ಕದ್ದ ವಸ್ತು ಮಾರಿದರೆ ಅಪರಾಧವಲ್ಲ: ರೆಡ್ಡಿ

ಶುಕ್ರವಾರ, ಜೂನ್ 21, 2019
24 °C
ಕೆ.ಜನಾರ್ದನ ರೆಡ್ಡಿ ವಿರುದ್ಧದ ಸಿಬಿಐ ವಿಚಾರಣೆಗೆ ಅಸ್ತು

ಕದ್ದ ವಸ್ತು ಮಾರಿದರೆ ಅಪರಾಧವಲ್ಲ: ರೆಡ್ಡಿ

Published:
Updated:

ಬೆಂಗಳೂರು: ‘ಕಳ್ಳತನದ ಮಾಲು ಖರೀದಿ ಮಾಡಿದ್ದಾರೆ ಎಂದು ಈಗಾಗಲೇ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿರುವಾಗ ಅದೇ ಮಾಲನ್ನು ಮಾರಿದ್ದಕ್ಕೂ ಪ್ರತ್ಯೇಕ ಪ್ರಕರಣ ದಾಖಲಿಸಿ ದೋಷಾರೋಪ ಪಟ್ಟಿ ಸಲ್ಲಿಸಿರುವುದು ಕಾನೂನು ಬಾಹಿರ...’

ಅಕ್ರಮವಾಗಿ ಅದಿರು ಸಾಗಣೆ ಮಾಡಿದ ಆರೋಪ ಎದುರಿಸುತ್ತಿರುವ ಬಳ್ಳಾರಿಯ ಎಸ್‌.ಬಿ.ಲಾಜಿಸ್ಟಿಕ್‌ ಕಂಪನಿ ಪಾಲುದಾರ ಕೆ.ಜನಾರ್ದನ ರೆಡ್ಡಿ ವಿರುದ್ಧ, ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆ ರದ್ದುಗೊಳಿಸಲು ನಿರಾಕರಿಸಿರುವ ಹೈಕೋರ್ಟ್‌, ‘ಕಳ್ಳತನದ ಮಾಲು ಮಾರುವುದು ಅಪರಾಧವಲ್ಲ’ ಎಂಬ ರೆಡ್ಡಿ ವಾದವನ್ನು ತಳ್ಳಿ ಹಾಕಿದೆ.

‘ಅಧೀನ ನ್ಯಾಯಾಲಯದ ವಿಚಾರಣೆ ರದ್ದುಗೊಳಿಸಬೇಕು’ ಎಂದು ಕೋರಿ ಕೆ.ಜನಾರ್ದನ ರೆಡ್ಡಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಅಲೋಕ್‌ ಅರಾಧೆ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾ ಮಾಡಿದೆ.

ವಿಚಾರಣೆ ವೇಳೆ ರೆಡ್ಡಿ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಹಷ್ಮತ್‌ ಪಾಷ, ‘ಒಂದೇ ಆರೋಪಕ್ಕೆ ಎರಡು ದೋಷಾರೋಪ ಪಟ್ಟಿ ಸಲ್ಲಿಸಲು ಕಾನೂನಿನಲ್ಲಿ ಅವಕಾಶವಿಲ್ಲ’ ಎಂದು ಸಿಬಿಐ ನಡೆಯನ್ನು ಆಕ್ಷೇಪಿಸಿದ್ದರು.

ಇದನ್ನು ಬಲವಾಗಿ ಅಲ್ಲಗಳೆದಿದ್ದ ಸಿಬಿಐ ಪರ ವಕೀಲ ಪಿ.ಪ್ರಸನ್ನ ಕುಮಾರ್, ‘ಎರಡೂ ಪ್ರಕರಣಗಳಲ್ಲಿ ಅರ್ಜಿದಾರರ ವಿರುದ್ಧದ ಆರೋಪಗಳಿಗೆ ಬಹಳಷ್ಟು ವ್ಯತ್ಯಾಸವಿದೆ. ಹೀಗಾಗಿ ಎರಡು ದೋಷಾರೋಪ ಪಟ್ಟಿ ಸಲ್ಲಿಸಿರುವ ಸಿಬಿಐ ನಡೆ ಕಾನೂನು ಬದ್ಧವಾಗಿಯೇ ಇದೆ’ ಎಂದು ಪ್ರತಿಪಾದಿಸಿದ್ದರು.

ಪ್ರಕರಣವೇನು?: ‘ಮೆಸರ್ಸ್‌ ಎಸ್.ಬಿ.ಲಾಜಿಸ್ಟಿಕ್ ಕಂಪನಿ ಪಾಲುದಾರ ಕೆ.ಜನಾರ್ದನ ರೆಡ್ಡಿ, ಅಕ್ರಮವಾಗಿ ಹೊರತೆಗೆದ 20 ಸಾವಿರ ಮೆಟ್ರಿಕ್ ಟನ್ ಅನ್ನು 2009–10ರ ಅವಧಿಯಲ್ಲಿ ಬೇಲೇಕೇರಿ ಬಂದರಿನಿಂದ ಶಾಸಕ ಸತೀಶ್‌ ಸೈಲ್‌ ಅವರಿಗೆ ಸೇರಿದ ಮೆಸರ್ಸ್‌ಎಸ್‌ಎಂಎಸ್‌ಪಿಎಲ್ ಕಂಪನಿಗೆ ಮಾರಾಟ ಮಾಡಿದ್ದಾರೆ. ಈ ಮೂಲಕ ರಾಜ್ಯದ ಬೊಕ್ಕಸಕ್ಕೆ ₹ 90 ಕೋಟಿ ನಷ್ಟ ಉಂಟು ಮಾಡಿದ್ದಾರೆ’ ಎಂದು ಸಿಬಿಐ ದೋಷಾರೋಪ ಪಟ್ಟಿಯಲ್ಲಿ ತಿಳಿಸಿದೆ.

‘ಶಾಸಕರಾದ, ಬಿ.ನಾಗೇಂದ್ರ, ಆನಂದ ಸಿಂಗ್ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ, ಅವರ ಆಪ್ತ ಅಲಿಖಾನ್ ಮತ್ತು ಕುರುಬ ನಾಗರಾಜ್ ಅವರೊಂದಿಗೆ ಪಿತೂರಿ ನಡೆಸಿ ಈ ಅಕ್ರಮ ನಡೆಸಲಾಗಿದೆ’ ಎಂಬುದು ಸಿಬಿಐ ಆರೋಪ.

‘ಈ ಸಂಬಂಧ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆ ರದ್ದುಪಡಿಸಬೇಕು’ ಎಂದು ಕೋರಿ ಕೆ.ಜನಾರ್ದನ ರೆಡ್ಡಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !