ವಿಜಯಪುರದ ಆರಾಧ್ಯದೈವ ಸಿದ್ಧೇಶ್ವರರ ಜಾತ್ರೆ 12ರಿಂದ

7
ಅದ್ದೂರಿಯಿಲ್ಲ; ಸಾಂಪ್ರದಾಯಿಕ, ಧಾರ್ಮಿಕ ಆಚರಣೆಗಷ್ಟೇ ಸೀಮಿತ

ವಿಜಯಪುರದ ಆರಾಧ್ಯದೈವ ಸಿದ್ಧೇಶ್ವರರ ಜಾತ್ರೆ 12ರಿಂದ

Published:
Updated:
Prajavani

ವಿಜಯಪುರ: ವಿಜಯಪುರದ ಆರಾಧ್ಯದೈವ ಸಿದ್ಧೇಶ್ವರರ ಜಾತ್ರಾ ಮಹೋತ್ಸವ ಇದೇ 12ರಿಂದ ಆರಂಭಗೊಳ್ಳಲಿದೆ ಎಂದು ಸಿದ್ಧೇಶ್ವರ ಸಂಸ್ಥೆ ಅಧ್ಯಕ್ಷ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

‘ಜಾತ್ರಾ ಮಹೋತ್ಸವಕ್ಕೆ ಈಗಾಗಲೇ ಸಕಲ ಸಿದ್ಧತೆ ಭರದಿಂದ ನಡೆದಿವೆ. ಈ ಸಂಬಂಧ ವಿವಿಧ ಸರ್ಕಾರಿ ಇಲಾಖೆಗಳ ನಡುವೆ ಸಭೆಯನ್ನು ನಡೆಸಲಾಗಿದೆ. ಜಾನುವಾರು ಜಾತ್ರೆಗೂ ಸಹ ಯಾವುದೇ ತೊಂದರೆಯಾಗದಂತೆ ಕ್ರಮ ತೆಗೆದುಕೊಳ್ಳಲಾಗಿದೆ’ ಎಂದು ಬುಧವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಬರ ಬೆಂಬಿಡದೆ ಕಾಡಿದೆ. ವ್ಯಾಪಾರ–ವಹಿವಾಟು ಕ್ಷೀಣಿಸಿದೆ. ಈಚೆಗಷ್ಟೇ ಭಾರತೀಯ ಸಂಸ್ಕೃತಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗಿದ್ದು, ಈ ಬಾರಿ ಸಿದ್ಧೇಶ್ವರರ ಜಾತ್ರೆಯನ್ನು ಸರಳವಾಗಿ, ಶ್ರದ್ಧಾ ಭಕ್ತಿಯಿಂದ ಆಚರಿಸುತ್ತೇವೆ. ಮುಂದಿನ ವರ್ಷದಿಂದ ಯಥಾಪ್ರಕಾರ ಜಾತ್ರೆ ನಡೆಯಲಿದೆ’ ಎಂದು ಹೇಳಿದರು.

ಜಾತ್ರೆಯ ವಿವರ: ‘ಇದೇ 12ರ ಶನಿವಾರ ಜಾತ್ರೆಗೆ ವಿಧ್ಯುಕ್ತ ಚಾಲನೆ ಸಿಗಲಿದೆ. ಸಂಜೆ 6ಕ್ಕೆ ಸಿದ್ಧೇಶ್ವರ ದೇವಾಲಯದಿಂದ ನಂದಿ ಧ್ವಜಗಳ ಮೆರವಣಿಗೆ ಆರಂಭಗೊಳ್ಳಲಿದೆ. ಪ್ರಮುಖ ಮಾರ್ಗಗಳಲ್ಲಿ ಸಂಚರಿಸುವ ನಂದಿ ಧ್ವಜಗಳ ಮೆರವಣಿಗೆ ಇಂಡಿ ರಸ್ತೆಯ ಚತುರ್ಮುಖ ಗಣಪತಿ ದೇವಾಲಯಕ್ಕೆ ತಲುಪಲಿದೆ. ಅಲ್ಲಿ ವಿಶೇಷ ಅಭಿಷೇಕ, ಪ್ರಸಾದ ವಿತರಣೆ ನಡೆಯಲಿದೆ’ ಎಂದು ಸಿದ್ಧೇಶ್ವರ ಸಂಸ್ಥೆಯ ಚೇರ್‌ಮನ್‌ ಬಸಯ್ಯ ಹಿರೇಮಠ ತಿಳಿಸಿದರು.

‘13ರ ಭಾನುವಾರ ಮಧ್ಯಾಹ್ನ 12.30ಕ್ಕೆ ಸಿದ್ಧೇಶ್ವರ ದೇವಾಲಯದಿಂದ ಲಿಂಗದ ಗುಡಿಯವರೆಗೆ ವೈಭವದಿಂದ ನಂದಿ ಧ್ವಜಗಳ ಮೆರವಣಿಗೆ ನಡೆಯಲಿದೆ. ಅಲ್ಲಿ ವಿಶೇಷ ಪೂಜೆ, ಕಾರ್ಯಕ್ರಮ ಜರುಗಲಿವೆ. ಅದೇ ದಿನ ಸಂಜೆ ಗುಡಿ ಆವರಣದಲ್ಲಿ ಭಜನಾ ಕಾರ್ಯಕ್ರಮ’ ನಡೆಯಲಿವೆ ಎಂದು ಹೇಳಿದರು.

‘14ರ ಸೋಮವಾರ ಗುಡಿ ಆವರಣದಲ್ಲಿ ಮಧ್ಯಾಹ್ನ 12.30ಕ್ಕೆ ಅಕ್ಷತಾರ್ಪಣೆ -ಭೋಗಿ ಕಾರ್ಯಕ್ರಮ ನಡೆಯಲಿದ್ದು, ಸಿದ್ಧರಾಮನ ಯೋಗದಂಡಕ್ಕೆ ಅಕ್ಷತೆ ಹಾಗೂ ವಿಧಿವಿಧಾನಗಳೊಡನೆ ಚರಿತ್ರೆ ಓದುವ ಕಾರ್ಯಕ್ರಮ, ನಂತರ ನಂದಿ ಧ್ವಜಗಳ ಉತ್ಸವ ಜರುಗಲಿದೆ. ರಾತ್ರಿ 8ಕ್ಕೆ ಮನರಂಜನಾ ಕಾರ್ಯಕ್ರಮ ಜರುಗಲಿವೆ. 15ರ ಮಧ್ಯಾಹ್ನ 12.30ಕ್ಕೆ ಹೋಮ ನಡೆಯಲಿದ್ದು, ಪಲ್ಲಕ್ಕಿಯೊಂದಿಗೆ ನಂದಿ ಧ್ವಜಗಳ ಉತ್ಸವ ವೈಭವದಿಂದ ಜರುಗಲಿದೆ’ ಎಂದು ಬಸಯ್ಯ ಮಾಹಿತಿ ನೀಡಿದರು.

‘16ರ ಬುಧವಾರ ರಾತ್ರಿ 8ರಿಂದ ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಚಿತ್ತಾಕರ್ಷಕ ಮದ್ದು ಸುಡುವ ಕಾರ್ಯಕ್ರಮ ಜರುಗಲಿದೆ. 17ರ ಬೆಳಿಗ್ಗೆ 11ಕ್ಕೆ ಭಾರ ಎತ್ತುವ ಸ್ಪರ್ಧೆ, 18ರ ಮಧ್ಯಾಹ್ನ 3ಕ್ಕೆ ನಗರದ ಎಸ್.ಎಸ್.ಹೈಸ್ಕೂಲ್ ಮೈದಾನದಲ್ಲಿ ಜಂಗಿ ನಿಖಾಲಿ ಕುಸ್ತಿ ಪಂದ್ಯಾವಳಿ ನಡೆಯಲಿವೆ.

ಸಿದ್ಧೇಶ್ವರರ ಜಾತ್ರೆ ಸಂದರ್ಭವೇ ಜಾನುವಾರು ಜಾತ್ರೆ ಸಹ ಯಥಾಪ್ರಕಾರ ನಡೆಯಲಿದ್ದು, ಇದೇ 12ರಿಂದ 18ರವರೆಗೆ ತೊರವಿ ಬಳಿಯಿರುವ ಎಪಿಎಂಸಿಯ ವಿಶಾಲ ಜಾಗದಲ್ಲಿ ಜಾನುವಾರು ಜಾತ್ರೆ ನಡೆಯಲಿದ್ದು, ಕೃಷಿ ಉತ್ಪನ್ನಗಳ ಪ್ರದರ್ಶನ ಸಹ ಇದೇ ಆವರಣದಲ್ಲಿ ನಡೆಯಲಿದೆ’ ಎಂದು ಬಸಯ್ಯ ಹಿರೇಮಠ ಜಾತ್ರೆಯ ಸಮಗ್ರ ಮಾಹಿತಿ ನೀಡಿದರು.

ಸಿದ್ಧೇಶ್ವರ ಸಂಸ್ಥೆಯ ಉಪಾಧ್ಯಕ್ಷ ಸಂ.ಗು.ಸಜ್ಜನ, ಸಿದ್ರಾಮಪ್ಪ ಉಪ್ಪಿನ, ಗುರು ಗಚ್ಚಿನಮಠ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !