ಸೋಮವಾರ, ನವೆಂಬರ್ 18, 2019
22 °C
ಕೇಂದ್ರದ ಕೌಶಲ ಅಭಿವೃದ್ಧಿ ಖಾತೆ ಸಚಿವರಿಂದ ಹೇಳಿಕೆ

ಕೌಶಲದಿಂದ ಕುಶಲ–ಯುವ ಭಾರತ: ಸಚಿವ ಡಾ.ಮಹೇಂದ್ರನಾಥ್ ಪಾಂಡೆ

Published:
Updated:
Prajavani

ಮೈಸೂರು: ‘ಎಲ್ಲ ಕ್ಷೇತ್ರದಲ್ಲೂ ಕೌಶಲ ಹೆಚ್ಚಿಸಿಕೊಳ್ಳುವುದರಿಂದ ಕುಶಲ–ಯುವ ಭಾರತದ ನಿರ್ಮಾಣ ಸಾಧ್ಯ’ ಎಂದು ಕೇಂದ್ರ ಕೌಶಲ ಅಭಿವೃದ್ಧಿ ಖಾತೆ ಸಚಿವ ಡಾ.ಮಹೇಂದ್ರನಾಥ್ ಪಾಂಡೆ ತಿಳಿಸಿದರು.

ನಗರದಲ್ಲಿನ ಆಡಳಿತ ತರಬೇತಿ ಸಂಸ್ಥೆಯಲ್ಲಿ ಕೇಂದ್ರ ಸರ್ಕಾರದ ಕೌಶಲ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀನವೋಪಾಯ ಸಚಿವಾಲಯದ ವತಿಯಿಂದ ಸೋಮವಾರ ಭಾರತೀಯ ಕೌಶಲ ಅಭಿವೃದ್ಧಿ ಸೇವೆಯ ಅಧಿಕಾರಿಗಳಿಗೆ ಆರಂಭವಾದ ಬುನಾದಿ ತರಬೇತಿಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಕುಶಲ–ಯುವ ಭಾರತ ನಿರ್ಮಾಣದ ಕನಸಿನ ಸಾಕಾರಕ್ಕಾಗಿಯೇ ಪ್ರಧಾನಿ ಮೋದಿ ವಿವಿಧ ಇಲಾಖೆಗಳಡಿಯಿದ್ದ ಕೌಶಲ ಯೋಜನೆಗಳನ್ನು ಒಂದೇ ವ್ಯವಸ್ಥೆಯಡಿ ತಂದು, ಹೊಸ ಇಲಾಖೆಯೊಂದನ್ನು ಸೃಷ್ಟಿಸಿದರು. ಹಲವು ವಿನೂತನ ಯೋಜನೆಗಳನ್ನು ಅನುಷ್ಠಾನಗೊಳಿಸಿದರು’ ಎಂದು ಹೇಳಿದರು.

‘ಪ್ರಧಾನಿಯ ಈ ದೂರದೃಷ್ಟಿ ಆಲೋಚನೆಯಿಂದ ಇದೀಗ ಭಾರತವೂ ಸಹ ಕೌಶಲ ಮೈಗೂಡಿಸಿಕೊಂಡು, ಬೇರೆ ರಾಷ್ಟ್ರಗಳ ಜತೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಿ ಮುನ್ನುಗ್ಗುತ್ತಿದೆ’ ಎಂದರು.

‘ಕೌಶಲ ಬೆಳೆಸಿಕೊಳ್ಳುವಿಕೆ, ಆಳವಾದ ಅಧ್ಯಯನ, ಸಂಶೋಧನೆಯ ಅಂತಿಮ ಫಲ ಸಮಾಜ, ಜನರ ಒಳಿತಿಗೆ ಮೀಸಲಾಗಬೇಕು ಎಂಬುದೇ ಆಗಿದೆ. ಉನ್ನತ ಸಾಧನೆಗೈದವರ ಹಾದಿಯಲ್ಲಿ ನೀವೂ ಸಾಗಿ. ಮುಗಿಲೆತ್ತರದ ಸಾಧನೆಗೈಯಿರಿ’ ಎಂದು ತರಬೇತಿಯಲ್ಲಿ ಪಾಲ್ಗೊಂಡಿರುವ ಯುವ ಅಧಿಕಾರಿ ಸಮೂಹಕ್ಕೆ ಪಾಂಡೆ ಕಿವಿಮಾತು ಹೇಳಿದರು.

‘ಆರು ತಿಂಗಳ ಅವಧಿಯಲ್ಲಿ ಕೌಶಲ ತರಬೇತಿ ಮತ್ತು ಉದ್ಯಮಶೀಲತೆಯ ಪರಿಸರ ವ್ಯವಸ್ಥೆಯ ಪ್ರಮುಖ ಸಂಸ್ಥೆಗಳನ್ನು ಸಚಿವಾಲಯದ ವ್ಯಾಪ್ತಿಗೆ ತರಲಾಗಿದೆ. 8 ತಿಂಗಳಲ್ಲಿ ಎಂ.ಎಸ್.ಡಿ.ಇ. ರಾಷ್ಟ್ರೀಯ ಕೌಶಲ ಅಬಿವೃದ್ಧಿ ಮತ್ತು ಉದ್ಯಮಶೀಲತೆ ನೀತಿ ರೂಪಿಸಿದೆ. ಇದು ಕೌಶಲ ತರಬೇತಿ ಪ್ರಯತ್ನಗಳನ್ನು ಎತ್ತರಕ್ಕೆ ಏರಿಸಲು ಸಹಕಾರಿಯಾಗಿದೆ’ ಎಂದರು.

‘ಯುವಕರಲ್ಲಿ ಕೌಶಲ ತರಬೇತಿ ಆಕಾಂಕ್ಷೆ ಮೂಡಿಸಲು ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐಗಳಲ್ಲಿ), ಕೇಂದ್ರೀಯ ತರಬೇತಿ ಸಂಸ್ಥೆಗಳು ಸೇರಿದಂತೆ 25ಸಾವಿರ ಸಂಸ್ಥೆಗಳನ್ನು ರೂಪಿಸಲಾಗಿದೆ. ಎಂ.ಎಸ್.ಡಿ.ಇ. ಅತ್ಯಂತ ಕಡಿಮೆ ಅವಧಿಯಲ್ಲಿ ದೊಡ್ಡ ದಾಪುಗಾಲು ಹಾಕಿದೆ. ಕೌಶಲ ಭಾರತವು ಭಾರತದಲ್ಲಿನ ವೃತ್ತಿ ತರಬೇತಿಯ ವ್ಯವಸ್ಥೆಯಲ್ಲಿ ಪರಿವರ್ತನಾತ್ಮಕ ಬದಲಾವಣೆಗೆ ಕಾರಣವಾಗಿದೆ’ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಹಿರಿಯ ಅಧಿಕಾರಿಗಳಾದ ಡಾ.ಕೆ.ಪಿ.ಕೃಷ್ಣನ್‌, ರಾಜೇಶ್‌ ಅಗರ್‌ವಾಲ್‌, ಕಪಿಲ್‌ ಮೋಹನ್‌ ಮಾತನಾಡಿದರು. ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಸ್‌.ಎ.ರಾಮದಾಸ್, ಎಲ್‌.ನಾಗೇಂದ್ರ, ನಿರಂಜನ್‌ಕುಮಾರ್‌ ಉಪಸ್ಥಿತರಿದ್ದರು.

ಸಂಸ್ಥೆಯ ನಿರ್ದೇಶಕಿ ಬಿ.ಆರ್.ಮಮತಾ ಸ್ವಾಗತಿಸಿದರು.

ಪ್ರತಿಕ್ರಿಯಿಸಿ (+)