ನೂತನ ಎಸ್‌ಪಿ ಆನಂದಕುಮಾರ್‌ ಅಧಿಕಾರ ಸ್ವೀಕಾರ

ಗುರುವಾರ , ಜೂನ್ 27, 2019
23 °C

ನೂತನ ಎಸ್‌ಪಿ ಆನಂದಕುಮಾರ್‌ ಅಧಿಕಾರ ಸ್ವೀಕಾರ

Published:
Updated:
Prajavani

ಚಾಮರಾಜನಗರ: ಜಿಲ್ಲೆಯ ನೂತನ ಪೊಲೀಸ್‌ ವರಿಷ್ಠಾಧಿಕಾರಿಯಾಗಿ (ಎಸ್‌ಪಿ) ಎಚ್‌.ಡಿ. ಆನಂದಕುಮಾರ್‌ ಅವರು ಬುಧವಾರ ಅಧಿಕಾರ ಸ್ವೀಕರಿಸಿದರು.

ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಅನಿತಾ ಬಿ.ಹದ್ದಣ್ಣವರ್‌ ಅವರು ಹೊಸ ಎಸ್‌ಪಿಗೆ ಅಧಿಕಾರ ಹಸ್ತಾಂತರಿಸಿದರು. 

ಅನ್ಯಾಯ ಸಹಿಸುವುದಿಲ್ಲ: ‘ಜಿಲ್ಲೆಯ ಜನರು ಮುಗ್ಧರಿದ್ದಾರೆ. ಅವರಿಗೆ ಅನ್ಯಾಯ ಆಗಬಾರದು ಎಂಬುದು ನನ್ನ ಕಾಳಜಿ. ಅಮಾಯಕರನ್ನು ದುರ್ಬಳಕೆ ಮಾಡುವರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ’ ಎಂದು ಆನಂದಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಜಿಲ್ಲೆಯಲ್ಲಿ ಅಪರಾಧ ಚಟುವಟಿಕೆಗಳು ಕಡಿಮೆ ಇವೆ. ಸರ್ಕಾರಕ್ಕೆ ನಷ್ಟ ಉಂಟು ಮಾಡುತ್ತಿರುವ ಚಟುವಟಿಕೆಗಳು ಜಿಲ್ಲೆಯಲ್ಲಿ ನಡೆಯುತ್ತಿರುವುದೂ ಗಮನಕ್ಕೆ ಬಂದಿದೆ. ಈ ಬಗ್ಗೆ ಗಮನ ಹರಿಸುತ್ತೇನೆ’ ಎಂದು ಅವರು ಹೇಳಿದರು. 

‘ದಾರಿ ತಪ್ಪುತ್ತಿರುವ ಯುವಕರ ಮನಸ್ಸು ಪರಿವರ್ತಿಸಿ ಅವರನ್ನು ಮುಖ್ಯವಾಹಿನಿಗೆ ತರುವ ಕೆಲಸ ಆಗಬೇಕು. ಆ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಜಿಲ್ಲೆಯ ಅಭಿವೃದ್ಧಿಯಲ್ಲಿ ಪೊಲೀಸ್‌ ಇಲಾಖೆಯೂ ಭಾಗಿಯಾಗಲಿದೆ’ ಎಂದು ಭರವಸೆ ನೀಡಿದರು.

ಎಂಜಿನಿಯರಿಂಗ್‌ ಪದವೀಧರ: ಮೂಲತಃ ಎಚ್‌.ಡಿ.ಕೋಟೆಯವರಾದ ಆನಂದಕುಮಾರ್‌ ಅವರು ಎಂಜಿನಿಯರಿಂಗ್‌ ಪದವೀಧರ. ಮೈಸೂರಿನ ಎಸ್‌ಜೆಇಸಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಸಿವಿಲ್‌ ಎಂಜಿನಿಯರಿಂಗ್‌ ವ್ಯಾಸಂಗ ಮಾಡಿದ್ದರು. ಪೊಲೀಸ್‌ ಸೇವೆಗೂ ಬರುವುದಕ್ಕೂ ಮುನ್ನ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.

2005ರಲ್ಲಿ ಕರ್ನಾಟಕ ರಾಜ್ಯ ಪೊಲೀಸ್‌ ಸೇವೆಗೆ ಆಯ್ಕೆಯಾಗಿದ್ದ ಅವರು ಡಿವೈಎಸ್‌ಪಿ, ಬೆಂಗಳೂರು ನಗರ ಅಪರಾಧ ವಿಭಾಗದಲ್ಲಿ ಡಿಸಿಪಿ, ವಿಧಾನಸೌಧ ಭದ್ರತಾ ವಿಭಾಗದಲ್ಲಿ ಡಿಸಿಪಿ, ತುಮಕೂರಿನ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಹಾಗೂ ಸಿಐಡಿ ಎಸ್‌ಪಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ಭೀಮಾತೀರದ ರೌಡಿ ಧರ್ಮರಾಜ ಚಡಚಣ ಎನ್‌ಕೌಂಟರ್‌ ಪ್ರಕರಣ, ಮಲ್ಲೇಶ್ವರಂ ಸ್ಫೋಟ, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ನಡೆದಿದ್ದ ಗುಂಡಿನ ದಾಳಿ, ನಕಲಿ ಅಂಕಪಟ್ಟಿ ಜಾಲ ಸೇರಿದಂತೆ ಹಲವು ಪ್ರಕರಣಗಳ ತನಿಖೆಯಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದಾರೆ.

ಸಿಐಡಿ ವಿಭಾಗದ ಎಸ್‌ಪಿಯಾಗಿದ್ದ ಅವರು ಲೋಕಸಭಾ ಚುನಾವಣೆಗೂ ಮುನ್ನ ಜಿಲ್ಲೆಗೆ ವರ್ಗಗೊಂಡಿದ್ದರು. ಆದರೆ, ಅವರ ಹುಟ್ಟೂರು ಎಚ್‌.ಡಿ.ಕೋಟೆ ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತಿದ್ದುದರಿಂದ ವರ್ಗಾವಣೆ ಆಗಿರಲಿಲ್ಲ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !