ಎಚ್ಚರಿಕೆ: ಸ್ಮಾರ್ಟ್‌ಫೋನ್ ಅತಿ ಬಳಕೆಯಿಂದ ಮಕ್ಕಳಲ್ಲಿ ಮಾನಸಿಕ ಸಮಸ್ಯೆ

7
ಮಕ್ಕಳಲ್ಲಿ ಖಿನ್ನತೆ, ಉದ್ವೇಗ, ಭಾವನಾತ್ಮಕ ಅಸ್ಥಿರತೆ ಸಮಸ್ಯೆ

ಎಚ್ಚರಿಕೆ: ಸ್ಮಾರ್ಟ್‌ಫೋನ್ ಅತಿ ಬಳಕೆಯಿಂದ ಮಕ್ಕಳಲ್ಲಿ ಮಾನಸಿಕ ಸಮಸ್ಯೆ

Published:
Updated:

ನ್ಯೂಯಾರ್ಕ್‌: ಅತಿಯಾಗಿ ಸ್ಮಾರ್ಟ್‌ಫೋನ್‌ಗಳನ್ನು ಬಳಸುವುದರಿಂದ 2 ವರ್ಷ ವಯಸ್ಸಿನ ಮಕ್ಕಳಲ್ಲೇ ಮಾನಸಿಕ ಆರೋಗ್ಯ ಸಮಸ್ಯೆಗಳು ಕಂಡುಬರುತ್ತಿವೆ ಎಂದು ಅಧ್ಯಯನವೊಂದರ ವರದಿ ತಿಳಿಸಿದೆ.

ಬೆಳೆಯುವ ವಯಸ್ಸಿನ ಮಕ್ಕಳು ಅತಿಯಾಗಿ ಸ್ಮಾರ್ಟ್‌ಫೋನ್‌ಗಳನ್ನು ಬಳಸುವುದರಿಂದ ಅವರಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳು ಕಂಡುಬರುತ್ತಿವೆ. ದಿನವೊಂದಕ್ಕೆ ಒಂದು ಗಂಟೆಗಿಂತಲೂ ಹೆಚ್ಚು ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್‌ಗಳನ್ನು ಬಳಸುವ ಎಳೆಯ ಮಕ್ಕಳು ಮಾನಸಿಕ ಉದ್ವೇಗ, ಖಿನ್ನತೆಗೆ ತುತ್ತಾಗುವ ಸಾಧ್ಯತೆ ಹೆಚ್ಚು ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.

ಸ್ಮಾರ್ಟ್‌ಫೋನ್ ಮತ್ತು ಮಕ್ಕಳ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿ ಸ್ಯಾನ್‌ ಡಿಯಾಗೊ ವಿಶ್ವವಿದ್ಯಾಲಯ ಮತ್ತು ಜಾರ್ಜಿಯಾ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿರುವ ಅಧ್ಯಯನದ ಬಗ್ಗೆ ಡೈಲಿ ಮೇಲ್‌ ಸುದ್ದಿ ತಾಣ ವರದಿ ಮಾಡಿದೆ.

ಅತಿಯಾಗಿ ಸ್ಮಾರ್ಟ್‌ಫೋನ್ ಬಳಸುವ ಹತ್ತು ವರ್ಷಕ್ಕಿಂತ ಕೆಳಗಿನ ವಯಸ್ಸಿನ ಮಕ್ಕಳಲ್ಲಿ ಸಮಸ್ಯೆ ಕಂಡುಬರುವ ಸಾಧ್ಯತೆ ಹೆಚ್ಚು. ಸ್ವನಿಯಂತ್ರಣ ಕಡಿಮೆಯಾಗುವುದು, ಭಾವನಾತ್ಮಕ ಅಸ್ಥಿರತೆ, ನಿಗದಿತ ಕೆಲಸಗಳನ್ನು ಪೂರೈಸುವ ಸಾಮರ್ಥ್ಯ ಕಡಿಮೆಯಾಗುವುದು ಇನ್ನಿತರ ಸಮಸ್ಯೆಗಳಿಗೆ ಮಕ್ಕಳು ತುತ್ತಾಗುತ್ತಿದ್ದಾರೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಮಕ್ಕಳು ಆನ್‌ಲೈನ್‌ನಲ್ಲಿ ಮತ್ತು ಟಿವಿ ನೋಡಲು ವ್ಯಯಿಸುವ ಸಮಯವನ್ನು ಪಾಲಕರು ಹಾಗೂ ಶಿಕ್ಷಕರು ಕಡಿಮೆಮಾಡಬೇಕು ಎಂದು ಅಧ್ಯಯನ ನಡೆಸಿದ ತಂಡದ ಪ್ರಾಧ್ಯಾಪಕರಾದ ಜೀನ್ ಟ್ವೆಂಗೇ ಮತ್ತು ಕೀತ್ ಕ್ಯಾಂಪ್‌ಬೆಲ್ ಹೇಳಿದ್ದಾರೆ.

ಎರಡರಿಂದ ಐದು ವರ್ಷ ವಯಸ್ಸಿನ ಮಕ್ಕಳು ಒಂದು ಗಂಟೆಗಿಂತ ಹೆಚ್ಚು ಆನ್‌ಲೈನ್‌ನಲ್ಲಿ ಕಳೆಯದಂತೆ ಅಮೆರಿಕನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ನಿಗದಿ‍ಪಡಿಸಿರುವ ಮಿತಿಗೆ ತಮ್ಮ ಅಧ್ಯಯನ ಬೆಂಬಲ ನೀಡುತ್ತದೆ ಎಂದಿದ್ದಾರೆ ಜೀನ್ ಟ್ವೆಂಗೇ. ಶಾಲಾ ಮಕ್ಕಳು ಮತ್ತು ಹದಿಹರೆಯದವರಿಗೆ ಎರಡು ಗಂಟೆಗಳಿಗಿಂತ ಹೆಚ್ಚು ಆನ್‌ಲೈನ್‌ನಲ್ಲಿ ಕಳೆಯದಂತೆ ಸೂಚಿಸಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಅಮೆರಿಕದ 2ರಿಂದ 17 ವರ್ಷ ವಯಸ್ಸಿನ 40 ಸಾವಿರ ಮಕ್ಕಳ ಪಾಲಕರು 2016ರ ರಾಷ್ಟ್ರೀಯ ಆರೋಗ್ಯ ಸಮೀಕ್ಷೆಗೆ ನೀಡಿದ್ದ ದತ್ತಾಂಶಗಳನ್ನು ಸಂಶೋಧಕರು ವಿಶ್ಲೇಷಿಸಿದ್ದಾರೆ. ವೈದ್ಯಕೀಯ ಕಾಳಜಿಯ ವಿವರ, ಭಾವನಾತ್ಮಕ, ನಡವಳಿಕೆ ಮತ್ತು ಬೆಳವಣಿಗೆಗೆ ಸಂಬಂಧಿಸಿದ ವಿಷಯ ಹಾಗೂ ದಿನವೊಂದಕ್ಕೆ ಮಕ್ಕಳು ಸ್ಮಾರ್ಟ್‌ಫೋನ್ ಪರದೆಯಲ್ಲಿ ಕಾಲಕಳೆಯುವ ಸಮಯದ ಬಗ್ಗೆ ಪ್ರಶ್ನಾವಳಿಯಲ್ಲಿ ಉತ್ತರಿಸಲು ಸೂಚಿಸಲಾಗಿತ್ತು.

ದಿನವೊಂದಕ್ಕೆ 7 ಗಂಟೆಗಳಷ್ಟು ಹೊತ್ತು ಮೊಬೈಲ್‌ ಸ್ಕ್ರೀನ್‌ನಲ್ಲಿ ಕಾಲಕಳೆಯುವ ಮಕ್ಕಳಲ್ಲಿ ಉದ್ವೇಗ, ಖಿನ್ನತೆ ಕಂಡುಬಂದಿದೆ ಎಂದು ಅಧ್ಯಯನ ತಿಳಿಸಿದೆ. ಈ ಪ್ರಮಾಣ ದಿನವೊಂದಕ್ಕೆ 1 ಗಂಟೆಯಷ್ಟು ಹೊತ್ತು ಮೊಬೈಲ್‌ ಸ್ಕ್ರೀನ್‌ನಲ್ಲಿ ಕಾಲಕಳೆಯುವ ಮಕ್ಕಳಿಗಿಂತ ಹೆಚ್ಚು ಎಂದೂ ಹೇಳಲಾಗಿದೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !