ಜ್ಞಾನದಲ್ಲಿ ರಮಿಸುವ ಭಾರತೀಯರು

7

ಜ್ಞಾನದಲ್ಲಿ ರಮಿಸುವ ಭಾರತೀಯರು

Published:
Updated:

ಜೀವನ ಎಂದರೇ ಅದೊಂದು ಪ್ರವಾಹ. ನಿತ್ಯ ಅದು ಹರಿಯುತ್ತಲೇ ಇರಬೇಕು. ಎಲ್ಲಿಯೂ ನಿಲ್ಲಬಾರದು. ನಿಂತರೇ ಅದು ಕೆರೆಯಾಗುತ್ತದೆ. ಮಡುವಾಗುತ್ತದೆ. ಮಲೀನವಾಗುತ್ತದೆ. ನಾವೆಲ್ಲಾ ಜೀವ ನದಿಗಳು. ಹರಿಯುತ್ತಾ, ವಿಸ್ತಾರಗೊಳ್ಳುತ್ತಾ ಹೋಗಬೇಕು. ಸಾಗರದಲ್ಲಿ ಬೆರೆಯುವವರೆಗೆ ನದಿಗಳು ಹರಿಯುತ್ತಲೇ ಇರುತ್ತವೆ. ಹಾಗೇ ನಮ್ಮ ಕಾರ್ಯ ಪ್ರವಾಹ, ಭಾವ ಪ್ರವಾಹ, ಜ್ಞಾನ ಪ್ರವಾಹ ಕೊನೆಯವರೆಗೂ ಹರಿಯುತ್ತಾ, ವಿಸ್ತಾರಗೊಳ್ಳುತ್ತಾ ವಿಶ್ವವ್ಯಾಪಿಯಾಗಬೇಕು.

ಜ್ಞಾನಕ್ಕೆ ಸಮಾನವಾದುದು ಇಲ್ಲಿ ಯಾವುದೂ ಇಲ್ಲ. ಕಣ್ಣು-ಕಿವಿ-ಮನಸ್ಸು ಬಿಚ್ಚಿ ಸದಾ ಜ್ಞಾನ ಸಂಗ್ರಹಿಸುತ್ತಲೇ ಇರಬೇಕು. ಒಬ್ಬ ಹುಡುಗ ಜ್ಞಾನ ಪಥದಲ್ಲಿ ಸಾಗುತ್ತಾ ಸಾಗುತ್ತಾ ಮಹರ್ಷಿ ವಾಲ್ಮೀಕಿಯೇ ಆಗಬಹುದು... ವೇದವ್ಯಾಸರ ಎತ್ತರಕ್ಕೆ ಏರಬಹುದು. ಪ್ರತಿ ಕ್ಷಣ, ಪ್ರತಿ ದಿನ ಹೊಸ ಹೊಸ ಹೊಳವು-ದರ್ಶನಗಳನ್ನು ಅರಿಯಲು ಸಾಧ್ಯ. ಅರಿವು ಎಲ್ಲಿಂದಲಾದರೂ ಬರಲಿ. ಯಾರಿಂದಲಾದರೂ ಬರಲಿ. ಅದು ಸತ್ಯವಾಗಿದ್ದರೆ ಸ್ವೀಕಾರಾರ್ಹವಾಗಿರುತ್ತದೆ. ನಮ್ಮ ಶೂನ್ಯವನ್ನು ಪಾಶ್ಚಿಮಾತ್ಯರು ಸ್ವೀಕರಿಸಿಲ್ಲವೇನು ? ಪಶ್ಚಿಮದವರ ಸಾಪೇಕ್ಷ ಸಿದ್ಧಾಂತವನ್ನು ನಾವು ಅಧ್ಯಯನ ಮಾಡುತ್ತಿಲ್ಲವೇನು..!

ಸದೃಢವಾದ ಕಾಯ, ಎಚ್ಚರವಾಗಿರುವ ಬುದ್ಧಿ ಹಾಗೂ ಸದ್ಗುಣಗಳನ್ನು ಸಾಧಕ ಹೊಂದಿರಬೇಕು. ನಾವು ಭಾರತೀಯರು. ಬೆಳಕಿನ ರೂಪದಲ್ಲಿರುವ ಜ್ಞಾನದಲ್ಲಿ ರಮಿಸುವವರು. ಸತ್ಯವನ್ನು ಬಯಸುವವರು. ಸತ್ಯಕಾಮಿಗಳು. ನಮ್ಮಿಂದಲೇ ನಮ್ಮ ದೇಶಕ್ಕೆ ಭಾರತ ಎಂಬ ಹೆಸರು ಬಂದಿದೆ. ಸತ್ಯವನ್ನು ಪ್ರೀತಿಸುವವರ ದೇಶದ ಹೆಸರೇ ಭಾರತ. ಹೆಸರಿಗೆ ತಕ್ಕಂತೆ ನಾವು ಜ್ಞಾನ ಪಿಪಾಸುಗಳಾಗಬೇಕು. ಸತ್ಯವನ್ನು ಆರಾಧಿಸಬೇಕು. ಸತ್ಯ ಯಾರಿಗೇ ಬೇಡ ? ಧರ್ಮ ಎಂದರೇ ಜ್ಞಾನ ಜ್ಯೋತಿ. ಅದರ ಬೆಳಕು ಎಲ್ಲರಿಗೂ ಬೇಕು. ಸಾಧಕನಿಗೆ ಅದು ಸಾಧ್ಯ. ಅದು ಅವನಿಗೆ ಬೇಗನೇ ದೊರೆಯುತ್ತದೆ ಕೂಡ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !