ಬ್ಯಾಗ್‌ನಲ್ಲಿ ಸಿಕ್ತು ಡ್ರಗ್ಸ್; ವಿದ್ಯಾರ್ಥಿ ಸೆರೆ

7
ಜಕ್ಕೂರು ಮೇಲ್ಸೇತುವೆಯಲ್ಲಿ ಅಪಘಾತ l ಕಾರಿನಿಂದಿಳಿದು ಓಡಿದ ಹುಡುಗರು

ಬ್ಯಾಗ್‌ನಲ್ಲಿ ಸಿಕ್ತು ಡ್ರಗ್ಸ್; ವಿದ್ಯಾರ್ಥಿ ಸೆರೆ

Published:
Updated:
Deccan Herald

ಬೆಂಗಳೂರು: ಜಕ್ಕೂರು ಮೇಲ್ಸೇತುವೆಯಲ್ಲಿ ಗುರುವಾರ ಮಧ್ಯಾಹ್ನ ಕಾರು ಡಿಕ್ಕಿ ಹೊಡೆದು ಮಾಜಿ ಸೈನಿಕ ಅಬ್ರಾಹಂ (50) ಅವರ ಕಾಲಿನ ಮೂಳೆ ಮುರಿದಿದೆ. ಆ ಕಾರನ್ನು ಚಾಲನೆ ಮಾಡುತ್ತಿದ್ದ ವಿದ್ಯಾರ್ಥಿಯ ಬ್ಯಾಗ್‌ನಲ್ಲಿ ಗಾಂಜಾ ಪತ್ತೆಯಾಗಿದ್ದರಿಂದ ಯಲಹಂಕ ಪೊಲೀಸರು ಆತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.

ಅವೆನ್ಯೂ ರಸ್ತೆಯ ಚೌಡೇಶ್ವರಿ ಸ್ಟ್ರೀಟ್ ನಿವಾಸಿಯಾದ ಎಚ್‌.ಸಿ.ಶೈಲೇಶ್ (23) ಬಂಧಿತ ಆರೋಪಿ. ಶೇಷಾದ್ರಿಪುರ ಕಾಲೇಜಿನಲ್ಲಿ 5ನೇ ವರ್ಷದ ಕಾನೂನು ವಿದ್ಯಾರ್ಥಿಯಾದ ಈತ, ನಾಲ್ವರು ಸ್ನೇಹಿತರ ಜತೆ ಕಾರಿನಲ್ಲಿ ಯಲಹಂಕಕ್ಕೆ ಬಂದಿದ್ದ. ಅಲ್ಲಿಂದ ಮಧ್ಯಾಹ್ನ 12 ಗಂಟೆ ಸುಮಾರಿಗೆ ವಾಪಸ್ ಹೊರಟಿದ್ದಾಗ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ.

ಆನಂದನಗರದ ಅಬ್ರಾಹಂ, ಸೇನೆಯಿಂದ ಸ್ವಯಂ ನಿವೃತ್ತಿ ಪಡೆದ ಬಳಿಕ ಕೆಐಎಎಲ್‌ನಲ್ಲಿ ಭದ್ರತಾ ವಿಭಾಗಕ್ಕೆ ಕೆಲಸಕ್ಕೆ ಸೇರಿದ್ದರು. ಇತ್ತೀಚೆಗೆ ಆ ಉದ್ಯೋಗವನ್ನೂ ತೊರೆದಿದ್ದ ಅವರು, ಪಿಎಫ್ ಫಾರ್ಮ್‌ಗೆ ಸಹಿ ಹಾಕಲು ಕೆಐಎಎಲ್‌ಗೆ ತೆರಳಿ
ದ್ದರು. ಅಲ್ಲಿಂದ ತಮ್ಮ ಬುಲೆಟ್ ಬೈಕ್‌ನಲ್ಲಿ ಮನೆಗೆ ಮರಳುತ್ತಿದ್ದಾಗ, ಹಿಂದಿನಿಂದ ಕಾರು ಡಿಕ್ಕಿ ಹೊಡೆದಿದೆ.

ಗುದ್ದಿದ ರಭಸಕ್ಕೆ ಅಬ್ರಾಹಂ ನಾಲ್ಕೈದು ಅಡಿಯಷ್ಟು ಮೇಲೆ ಎಗರಿ ಬಿದ್ದಿದ್ದಾರೆ. ತಡೆಗೋಡೆಗೆ ಕಾಲು ಬಡಿದಿದ್ದರಿಂದ ಮೂಳೆ ಮುರಿದಿದೆ. ಆ ಕೂಡಲೇ ನಾಲ್ವರು ಹುಡುಗರು ಕಾರಿನಿಂದ ಇಳಿದು ಓಡಿದ್ದಾರೆ. ಕಾರನ್ನು ಹಿಂದಕ್ಕೆ ತೆಗೆದುಕೊಂಡು ಪರಾರಿಯಾಗಲು ಯತ್ನಿಸಿದ ಶೈಲೇಶ್‌ನನ್ನು, ಇತರೆ ವಾಹನಗಳ ಸವಾರರು ಅಡ್ಡಗಟ್ಟಿ ಹಿಡಿದುಕೊಂಡಿದ್ದಾರೆ.

‘ಶೈಲೇಶ್‌ನ ಕಾರಿನಲ್ಲೇ ಗಾಯಾಳುವನ್ನು ಹಾಸ್ಮ್ಯಾಟ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. 17 ವರ್ಷಗಳ ಹಿಂದೆಯೇ ಅಬ್ರಹಾಂ ಅವರ ಕಾಲಿಗೆ ರಾಡ್ ಹಾಕಲಾಗಿತ್ತು. ಈಗ ಅದೇ ಕಾಲಿಗೆ ಪೆಟ್ಟು ಬಿದ್ದು ಆ ಹಳೆ ರಾಡ್ ಹಾಗೂ ಮೂಳೆಗಳು ಮುರಿದು ಹೋಗಿವೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ಅಣ್ಣನೆಂದು ಗೆಳೆಯನ ಕರೆಸಿದ್ದ: ‘ಆ ವಿದ್ಯಾರ್ಥಿ ಯಾವುದಕ್ಕೂ ಸರಿಯಾಗಿ ಉತ್ತರ ಕೊಡುತ್ತಿರಲಿಲ್ಲ. ಪೋಷಕರಿಗೆ ಕರೆ ಮಾಡುವಂತೆ ಹೇಳಿದಾಗ, ‘ನಮ್ಮ ತಂದೆ ಹಿರಿಯ ವಕೀಲರು. ಅವರನ್ನು ಎದುರು ಹಾಕಿಕೊಳ್ಳಬೇಡಿ. ನಮ್ಮ ಅಣ್ಣನನ್ನು ಕರೆಸುತ್ತೇನೆ. ಆತನ ಹತ್ತಿರವೇ ಮಾತಾಡಿ’ ಎಂದು ಹೇಳಿ ಯುವಕನೊಬ್ಬನನ್ನು ಕರೆಸಿದ್ದ. ಆತನನ್ನು ನಾವೆಲ್ಲ ತರಾಟೆಗೆ ತೆಗೆದುಕೊಂಡಾಗ, ‘ಸರ್.. ನಾನು ಶೈಲೇಶ್‌ನ ಅಣ್ಣ ಅಲ್ಲ. ಆತನ ಸ್ನೇಹಿತ’ ಎಂದು ಹೇಳಿ ಹೊರಟು ಹೋದ. ಆ ನಂತರ ಶೈಲೇಶ್‌ನಿಂದ ಬ್ಯಾಗ್ ಕಿತ್ತುಕೊಂಡು ಪರಿಶೀಲಿಸಿದಾಗ, ಐದು ಗಾಂಜಾ ಪೊಟ್ಟಣಗಳಿದ್ದವು. ಆ ನಂತರ ಯಲಹಂಕ ಠಾಣೆಗೆ ಕರೆ ಮಾಡಿದೆವು. ಹೊಯ್ಸಳ ಪೊಲೀಸರು, ಶೈಲೇಶ್‌ನನ್ನು ವಶಕ್ಕೆ ಪಡೆದುಕೊಂಡು ಹೋದರು’ ಎಂದು ಅಬ್ರಾಹಂ ಅಳಿಯ ಬಾಲಚಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಡ್ರಗ್ಸ್ ಬಗ್ಗೆ ಬಾಯ್ಬಿಡುತ್ತಿಲ್ಲ’

‘ಶೈಲೇಶ್ ಹಾಗೂ ಸ್ನೇಹಿತರು ಡ್ರಗ್ಸ್ ಖರೀದಿಗಾಗಿ ಯಲಹಂಕಕ್ಕೆ ಬಂದಿದ್ದರೋ ಅಥವಾ ಮಾರಾಟ ಮಾಡಲು ಬಂದಿದ್ದರೋ ಗೊತ್ತಿಲ್ಲ. ಅದರ ಬಗ್ಗೆ ಆರೋಪಿ ಬಾಯ್ಬಿಡುತ್ತಿಲ್ಲ. ಆತನ ರಕ್ತದ ಮಾದರಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದೇವೆ’ ಎಂದು ಯಲಹಂಕ ಪೊಲೀಸರು ಹೇಳಿದರು.

ಬರಹ ಇಷ್ಟವಾಯಿತೆ?

 • 13

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !