ಎಂದು ಬಂದೀತು ಸೌರ ಬೆಳಕು?, ಇನ್ನೂ ಪೂರ್ಣಗೊಳ್ಳದ ಯೋಜನೆ

7
ನಾಲ್ಕು ಪೋಡುಗಳಲ್ಲಿ ಯೋಜನೆ

ಎಂದು ಬಂದೀತು ಸೌರ ಬೆಳಕು?, ಇನ್ನೂ ಪೂರ್ಣಗೊಳ್ಳದ ಯೋಜನೆ

Published:
Updated:
Deccan Herald

ಚಾಮರಾಜನಗರ: ಕೇಂದ್ರ ಸರ್ಕಾರದ ದೀನ ದಯಾಳು ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಯ (ಡಿಡಿಯುಜಿಜೆವೈ) ಅಡಿಯಲ್ಲಿ ತಾಲ್ಲೂಕಿನ ಬೇಡಗುಳಿ ವ್ಯಾಪ್ತಿಯಲ್ಲಿ ಬರುವ ಕಾಡಿಗೆರೆ, ಬಿಸಿಲಗೆರೆ, ಮೊಣಕೈಪೋಡು ಮತ್ತು ರಾಮಯ್ಯನಪೋಡುಗಳಲ್ಲಿರುವ ಮನೆಗಳಲ್ಲಿ ಸೌರ ಬೆಳಕು ಇನ್ನೂ ಬೆಳಗಿಲ್ಲ.

ಕಾಡಿಗೆರೆ ಮತ್ತು ಬಿಸಿಲಗೆರೆ ಪೋಡುಗಳಲ್ಲಿರುವ ಮನೆಗಳಿಗೆ ಆರೇಳು ತಿಂಗಳ ಹಿಂದೆಯೇ ವಯರಿಂಗ್‌ ಮಾಡಲಾಗಿದೆ. ಬಲ್ಬ್‌ಗಳನ್ನು ಅಳವಡಿಸಲು ಜಾಗವನ್ನೂ ಗುರುತಿಸಲಾಗಿದೆ. ಆದರೆ, ಬೆಳಕು ಇನ್ನೂ ಬಂದಿಲ್ಲ. ಇಲ್ಲಿ ವಾಸಿಸುತ್ತಿರುವ ಗಿರಿಜನ ನಿವಾಸಿಗಳು ಇನ್ನೂ ಸೀಮೆಎಣ್ಣೆ ದೀಪದ ಬೆಳಕಿನಲ್ಲೇ ರಾತ್ರಿಗಳನ್ನು ಕಳೆಯಬೇಕಾಗಿದೆ. ಉಳಿದ ಎರಡು ಪೋಡುಗಳಲ್ಲಿ ಇಷ್ಟು ಕೆಲಸವೂ ಆಗಿಲ್ಲ.

ಎರಡು ಪೋಡುಗಳಿಗೆ ವಿದ್ಯುತ್‌: ಪುಣಜನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಬೇಡಗುಳಿಯ ಸುತ್ತಮುತ್ತಲಿನ ಆರು ಪೋಡುಗಳಿಗೆ ಸೌರ ವಿದ್ಯುತ್‌ ಪೂರೈಸುವುದಕ್ಕಾಗಿ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮವು (ಸೆಸ್ಕ್‌) ಡಿಡಿಯುಜಿಜೆವೈ ಅಡಿಯಲ್ಲಿ ₹3.43 ಕೋಟಿ ವೆಚ್ಚದ ಯೋಜನೆಯನ್ನು ಕೈಗೆತ್ತಿಕೊಂಡಿತ್ತು. 

ಇದರ ಅಡಿಯಲ್ಲಿ ಈಗಾಗಲೇ ಬೇಡಗುಳಿ ಮತ್ತು ಮಾರಿಗುಡಿ ಪೋಡುಗಳ 204 ಮನೆಗಳಿಗೆ ಸೌರ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದೆ. ಇದಕ್ಕಾಗಿ ಮಾರಿಗುಡಿ ಪೋಡಿನಲ್ಲಿ ಸೌರ ಘಟಕ ಸ್ಥಾಪನೆಯಾಗಿದೆ. ಕಳೆದ ವರ್ಷದ ಅಕ್ಟೋಬರ್‌ 31ರಿಂದಲೇ ಈ ಎರಡು ಪೋಡುಗಳ ಜನರು ಸೌರ ಬೆಳಕನ್ನು ಕಂಡಿದ್ದಾರೆ. 

ಇದೇ ಯೋಜನೆಯ ಮುಂದುವರಿದ ಭಾಗವಾಗಿ ಉಳಿದ ನಾಲ್ಕು ಪೋಡುಗಳಿಗೆ ಸೌರ ವಿದ್ಯುತ್‌ ಸಂಪರ್ಕ ಕಲ್ಪಿಸಬೇಕಿತ್ತು. ಆದರೆ, ಈ ಕೆಲಸ ನಿಧಾನಗತಿಯಲ್ಲಿ ನಡೆಯುತ್ತಿದೆ. 

‘ಆರೇಳು ತಿಂಗಳ ಹಿಂದೆಯೇ ಮನೆಗಳಲ್ಲಿ ವೈರ್‌ಗಳನ್ನು ಅಳವಡಿಸಿದ್ದಾರೆ. ಆದರೆ, ಇದುವರೆಗೂ ನಮಗೆ ವಿದ್ಯುತ್‌ ಸೌಲಭ್ಯ ಸಿಕ್ಕಿಲ್ಲ’ ಎಂದು ಕಾಡಿಗೆರೆಯ ನಿವಾಸಿ ನಂಜೇಶಗೌಡ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರತ್ಯೇಕ ಟೆಂಡರ್‌: ‘ಬೇಡಗುಳಿ ಮತ್ತು ಮಾರಿಗುಡಿ ‍ಪೋಡಿನಲ್ಲಿ ಯೋಜನೆ ಅನುಷ್ಠಾನ ಆಗಿದೆ. ಈ ಎರಡು ಪೋಡುಗಳಿಗೆ ಸೌರ ವಿದ್ಯುತ್‌ ಘಟಕದಿಂದ ವಿದ್ಯುತ್‌ ಪೂರೈಸಲಾಗುತ್ತಿದೆ. ಉಳಿದ ನಾಲ್ಕು ಪೋಡುಗಳಲ್ಲಿ ಪ್ರತಿ ಮನೆಯಲ್ಲೂ ಸೋಲಾರ್‌ ಪ್ಯಾನಲ್‌ ಅಳವಡಿಸಿ, ದೊಡ್ಡ ಬ್ಯಾಟರಿ ಇಟ್ಟು ವಿದ್ಯುತ್‌ ಪೂರೈಸುವ ವ್ಯವಸ್ಥೆಯನ್ನು (ಇದನ್ನು ಸ್ಟ್ಯಾಂಡ್‌ ಅಲೋನ್‌ ಸಿಸ್ಟಮ್‌ ಎನ್ನಲಾಗುತ್ತದೆ) ಜಾರಿಗೊಳಿಸಲಾಗುತ್ತಿದೆ. ಇದಕ್ಕಾಗಿ ಪ್ರತ್ಯೇಕ ಟೆಂಡರ್‌ ಕರೆಯಲಾಗಿದೆ. ಸ್ವಲ್ಪ ವಿಳಂಬವಾಗಿದೆ. ಆಧುನಿಕ ತಂತ್ರಜ್ಞಾನದ ಸಾಧನಗಳನ್ನೇ ಇಲ್ಲಿ ಬಳಸಲಾಗುತ್ತಿದೆ. ಟೆಂಡರ್‌ ವಹಿಸಿಕೊಂಡ ಕಂಪನಿ ಶೀಘ್ರದಲ್ಲಿ ಕೆಲಸ ಆರಂಭಿಸಲಿದೆ’ ಎಂದು ಹೆಸರು ಹೇಳಲು ಇಚ್ಛಿಸದ ಸೆಸ್ಕ್‌ ಎಂಜಿನಿಯರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಕತ್ತಲೆಯಲ್ಲೇ ಬದುಕು

ಎರಡು ಪೋಡುಗಳಿಗೆ ವಿದ್ಯುತ್ ಬಂದು ವರ್ಷ ಕಳೆದರೂ ನಾಲ್ಕು ಪೋಡುಗಳ ನಿವಾಸಿಗಳಿಗೆ ಸೌರ ಬೆಳಕು ಕಾಣುವ ಭಾಗ್ಯ ಇನ್ನೂ ಸಿಕ್ಕಿಲ್ಲ.

‘ಇಲ್ಲಿ ವಾಸಿಸುತ್ತಿರುವವರಿಗೆ ಸೀಮೆಎಣ್ಣೆ ಬುಡ್ಡಿಯೇ ಗತಿ’ ಎಂದು ಹೇಳುತ್ತಾರೆ ಸ್ಥಳೀಯ ಮುಖಂಡ ಮಹದೇವ.

‘2006–2007ರಲ್ಲಿ ಕೆಇಬಿ ವತಿಯಿಂದ ಸೋಲಾರ್‌ ಪ್ಯಾನೆಲ್‌ ಮತ್ತು 2 ಬ್ಯಾಟರಿಗಳನ್ನು ಇಲ್ಲಿನ ಕುಟುಂಬಗಳಿಗೆ ಕೊಟ್ಟಿದ್ದರು. ಅದೀಗ ಹಾಳಾಗಿದೆ. ಆ ಬಳಿಕ ಸ್ವಯಂ ಸೇವಾ ಸಂಸ್ಥೆಯೊಂದು ಸೋಲಾರ್‌ ಲ್ಯಾಂಪ್‌ ಕೊಟ್ಟಿತ್ತು. ಅದು ಕೂಡ ಇಲ್ಲ. ದುಡ್ಡಿದ್ದವರು ತುರ್ತು ಬಳಕೆಗಾಗಿ ತಾವೇ ಸೋಲಾರ್‌ ಪ್ಯಾನೆಲ್‌ ತಂದು, ಸಣ್ಣ ಮಟ್ಟಿನ ಬೆಳಕಿನ ವ್ಯವಸ್ಥೆ ಮಾಡಿಕೊಂಡಿದ್ದಾರೆ’ ಎಂದು ಅವರು ವಿವರಿಸಿದರು.

ಅಂಕಿ ಅಂಶ

* ₹3.43 ಕೋಟಿ ಯೋಜನಾ ವೆಚ್ಚ

* 6 ವಿದ್ಯುದ್ದೀಕರಣ ಮಾಡಬೇಕಾದ ಪೋಡುಗಳ ಸಂಖ್ಯೆ

* 204 ವಿದ್ಯುದ್ದೀಕರಣಗೊಂಡ ಮನೆಗಳ ಸಂಖ್ಯೆ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !