‘ಹಾಳಾಗಬಾರದು, ನಮ್ಮ ಬುದ್ಧಿ–ಸಾಮರ್ಥ್ಯ’

7

‘ಹಾಳಾಗಬಾರದು, ನಮ್ಮ ಬುದ್ಧಿ–ಸಾಮರ್ಥ್ಯ’

Published:
Updated:

ನಮ್ಮ ಬದುಕು, ಈಗಿರುವಷ್ಟು ಅದ್ಭುತವಾಗಿ ಒಮ್ಮಿಂದೊಮ್ಮೇಲೆ ಪ್ರಕಟವಾದದ್ದಲ್ಲ. ಅದು ಕೋಟ್ಯಂತರ ವರ್ಷಗಳ ಯೋಗದ ಫಲ. ಪ್ರಕೃತಿಯ ವಿಕಾಸದ ಕೊನೆ ಹಂತದಲ್ಲಿ ಮಾನವ ಬಂದಿದ್ದಾನೆ. ಹಾಗೆಯೇ ಅವನ ಬುದ್ಧಿ, ಸಾಮರ್ಥ್ಯವೂ ಅತ್ಯದ್ಭುತ. ಅದನ್ನು ಉಪಯೋಗಿಸಿ ಆತ ಸಾವಿರ ಕೋಟಿ ವರ್ಷಗಳ ಹಿಂದೆ ಏನಿತ್ತು ಎಂಬುದನ್ನು ತರ್ಕಿಸಬಲ್ಲ. ಮುಂದೆ ಏನಾಗುವುದೆಂಬುದನ್ನೂ ಊಹಿಸಿ ಹೇಳಬಲ್ಲ. ಇಂಥ ಬುದ್ಧಿಬಲ ಎಲ್ಲರಿಗೂ ಇದೆ. ಬಹಳ ಜನ ಅದನ್ನು ಕ್ಷುಲ್ಲಕ ವಿಚಾರಗಳಿಗೆ ಬಳಸಿ ಹಾಳು ಮಾಡುತ್ತಾರೆ.

ಕನಕ, ಕಾಂಚನ, ಕಾಮಿನಿಯರಿಗಾಗಿ ಹೊಡೆದಾಡಿ ಕೆಟ್ಟಿದೆ ಈ ಲೋಕವೆಲ್ಲ. ಗೇಣು ಜಾಗಕ್ಕಾಗಿ ನ್ಯಾಯಾಲಯದ ಕಟ್ಟೆ ಏರಿ ಇಡೀ ಜೀವನವನ್ನೇ ಸವೆಸಿದವರಿದ್ದಾರೆ. ಯಾವುದಕ್ಕೂ ಬಾರದ ಬಂಗಾರದ ಸಂಗ್ರಹಕ್ಕಾಗಿಯೇ ಶ್ರಮ ಪಟ್ಟವರಿದ್ದಾರೆ. ಹೆಣ್ಣಿಗಾಗಿ ಬಡಿದಾಡಿ ಸತ್ತು ಹೋದವರಿದ್ದಾರೆ. ಜಗತ್ತು ಎರಡು ಮಹಾ ಯುದ್ಧಗಳನ್ನು ಕಂಡಿದೆ. ಯುದ್ಧ ಎಂದರೇ ಮೋಜು-ಮೇಜವಾನಿ ಅಲ್ಲ. ಅದು ನಮ್ಮ ಬುದ್ಧಿ ಸಾಮರ್ಥ್ಯದ ವ್ಯರ್ಥ ಹರಣ.

ಹಗಲು ಕಂಡ ಕಮರಿಯ ಇರುಳು ಹೋಗಿ ಬೀಳುವರೇ ? ಇದು ತಗ್ಗು ಎಂದು ನಿಖರವಾಗಿ ಗೊತ್ತಿದ್ದರೂ; ಅಲ್ಲಿಗೆ ಹೋಗಿ ಬೀಳುವುದೆಂದರೇ ಎಂಥ ಹುಚ್ಚುತನ ? ಅವರು ತನಗೆ ನಮಸ್ಕಾರ ಮಾಡಲಿಲ್ಲ... ಈ ಕಡೆ ಸರಿ ಎಂದರು... ಆ ಕಡೆ ಹೋಗು ಎಂದರು ಎಂಬ ಕಾರಣಕ್ಕಾಗಿ ಕ್ಷೋಭೆಗೊಳ್ಳುವುದು, ಜಗಳ ಮಾಡುವುದು ಜಾಣತನವಲ್ಲ. ಹಲವರು ಮಾಡಿದ ತಪ್ಪನ್ನು ಈತ ನೋಡಿದ್ದಾನೆ, -ಕೇಳಿದ್ದಾನೆ. ಇಷ್ಟೆಲ್ಲಾ ಗೊತ್ತಿದ್ದರೂ ಮತ್ತೆ ಮತ್ತೆ ಅಂತಹ ತಪ್ಪನ್ನೇ ಮಾಡುವುದೆಂದರೇ ಮೂರ್ಖತನವಲ್ಲದೇ ಮತ್ತೇನು ?

ಬದುಕಿನಲ್ಲಿ ರಸ-ಕಸ ಎರಡೂ ಇವೆ. ಮುಳ್ಳಿನ ನಡುವೆಯೇ ಹೂ ಅರಳುತ್ತದೆ. ಕಸದಲ್ಲಿನ ಸತ್ವ ಹೀರಿದ ಗಿಡ ಹಣ್ಣಿನಲ್ಲಿ ರಸ ತುಂಬುತ್ತದೆ. ದುರ್ವಾಸನೆಯಿಂದ ತುಂಬಿದ ತಿಪ್ಪೆಯಲ್ಲಿಯೇ ಪರಿಮಳ ಸೂಸುವ ಕುಸುಮ ಬಿರಿಯುತ್ತದೆ. ಕಣ್ಣು-ಕಿವಿ ಬಳಸಿ ಎಲ್ಲವನ್ನೂ ಗ್ರಹಿಸಬೇಕು. ಜಗತ್ತಿನ ಸತ್ಯ ದರ್ಶನವಾಗುತ್ತದೆ. ಬುದ್ಧಿ ಬಳಸಿ ವಿಶ್ವಾನುಭವ ಹಾಗೂ ಸೌಂದರ್ಯಾನುಭೂತಿಯನ್ನು ಪಡೆಯಬೇಕು. ಇಲ್ಲವಾದರೆ ಬದುಕು ಬರಿದಾಗುತ್ತದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !