ಸಿರಿಧಾನ್ಯದ ತಿನಿಸು ಸವಿದರು; ಖರೀದಿಸಿದರು..!

7
ವಿಜಯಪುರದಲ್ಲಿ ಸಾವಯವ ಮತ್ತು ಸಿರಿಧಾನ್ಯ ಮೇಳ ಸಮಾರೋಪ

ಸಿರಿಧಾನ್ಯದ ತಿನಿಸು ಸವಿದರು; ಖರೀದಿಸಿದರು..!

Published:
Updated:
Prajavani

ವಿಜಯಪುರ: ಸಿರಿಧಾನ್ಯದ ತಾಲಿಪಟ್ಟು, ಎನರ್ಜಿ ಡ್ರಿಂಕ್ಸ್‌, ಸೂಪ್‌, ಶಂಕರಪಾಳ್ಯ, ಗೋಬಿ ಮಂಚೂರಿ, ಫಿಂಗರ್‌ ಚಿಪ್ಸ್‌, ಕಷಾಯ, ಇಡ್ಲಿ, ಬೋಂಡಾ, ಸೆಟ್‌ ದೋಸೆ, ಮುಟ್ಟಗಿ...

ನವಣೆ ದೋಸೆ, ಲಡ್ಡು, ಚಕ್ಕಲಿ, ಸಮೋಸಾ, ಬೋಂಡಾ, ಪಡ್ಡು, ರಾಗಿ ಬಜಿ, ಉತ್ತಪ್ಪ, ಅಂಬಲಿ, ಲಸ್ಸಿ, ದೋಸೆ/ಉತ್ತಪ್ಪ, ಮುದ್ದೆ, ಕೊರಲೆ ಚಕ್ಕಲಿ, ಟೊಮೆಟೊ ಆಮ್ಲೇಟ್‌... ಆರ್ಗ್ಯಾನಿಕ್‌ ಬೆಲ್ಲದ ಟೀ...

ನಗರದ ಎಸ್‌.ಎಸ್‌.ಹೈಸ್ಕೂಲ್‌ ಮೈದಾನದಲ್ಲಿ ಶನಿವಾರ–ಭಾನುವಾರ ನಡೆದ ಸಾವಯವ ಮತ್ತು ಸಿರಿಧಾನ್ಯ ಮೇಳದಲ್ಲಿ ಪಾಲ್ಗೊಂಡಿದ್ದ, ಸಿರಿಧಾನ್ಯದ ಆಹಾರ ಪ್ರಿಯರು ಬಯಸಿದ ಹತ್ತು–ಹಲವು ತಾಜಾ ತಿನಿಸುಗಳನ್ನು ಮೇಳದಲ್ಲೇ ನೀಡಿದವರು ನಗರದ ಹಳ್ಳಿಮನೆಯ (ಸಿರಿಧಾನ್ಯ ದರ್ಶಿನಿ) ಮಲ್ಲಿಕಾರ್ಜುನ ಹಟ್ಟಿ.

ಜಿಲ್ಲಾಡಳಿತ, ಕೃಷಿ ಇಲಾಖೆ ಆಯೋಜಿಸಿದ್ದ ಮೇಳದಲ್ಲಿ ತಮ್ಮ ಹಳ್ಳಿ ಮನೆಯ ಮಳಿಗೆಯೊಂದನ್ನು ತೆರೆದು, ಎರಡು ದಿನವೂ ಸ್ಥಳದಲ್ಲೇ ರುಚಿಕಟ್ಟಾದ, ಬಿಸಿ ಬಿಸಿಯಾದ ಸಿರಿಧಾನ್ಯದ ತರಹೇವಾರಿ ಆಹಾರ ತಿನಿಸು ತಯಾರಿಸಿ, ಮೇಳಕ್ಕೆ ಬಂದವರಿಗೆ ನೀಡುವ ಜತೆಯಲ್ಲೇ; ಸಿರಿಧಾನ್ಯದ ಮಹತ್ವವನ್ನು ವಿವರಿಸುತ್ತಿದ್ದ ಚಿತ್ರಣ, ಒಂದರೆಕ್ಷಣ ಸೂಜಿಗಲ್ಲಿನಂತೆ ಎಲ್ಲರ ಚಿತ್ತವನ್ನು ಅತ್ತಲೇ ಸೆಳೆಯಿತು. ಈ ಮಳಿಗೆ ಮುಂದೆ ಜನಜಾತ್ರೆಯೇ ನೆರೆದಿತ್ತು.

ಅಡುಗೆ ಸ್ಪರ್ಧೆ

ಮೇಳದ ಅಂಗವಾಗಿ ಆಯೋಜಿಸಿದ್ದ ಸಿರಿಧಾನ್ಯದ ಅಡುಗೆ ಸ್ಪರ್ಧೆಯಲ್ಲಿ 34 ವನಿತೆಯರು ಭಾಗಿಯಾಗಿದ್ದರು. ಒಬ್ಬೊಬ್ಬರು ಹತ್ತಕ್ಕೂ ಹಲವು ವಿಧದ ತಿನಿಸುಗಳನ್ನು ತಮ್ಮ ಮನೆಗಳಲ್ಲೇ ತಯಾರಿಸಿಕೊಂಡು ಬಂದಿದ್ದರು. ಹಲವರು ಸ್ಪರ್ಧೆ ಆರಂಭವಾದ ಬಳಿಕ ಅದಕ್ಕೆ ಅಂತಿಮ ಸ್ವರೂಪ ನೀಡಿದ ಚಿತ್ರಣ ಭಾನುವಾರ ಮೇಳದ ಆವರಣದಲ್ಲಿ ಗೋಚರಿಸಿತು.

ನವಣೆ ಉಂಡೆ, ಕರ್ಜಿಕಾಯಿ, ಪೇಡಾ, ಬರ್ಫಿ, ಕರದಂಟು, ಚಕ್ಕಲಿ, ಹೋಳಿಗೆ, ಇಡ್ಲಿ, ಮಾಲ್ದಿಯನ್ನು ಇಂಡಿ ತಾಲ್ಲೂಕಿನ ಚೋರಗಿ ಗ್ರಾಮದ ಭಾರತಿ ಮೆಡೆದಾರ ತಯಾರಿಸಿಕೊಂಡು ಮೇಳಕ್ಕೆ ಬಂದಿದ್ದರೆ, ಇದೇ ಗ್ರಾಮದ ಕಲಾವತಿ ಮೆಡೆದಾರ ಸಹ ಜುಣಕಾ, ಸಜ್ಜೆ ಪಲ್ಲ್ಯೆ ಜತೆ ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು.

ನವಣೆ ಪಲಾವ್‌, ಮೊಸರನ್ನ, ಬರಗದ ಪಲಾವ್, ಸಿರಿಧಾನ್ಯದ ಪುಳಿಯೋಗರೆ, ಪಾಯಸ, ವಡಾ, ಜೋಳದ ವಡಾ, ಹುರಳಿ ಸಂಗಟಿ ಸೇರಿದಂತೆ ಹತ್ತು ಹಲವು ವಿಭಿನ್ನ ತಿನಿಸುಗಳನ್ನು ವನಿತೆಯರು ಸ್ಪರ್ಧೆಗಾಗಿಯೇ ತಯಾರಿಸಿ, ಪ್ರದರ್ಶನಕ್ಕಿಟ್ಟಿದ್ದರು. ಇದರಲ್ಲಿ ಕೇಕ್‌ ಸಹ ಇದ್ದಿದ್ದು ವಿಶೇಷವಾಗಿತ್ತು ಎಂದು ಸಂಘಟಕರಲ್ಲೊಬ್ಬರಾದ ಎಂ.ಬಿ.ಪಟ್ಟಣಶೆಟ್ಟಿ ಮಾಹಿತಿ ನೀಡಿದರು.

ಸಿರಿಧಾನ್ಯದ ಪ್ರದರ್ಶನ

ವಿಜಯಪುರ ಜಿಲ್ಲೆ ಸೇರಿದಂತೆ ನೆರೆ ಹೊರೆ ಜಿಲ್ಲೆಗಳಲ್ಲಿ ಸಿರಿಧಾನ್ಯ ಬೆಳೆಯುವವರು, ಮಾರುಕಟ್ಟೆಗೆ ಬ್ರ್ಯಾಂಡ್‌ ಮಾಡಿ ಮಾರಾಟ ಮಾಡುವವರು ಮೇಳದಲ್ಲಿ ಮಳಿಗೆ ತೆರೆದು, ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಿದರು.

ಬೆಳಗಾವಿ ಜಿಲ್ಲೆಯ ಆನಗೋಳದ ಕೃಷ್ಣ ಪ್ರದರ್ಶನಕ್ಕಿಟ್ಟಿದ್ದ ಎಳನೀರು ಓಪನರ್‌ ಬಗ್ಗೆ ಹಾಗೂ ಬಿಸಿನೀರಿನ ಶಾಖ ಕೊಟ್ಟುಕೊಳ್ಳಲು ಅನುಕೂಲವಾಗುವಂತೆ ರೂಪಿಸಿದ್ದ ಫ್ಯಾಬ್ರಿಕ್‌ ಬಟ್ಟೆಯ ವಸ್ತುವಿನ ಬಗ್ಗೆ ಸಾಕಷ್ಟು ಜನರು ಮೇಳದಲ್ಲಿ ಮಾಹಿತಿ ಪಡೆದರು.

ತುಮಕೂರಿನ ಎಸ್‌.ಎಸ್‌.ಪುರಂನ ಶ್ಯಾಮ್‌ ಬಹು ಉಪಯೋಗಿ ಅಂಟಿನ ಪ್ರದರ್ಶನ ನೀಡಿದರು. ಕೇರಳದ ರಬ್ಬರ್‌ ಮರಗಳಿಂದ ತಯಾರಿಸಿರುವ ಅಂಟು ದ್ರವದ ತಮ್ಮ ಪ್ರಾಡೆಕ್ಟ್‌ ಬಗ್ಗೆ ಮಾಹಿತಿ ನೀಡಿದರು. ಜತೆಯಲ್ಲೇ ಯಾವ ರೀತಿ ಇದನ್ನು ಬಳಸಿ ಪಿವಿಸಿ, ರಬ್ಬರ್‌ ಪೈಪ್‌ ತೂತು ಬಿದ್ದಿದ್ದರೆ, ಮುಚ್ಚಬಹುದು ಎಂಬ ಪ್ರಾತ್ಯಕ್ಷಿಕೆಯನ್ನು ನೀಡಿದ್ದು, ರೈತರ ಗಮನ ಸೆಳೆಯಿತು.

ತುಮಕೂರು, ಶಿವಮೊಗ್ಗ, ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಗದಗ, ಬೆಂಗಳೂರು ಸೇರಿದಂತೆ ಉಳಿದ ಜಿಲ್ಲೆಗಳಿಂದಲೂ ಸಿರಿಧಾನ್ಯದ ಬೆಳೆಗಾರರು, ಮಾರಾಟಗಾರರು ಬಂದಿದ್ದರು. ಒಟ್ಟು 34 ಮಳಿಗೆ ಇಲ್ಲಿ ಕಾರ್ಯಾಚರಿಸಿದವು ಎಂದು ಕೃಷಿ ಇಲಾಖೆಯ ಉಪ ನಿರ್ದೇಶಕ ಕೆ.ಎಸ್‌.ಅಗಸನಾಳ ತಿಳಿಸಿದರು.

ಸಭಾಂಗಣ ಖಾಲಿ ಖಾಲಿ...!

ಮೇಳದ ಆರಂಭ ದಿನ ಶನಿವಾರ ಜನರಿದ್ದರು. ಭಾನುವಾರ ದಿನವಿಡಿ ಸಭಾಂಗಣ ಖಾಲಿ ಖಾಲಿ. ನೆರೆದಿದ್ದ ಕೊಂಚ ಜನರು ಸಹ ಮಳಿಗೆ ಸುತ್ತಲೂ ಜಮಾಯಿಸಿದ್ದರು. ಸಮಾರೋಪಕ್ಕೂ ಮುನ್ನವೇ ಎರಡ್ಮೂರು ಮಳಿಗೆಯವರು ಖಾಲಿ ಮಾಡಿಕೊಂಡು ಹೋಗಿದ್ದ ಚಿತ್ರಣ ಗೋಚರಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !