ಶಿಂಧೆ, ಅಂಬೇಡ್ಕರ್‌, ಜಯಸಿದ್ಧೇಶ್ವರ ಶ್ರೀ ನಾಮಪತ್ರ ಸಲ್ಲಿಕೆ

ಮಂಗಳವಾರ, ಏಪ್ರಿಲ್ 23, 2019
31 °C
ಸೊಲ್ಲಾಪುರ ಪರಿಶಿಷ್ಟ ಜಾತಿಯ ಮೀಸಲು ಲೋಕಸಭಾ ಕ್ಷೇತ್ರ

ಶಿಂಧೆ, ಅಂಬೇಡ್ಕರ್‌, ಜಯಸಿದ್ಧೇಶ್ವರ ಶ್ರೀ ನಾಮಪತ್ರ ಸಲ್ಲಿಕೆ

Published:
Updated:
Prajavani

ಸೊಲ್ಲಾಪುರ: ಸೊಲ್ಲಾಪುರ ಪರಿಶಿಷ್ಟ ಜಾತಿಯ ಮೀಸಲು ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಬಯಸಿ, ಸೋಮವಾರ ರಂಗಪಂಚಮಿಯ ಶುಭ ಮುಹೂರ್ತದಲ್ಲಿ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಕೆಗೆ ಮುನ್ನ ಕಾಂಗ್ರೆಸ್‌, ಬಿಜೆಪಿ, ವಂಚಿತ ಬಹುಜನ ಮಿತ್ರ (ಆಘಾಡಿ) ಪಕ್ಷಗಳು ತಮ್ಮ ಶಕ್ತಿ ಪ್ರದರ್ಶಿಸಿದವು. ನಗರದಲ್ಲಿ ಎತ್ತ ನೋಡಿದರೂ ಜನಸಾಗರವೇ ಗೋಚರಿಸಿದ್ದು ವಿಶೇಷವಾಗಿತ್ತು.

ಕಾಂಗ್ರೆಸ್ಸಿಗರು ತಮ್ಮ ಮೆರವಣಿಗೆಯಲ್ಲಿ ಗುಲಾಲು ಎರಚಿಕೊಂಡು ಸಂಭ್ರಮಿಸಿದರೆ, ಬಿಜೆಪಿ ಕೇಸರಿ, ಬಹುಜನ ವಂಚಿತ ಆಘಾಡಿಯ ಕಾರ್ಯಕರ್ತರು ಹಳದಿ, ನೀಲಿ, ಹಸಿರು ಬಣ್ಣವನ್ನು ಪರಸ್ಪರ ಎರಚಿಕೊಂಡು, ನಾಮಪತ್ರ ಸಲ್ಲಿಕೆಯ ಮೆರವಣಿಗೆಗೆ ರಂಗಪಂಚಮಿಯ ರಂಗು ತುಂಬಿದರು.

ಕಾಂಗ್ರೆಸ್‌, ಎನ್‌ಸಿಪಿ ಮೈತ್ರಿಕೂಟದ ಅಭ್ಯರ್ಥಿ ಸುಶೀಲಕುಮಾರ ಶಿಂಧೆ ಬೆಳಿಗ್ಗೆ 11.30ಕ್ಕೆ ಚಾರಪುತಳಾ ಪರಿಸರದಿಂದ ಪಾದಯಾತ್ರೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.

ಪಾದಯಾತ್ರೆಯುದ್ದಕ್ಕೂ ಬ್ಯಾಂಜೋ, ಹಲಗಿ ಮೇಳ ಸೇರಿದಂತೆ ವಿವಿಧ ವಾದ್ಯವೃಂದ ಮುಂಚೂಣಿಯಲ್ಲಿದ್ದವು, ಕಾರ್ಯಕರ್ತರ ಕೈಯಲ್ಲಿ ಧ್ವಜ, ತಲೆಯಲ್ಲಿ ಕಾಂಗ್ರೆಸ್‌ ಟೋಪಿಗಳು ರಾರಾಜಿಸಿದವು. ಹಾದಿಯುದ್ದಕ್ಕೂ ಜೈಕಾರ ಮೊಳಗಿತು.

ಶಾಸಕ ಸಿದ್ಧರಾಮ ಮೇತ್ರೆ, ಶಾಸಕಿ ಪ್ರಣಿತಿ ಶಿಂಧೆ, ಮೊಹೋಳದ ಮಾಜಿ ಶಾಸಕ ರಾಜೇಂದ್ರ ಪಾಟೀಲ ಸೇರಿದಂತೆ ಮೈತ್ರಿ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಡಾ.ಬಿ.ಆರ್.ಅಂಬೇಡ್ಕರ್‌ ಮೊಮ್ಮಗ ಡಾ.ಪ್ರಕಾಶ್‌ ಅಂಬೇಡ್ಕರ್‌ ನಗರದಲ್ಲಿನ ಅಂಬೇಡ್ಕರ್‌ ಪ್ರತಿಮೆಯಿಂದ ಪಾದಯಾತ್ರೆ ಮೂಲಕ, ತಮ್ಮ ಅಪಾರ ಬೆಂಬಲಿಗರೊಂದಿಗೆ ವಂಚಿತ ಬಹುಜನ ಮಿತ್ರ (ಆಘಾಡಿ) ಪಕ್ಷದಿಂದ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.

ಅಪಾರ ಸಂಖ್ಯೆಯ ಬೆಂಬಲಿಗರು ಈ ಸಂದರ್ಭ ಜತೆಯಲ್ಲಿದ್ದರು. ಎಂಐಎಂ, ಮುಸ್ಲಿಂ, ಹಿಂದುಳಿದ ಮತ್ತು ಇತರ ಹಿಂದುಳಿದ ಜನ ಬೆಂಬಲದ ಅಭ್ಯರ್ಥಿ ಎಂದು ನಾಮಪತ್ರ ಸಲ್ಲಿಸಿದರು. ರಿಪಬ್ಲಿಕ್ ಪಕ್ಷದ ರಾಜಾಭಾವು ಸರ್ವದೆ, ಎಂಐಎಂನ ತೌಫಿಕ ಹತ್ತುರೆ, ಸುಜಾತಾ ಅಂಬೇಡ್ಕರ್, ದಲಿತ ನಾಯಕ ಪ್ರಮೋದ ಗಾಯಕವಾಡ ಉಪಸ್ಥಿತರಿದ್ದರು.

ನಗರದ ಹೆರಿಟೇಜ್ ಗಾರ್ಡನ್‌ನಲ್ಲಿ ಬಿಜೆಪಿ ಸಮಾವೇಶ ನಡೆಯಿತು. ಬಿಜೆಪಿ–ಶಿವಸೇನೆ ಮೈತ್ರಿ ಅಭ್ಯರ್ಥಿಯಾಗಿ ಗೌಡಗಾವದ ಡಾ.ಜಯಸಿದ್ಧೇಶ್ವರ ಶ್ರೀಗಳು ಅಪಾರ ಬೆಂಬಲಿಗರೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ತಮ್ಮ ನಾಮಪತ್ರ ಸಲ್ಲಿಸಿದರು.

ಇದಕ್ಕೂ ಮುಂಚೆ ಸಿದ್ಧರಾಮೇಶ್ವರ ಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಸೊಲ್ಲಾಪುರ ಜಿಲ್ಲಾ ಉಸ್ತುವಾರಿ ಸಚಿವ ವಿಜಯಕುಮಾರ ದೇಶಮುಖ, ಸಹಕಾರ ಸಚಿವ ಸುಭಾಷಬಾಪು ದೇಶಮುಖ, ಶಿವಸೇನೆಯ ನೀಲಮ್ ಗೋರೆ, ಅಕಲೂಜದ ಧೈರ್ಯಶೀಲ ಮೋಹಿತೆ ಪಾಟೀಲ, ಪ್ರೊ.ಲಕ್ಷ್ಮಣರಾವ ಢೋಬಳೆ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಹಾಜಿ ಪವಾರ, ನಾಗಣಸೂರಿನ ಶ್ರೀಕಂಠ ಶ್ರೀ, ಮೈಂದರ್ಗಿಯ ನೀಲಕಂಠ ಶ್ರೀ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !