ಕೈತೋಟದಲ್ಲಿ ಗುಬ್ಬಚ್ಚಿಗಳ ಚಿನ್ನಾಟ...

ಬುಧವಾರ, ಏಪ್ರಿಲ್ 24, 2019
27 °C
ಮಾರ್ಚ್‌ 20 ವಿಶ್ವ ಗುಬ್ಬಿ ದಿನ

ಕೈತೋಟದಲ್ಲಿ ಗುಬ್ಬಚ್ಚಿಗಳ ಚಿನ್ನಾಟ...

Published:
Updated:
Prajavani

ಮನೆಯ ಅಂಗಳದಲ್ಲಿ ಪುಟ್ಟ ಕೈತೋಟ. ಅಲಲ್ಲಿ ಬೊಗಸೆಗಿಂತಲೂ ದೊಡ್ಡ ಆಕಾರದ ಮಣ್ಣಿನ ಮಡಕೆಗಳಲ್ಲಿ ನೀರು ತುಂಬಿಸಿ ಇಡಲಾಗಿದೆ. ಹೊರಗಡೆ ಬಿಸಿಲಿನ ತಾಪ ಏರುತ್ತಿದ್ದಂತೆ ಗುಬ್ಬಚ್ಚಿಗಳ ಗುಂಪು ಈ ಕೈ ತೋಟಕ್ಕೆ ಬರುತ್ತವೆ. ಮಡಿಕೆಗಳ ಮೇಲೆ ಕುಳಿತು ಒಂದನ್ನೊಂದು ಮುಖ ಮುಖ ನೋಡಿಕೊಳ್ಳುತ್ತವೆ. ಕೊಕ್ಕು ಅದ್ದಿ ನೀರು ಹೀರುತ್ತವೆ. ತಾಪ ತಾಳಲಾರದ ಪಕ್ಷಿಗಳು, ಮಡಕೆಯ ನೀರಿನೊಳಗಿಳಿದು ಇಳಿದು ಈಜಾಡುತ್ತವೆ. ಈ ಮಡಿಕೆಯ ನೀರೇ ಆ ಪಕ್ಷಿಗಳ ಪಾಲಿಗೆ ಸ್ವಿಮ್ಮಿಂಗ್ ಪೂಲ್...

ಗದಗ ಜಿಲ್ಲೆಯ ರೋಣ ಪಟ್ಟಣದ ಮಂಜುನಾಥ ನಾಯಕ ಮನೆಯ ಕೈತೋಟದಲ್ಲಿ ನಿತ್ಯ ಕಾಣುವ ದೃಶ್ಯವಿದು. ಮಂಜುನಾಥ್ ಅವರದ್ದು 12 ಚದರ ಅಡಿಯ ಮನೆ. ಅದರಲ್ಲಿ ಪುಟ್ಟದೊಂದು ಕೈತೋಟ ಮಾಡಿದ್ದಾರೆ. ತೋಟದಲ್ಲಿ ಬಗೆ ಬಗೆಯ ಹೂವು, ಹಣ್ಣಿನ ಗಿಡಗಳನ್ನು ಬೆಳೆಸಿದ್ದಾರೆ. ಉಳಿದ ಜಾಗದಲ್ಲಿ ಪಕ್ಷಿಗಳಿಗಾಗಿ ಒಂದಷ್ಟು ದವಸ, ಧಾನ್ಯ, ಹಣ್ಣುಗಳನ್ನು ಇಡುತ್ತಾರೆ. ಜತೆಗೆ ಅಲ್ಲಲ್ಲೇ ಮಡಕೆಯಲ್ಲಿ ನೀರು ತುಂಬಿಸಿಟ್ಟಿರುತ್ತಾರೆ. ದಣಿದು ಬರುವ ಪಕ್ಷಿಗಳು ಮಡಕೆಗಳ ಮೇಲೆ ಕುಳಿತು ನೀರು ಕುಡಿಯುತ್ತವೆ. ಹಸಿವಾಗಿರುವ ಪಕ್ಷಿಗಳು ಕಾಳುಗಳನ್ನು ತಿನ್ನುತ್ತವೆ.

ಬೇಸಿಗೆಯಲ್ಲಿ ಪಕ್ಷಿಗಳು ಸಣ್ಣ ಸಣ್ಣ ನೀರಿನ ಹೊಂಡಗಳಲ್ಲಿ ಮೈ ನೆನಸಿಕೊಳ್ಳುತ್ತವೆ. ಆದರೆ, ನಗರಗಳಲ್ಲಿ, ಪಟ್ಟಣಗಳಲ್ಲಿ ಜಲತಾಣಗಳೇ ಇಲ್ಲ ದಂತಾಗಿವೆ. ಹೀಗಾಗಿ ಮಂಜುನಾಥ್ ಅವರು ಮನೆಯಂಗಳದಲ್ಲಿ ಇಟ್ಟಿರುವ ಮಡಕೆಗಳ ಪಕ್ಷಿಗಳಿಗೆ ದಣಿವಾರಿಸಿ
ಕೊಳ್ಳುವ ತಾಣವಾಗಿವೆ. ಈ ಪಾತ್ರೆಗಳಲ್ಲಿ ಜಲಕ್ರೀಡೆಯಾಡುವ ಪಕ್ಷಿಗಳು, ನಂತರ ಕೈತೋಟದಲ್ಲಿರುವ ಗಿಡಗಳಲ್ಲಿ ಅವಿತು ಕುಳಿತು ವಿರಮಿಸಿಕೊಳ್ಳುತ್ತವೆ. ಹಸಿವಾದ ನಂತರ, ಪುನಃ ಕಾಳಿನ ತಟ್ಟೆಗೆ ಬಾಯಿ ಹಾಕುತ್ತವೆ. ಒಂದು ಗುಬ್ಬಚ್ಚಿ ಕಾಳು ಹೆಕ್ಕಿ ತಿನ್ನುತ್ತಾ ಮತ್ತೊಂದು ಗುಬ್ಬಚ್ಚಿಯ ಕೊಕ್ಕಿಗೆ ಕಾಳು ಕೊಡುವುದನ್ನು ನೋಡುವುದೇ ಒಂದು ಸಂಭ್ರಮ.

ಆಹಾರ, ನೀರು, ಸುರಕ್ಷಿತ ಆವಾಸಸ್ಥಾನವಿದ್ದರೆ ಅಂಥ ಕಡೆ ಪಕ್ಷಿಗಳ ಸಂಖ್ಯೆ ಹೆಚ್ಚಾಗಿರುತ್ತದೆ ಎನ್ನುತ್ತಾರೆ ತಜ್ಞರು. ಬಹುಶಃ ಮಂಜುನಾಥ್ ಮನೆಯಲ್ಲಿ ಇಂಥ ವಾತಾವರಣ ಇರುವುದರಿಂದಲೋ ಏನೋ, ನಿತ್ಯ ಗುಬ್ಬಚ್ಚಿಗಳು ಸೇರಿದಂತೆ ನೂರಾರು ಪಕ್ಷಿಗಳು ಕೈತೋಟಕ್ಕೆ ಬಂದು ಹೋಗುತ್ತವೆ. ಕೆಲವು ಪಕ್ಷಿಗಳಂತೂ ಕೈತೋಟದಲ್ಲೇ ಗೂಡು ಕಟ್ಟಿ ಸಂಸಾರ ಮಾಡುತ್ತಿವೆ. ಗುಬ್ಬಚ್ಚಿಗಳ ಸಂತತಿಯೇ ಕಡಿಮೆಯಾಗುತ್ತಿರುವ ಈ ಹೊತ್ತಿನಲ್ಲಿ, ಮಂಜುನಾಥ್ ಅವರ ಪಕ್ಷಿ ಪ್ರೀತಿ ಇವುಗಳ ಸಂತತಿ ರಕ್ಷಣೆಗೆ ಸಹಕಾರಿಯಾಗಿದೆ.

ಸುಮಾರು ಹನ್ನೊಂದು ವರ್ಷಗಳಿಂದ ಈ ಕಾರ್ಯದಲ್ಲಿ ತೊಡಗಿದ್ದಾರೆ ಮಂಜುನಾಥ್. ಪಕ್ಷಿಗಳಿಗೆ ಆಹಾರ ಪೂರೈಸಲು ತಿಂಗಳಿಗೆ ಸ್ವಂತ ಹಣ ಖರ್ಚು ಮಾಡುತ್ತಾರೆ. ಗಾಯಗೊಂಡ ಪಕ್ಷಿಗಳಿಗೆ ಚಿಕಿತ್ಸೆ ನೀಡುವಂತಹ ವೈದ್ಯರೂ ಆಗಿಬಿಟ್ಟಿದ್ದಾರೆ. ‘ನಮಗೆ ಹಸಿವಾದರೆ, ಬಾಯಾರಿದರೆ ಯಾರನ್ನಾದರೂ ಕೇಳಿ ನೀರು, ಆಹಾರ ಪಡೆಯತ್ತೇವೆ. ಆದರೆ ಪಕ್ಷಿಗಳಿಗೆ ಅಂಥ ಅವಕಾಶವಿಲ್ಲ. ಈಗ ಬಿಸಿಲಿನ ಧಗೆ ಹೆಚ್ಚಾಗಿದೆ. ಎಲ್ಲೂ ನೀರಿನ ಸೆಲೆ ಇಲ್ಲ. ಇಂಥ ವೇಳೆ ಪಕ್ಷಿಗಳಿಗೆ ನೀರು - ಆಹಾರ ಸಿಗುವಂತೆ ಮಾಡಿದರೆ, ಪರಿಸರದಲ್ಲಿ ಜೀವವೈವಿಧ್ಯ ಉಳಿಯುತ್ತದೆ. ಅದಕ್ಕಾಗಿಯೇ ನನ್ನ ಮನೆ ಅಂಗಳದಲ್ಲಿ ಈ ವ್ಯವಸ್ಥೆ ಮಾಡಿದ್ದೇನೆ’ ಎನ್ನುತ್ತಾ ತಮ್ಮೊಳಗಿನ ಪಕ್ಷಿ ಪ್ರೀತಿಯನ್ನು ಮಂಜುನಾಥ ನಾಯಕ ತೆರೆದಿಡುತ್ತಾರೆ.

ಗುಬ್ಬಚ್ಚಿ ದಿನದ ಹಿನ್ನೆಲೆ

ಅತಿಯಾದ ಶಬ್ದ ಮಾಲಿನ್ಯ, ಮೊಬೈಲ್ ಪೋನ್‌ಗಳ ತರಂಗಗಳು, ಕೃಷಿಯಲ್ಲಿ ರಾಸಾಯನಿಕ ಬಳಕೆ, ವಾಹನಗಳ ಮಾಲಿನ್ಯ, ಕಟ್ಟಡಗಳ ಆಧುನಿಕ ವಿನ್ಯಾಸದಿಂದಾಗಿ ಗುಬ್ಬಚ್ಚಿ ಸಂಕುಲ ಕ್ಷೀಣಿಸುತ್ತಿದೆ. ಗುಬ್ಬಚ್ಚಿಗಳ ರಕ್ಷಣೆ ಮತ್ತು ಸಂತತಿಯ ಉಳಿವಿಗಾಗಿ ಮಾರ್ಚ್ 20 ಅನ್ನು ವಿಶ್ವ ಗುಬ್ಬಚ್ಚಿ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ದಿನ ಗುಬ್ಬಚ್ಚಿಗಳ ರಕ್ಷಣೆಗೆ ಸಂಬಂಧಿಸಿದಂತೆ ದೇಶದಾ ದ್ಯಂತ ಚರ್ಚೆಗಳು ನಡೆಯುತ್ತವೆ.

ಮಾರ್ಚ್ 20, 2010ರಂದು ವಿಶ್ವ ಗುಬ್ಬಚ್ಚಿ ದಿನಾಚರಣೆ ಆರಂಭವಾಯಿತು. ನಂತರ 2012ರಲ್ಲಿ ದೆಹಲಿ ಹಾಗೂ ಇತ್ತೀಚೆಗೆ ಬಿಹಾರ ರಾಜ್ಯ ಗುಬ್ಬಚ್ಚಿಯನ್ನು ರಾಜ್ಯ ಪಕ್ಷಿಯಾಗಿ ಘೋಷಿಸಿವೆ.

 

Tags: 

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !