ಸೋಮವಾರ, ಸೆಪ್ಟೆಂಬರ್ 23, 2019
22 °C

ಒಂದೇ ಮಗು ಒಂಟಿಯೇನಲ್ಲ..

Published:
Updated:
Prajavani

ಉದ್ಯೋಗಸ್ಥ ಮಹಿಳೆ ಪುಷ್ಪಾಗೆ ಒಬ್ಬಳೇ ಮಗಳು. ಹಟ ಜಾಸ್ತಿ. ಅತ್ತೆ- ಮಾವ, ಸ್ನೇಹಿತೆಯರು ಪುಷ್ಪಾಗೆ ‘ಇನ್ನೊಂದು ಮಗು ಮಾಡಿಕೊ. ಇನ್ನೊಂದು ಮಗು ಆದರೆ ನಿನ್ನ ಮಗಳ ಹಟ ಕಡಿಮೆಯಾಗುತ್ತದೆ. ಜೊತೆಗೆ ಮಗಳ ಒಂಟಿ ಭಾವನೆಯೂ ಕಡಿಮೆಯಾಗುತ್ತದೆ. ಆಕೆಗೂ ಒಬ್ಬರು ಜತೆಗೆ ಬೇಕಲ್ಲ’ ಎಂಬ ವಾದವನ್ನು ಮುಂದಿಡುತ್ತಲೇ ಇದ್ದಾರೆ. ಎರಡು ಮಕ್ಕಳ ಜತೆಗೆ ಉದ್ಯೋಗ ಸಂಭಾಳಿಸಲು ಒದ್ದಾಡುವ ಸ್ನೇಹಿತೆಯೂ ಇದೇ ಸಲಹೆ ನೀಡಿದಾಗ ಪುಷ್ಪಾಗೆ ಇಬ್ಬಗೆ ಕಾಡುತ್ತದೆ.

ಇನ್ನೊಂದು ಮಗು ಸಾಕಲು ಬೇಕಾದ ತಾಳ್ಮೆಯಾಗಲಿ, ಶಕ್ತಿಯಾಗಲಿ ತನಗಿಲ್ಲ ಎಂಬ ಅರಿವು ಆಕೆಗೆ ಸ್ಪಷ್ಟವಿದೆ. ದುಬಾರಿ ವೆಚ್ಚ, ಮನೆಗೆಲಸದವರ ಕಿರಿಕಿರಿಯ ಮಧ್ಯೆ ಇನ್ನೊಂದು ಮಗುವನ್ನು ಮಾಡಿಕೊಳ್ಳುವ ಮನಸ್ಸು ಆಕೆಗೆ ಖಂಡಿತ ಇಲ್ಲ. ಇದಕ್ಕೆ ಆಕೆಯ ಪತಿಯ ಸಹಮತವೂ ಇದೆ. ಆದರೂ ಅತ್ತೆ- ಮಾವ, ಸ್ನೇಹಿತೆಯರು ಎಲ್ಲರೂ ಇನ್ನೊಂದು ಮಗು ಮಾಡಿಕೊಳ್ಳಲೇಬೇಕು ಎಂದು ವಿವಿಧ ಅಭಿಪ್ರಾಯ ಮಂಡಿಸುವಾಗ ಎಲ್ಲಿ ತನ್ನ ನಿರ್ಧಾರ ತಪ್ಪೇನೋ ಎಂಬ ಆತಂಕ ಆಕೆಯದು.

ಈ ಆತಂಕ ಒಂದೇ ಮಗು ಸಾಕು ಎನ್ನುವ ಎಲ್ಲ ದಂಪತಿಯದ್ದೂ ಹೌದು. ಆದರೂ ಸಮಾಜ ಮಹಿಳೆಗೆ ಒಂದಕ್ಕಿಂತ ಹೆಚ್ಚು ಮಕ್ಕಳನ್ನು ಮಾಡಿಕೊಳ್ಳುವಂತೆ ಒತ್ತಡ ಹಾಕುತ್ತಲೇ ಇರುತ್ತದೆ. ಒಂದೇ ಮಗುವನ್ನು ಸರಿಯಾಗಿ ಪಾಲನೆ ಪೋಷಣೆ ಮಾಡುವ ಪ್ರೌಢತೆ, ಆರ್ಥಿಕ ಸ್ಥಿತಿ ಇಲ್ಲದಿದ್ದರೂ ಒಂದಕ್ಕಿಂತ ಹೆಚ್ಚು ಮಕ್ಕಳನ್ನು ಮಾಡಿಕೊಂಡು ಅವರ ವ್ಯಕ್ತಿತ್ವ ಬೆಳವಣಿಗೆಯತ್ತ ಗಮನ ಹರಿಸದ ಪಾಲಕರು ಸುತ್ತಮುತ್ತ ಬೇಕಾದಷ್ಟಿದ್ದಾರೆ.

ನಿಮಗೇ ಒಂದಕ್ಕಿಂತ ಹೆಚ್ಚು ಮಗು ಬೇಕು ಎಂದಿದ್ದರೆ ಮಾಡಿಕೊಳ್ಳಿ. ಆದರೆ ಸಮಾಜದ ಒತ್ತಡಗಳಿಗೆ ಮಣಿದು ಮತ್ತೊಂದು ಮಗು ಮಾಡಿಕೊಳ್ಳಬೇಕೆಂದಿಲ್ಲ. ಮಗುವಿನ ಗುಣ ಅದರ ಪಾಲನೆ-ಪೋಷಣೆಯ ರೀತಿಯನ್ನು ಅವಲಂಬಿಸಿದೆಯೇ ಹೊರತು ಅದಕ್ಕೆ ಸಹೋದರ/ಸಹೋದರಿಯರಿದ್ದಾರೋ ಅಥವಾ ಇಲ್ಲವೋ ಎಂಬುದನ್ನು ಅವಲಂಬಿಸಿಲ್ಲ ಎಂಬುದನ್ನು ವಿವಿಧ ಸಂಶೋಧನೆಗಳು ದೃಢಪಡಿಸಿವೆ. ಈ ಸಂಶೋಧನೆಗಳು ಒಂದೇ ಮಗುವಿನ ಕುರಿತು ಸಮಾಜದಲ್ಲಿ ಬೇರೂರಿರುವ ನಂಬಿಕೆಗಳ ಸತ್ಯಾ ಸತ್ಯತೆಯನ್ನೂ ಬಯಲುಗೊಳಿಸಿವೆ.

ಮಿಥ್ಯ: ಒಂದೇ ಮಗು ಆಕ್ರಮಣಕಾರಿ ಮನೋಭಾವ ಹೊಂದಿರುತ್ತದೆ ಹಾಗೂ ಎಲ್ಲರೂ ತನ್ನದೇ ಮಾತು ಕೇಳಬೇಕೆಂದು ಪಟ್ಟು ಹಿಡಿಯುತ್ತದೆ.

ಸತ್ಯ: ಮನೆ ಬಿಟ್ಟು ಹೊರ ಜಗತ್ತಿನಲ್ಲಿ ಆಕ್ರಮಣಕಾರಿ ನಿಲುವು ತೆಗೆದುಕೊಂಡರೆ ಅಥವಾ ತನ್ನ ಮಾತೇ ನಡೆಸಲು ಯತ್ನಿಸಿದರೆ ತನಗೆ ಯಾರೂ ಸ್ನೇಹಿತರಾಗುವುದಿಲ್ಲ ಎಂಬ ಸತ್ಯ ಒಂದೇ ಮಗುವಿಗೆ ಬಲು ಬೇಗ ಅರ್ಥವಾಗಿರುತ್ತದೆ. ಸಹೋದರ- ಸಹೋದರಿಯರು ಇಲ್ಲದೇ ಇರುವುದರಿಂದ ಮನೆಯಲ್ಲಿ ಆಟಕ್ಕೆ ಯಾರೂ ಇರುವುದಿಲ್ಲ. ಆದ್ದರಿಂದ ಸ್ನೇಹಿತರನ್ನು ಸಂಪಾದಿಸುವುದು ಈ ಮಕ್ಕಳಿಗೆ ಅತ್ಯಗತ್ಯವಾಗಿರುತ್ತದೆ. ಜತೆಗೆ ಮನೆಯಲ್ಲಿ ಕೇಳದೇ ಎಲ್ಲ ಸಿಗುವುದರಿಂದ ಆಕ್ರಮಣಕಾರಿ ಹಾಗೂ ಅಧಿಕಾರಶಾಹಿ ಗುಣ ಬೆಳೆಸಿಕೊಳ್ಳುವ ವಿಶೇಷ ಅಗತ್ಯವೂ ಇರುವುದಿಲ್ಲ.

ಮಿಥ್ಯ: ಒಂದೇ ಮಗು ತನ್ನ ಒಂಟಿತನ ನೀಗಿಸಿಕೊಳ್ಳಲು ಕಾಲ್ಪನಿಕ ಸ್ನೇಹಿತರನ್ನು ಸೃಷ್ಟಿಸಿಕೊಳ್ಳುತ್ತದೆ.

ಸತ್ಯ: ಇದಕ್ಕೆ ಯಾವ ವೈಜ್ಞಾನಿಕ ಪುರಾವೆಯೂ ಇಲ್ಲ. ಬದಲಾಗಿ ಯೇಲ್ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನ ಎಲ್ಲ ಮಕ್ಕಳಿಗೂ ಕಾಲ್ಪನಿಕ ಸ್ನೇಹಿತರಿರುವುನ್ನು ಗುರುತಿಸಿದೆ. ಕಾಲ್ಪನಿಕ ಸ್ನೇಹಿತರನ್ನು ಮಾಡಿಕೊಳ್ಳಲು ಒಂದೇ ಮಗು ಆಗಬೇಕಿಲ್ಲ. ತನ್ನ ಪ್ರೀತಿಯ ಗೊಂಬೆಯನ್ನೋ, ತಾನೂ ಇಷ್ಟ ಪಟ್ಟ ಕಾರ್ಟೂನ್‌ ಅನ್ನೋ, ಮನೆಯ ನಾಯಿ- ಬೆಕ್ಕುಗಳನ್ನೇ ಸ್ನೇಹಿತರನ್ನಾಗಿಸಿಕೊಳ್ಳುವುದು ಎಲ್ಲ ಮಕ್ಕಳಲ್ಲೂ ಕಂಡು ಬರುವ ಸಾಮಾನ್ಯ ಗುಣ. 

ನಿಮಗೆ ಒಂದೇ ಮಗುವಿದ್ದರೆ ಅದನ್ನು ಭಾವನಾತ್ಮಕವಾಗಿ ಸದೃಢವಾಗಿಸಲು ಹಾಗೂ ಸಮಾಜಮುಖಿಯಾಗಿ ಬೆಳೆಸಲು ಇಲ್ಲಿದೆ  ಟಿಪ್ಸ್...

ಒಂದೇ ಮಗು ಎಂದು ಅದಕ್ಕೆ ಬೇಕಾದದ್ದು- ಬೇಡದ್ದು ಎಲ್ಲವನ್ನೂ ಖರೀದಿಸಿಕೊಟ್ಟು ಕೊಳ್ಳುಬಾಕರನ್ನಾಗಿಸದಿರಿ. ಆರ್ಥಿಕ ಶಿಸ್ತು- ದುಡ್ಡಿನ ಮೌಲ್ಯದ ಬೆಲೆ ತಿಳಿಯುವಂತೆ ಬೆಳೆಸಿ.

ಹಂಚಿಕೊಳ್ಳುವುದನ್ನು ಕಲಿಸಿ. ಹಂಚಿಕೊಳ್ಳುವುದೆಂದರೆ ಪಾಲಕರ ಜತೆಯಷ್ಟೇ ಹಂಚಿಕೊಳ್ಳುವುದಲ್ಲ, ಸ್ನೇಹಿತರ ಜತೆ ಆಟಿಕೆ- ತಿನಿಸು ಹಂಚಿಕೊಳ್ಳುವುದನ್ನು ಕಲಿಸಿ.

ಸ್ನೇಹಿತರನ್ನು ಮಾಡಿಕೊಳ್ಳುವುದನ್ನು ಪ್ರೋತ್ಸಾಹಿಸಿ. ಆಟೋಟಗಳನ್ನು ಪ್ರೋತ್ಸಾಹಿಸಿದರೆ ಮಗು ಸ್ನೇಹಿತರನ್ನು ಮಾಡಿಕೊಳ್ಳುವುದು ಹೆಚ್ಚು.

ಒಂದೇ ಮಗುವೆಂದು ನಿಮ್ಮೆಲ್ಲ ಕನಸುಗಳನ್ನು ಅದರ ಮೇಲೆ ಹೇರಬೇಡಿ. ಮಗುವಿನಿಂದ ಅವಾಸ್ತವಿಕ ನಿರೀಕ್ಷೆಗಳು ಬೇಡ. ಅದರ ಕನಸನ್ನು ತಿಳಿದು, ಅದರ ಪ್ರತಿಭೆಗೆ ನೀರೆರೆಯಿರಿ.

ಮಗುವಿಗೆ ಸಹೋದರ- ಸಹೋದರಿಯರಿಲ್ಲ ಎಂಬ ಭಾವನೆ ಬರದಂತೆ ಬೆಳೆಸಿ. ಕಸಿನ್ಸ್ ಇದ್ದರೆ ಅವರ ಜತೆ ಬಾಂಧವ್ಯ ಇಟ್ಟುಕೊಳ್ಳುವಂತೆ ನೋಡಿಕೊಳ್ಳಿ.

ಒಂದೇ ಮಗುವೆಂದು ಅದನ್ನು ನಿಮ್ಮ ದೌರ್ಬಲ್ಯವನ್ನಾಗಿಸಿಕೊಳ್ಳದಿರಿ. ಮಗು ಬೆಳೆದಂತೆ ಅದು ತನ್ನದೇ ಜಗತ್ತನ್ನು ಸೃಷ್ಟಿಸಿಕೊಂಡಾಗ ನೀವು ಅದರ ಕೇಂದ್ರಬಿಂದುವಾಗಿ ಇರದೇ ಇರಬಹುದು. ಆಗ ನೋವುಣ್ಣುವುದೂ ಬೇಡ.

ಒಂದೇ ಮಗು ಬೆಳೆದು ದೊಡ್ಡದಾದಾಗ ಅದಕ್ಕೂ ತನ್ನದೇ ಬದುಕು- ಸ್ವಾತಂತ್ರ್ಯ ಬೇಕಾಗಿರುತ್ತದೆ. ವೈಯಕ್ತಿಕ ಬದುಕಿನಲ್ಲಿ ತೀರಾ ಕೈ ಹಾಕಬೇಡಿ.

ಮಗುವಿಗೆ ಒಳ್ಳೆಯದು ಯಾವುದು- ಕೆಟ್ಟದು ಯಾವುದು ಎಂಬುದನ್ನು ಗುರುತಿಸಲು ಕಲಿಸಿ. ಒಳ್ಳೆ ನಡವಳಿಕೆ ಪ್ರೋತ್ಸಾಹಿಸಿ. ಜಗತ್ತಿನ ವಾಸ್ತವಿಕತೆಯ ಅರಿವು ಅದಕ್ಕಿರುವಂತೆ ಬೆಳೆಸಿ.

ಮಗುವಿನ ಜತೆ ಮುಕ್ತ ಸಂವಹನ ಇರಲಿ. ಅದು ತನ್ನೆಲ್ಲ ಭಾವನೆ ಪಾಲಕರ ಜತೆ ಹಂಚಿಕೊಳ್ಳಲು ಪ್ರೋತ್ಸಾಹಿಸಿ.

ಒಂದೇ ಮಗುವಿಗೆ ಬಹುತೇಕ ಬಾರಿ ತಂದೆ- ತಾಯಿಗಳೇ ಆದರ್ಶ. ಅವರ ಅನುಕರಣೆಯನ್ನೇ ಅದು ಹೆಚ್ಚು ಮಾಡುವುದು. ಆದ್ದರಿಂದ ಪಾಲಕರು ತಮ್ಮ ನಡವಳಿಕೆಯಲ್ಲಿ ಎಚ್ಚರ ತೋರಬೇಕಾಗುತ್ತದೆ.

Post Comments (+)