‘ದಿನದಲ್ಲಿ 15 ಗಂಟೆ ಮಲಗುವೆ!’

7

‘ದಿನದಲ್ಲಿ 15 ಗಂಟೆ ಮಲಗುವೆ!’

Published:
Updated:

ನಾನು ಎಂಜಿನಿಯರಿಂಗ್ ವಿದ್ಯಾರ್ಥಿ. ನಾನು ಪ್ರತಿದಿನ ತುಂಬಾ ಹೊತ್ತು ಮಲಗುತ್ತೇನೆ. ಆದರೂ ನನಗೆ ನಿದ್ದೆ ಸಾಲುವುದಿಲ್ಲ. ದಿನದಲ್ಲಿ 15 ಗಂಟೆಗಳ ಕಾಲ ನಿದ್ದೆ ಮಾಡುತ್ತೇನೆ. ಆದರೂ ನನಗೆ ನಿದ್ದೆಯ ಗುಂಗಿನಿಂದ ಹೊರ ಬರಲು ಆಗುವುದಿಲ್ಲ. ಇದರಿಂದ ನನ್ನ ವಿದ್ಯಾಭ್ಯಾಸದ ಮೇಲೂ ಪರಿಣಾಮ ಬೀರುತ್ತಿದೆ. ಏನು ಮಾಡಲಿ?

ಸಚಿನ್, ಶಿವಮೊಗ್ಗ

ಇದು ನಿಜಕ್ಕೂ ಒಳ್ಳೆಯ ಅಭ್ಯಾಸವಲ್ಲ. ನೀವು ಇದರ ಬಗ್ಗೆ ಗಮನ ಹರಿಸಿ. ಏಕೆಂದರೆ ಯುವಕರಿಗೆ ಹೆಚ್ಚೆಂದರೆ ಎಂಟು ಗಂಟೆಗಳ ನಿದ್ದೆ ಸಾಕು. ನೀವು ನಿಮ್ಮ ಡಯೆಟ್ ಹಾಗೂ ವ್ಯಾಯಾಮದ ಮೇಲೆ ಗಮನ ನೀಡಿ. ಪ್ರತಿದಿನ ಕಠಿಣ ವ್ಯಾಯಾಮ ಮಾಡುವುದನ್ನು ರೂಢಿಸಿಕೊಳ್ಳಿ. ಅದಕ್ಕಿಂತಲೂ ಮುಖ್ಯವಾದುದು ನಿಮ್ಮನ್ನು ಬ್ಯುಸಿಯಾಗಿರಿಸಿಕೊಳ್ಳುವುದು. ಬೇರೆ ಬೇರೆ ಚಟುವಟಿಕೆಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಆಗ ಪದೇ ಪದೇ ಮಲಗಬೇಕು ಎನ್ನಿಸುವುದಿಲ್ಲ. ಪ್ರಜ್ಞಾಪೂರ್ವಕವಾಗಿ ದೈನಂದಿನ ಜೀವನದಲ್ಲಿ ಬದಲಾವಣೆಯನ್ನು ತರಲು ಶ್ರಮ ವಹಿಸಿ. ಸರಿಯಾದ ನಿದ್ದೆ ಒಳ್ಳೆಯ ವ್ಯಾಯಾಮ ಹಾಗೂ ಸಮತೋಲಿತ ಡಯೆಟ್ ಪಾಲಿಸಿದರೆ ಆಗ ನೀವು ಓದಿನ ಮೇಲೂ ಗಮನ ಹರಿಸಲು ಸಾಧ್ಯವಾಗುತ್ತದೆ. ಈ ಎಲ್ಲ ಬದಲಾವಣೆಗಳನ್ನು ಮಾಡಿಕೊಂಡ ಮೇಲು ಈ ಸಮಸ್ಯೆಯಿಂದ ಹೊರ ಬರಲು ಸಾಧ್ಯವಾಗದಿದ್ದರೆ ಒಳ್ಳೆಯ ಡಾಕ್ಟರ್ ಅನ್ನು ಕಂಡು ಅವರ ಸಹಾಯವನ್ನು ಪಡೆಯಿರಿ.

***

ಮೇಡಂ, ನನಗೆ ಮದುವೆಯಾಗಿ ಐದು ತಿಂಗಳಾಗಿವೆ. ನಾನು ಈಗ ಒಂದೂವರೆ ತಿಂಗಳ ಗರ್ಭಿಣಿ. ಈ ವಿಷಯ ಮನೆಯಲ್ಲಿ ಹೇಳಿದಾಗಿನಿಂದ ನನ್ನ ಅತ್ತೆ ಬದಲಾಗಿದ್ದಾರೆ. ಅವರು ನನ್ನ ಜೊತೆ ಮಾತನಾಡುತ್ತಿಲ್ಲ. ನನ್ನ ಗಂಡನ ಬಳಿ ಕೇಳಿದರೆ ‘ಅವರ ಮನಸ್ಸು ಸರಿಯಿಲ್ಲ, ಅವರು ಹಾಗೇನೆ ಬಿಡು’ ಎನ್ನುತ್ತಾರೆ. ಬೇರೆಯವರ ಜೊತೆ ಸರಿಯಾಗಿ ಇರುತ್ತಾರೆ, ನನ್ನೊಂದಿಗೆ ಮಾತ್ರ ಅಬ್‌ನಾರ್ಮಲ್ ಆಗಿ ಆಡುತ್ತಾರೆ. ಈ ವಿಷಯದ ಬಗ್ಗೆ ಯೋಚಿಸಿ, ಯೋಚಿಸಿ ನನ್ನ ಆರೋಗ್ಯವು ಹಾಳಾಗಿದೆ. ನಾನಾಗಿಯೇ ಮಾತನಾಡಿಸಿದರೂ ಏನು ಮಾತನಾಡುತ್ತಿಲ್ಲ. ಇದರಿಂದ ಮನಸ್ಸಿಗೆ ನೆಮ್ಮದಿ ಇಲ್ಲದಂತಾಗಿದೆ. ಈ ವಿಷಯದಲ್ಲಿ ನನಗೂ ನನ್ನ ಗಂಡನಿಗೂ ಜಗಳ ಶುರುವಾಗಿದೆ. ನಾನೇ ಸರಿಯಿಲ್ಲವೇನೂ ಎಂದು ಅನಿಸಲು ಶುರುವಾಗಿದೆ.

ದೀಪಿಕಾ, ಊರು ಬೇಡ

ನಿಮ್ಮ ಗಂಡನೇ ಹೇಳಿದ್ದಾರೆ – ಅತ್ತೆಯ ವರ್ತನೆ ಹಾಗೂ ಇನ್ನಿತರ ಬದಲಾವಣೆಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡ ಎಂದು. ಇದು ನೀವು ನಿಮ್ಮ ಗರ್ಭಾವಸ್ಥೆಯ ಮಧುರ ಸಮಯವನ್ನು ಅನುಭವಿಸುವ ಕಾಲ. ಈಗ ನಿಮ್ಮ ಗಮನ ಹಾಗೂ ಪ್ರಾಶಸ್ತ್ಯ ಏನಿದ್ದರೂ ಉತ್ತಮ ಆರೋಗ್ಯ, ಡಯೆಟ್, ಮಾನಸಿಕ ಶಾಂತಿ ಹಾಗೂ ಎಲ್ಲ ಸಮಯದಲ್ಲೂ ಖುಷಿ ಖುಷಿಯಾಗಿರುವುದು. ಉಳಿದ ಎಲ್ಲಾ ವಿಷಯಗಳನ್ನು ನಿರ್ಲಕ್ಷ್ಯ ಮಾಡಿ; ಅದರ ಬಗ್ಗೆ ಹೆಚ್ಚಿಗೆ ಯೋಚಿಸಬೇಡಿ. ಈ ವಿಷಯದ ಮೇಲೆ ನಿಮ್ಮ ಗಂಡನ ಜೊತೆ ಜಾಸ್ತಿ ಚರ್ಚೆ ಹಾಗೂ ವಾದ ಮಾಡದಿರಿ. ನೀವು ಈಗ ಇರುವ ಪರಿಸ್ಥಿತಿಯಲ್ಲಿ ನಿಮ್ಮ ಮತ್ತು ಗಂಡ ಇಬ್ಬರ ನಡುವೆ ಬಾಂಧವ್ಯ ಚೆನ್ನಾಗಿರಬೇಕು. ಇಬ್ಬರೂ ಖುಷಿಯಾಗಿ ಜೊತೆಗಿರಬೇಕು. ಒಳ್ಳೆಯ ಆಲೋಚನೆಗಳನ್ನು ಮಾಡಿ, ಒಳ್ಳೆಯ ಆಹಾರವನ್ನು ಸೇವಿಸಿ, ಒಳ್ಳೆಯ ಮಾತುಗಳನ್ನಾಡಿ. ನಿಮ್ಮ ಕೆಲಸಗಳನ್ನು ನೀವೇ ಮಾಡಿಕೊಳ್ಳಿ. ಸದಾ ಚಟುವಟಿಕೆಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಒಳ್ಳೆಯ ಪುಸ್ತಕಗಳನ್ನು ಓದಿ. ಈಗ ನೀವು ಜೀವನದ ಸುಂದರ ಹಂತದಲ್ಲಿದ್ದೀರಿ. ಮಾತೃತ್ವಕ್ಕೆ ಬದಲಾಗುವ ಸುಮಧುರ ಕ್ಷಣವಿದು. ಖುಷಿಯಾಗಿರಿ.

***

ನನ್ನ ತಂದೆ ತೀರಿಕೊಂಡು ನಾಲ್ಕು ವರ್ಷಗಳಾಗಿವೆ. ಕೆಲಸದ ಅವಶ್ಯಕತೆ ಇರುವ ಕಾರಣಕ್ಕೆ ಎಂ.ಎ. ಪತ್ರಿಕೋದ್ಯಮ ಮುಗಿಸಿದೆ. ಆದರೂ ಕೆಲಸ ಸಿಗುತ್ತಿಲ್ಲ. ನನ್ನ ಸ್ನೇಹಿತರು ಸರ್ಕಾರಿ ಕೆಲಸಕ್ಕೆ ಸೇರುತ್ತಿರುವುದನ್ನು ಕಂಡು ನನಗೆ ಪತ್ರಿಕೋದ್ಯಮದ ಮೇಲಿನ ಆಸಕ್ತಿ ಕ್ಷೀಣಿಸತೊಡಗಿದೆ. ನಾನು ಹೇಗಾದರೂ ಮಾಡಿ ಚೆನ್ನಾಗಿ ಓದಿ ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳಬೇಕು ಎಂದುಕೊಂಡು ಓದಲು ಕುಳಿತರೆ ಓದಲು ಆಗುತ್ತಿಲ್ಲ. ಮನೆಯಲ್ಲಿ ನೋಡಿದರೆ ಯಾವುದಾದರೂ ಕೆಲಸಕ್ಕೆ ಹೋಗು ಅನ್ನುತ್ತಿದ್ದಾರೆ. ಇಂತಹ ತೊಳಲಾಟದ ಮನಸ್ಸಿನ ಪರಿಸ್ಥಿತಿಯಲ್ಲಿ ಪತ್ರಿಕೋದ್ಯಮಕ್ಕೆ ಹೋಗಲೊ ಅಥವಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲೊ ತಿಳಿಯುತ್ತಿಲ್ಲ. ಸರ್ಕಾರಿ ಕೆಲಸಕ್ಕೆ ಸೇರುವ ಕನಸು ಎಲ್ಲಿ ಭಗ್ನವಾಗುವುದೋ ಎಂಬ ಆತಂಕ ಕಾಡುತ್ತಿದೆ. ದಯವಿಟ್ಟು ಇದಕ್ಕೆ ಪರಿಹಾರವನ್ನು ತಿಳಿಸಿ.

ರಮೇಶ್ ಗೌಡ, ಊರು ಬೇಡ

ನೀವು ಗೊಂದಲದಲ್ಲಿರುವುದು ನನಗೆ ಅರಿವಾಗುತ್ತಿದೆ. ಅದರಿಂದ ಹೊರ ಬರಲು ಪ್ರಯತ್ನಿಸಿ. ನಿಮ್ಮ ಪ್ರಾಶಸ್ತ್ಯಗಳನ್ನು ಮೊದಲು ಗುರುತಿಸಿಕೊಳ್ಳಿ. ಮೊದಲು ನಿಮಗೆ ಯಾವುದು ಅವಶ್ಯಕತೆ ಇದು ಎಂಬುದನ್ನು ತಿಳಿದುಕೊಳ್ಳಿ. ಅದು ಉದ್ಯೋಗವಾದರೆ ಅದರ ಮೇಲೆ ಹೆಚ್ಚು ಗಮನ ನೀಡಬೇಕು. ನೀವು ಉದ್ಯೋಗ ಹುಡುಕುವ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ತಯಾರಿ ನಡೆಸಬಹುದು. ನಿಮಗೆ ಕೆಲಸ ಸಿಕ್ಕ ಮೇಲೆ ಕೆಲಸದೊಂದಿಗೆ ಓದನ್ನು ಮುಂದುವರಿಸಬಹುದು. ಪರೀಕ್ಷೆಯನ್ನು ತೆಗೆದುಕೊಳ್ಳಬಹುದು. ಸರ್ಕಾರಿ ಉದ್ಯೋಗ ಪಡೆಯಲು ಅರ್ಹರಾದರೆ ಅದಕ್ಕಾಗಿ ಪ್ರಯತ್ನಿಸಿ. ಇದೊಂದು ಬದ್ಧತೆ. ಈ ಬದ್ಧತೆ ನಿಮ್ಮಲ್ಲೇ ಹುಟ್ಟಬೇಕು. ಆಗ ಮಾತ್ರ ಜೀವನದಲ್ಲಿ ಏನು ಬೇಕು ಎಂಬುದನ್ನು ನೀವು ನಿರ್ಧರಿಸಲು ಸಾಧ್ಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !