ಕೆಟ್ಟ ಯೋಚನೆಗಳ ಪುಟ್ಟ ಮನಸ್ಸು

7

ಕೆಟ್ಟ ಯೋಚನೆಗಳ ಪುಟ್ಟ ಮನಸ್ಸು

Published:
Updated:
Prajavani

ನಾನು ಎರಡು ತಿಂಗಳ ಮಗುವಿನ ತಾಯಿ. ನನಗೆ ಮಲಗುವಾಗ ಮನಸ್ಸಿನಲ್ಲಿ ಭಯವಾಗುತ್ತಿರುತ್ತದೆ. ತಲೆಯಲ್ಲಿ ನೆಗೆಟಿವ್ ಯೋಚನೆಗಳೇ ಬರುತ್ತವೆ. ನಿದ್ದೆಯಲ್ಲಿ ಕೆಟ್ಟ ಕನಸುಗಳೇ ಬೀಳುತ್ತಿರುತ್ತವೆ. ಇದರಿಂದ ಗಾಬರಿಗೊಂಡು ಎಚ್ಚರಗೊಳ್ಳುತ್ತೇನೆ. ಇದಕ್ಕೆ ಕಾರಣ ಏನು? ಡಾಕ್ಟರ್‌ಗೆ ತೋರಿಸಿದ್ದೇನೆ. ಅವರು ಮಾತ್ರೆಗಳನ್ನು ನೀಡಿದ್ದಾರೆ. ಆದರೆ ಮಾತ್ರೆಯಿಂದ ಸೈಡ್ ಎಫೆಕ್ಟ್ ಆಗಬಹುದು ಎಂಬ ಭಯವೂ ಕಾಡುತ್ತಿದೆ.

–ವೀಣಾ, ಊರು ಬೇಡ

ನೀವು ಈಗಷ್ಟೇ ಮಾತೃತ್ವ ಎನ್ನುವ ಸುಂದರ ಲೋಕಕ್ಕೆ ಕಾಲಿರಿಸಿದ್ದೀರಿ. ಇದು ಜೀವನದ ತುಂಬ ಭಿನ್ನವಾದ ಹಂತ. ಗರ್ಭಾವಸ್ಥೆಯಿಂದ ಮಾತೃತ್ವದವೆರೆಗಿನ ಸಂಪೂರ್ಣ ಅವಧಿಯು ಒಬ್ಬ ಮಹಿಳೆಯ ಜೀವನದಲ್ಲಿ ದೊಡ್ಡ ಮಟ್ಟದ ಬದಲಾವಣೆಯನ್ನು ಕಾಣುವ ಹಂತವಾಗಿದೆ. ನೀವು ಈಗ ಎರಡು ತಿಂಗಳ ಮಗುವಿನ ತಾಯಿ. ಆ ಕಾರಣದಿಂದ ನೀವು ಇಡೀ ದಿನ ಬ್ಯುಸಿಯಾಗಿರುತ್ತೀರಿ. ನೀವು ನಿಮ್ಮನ್ನು ಸಂಪೂರ್ಣವಾಗಿ ಮಗುವನ್ನು ನೋಡಿಕೊಳ್ಳುವುದರಲ್ಲಿ ತೊಡಗಿಸಿಕೊಳ್ಳಿ. ಆಗ ನಿಮಗೆ ಬೇರೆ ವಿಷಯಗಳ ಬಗ್ಗೆ ಯೋಚಿಸಲು ಅಥವಾ ಧನಾತ್ಮಕ ಯೋಚನೆಗಳು ತಲೆಯಲ್ಲಿ ಸುಳಿಯಲು ಅವಕಾಶವಿರುವುದಿಲ್ಲ.

ನೀವು ನಿಮ್ಮನ್ನು ದಿನಪೂರ್ತಿ ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಸಿಕೊಂಡಾಗ, ದೈಹಿಕಶ್ರಮದಿಂದ ನಿದ್ದೆ ತಾನಾಗಿಯೇ ಆವರಿಸುತ್ತದೆ. ಸಮಯ ಕಳೆದಂತೆ ನೀವು ಸರಿ ಹೊಂದುತ್ತೀರಿ, ಚಿಂತಿಸಬೇಡಿ. ಮಗು, ಅದರ ಪ್ರೀತಿ ಹಾಗೂ ಮಗುವನ್ನು ನೋಡಿಕೊಳ್ಳುವ ಕ್ಷಣವನ್ನು ಅನುಭವಿಸಿ. ಆಗ ಖಂಡಿತ ನೀವು ಆದಷ್ಟು ಬೇಗ ಮಾನಸಿಕವಾಗಿ ಸರಿ ಹೊಂದುತ್ತೀರಿ. ನಿದ್ದೆಯ ಮೊದಲು ದೀರ್ಘವಾಗಿ ಉಸಿರು ತೆಗೆದುಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಿ.

**

ನನಗೆ ನನ್ನ ಅತ್ತೆಮಗ ಅಂದ್ರೆ ತುಂಬಾ ಪ್ರೀತಿ. ಅವನಿಗೂ ನಾನು ಅಂದ್ರೆ ಇಷ್ಟ. ಆದರೆ ಇತ್ತೀಚೆಗೆ ಅವನು ನನ್ನನ್ನು ನಿರ್ಲಕ್ಷ್ಯ ಮಾಡುತ್ತಿದ್ದಾನೆ. ಕಾರಣ ಕೇಳಿದರೆ ಹೇಳುತ್ತಿಲ್ಲ. ನಾನು ಚೆನ್ನಾಗಿಯೇ ಇದ್ದೇನೆ ಎನ್ನುತ್ತಿದ್ದಾನೆ. ನನಗೆ ಅವನ ನಿರ್ಲಕ್ಷ್ಯವನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಸಾಯಬೇಕು ಎನ್ನಿಸುತ್ತದೆ. ಸಂಕಟ ಆಗುತ್ತದೆ. ಏನು ಮಾಡಬೇಕೋ ತಿಳಿಯುತ್ತಿಲ್ಲ.

–ಹರಿಣಿ, ಊರು ಬೇಡ

ನೀವು ಇಲ್ಲಿ ನಿಮ್ಮ ವಯಸ್ಸನ್ನು ತಿಳಿಸಿಲ್ಲ. ಅದೇನೆ ಇರಲಿ, ನೀವು ಅವರ ಬಳಿ ಎಂದಾದರೂ ’ನೀನು ನನ್ನನ್ನು ಪ್ರೀತಿಸುತ್ತಿದ್ದೀಯಾ? ಎಂದು ಕೇಳಿದ್ದೀರಾ? ನೀವು ಹೇಳುತ್ತಿರುವುದು ಅವರು ನಿಮ್ಮನ್ನು ಇಷ್ಟಪಡುತ್ತಿದ್ದಾರೆ ಎಂದು. ಒಂದು ವಿಷಯ ತಿಳಿದುಕೊಳ್ಳಿ. ಪ್ರೀತಿ ಹಾಗೂ ಇಷ್ಟದ ನಡುವೆ ತುಂಬಾನೇ ವ್ಯತ್ಯಾಸವಿದೆ. ಹಾಗಾಗಿ ನಿಮಗೆ ಅವರ ಮೇಲಿರುವ ಭಾವನೆಗಳನ್ನು ಸ್ವಷ್ಟವಾಗಿ ಅವರ ಜೊತೆ ಹಂಚಿಕೊಳ್ಳಿ.

ಆಗ ಅವರು ನಿಮ್ಮ ಮೇಲೆ ಯಾವ ರೀತಿಯ ಭಾವನೆ ಹೊಂದಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಇದೇ ಜೀವನದ ಕೊನೆಯಲ್ಲ, ಹಾಗಾಗಿ ನೀವು ಖಿನ್ನತೆಗೆ ಒಳಗಾಗಬೇಡಿ. ಯಾವುದು ನಿಮಗೆ ಸೂಕ್ತ ಎನ್ನುವುದನ್ನು ಸಮಯವೇ ನಿರ್ಧರಿಸುತ್ತದೆ. ಮೊದಲು ನಿಮ್ಮ ಪ್ರಾಶಸ್ತ್ಯಗಳನ್ನು ಗುರುತಿಸಿಕೊಳ್ಳಿ. ಅದು ಓದು ಆಗಿರಬಹುದು ಅಥವಾ ಕೆಲಸ ಆಗಿರಬಹುದು. ಜೀವನ ಕೇವಲ ಮದುವೆ ಹಾಗೂ ಪ್ರೀತಿಯ ಮೇಲೆ ನಿಂತಿಲ್ಲ. ನಿಶ್ಚಿಂತೆಯಿಂದ ಮುಂದೆ ಸಾಗಿ.

**

ನಾನು ಬಿ.ಇ. ಮುಗಿಸಿ, ಒಂದು ವರ್ಷ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿದ್ದೆ. ಅಲ್ಲಿ ತೃಪ್ತನಾಗದೇ ಕೆಲಸ ಬಿಟ್ಟಿದ್ದೆ. ಈಗ ಸರ್ಕಾರಿ ಉದ್ಯೋಗಕ್ಕೆ ಪ್ರಯ್ನತಿಸುತ್ತಿದ್ದೇನೆ. ಆದರೆ ಯಾವುದೇ ಪರೀಕ್ಷೆಗಳು ನಾನು ನಿರೀಕ್ಷಿಸಿದಷ್ಟು ಉತ್ತಮ ರೀತಿಯಲ್ಲಿ ಆಗುತ್ತಿಲ್ಲ. ಚೆನ್ನಾಗಿ ಓದಲು ನನ್ನಿಂದ ಸಾಧ್ಯವಾಗುತ್ತಿಲ್ಲ. ಇದರಿಂದ ಜೀವನವೇ ಜಿಗುಪ್ಸೆಯಾಗಿದೆ. ಮತ್ತೆ ಕೆಲಸಕ್ಕೆ ಹೋಗಲು ಆಗದೇ ಓದಲು ಸಾಧ್ಯವಾಗದೇ ಮಾನಸಿಕವಾಗಿ ನಿಶ್ಶಕ್ತನಾಗಿದ್ದೇನೆ.

–ಯೋಗಾನಂದ, ಮೈಸೂರು

ನಾನು ನಿಮಗೆ ಹೇಳಲು ಇಚ್ಛಿಸುವುದೇನೆಂದರೆ ನೀವು ಒಂದೆರಡು ದಿನ ಒಬ್ಬಂಟಿಯಾಗಿ ಎಲ್ಲಾದರೂ ಹೊರಗಡೆ ಹೋಗಿ ಬನ್ನಿ. ನೀವು ಮಾಡಬೇಕು ಎಂಬುದನ್ನು ಯೋಚಿಸಿ. ನಿಮಗೆ ಯಾವುದರ ಮೇಲೆ ಒಲವಿದೆ ಎಂಬುದನ್ನು ತಿಳಿದುಕೊಳ್ಳಿ. ಅದನ್ನು ಒಂದು ಪುಸ್ತಕದಲ್ಲಿ ಬರೆಯಿರಿ ಮತ್ತು ಅದಕ್ಕಾಗಿ ನೀವು ಯಾವ ರೀತಿ ಕೆಲಸ ಮಾಡಬೇಕು ಎಂಬುದನ್ನು ಪಟ್ಟಿ ಮಾಡಿ. ನೀವು ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಬಯಸಿದರೆ ಅದಕ್ಕಾಗಿ ಕೆಲವು ಆನ್‌ಲೈನ್ ಕೋರ್ಸ್‌ಗಳು ಲಭ್ಯವಿವೆ. ಹೊಸ ಟೂಲ್ಸ್‌ಗಳನ್ನು ಕಲಿಯಿರಿ. ಇದರಿಂದ ನಿಮಗೆ ಇನ್ನಷ್ಟು ಅವಕಾಶಗಳು ದೊರೆಯಲು ಸಹಾಯವಾಗುತ್ತವೆ. 

ನೀವು ಹೊರಗಡೆ ಹೋಗಿ ಬಂದ ಮೇಲೆ ನಿಮ್ಮ ಸ್ನೇಹಿತರು ಹಾಗೂ ಪರಿಚಯದವರ ಜೊತೆ ಮಾತನಾಡಿ. ಅವರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಿ ಮತ್ತು ಅದರ ಮೇಲೆ ಕೆಲಸ ಮಾಡಿ. ನಿಮ್ಮ ದಾರಿ ಭಿನ್ನವಾಗಿರಬಹುದು. ಅದನ್ನು ಗುರುತಿಸಿ ಅದರಲ್ಲಿ ಮುಂದೆ ಸಾಗಿ. ಆಗ ಖಂಡಿತ ನಿಮ್ಮ ದಾರಿಯನ್ನು ಕಂಡುಕೊಳ್ಳಬಹುದು. ಆದರೆ ಭರವಸೆ ಕಳೆದುಕೊಳ್ಳಬೇಡಿ. 

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !