ಇರುವುದನ್ನೇ ಪ್ರೀತಿಸಿ-ಆರಾಧಿಸಿ

7

ಇರುವುದನ್ನೇ ಪ್ರೀತಿಸಿ-ಆರಾಧಿಸಿ

Published:
Updated:

ಇದ್ದುದನ್ನು ಅಲಕ್ಷಿಸಿ, ಇಲ್ಲದುದಕ್ಕಾಗಿ ಕೊರಗುವುದು ಬಡತನ. ಏನಿದೆಯೋ ಅದನ್ನು ಚೆನ್ನಾಗಿ ಪ್ರೀತಿಸಿ... ಆರಾಧಿಸಿ... ಅನುಭವಿಸಿ. ನಮ್ಮಲ್ಲಿ ಬಂಗಾರದ ಹೂವು ಇರಲಿಕ್ಕಿಲ್ಲ. ಪ್ರಕೃತಿಯಲ್ಲಿ ಅರಳಿದ ಸಣ್ಣ ಹೂವು ಇದೆಯಲ್ಲ. ಸಣ್ಣದಾದರೇನು... ಒಂದೇ ದಿನದಲ್ಲಿ ಬಾಡಿ ಹೋದರೇನು ? ಅದಕ್ಕಿರುವ ಸೌಂದರ್ಯ-ಪರಿಮಳ ಬಂಗಾರದ ಹೂವಿಗೆ ಇಲ್ಲ. ಎರಡೂ ಹೂವು ದೇವರ ತಲೆಗೆ ಏರಬಹುದು. ಬಂಗಾರದ ಹೂವು ಬಹಳಷ್ಟು ಹೊತ್ತು ಅಲ್ಲಿರಲಾಗುವುದಿಲ್ಲ. ಹಾಗಿದ್ದರೆ ಅದು ಅಪಾಯವನ್ನು ಸೃಷ್ಟಿಸುತ್ತದೆ. ಅದಕ್ಕೆ ರಕ್ಷಕರು-ಕಾವಲುಗಾರರು ಬೇಕಾಗುತ್ತದೆ. ನಿಸರ್ಗದ ಹೂವು ಎಂದರೇ ಅಪಾಯವೇ ಇಲ್ಲ; ಆನಂದವೇ ಎಲ್ಲ.

ಬದುಕು ಸಿರಿವಂತವಾಗಲು, ದೇಹ-ಭಾವ-ಜ್ಞಾನಗಳೆಂಬ ಸಂಪತ್ತು ಬಲಿಯಬೇಕು. ಇವೇ ನಿಜವಾದ ಸಂಪತ್ತುಗಳು. ಇವುಗಳನ್ನು ಹೊಂದಿದವರೇ ಶ್ರೀಮಂತರು. ಶರಣರು, ಸಂತರು, ಅನುಭಾವಿಗಳು, ಋಷಿಗಳು ಈ ತ್ರಿವಿಧ ಸಂಪತ್ತನ್ನು ಬೆಳಸಿಕೊಂಡರು. ಸೂಕ್ತವಾಗಿ ಬಳಸಿಕೊಂಡರು. ಅವರಲ್ಲಿ ತಿನ್ನಲು ಹಿಡಿ ಅನ್ನವಿದೆ. ಕುಡಿಯಲು ಗುಟುಕು ನೀರಿದೆ. ಮಲಗಲು ಒಂದಿಷ್ಟು ಜಾಗ ಇದೆ. ಸಾಕಲ್ಲ, ಬದುಕನ್ನು ಅನುಭವಿಸಿ-ಆನಂದಿಸಲು. ಮತ್ತಿನ್ನೇನು ಬೇಕು ? ಮತ್ತಷ್ಟು-ಇನ್ನಷ್ಟು ಬೇಕು ಎನ್ನುವವರೇ ಬಡವರು. ಹಪಹಪಿತನವೇ ಬಡತನಕ್ಕೆ ಕಾರಣ. ನಿಜವಾದ ಸಿರಿವಂತರು ಹೊರಗೆ ಬಡವರಂತೆ ಕಾಣಬಹುದು. ಅಂತರಂಗದಲ್ಲಿ ಅವರು ಘನಮನ ಸಿರಿವಂತರು.

ಇಡೀ ವಿಶ್ವವೇ ಭಗವಂತನ ಸುಂದರ ಕಲಾಕೃತಿ. ಆತ ಅದನ್ನು ನಮಗಾಗಿ ರಚಿಸಿದ್ದಾನೆ. ಬನ್ನಿ ನಾನು ನಿಮಗೆ ಆಮಂತ್ರಣ ಕೊಡುತ್ತೇನೆ. ನಿಮ್ಮ ಸ್ವಾಗತಕ್ಕೆ ಸಿದ್ಧನಾಗಿ ನಿಂತಿದ್ದೇನೆ. ಅನುಭವಿಸಿ-ಆನಂದಿಸಿ ತೃಪ್ತರಾಗಿ ತೆರಳಿ ಎಂದು ಹೇಳುತ್ತಿದ್ದಾನೆ. ಇದು ನಮ್ಮ ಭಾಗ್ಯವಲ್ಲವೇ ? ಇಲ್ಲಿ ಹಚ್ಚ ಹಸಿರು ವೃಕ್ಷಗಳು, ಪರಿಮಳ ಸೂಸುವ ಬಗೆಬಗೆಯ ಪುಷ್ಪಗಳು ನಮಗಾಗಿ ಅಲಂಕೃತಗೊಂಡಿವೆ. ಮೇಘ ಮಳೆ ಸುರಿಸುತ್ತದೆ. ಸೂರ್ಯ ಬೆಳಕು ಹರವಿದ್ದಾನೆ. ಎಲ್ಲವೂ ನಮಗಾಗಿ. ಎಲ್ಲವನ್ನೂ ನೋಡಿ ಅನುಭವಿಸಿ, ಇಲ್ಲಿನ ವೈಭವವನ್ನು ಇನ್ನಷ್ಟು ಹೆಚ್ಚಿಸಿ, ಇಲ್ಲಿಂದ ತೆರಳುವುದು ನಮ್ಮ ಕರ್ತವ್ಯ. ಇಲ್ಲಿನ ಸೌಂದರ್ಯಕ್ಕೆ ದ್ವೇಷ-ಅಸೂಯೆಗಳ ಬೆಂಕಿ ಹಚ್ಚಿ, ಹೊಗೆಯುಗುಳಿ ಹೋಗಬಾರದು.

ದೇವನ ಈ ಜಗತ್ತು ಬರೀ ಸುಂದರವಲ್ಲ, ಪರಮ ಪವಿತ್ರವೂ ಕೂಡ. ಅದರ ಅಂದವನ್ನು ಹೆಚ್ಚಿಸುವ ಕೆಲಸ ನಮ್ಮಿಂದಾಗದಿದ್ದರೇ ಬೇಡ. ಅದನ್ನು ಕೆಡಿಸಲಾದರೂ ಹೋಗಬಾರದು.

ಸಂಗ್ರಹ: ಸುಭಾಸ ಯಾದವಾಡ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !