ಸೋಮವಾರ, ಡಿಸೆಂಬರ್ 16, 2019
18 °C
ವಿಶೇಷ ಆಯುಕ್ತರಿಗೆ ತಲಾ 2 ವಲಯಗಳ ಹೊಣೆ * ಅಧಿಕಾರ ಮರುಹಂಚಿಕೆ ಮಾಡಿ ನಗರಾಭಿವೃದ್ಧಿ ಇಲಾಖೆ ಆದೇಶ

ಬಿಬಿಎಂಪಿ ಆಯುಕ್ತರ ಅಧಿಕಾರ ಕಿತ್ತುಕೊಂಡ ನಗರಾಭಿವೃದ್ಧಿ ಇಲಾಖೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಬಿಎಂಪಿ ಆಯುಕ್ತರ ಕೆಲಸದ ಹೊರೆ ಕಡಿಮೆ ಮಾಡುವ ಸಲುವಾಗಿ ಪ್ರತಿಯೊಬ್ಬ ವಿಶೇಷ ಆಯುಕ್ತ/ ಹೆಚ್ಚುವರಿ ಆಯುಕ್ತರಿಗೆ ತಲಾ ಎರಡು ವಲಯಗಳ ಹೊಣೆಯನ್ನು ವಹಿಸಿ ನಗರಾಭಿವೃದ್ಧಿ ಇಲಾಖೆ ಸೋಮವಾರ ಆದೇಶ ಮಾಡಿದೆ.

ವಿಶೇಷ ಆಯುಕ್ತ (ಯೋಜನೆ) ಅವರಿಗೆ ಪೂರ್ವ ಹಾಗೂ ಯಲಹಂಕ ವಲಯ, ವಿಶೇಷ ಆಯುಕ್ತ (ಹಣಕಾಸು ಮತ್ತು ಮಾಹಿತಿ ತಂತ್ರಜ್ಞಾನ) ಅವರಿಗೆ ದಕ್ಷಿಣ ಮತ್ತು ರಾಜರಾಜೇಶ್ವರಿ ನಗರ, ಹೆಚ್ಚುವರಿ ಆಯುಕ್ತ (ಆಡಳಿತ) ಅವರಿಗೆ ಪಶ್ಚಿಮ ಹಾಗೂ ದಾಸರಹಳ್ಳಿ ವಲಯ, ಮತ್ತು ಹೆಚ್ಚುವರಿ ಆಯುಕ್ತ (ಕಸ ನಿರ್ವಹಣೆ) ಅವರಿಗೆ ಮಹದೇವಪುರ ಮತ್ತು ಬೊಮ್ಮನಹಳ್ಳಿ ವಲಯಗಳ ಹೊಣೆಯನ್ನು ವಹಿಸಲಾಗಿದೆ.

ಈ ಹಿಂದೆ ವಲಯ ಮಟ್ಟದಿಂದ ಆಯುಕ್ತರ ಅನುಮೋದನೆಗಾಗಿ ಸಲ್ಲಿಸುತ್ತಿದ್ದ ಪ್ರಸ್ತಾವನೆಗಳ ಕುರಿತು ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಸಂಬಂಧಪಟ್ಟ ವಿಶೇಷ ಆಯುಕ್ತರು ಅಥವಾ ಹೆಚ್ಚುವರಿ ಆಯುಕ್ತರಿಗೆ ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ವಿಶೇಷ/ ಹೆಚ್ಚುವರಿ ಆಯುಕ್ತರಿಗೆ ಹೊಸತಾಗಿ ವಹಿಸಿರುವ ಅಧಿಕಾರಗಳು

* ಉಸ್ತುವಾರಿ ನೀಡಿರುವ ವಲಯಗಳಿಗೆ ಸೀಮಿತವಾಗಿ ಕೆಎಂಸಿ ಕಾಯ್ದೆ ಅಡಿ ಈ ಹಿಂದೆ ಆಯುಕ್ತರಿಗಿದ್ದ ಎಲ್ಲ ಅಧಿಕಾರ

* ವಲಯಗಳ ಕಾಮಗಾರಿ, ಕಸ ನಿರ್ವಹಣೆ ತೋಟಗಾರಿಕೆ, ವಿದ್ಯುತ್‌, ವಲಯ ಯೋಜನೆ, ಗೃಹ ನಿರ್ಮಾಣ, ವಲಯ ನಗರ ಯೋಜನೆ, ಆಸ್ತಿ ನಿರ್ವಹಣೆ, ಕಲ್ಯಾಣ ಕಾರ್ಯಕ್ರಮ, ಶಿಕ್ಷಣ, ಅರಣ್ಯ, ಆರೋಗ್ಯ ಕುರಿತಂತೆ ಈ ಹಿಂದೆ ಆಯುಕ್ತರಿಗೆ ಇದ್ದ ಸಂಪೂರ್ಣ ಆರ್ಥಿಕ ಅಧಿಕಾರ

* ವಲಯಗಳ ಆಸ್ತಿ ತೆರಿಗೆ ಸಂಗ್ರಹ ಸೇರಿದಂತೆ ಕಂದಾಯ, ಜಾಹೀರಾತು ಮೂಲಗಳಿಂದ ಪಾಲಿಕೆಗೆ ಆದಾಯ ಕ್ರೋಡೀಕರಣ

* ಈ ಹಿಂದೆ ನೀಡಲಾಗಿದ್ದ ಅಧಿಕಾರಗಳು

ಆಯುಕ್ತರ ಬಳಿ ಉಳಿದಿರುವ ಅಧಿಕಾರಗಳು

* ನೀತಿ ನಿರೂಪಣೆಗೆ ಸಂಬಂಧಿಸಿದ ವಿಷಯಗಳು ಮತ್ತು ವಿವಿಧ ಇಲಾಖೆಗಳ ಮಧ್ಯೆ ಸಮನ್ವಯ ಹಾಗೂ ಸಮಗ್ರ ಮೇಲುಸ್ತುವಾರಿ

* ಪಾಲಿಕೆಯ ಬಜೆಟ್‌, ವಿಶೇಷ ಅನುದಾನ, ಬಜೆಟ್‌ನ ಯೋಜನೆಗಳ ಅನುಮೋದನೆ

* ವಿಶೇಷ/ ಹೆಚ್ಚುವರಿ ಆಯುಕ್ತರಿಗೆ ಹಂಚಿಕೆ ಆಗದ ಇತರ ವಿಷಯಗಳು ಅಥವಾ ಶಾಖೆಗಳು

* ಬಿಬಿಎಂಪಿ ಕೌನ್ಸಿಲ್‌ ಸಭೆ ಮತ್ತು ಸ್ಥಾಯಿ ಸಮಿತಿ ಮುಂದೆ ಮಂಡಿಸುವ ಪ್ರಸ್ತಾವಗಳು

* ಬಿಬಿಎಂಪಿ ಮತ್ತು ಸರ್ಕಾರದ ಅಥವಾ ಇತರ ಇಲಾಖೆಗಳ ನಡುವಿನ ಪತ್ರ ವ್ಯವಹಾರ

* ಸರ್ಕಾರ ಮಟ್ಟದ ಎಲ್ಲ ಸಭೆಗಳಲ್ಲಿ ಮತ್ತು ಸಮಿತಿಗಳಲ್ಲಿ ಬಿಬಿಎಂಪಿಯನ್ನು ಪ್ರತಿನಿಧಿಸುವುದು

* ಕೆಎಂಸಿ ಕಾಯ್ದೆ ಅನ್ವಯ ಆಯುಕ್ತರನ್ನು ಹೊರತುಪಡಿಸಿ ಇತರರಿಗೆ ನೀಡಿರದ ಅಧಿಕಾರಗಳು

ಯಾರಿಗೆ ಯಾವ ವಲಯದ ಹೊಣೆ

* ವಿಶೇಷ ಆಯುಕ್ತ (ಯೋಜನೆ): ಪೂರ್ವ, ಯಲಹಂಕ

* ವಿಶೇಷ ಆಯುಕ್ತ (ಹಣಕಾಸು ಮತ್ತು ಮಾಹಿತಿ ತಂತ್ರಜ್ಞಾನ): ದಕ್ಷಿಣ, ರಾಜರಾಜೇಶ್ವರಿ ನಗರ

* ಹೆಚ್ಚುವರಿ ಆಯುಕ್ತ (ಆಡಳಿತ): ಪಶ್ಚಿಮ, ದಾಸರಹಳ್ಳಿ

* ಹೆಚ್ಚುವರಿ ಆಯುಕ್ತ (ಕಸ ನಿರ್ವಹಣೆ): ಮಹದೇವಪುರ, ಬೊಮ್ಮನಹಳ್ಳಿ

ಪ್ರತಿಕ್ರಿಯಿಸಿ (+)