದುವೇ ನನ್ನಲ್ಲೂ ಬಂದಿದೆ ಅನ್ಸುತ್ತೆ. ಓದುವಿಕೆಯೇ ನನ್ನನ್ನು ಬರವಣಿಗೆಗೆ ಪ್ರೇರೇಪಿಸಿತು. ವಿದ್ಯಾಭ್ಯಾಸ ಮುಗಿದ ತಕ್ಷಣವೇ ನಾನು ಮದುವೆಯಾದೆ. ನನಗಾಗ ಬರೀ 23 ವಯಸ್ಸು. ಮಕ್ಕಳಾದ ಮೇಲೆ ಅವರನ್ನು ಬೋರ್ಡಿಂಗ್ ಶಾಲೆಗೆ ಓದಲು ಕಳಿಸಿದೆ. ಮನೆಕೆಲಸಗಳ ಜತೆಗೇ ಓದುವ ಹವ್ಯಾಸ ಮುಂದುವರಿಸಿದ್ದೆ. ಆಗ ಡಿಎನ್ಎ ಮುಂಬೈ ಆವೃತ್ತಿಗೆ ಅಂಕಣಕಾರರೊಬ್ಬರ ಅಗತ್ಯವಿದೆ ಎಂದು ಗೆಳತಿ ಹೇಳಿದ್ದಳು. ಅವಳ ಸಲಹೆ ಸ್ವೀಕರಿಸಿ ಡಿಎನ್ಎ ಪತ್ರಿಕೆಗೆ ಬರೆಯಲು ಶುರು ಮಾಡಿದೆ. ನನ್ನ ಬರವಣಿಗೆಯ ಆರಂಭದ ದಿನಗಳು ಪ್ರಾರಂಭವಾಗಿದ್ದು ಹೀಗೆ. ಅದೀಗ ‘ಪ್ಯಾರಾಡೈಸ್ ಟವರ್‌’ ತನಕ ಬಂದು ನಿಂತಿದೆ. ಬರವಣಿಗೆ ನನ್ನ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿತು.

ನಮ್ಮಲ್ಲಿ ತುಂಬಾ ಮಹಿಳೆಯರು ಮದುವೆಯಾಗಿ ಮಕ್ಕಳಾದ ಮೇಲೆ ಮಾಡೋದೇನಿದೆ ಅಂತ ನಿರಾಸಕ್ತಿ ತೋರುತ್ತಾರೆ. ಆದರೆ, ಮದುವೆ, ಮಕ್ಕಳಾದ ಮೇಲೂ ಸಾಧನೆ ಮಾಡಬಹುದು ಅನ್ನಲು ನಾನೇ ಉದಾಹರಣೆ. ಹಾಗಾಗಿ, ನೀವು ಯಾವಾಗ ಆರಂಭಿಸುತ್ತೀರೋ ಅದುವೇ ಸರಿಯಾದ ಸಮಯ ಎಂದು ಭಾವಿಸಿ.

ಬಾಲ್ಯದಲ್ಲಿ ನಾನು ಮತ್ತು ಅಭಿಷೇಕ್ ಬಚ್ಚನ್ ತುಂಬಾ ಸುರಕ್ಷಾ ವಲಯದಲ್ಲಿ ಬೆಳೆದೆವು. ಇಲ್ಲಿ ಒಂದು ಘಟನೆ ಹೇಳಲೇಬೇಕು. ಒಮ್ಮೆ ನಾನು ಅಮ್ಮನಿಗೆ, ಅಮ್ಮ ನೀನು ಮನೆಯಲ್ಲಿ ಇರು, ಅಪ್ಪ ಕೆಲಸಕ್ಕೆ ಹೋಗಲಿ ಎಂದಿದ್ದೆ. ಅಂದು ಏಕೆ ಹಾಗೆ ಹೇಳಿದೆನೋ ಗೊತ್ತಿಲ್ಲ. ಆದರೆ, ಅಮ್ಮ ಮಾತ್ರ ಮಕ್ಕಳಿಗೆ ತನ್ನ ಕೊರತೆ ಆಗದಂತೆ ನೋಡಿಕೊಂಡರು. ಆಗ ಅಮ್ಮ ಜನಪ್ರಿಯ ನಟಿ, ಮಕ್ಕಳ ಸಿನಿಮಾ ಸೊಸೈಟಿ ಅಧ್ಯಕ್ಷೆ ಬೇರೆ. ಅದರ ಜತೆಜತೆಗೆ ಸಾಮಾಜಿಕ ಕೆಲಸಗಳಲ್ಲೂ ತೊಡಗಿಕೊಂಡಿದ್ದರು. ಆದರೆ, ಈಗ ನಾನು ತಾಯಿಯಾಗಿ ನಿಜಕ್ಕೂ ಅಮ್ಮನಷ್ಟು ತ್ಯಾಗ ಮಾಡಿಲ್ಲ ಅಂತ ಅನಿಸುತ್ತಿದೆ.

ಮಗಳು ಕಲಿಯಲಿ 


ಮಗಳು ನವ್ಯಾನವೇಲಿ ಜೊತೆ

ಇನ್ನು ನನ್ನ ಮಕ್ಕಳಾದ ಅಗಸ್ತ್ಯ ಮತ್ತು ನವ್ಯಾನವೇಲಿ ವಿಚಾರಕ್ಕೆ ಬಂದರೆ, ಅವರು ಸೆಲೆಬ್ರಿಟಿಗಳ ಮೊಮ್ಮಕ್ಕಳಾಗಿದ್ದರೂ ಎಲ್ಲರಂತೆಯೇ ಇರಬೇಕೆಂದು ಬಯಸುತ್ತೇನೆ. ಮಗಳು ತಪ್ಪು ಮಾಡಲಿ, ಅದರಿಂದ ಕಲಿಯಲಿ ಎಂದೇ ಬಯಸುತ್ತೇನೆ. ನವ್ಯಾಳ ಕೆಲ ಚಿತ್ರಗಳನ್ನು ಅಂತರ್ಜಾಲದಲ್ಲಿ ಕೆಟ್ಟದ್ದಾಗಿ ಬಿಂಬಿಸಲಾಗಿತ್ತು ಆಗ ತುಂಬಾ ಬೇಸರವಾಗಿತ್ತು. ಅವಳಿನ್ನೂ ಪುಟ್ಟ ಹುಡುಗಿ, ತನ್ನಿಷ್ಟದ ಬದುಕುನ್ನು ಬದುಕುತ್ತಿದ್ದಾಳೆ. ಯಾರೋ ಏನೋ ಕಮೆಂಟ್ ಮಾಡಿ ಅವಳ ಚಿತ್ರ ಹಾಕಿಬಿಡುತ್ತಾರೆ. ಹಾಗಾಗಿ ಬೇಸರ. ಅದಕ್ಕಾಗಿಯೇ ಅವಳಿಗೆ ಎಚ್ಚರದಿಂದ ಇರಲು ಸಲಹೆ ನೀಡಿದ್ದೇನೆ. ಹಾಗಂತ ಅವಳ ಸ್ವಾತಂತ್ರ್ಯಕ್ಕೆ ಧಕ್ಕೆ ತಂದಿಲ್ಲ. ತಾಯಿಯಾಗಿ ಒಳಿತು– ಕೆಡಕುಗಳ ಬಗ್ಗೆ ಹೇಳ್ತೀನಿ.

ನಟಿಯಾಗಲಾರೆ

ನಾನು ನಟಿಯಾಗಲಿಲ್ಲವೇಕೆ ಎಂಬುದು ಹಲವರ ಪ್ರಶ್ನೆ. ನೋಡಿ ವೈದ್ಯರ ಮಗಳು ವೈದ್ಯೆಯಾಗಬೇಕಾದರೆ ಕನಿಷ್ಠ ವಿಜ್ಞಾನದಲ್ಲಿ ಉತ್ತಮ ಅಂಕಗಳನ್ನಾದರೂ ಗಳಿಸಬೇಕಲ್ಲವೇ? ಹಾಗೆಯೇ ನಾನು ದೊಡ್ಡನಟನ ಮಗಳಾಗಿದ್ದರೂ ನಟನೆಯ ವಿಷಯದಲ್ಲಿ ತುಸು ಪ್ರತಿಭಾವಂತೆಯಾದರೂ ಆಗಿರಬೇಕಲ್ಲವೇ? ನಾನೊಬ್ಬ ಕೆಟ್ಟ ನಟಿ ಅಂತ ಬಾಲ್ಯದಲ್ಲೇ ಗೊತ್ತಾಗಿತ್ತು. ಶಾಲಾ ನಾಟಕಗಳಲ್ಲಿ ಅಭಿಷೇಕ್‌ಗೆ ಉತ್ತಮ ಪಾತ್ರ ಸಿಗುತ್ತಿತ್ತು. ನನಗೆ ಸಹನಟಿಯ ಪಾತ್ರ ಸಿಗುತ್ತಿತ್ತು...

ಆದರೂ ಬಹಳಷ್ಟು ಮಂದಿ ನನ್ನೊಂದಿಗೆ ಸೆಲ್ಫಿ ತೆಗೆಸಿಕೊಳ್ಳಲು ಬಯಸುತ್ತಾರೆ. ಅದೇಕೋ ಗೊತ್ತಿಲ್ಲ? ನಮ್ಮ ಕುಟುಂಬದಲ್ಲಿ ಅಪ್ಪ– ಅಮ್ಮ, ತಮ್ಮ– ನಾದಿನಿ ಹೀಗೆ ಎಲ್ಲರೂ ಸೆಲೆಬ್ರಿಟಿಗಳೇ. ಅವರ ಜನಪ್ರಿಯತೆಯ ಬೆಳಕಿನಲ್ಲಿ ನಾನು ಕಾಣುತ್ತೇನೆ ಎಂಬ ಸತ್ಯದ ಅರಿವು ನನಗಿದೆ. ಇದೆಲ್ಲವೂ ಮೀರಿ ನನಗೂ ಸ್ವಂತ ಅಸ್ತಿತ್ವವಿದೆ ಎಂಬುದನ್ನು ನಂಬುವವಳು ನಾನು. ನನ್ನ ಮಗಳು ಆರ್ಥಿಕವಾಗಿ, ಸಾಮಾಜಿಕವಾಗಿ ಸ್ವಾವಲಂಬಿಯಾಗಿ ಬೆಳೆಯಬೇಕು. ಅವಳಿಷ್ಟದ ಬದುಕನ್ನು ಬದುಕಬೇಕು ಎಂಬುದಷ್ಟೇ ತಾಯಿಯಾಗಿ ನಾನು ಬಯಸೋದು.

**

ಗೌರವಿಸೋಣ...

ತನುಶ್ರೀ ದತ್ತಾ ತಮ್ಮ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಬಗ್ಗೆ ಮುಕ್ತವಾಗಿ ಹೇಳಿಕೊಂಡಿರುವುದು ನಿಜಕ್ಕೂ ಧೈರ್ಯದ ಕೆಲಸ. ಅವರಂತೆಯೇ ಅನೇಕ ಮಂದಿ ಈ ರೀತಿಯ ದೌರ್ಜನ್ಯಕ್ಕೆ ತುತ್ತಾಗಿರಬಹುದು. ಅಂಥ ಮಹಿಳೆಯರನ್ನು ನಾವು ಗೌರವದಿಂದ ಕಾಣಬೇಕು. ಒಬ್ಬ ಹೆಣ್ಣಾಗಿ ಈ ರೀತಿ ಹೇಳಿಕೊಳ್ಳುವುದು ಎಷ್ಟು ಕಷ್ಟವೆಂದು ನನಗೆ ಚೆನ್ನಾಗಿ ಗೊತ್ತು. ಅದರಲ್ಲೂ ಮಹಿಳೆಯೊಬ್ಬಳು ತನ್ನ ದೇಹದ ಬಗ್ಗೆ ಮಾತನಾಡವುದು ಅಷ್ಟು ಸುಲಭವಲ್ಲ. ಅದಕ್ಕೆ ಬಹಳಷ್ಟು ಧೈರ್ಯ ಬೇಕು. ಅಂಥವರನ್ನು ನಾವು ಗೌರವಿಸಬೇಕು. ಅಂಥ ಮಹಿಳೆಯರ ಮಾತನ್ನು ನಂಬಬೇಕು ಅನ್ನೋದು ನನ್ನ ಅನಿಸಿಕೆ.

–ಶ್ವೇತಾ ಬಚ್ಚನ್ ನಂದಾ​

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !