ಕಿವಿಯ ರಕ್ಷಣೆಗೆ ನಿಶಬ್ದವೇ ಮದ್ದು

ಮಂಗಳವಾರ, ಮಾರ್ಚ್ 26, 2019
27 °C

ಕಿವಿಯ ರಕ್ಷಣೆಗೆ ನಿಶಬ್ದವೇ ಮದ್ದು

Published:
Updated:
Prajavani

ಮನೆಯಿಂದಾಚೆ ಕಾಲಿಡುತ್ತಿದ್ದಂತೆ ಇಯರ್‌ಫೋನ್‌ ಕಿವಿಯೇರುತ್ತದೆ. ಬಸ್‌, ರೈಲು, ಮೆಟ್ರೊ ಪ್ರಯಾಣಿಕರನ್ನು ಗಮನಿಸಿದರೆ ಹತ್ತರಲ್ಲಿ ಎಂಟು ಮಂದಿ ಕಿವಿಗೆ ಇಯರ್‌ಫೋನ್‌ ಹಾಕಿ ಹಾಡು ಕೇಳುತ್ತಿರುತ್ತಾರೆ. ಕೆಲವರು ಸಿನಿಮಾ ವೀಕ್ಷಣೆ, ವಿಡಿಯೊ ಗೇಮ್‌ನಲ್ಲಿ ಮುಳುಗಿರುತ್ತಾರೆ. ಹದಿ ಹರೆಯದಿಂದ 40ರ ವಯೋಮಾನದವರಲ್ಲಿ ಇಯರ್‌ಫೋನ್‌ ಗೀಳು ಹೆಚ್ಚಾಗಿ ಕಂಡುಬರುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿನ ಪ್ರಕಾರ 110 ಕೋಟಿ ಮಂದಿಯಲ್ಲಿ ಆಡಿಯೊ ಸಾಧನಗಳ ಅಸುರಕ್ಷಿತ ಬಳಕೆಯಿಂದ ಶ್ರವಣದೋಷ ಕಾಣಿಸಿಕೊಳ್ಳುತ್ತಿದೆ.

ಗಂಟೆಗಟ್ಟಲೆ ಇಯರ್‌ಫೋನ್‌ ಬಳಸುವವರಲ್ಲಿ ಹೆಚ್ಚಾಗಿ ಶ್ರವಣದೋಷ ಕಾಣಿಸಿಕೊಳ್ಳುತ್ತಿದೆ ಎಂದು ತಜ್ಞರು ಹೇಳುತ್ತಾರೆ. ಶ್ರವಣದೋಷದ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಮಾರ್ಚ್‌ 3ರಂದು ‘ವಿಶ್ವ ಶ್ರವಣ ದಿನ’ವನ್ನು ಆಚರಿಸಲಾಗುತ್ತಿದೆ. ಅಸುರಕ್ಷಿತ ಇಯರ್‌ಫೋನ್‌ಗಳ ಬಳಕೆಯಿಂದ ಹದಿಹರೆಯದವರಲ್ಲಿ ಕಾಣಿಸಿಕೊಳ್ಳುತ್ತಿರುವ ಶ್ರವಣ ಸಮಸ್ಯೆಗಳನ್ನು ನಿಯಂತ್ರಿಸುವ ಬಗ್ಗೆ ಅಪೊಲೊ ಆಸ್ಪತ್ರೆಯ ವೈದ್ಯೆ ಡಾ. ಪಿ. ಮೇಘನಾ ಕೆಲವು ಸಲಹೆಗಳನ್ನು ನೀಡಿದ್ದಾರೆ.

* ಇಯರ್ ಫೋನ್ ಬಳಕೆಯಿಂದ ಉಂಟಾಗುವ ಶ್ರವಣ ಸಮಸ್ಯೆಯನ್ನು ಗುರುತಿಸುವುದು ಹೇಗೆ?
ಚಿಕ್ಕ ವಯಸ್ಸಿನವರಿಗೆ ಟೀವಿ ನೋಡುವಾಗ ಧ್ವನಿ ಹೆಚ್ಚಿಸಬೇಕು ಅನ್ನಿಸುವುದು, ಒಂದಕ್ಕಿಂತ ಹೆಚ್ಚು ಮಂದಿ ಮಾತನಾಡುವಾಗ ಅವರ ಸಂಭಾಷಣೆಯನ್ನು ಅನುಸರಿಸುವುದು ಕಷ್ಟವಾಗುವುದು, ಬೇರೆಯವರ ಮಾತುಗಳು ಅಸ್ಪಷ್ಟವಾಗಿ ಕೇಳುವುದು, ಇತರರ ಮಾತುಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳುವುದು, ಫೋನ್‌ ರಿಂಗಾಗುವುದು ಕೇಳಿಸದಿರುವುದು, ಇಯರ್‌ಫೋನ್‌ ಹಾಕಿಕೊಳ್ಳದೇ ಫೋನ್‌ನಲ್ಲಿ ಮಾತನಾಡುವುದು ಅಸಾಧ್ಯ ಎಂಬ ಸ್ಥಿತಿ ನಿರ್ಮಾಣವಾದರೆ ಆ ವ್ಯಕ್ತಿಗೆ ಅಸುರಕ್ಷಿತ ಆಡಿಯೊ ಸಾಧನದ ಬಳಕೆಯಿಂದ ಶ್ರವಣದೋಷ ಕಾಣಿಸಿಕೊಂಡಿರುವುದರ ಲಕ್ಷಣ ಎಂದು ಪರಿಗಣಿಸಬಹುದು. 60 ವರ್ಷ ದಾಟಿದ ನಂತರ ಅಥವಾ ಮಧುಮೇಹ, ರಕ್ತದೊತ್ತಡ ಅಥವಾ ಅಪಘಾತದ ಕಾರಣದಿಂದ ಶ್ರವಣದೋಷ ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ, ಬಹುತೇಕ ಯುವಕರಲ್ಲಿ ಇದು ಕಾಣಿಸಿಕೊಳ್ಳುವುದು ಇಯರ್‌ಫೋನ್‌ ಬಳಕೆಯಿಂದ.

* ಪ್ರತಿನಿತ್ಯ ಇಯರ್‌ಫೋನ್‌ ಬಳಸುತ್ತಿರುವವರು ತಮ್ಮ ಶ್ರವಣ ಶಕ್ತಿ ಕುಂಠಿತವಾಗದಂತೆ ಕಾಪಾಡಿಕೊಳ್ಳಲು ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳೇನು?
ದಿನನಿತ್ಯ ಇಯರ್‌ಫೋನ್‌ ಬಳಸುವವರು 60/60 ಸೂತ್ರವನ್ನು ಕಡ್ಡಾಯವಾಗಿ ಅನುಸರಿಸಿದರೆ ಅಪಾಯದ ಪ್ರಮಾಣವನ್ನು ಕಡಿಮೆ ಮಾಡಬಹುದು. ಸುದೀರ್ಘವಾಗಿ ಇಯರ್‌ಫೋನ್‌ ಬಳಸುವವರು ಪ್ರತಿ 60 ನಿಮಿಷಕ್ಕೊಮ್ಮೆ ವಿರಾಮ ಕೊಡಲೇ ಬೇಕು. 60 ಡೆಸಿಬಲ್‌ಗಿಂತ ಹೆಚ್ಚಿನ ಮಟ್ಟದ ಶಬ್ದವನ್ನು ಕೇಳಬೇಡಿ. 2 ಗಂಟೆಗಳ ಕಾಲ ನಿರಂತರವಾಗಿ 90 ಡೆಸಿಬಲ್ ಶಬ್ದ ಆಲಿಸಿದರೆ, ಕ್ರಮೇಣ ಶ್ರವಣ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ.

*ಇಯರ್‌ಫೋನ್‌ಗಿಂತ ಹೆಡ್‌ಫೋನ್ ಸುರಕ್ಷಿತವೇ?
ಹೌದು, ಇಯರ್‌ಫೋನ್‌ ನೇರವಾಗಿ ಕಿವಿಯ ಕೊಳವೆಗಳಿಗೆ ಹಾನಿ ಮಾಡುತ್ತದೆ. ಸಂಗೀತ ಕೇಳಲೆಂದೇ ಇರುವ ಮ್ಯೂಸಿಕ್ ಹೆಡ್‌ಫೋನ್‌ಗಳಿಂದ ಹೆಚ್ಚು ಹಾನಿಯಿಲ್ಲ. ಅದರಲ್ಲೂ ಕಡಿಮೆ ದರಕ್ಕೆ ಸಿಗುತ್ತದೆ ಎಂಬ ಕಾರಣದಿಂದ ಬೀದಿಯಲ್ಲಿ ಸಿಗುವ ಇಯರ್‌ಫೋನ್‌ಗಳನ್ನು ಬಳಸಬೇಡಿ. ಕಳಪೆ ಗುಣಮಟ್ಟದ ಇಯರ್‌ ಫೋನ್‌ಗಳಲ್ಲಿ ಫಿಲ್ಟರ್‌ ಇರುವುದಿಲ್ಲ. ಇಂಥವುಗಳನ್ನು ಬಳಸುವುದರಿಂದ ಕಿವಿಗಳಿಗೆ ಬೇಗನೇ ಹಾನಿಯಾಗುತ್ತವೆ. ಎರಡು ತಿಂಗಳಿಗೊಮ್ಮೆ ಇಯರ್‌ ಫೋನ್‌ ಸ್ಪಾಂಜ್‌ಗಳನ್ನು ಬದಲಾಯಿಸುವುದು ಉತ್ತಮ.

*ಶಬ್ದ‌ಮಟ್ಟವನ್ನು ಅಳೆಯುವುದು ಹೇಗೆ?
ಶಬ್ದದ ಮಟ್ಟವನ್ನು ಅಳೆಯಲು ಅನೇಕ ಅಪ್ಲಿಕೇಶನ್‌ಗಳನ್ನು ಉಪಯೋಗಿಸಬಹುದು. decibel x  ಮತ್ತು Too noci ಆ್ಯಪ್‌ ಐಒಎಸ್ ಮತ್ತು ಆಂಡ್ರಾಯ್ಡ್‌ಗಳಲ್ಲಿ ಲಭ್ಯವಿದೆ. ಆಂಡ್ರಾಯ್ಡ್‌ನಲ್ಲಿ sound meter ಮತ್ತು ಐಒಎಸ್ ನಲ್ಲಿ NIOSH ಎಂಬ ಶಬ್ದ ಮಟ್ಟ ಅಳೆಯುವ ಮೀಟರ್ ಲಭ್ಯವಿದೆ. ಇವುಗಳ ಮೂಲಕ ನೀವು ಕೇಳುವ ಸಂಗೀತದ ಶಬ್ದದ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. 

* ಮೊಬೈಲ್‌ನಲ್ಲಿ ಸಂಗೀತ ಕೇಳುವುದು, ಸಿನಿಮಾ ನೋಡುವ ಯುವಜನರಿಗೆ ನಿಮ್ಮ ಸಲಹೆ ಏನು?
ಮೊಬೈಲ್‌ನಲ್ಲಿ ಸಿನಿಮಾ ನೋಡುವವವರಿಗೆ ಗಂಟೆಗಳ ಕಡೆ ಗಮನ ಇರುವುದಿಲ್ಲ. ಹಾಗಾಗಿ ಮೊಬೈಲ್‌ನಲ್ಲಿ ಸಿನಿಮಾ ನೋಡುವ ಅಭ್ಯಾಸದಿಂದ ದೂರವಿರಿ. ವಿಡಿಯೊ ಗೇಮ್‌ಗಳೂ ಅಷ್ಟೇ ನಿಮ್ಮ ನಿಯಂತ್ರಣದಲ್ಲಿ ಇರುವುದಿಲ್ಲ. ಅರ್ಧಕ್ಕೆ ನಿಲ್ಲಿಸಲು ಮನಸು ಬರುವುದಿಲ್ಲ. ಹಾಗಾಗಿ ನಮ್ಮ ಅಭ್ಯಾಸಗಳನ್ನು ಬದಲಾಯಿಸುವ ಅಗತ್ಯವಿದೆ. ವಿಡಿಯೊ ಗೇಮ್‌ಗಳನ್ನು ಪ್ರಯಾಣದ ಸಂದರ್ಭದಲ್ಲಿ ಆಡುವುದು, ಸಿನಿಮಾ ನೋಡುವುದು ಮುಂತಾದ ಗಂಟೆಗಳ ಕಾಲ ಇಯರ್‌ಫೋನ್‌ ಬಳಸುವ ಚಟುವಟಿಕೆಯನ್ನು ನಿಲ್ಲಿಸಿಬಿಡಿ.  

*ಇಯರ್‌ಫೋನ್‌ ಆಯ್ಕೆ ಹೇಗೆ?
ನಂಬಿಕಾರ್ಹ ಕಂಪನಿಗಳ ಇಯರ್‌ಫೋನ್‌ಗಳನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಯಾಕೆಂದರೆ ಅವರು ಪರೀಕ್ಷೆಗಳನ್ನು ಮಾಡಿ ಕಿವಿಗಳಿಗೆ ಹಾನಿಯಾಗದಂತೆ ಮುಂಜಾಗೃತಾ ಕ್ರಮ ಕೈಗೊಂಡಿರುತ್ತಾರೆ. ಗುಣಮಟ್ಟವಿದ್ದಾಗ ವಾಲ್ಯೂಮ್‌ ಹೆಚ್ಚು ಮಾಡುವ ಅಗತ್ಯ ಬೀಳುವುದಿಲ್ಲ. ಕಳಪೆಯಾಗಿದ್ದಾಗ ಸರಿಯಾಗಿ ಕೇಳಿಸುವುದಿಲ್ಲ ಎಂಬ ಕಾರಣಕ್ಕೆ ವಾಲ್ಯೂಮ್‌ ಹೆಚ್ಚಿಸಿ ಹಾಡು ಕೇಳುತ್ತೇವೆ. ಇದು ನಮ್ಮ ಕಿವಿ ತಮಟೆಯ ಮೇಲೆ ನೇರವಾಗಿ ಹಾನಿ ಮಾಡುತ್ತದೆ.

ಶಬ್ದ ಪ್ರೇರಿತ ಶ್ರವಣದೋಷ ತಪ್ಪಿಸಲು ಮುನ್ನೆಚ್ಚರಿಕೆಗಳು

*ದೊಡ್ಡ ಶಬ್ದಗಳಿರುವ ಕಡೆ ಹೋಗುವಾಗ ಕಸ್ಟಮ್ ಮೋಲ್ಡ್ ಮಾಡಿದ ಕಿವಿ ಪ್ಲಗ್‌ಗಳನ್ನು ಬಳಸಬೇಕು. ಇದರಿಂದಾಗಿ ಜೋರಾದ ಶಬ್ದಗಳಿಂದ ಕಿವಿಗೆ ಆಗುವ ಹಾನಿ ತಪ್ಪಿಸಬಹುದು.

*ಸಂಗೀತ ಕಛೇರಿ ಮತ್ತು ಸಿನೆಮಾದ ವಿರಾಮ ಸಮಯದಲ್ಲಿ ನಿಶಬ್ದ ಸ್ಥಳಕ್ಕೆ ತೆರಳಿ.

*ಒಂದಿಡೀ ರಾತ್ರಿ ಮೈಕ್‌ ಶಬ್ದ ಆಲಿಸಿದ ನಂತರ ನಿಮ್ಮ ಕಿವಿಗಳು ಸಂಪೂರ್ಣ ಸಹಜ ಸ್ಥಿತಿಗೆ ಹಿಂತಿರುಗಲು 16 ಗಂಟೆಗಳ ನಿಶಬ್ದದ ಅಗತ್ಯವಿದೆ. 

*ಕಿವಿಯೊಳಗಿನ ಮೇಣ, ದೂಳು ಮತ್ತು ಇತರ ಹಾನಿಕಾರಕ ಕಣಗಳನ್ನು ತಡೆಯುತ್ತದೆ. ಕಿವಿಯನ್ನು ಸಂಪೂರ್ಣವಾಗಿ ಶುಚಿ ಮಾಡಬಾರದು. ಇಯರ್ ಬಡ್‌ ಅಥವಾ ಇತರ ಚೂಪಾದ ವಸ್ತುಗಳಿಂದ ಕಿವಿಯನ್ನು ಸ್ವಚ್ಛಗೊಳಿಸುವುದರಿಂದ ಕಿವಿ ತಮಟೆಗೆ ಹಾನಿಯಾಗುತ್ತದೆ. 

*ಸದಾ ಯಂತ್ರಗಳ ಜೊತೆ ಕೆಲಸ ಮಾಡುವ ಕೈಗಾರಿಕೆಗಳ ಕಾರ್ಮಿಕರು ದಿನದ ಸ್ವಲ್ಪ ಹೊತ್ತಾದರೂ ನಿಶಬ್ದವಿರುವ ಸ್ಥಳಕ್ಕೆ ತೆರಳಬೇಕು. ವರ್ಷಕ್ಕೊಮ್ಮೆ ಕಿವಿಯ ಪರೀಕ್ಷೆ ಮಾಡಿಸಿಕೊಳ್ಳಬೇಕು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !