‘ಸಾಮಾಜಿಕ ನ್ಯಾಯದ ತೇರು ಸಾಗಲಿ’

7

‘ಸಾಮಾಜಿಕ ನ್ಯಾಯದ ತೇರು ಸಾಗಲಿ’

Published:
Updated:
Prajavani

ಬೆಂಗಳೂರು: ‘ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಸಾಮಾಜಿಕ ನ್ಯಾಯದ ತೇರನ್ನು ಆತ್ಮವಿಶ್ವಾಸದಿಂದ ಎಳೆದಿದ್ದಾರೆ. ಅದನ್ನು ಮುಂದಕ್ಕೆ ಕೊಂಡೊಯ್ಯುವ ಜವಾಬ್ದಾರಿ ತಳಸಮುದಾಯದ ಯುವಜನರ ಮೇಲಿದೆ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಮಲ್ಲಿಕಾ ಎಸ್.ಘಂಟಿ ಹೇಳಿದರು.

ಅಖಿಲ ಕರ್ನಾಟಕ ಯುವ ಕುರುಬರ ಒಕ್ಕೂಟ ನಗರದಲ್ಲಿ ಭಾನುವಾರ ಆಯೋಜಿಸಿದ್ದ ವಾರ್ಷಿಕೋತ್ಸವ ಹಾಗೂ ಕನಕದಾಸರ 531ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ಪ್ರಸ್ತುತ ದೇಶದಲ್ಲಿ ಕಳವಳಕಾರಿ ಬೆಳವಣಿಗೆಗಳು ನಡೆಯುತ್ತಿವೆ. ಅವುಗಳಿಂದ ಸಮಾಜವನ್ನು ರಕ್ಷಿಸಿ, ನವಭಾರತ ನಿರ್ಮಾಣ ಮಾಡಬೇಕಿದೆ. ಆ ಮೂಲಕ ಜಾತ್ಯತೀತ ಮನಸ್ಸುಗಳು ಕಂಡ ಸಮ ಸಮಾಜದ ಕನಸನ್ನು ಈಡೇರಿಸಬೇಕಿದೆ’ ಎಂದರು.

ಇತಿಹಾಸ ತಜ್ಞ ಡಾ.ಲಿಂಗದಹಳ್ಳಿ ಹಾಲಪ್ಪ, ‘ಕುರುಬ ಸಮಾಜದ್ದು ಸಮೃದ್ಧ ಚರಿತ್ರೆ. ಆದರೆ, ಸಾಂಸ್ಕೃತಿಕ ರಾಜಕಾರಣದ ಹುನ್ನಾರದಿಂದ ಅದಕ್ಕೆ ದೂಳು ಮೆತ್ತಿಕೊಂಡಿದೆ. ಪ್ರತಿ ಸಾಮ್ರಾಜ್ಯದ ನಿರ್ಮಾಣದ ಹಿಂದೆ ಅಂಚಿನ ಸಮುದಾಯಗಳ ಶ್ರಮ ಇರುತ್ತದೆ. ಅದನ್ನು ಮರೆಮಾಚಿ, ತಮ್ಮ ಆಶೋತ್ತರಗಳಿಗೆ ತಕ್ಕ ಹಾಗೆ ಇತಿಹಾಸ ರಚಿಸಲಾಗಿದೆ’ ಎಂದು ಅಭಿಪ್ರಾಯಪಟ್ಟರು.

ವಿಧಾನ ಪರಿಷತ್‌ ಸದಸ್ಯ ಎಚ್‌.ಎಂ.ರೇವಣ್ಣ ಅವರಿಗೆ ‘ಕನಕರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎನ್.ಸಿದ್ದಪ್ಪ, ಲಿಂಗದಹಳ್ಳಿ ಹಾಲಪ್ಪ, ಕೆ.ಎಂ.ರಾಮಚಂದ್ರ, ಹನುಮಂತ ಬಟ್ಟೂರ, ಪ್ರಸನ್ನ ಕುಮಾರ್‌ ಸೇರಿದಂತೆ 10 ಮಂದಿ ಸಾಧಕರಿಗೆ ‘ಕನಕ ಚೇತನ’ ಪ್ರಶಸ್ತಿ ನೀಡಲಾಯಿತು.

ಬಳಿಕ ಭಕ್ತ ಕನಕದಾಸ ಕೃಪಾಪೋಷಿತ ನಾಟಕ ಮಂಡಳಿಯ ಕಲಾವಿದರು ‘ಶ್ರೀಕೃಷ್ಣ ಸಂಧಾನ’ ಪೌರಾಣಿಕ ನಾಟಕ ಪ್ರದರ್ಶಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !