ಶನಿವಾರ, ಫೆಬ್ರವರಿ 27, 2021
31 °C

ಮಳೆಗಾಗಿ ಪ್ರಾರ್ಥಿಸಿ ವಿಶೇಷ ಪೂಜೆ, ಅನ್ನ ಸಂತರ್ಪಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಕೆ.ಗುಡಿ ಬಿಆರ್‌ಟಿ ಹುಲಿ ರಕ್ಷಿತ ವಲಯದ ಕುಂಟಗುಡಿ ಕ್ಯಾತೇದೇವರ ದೇವಸ್ಥಾನದಲ್ಲಿ ತಾಲ್ಲೂಕಿನ ನಲ್ಲೂರು, ಹೊಂಡರಬಾಳು ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಮಳೆಗಾಗಿ ಪ್ರಾರ್ಥಿಸಿ ಸೋಮವಾರ ವಿಶೇಷ ಪೂಜೆ ಸಲ್ಲಿಸಿ, ಅನ್ನ ಸಂತರ್ಪಣೆ ನಡೆಸಿದರು.

ಸಂಪ್ರದಾಯ: ಮಳೆಗಾಗಿ ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸುವ ಪದ್ಧತಿಯನ್ನು ಅನೇಕ ವರ್ಷದಿಂದಲೂ ಹಿರಿಯರು ಮಾಡಿಕೊಂಡು ಬರುತ್ತಿದ್ದಾರೆ. ಅದರಂತೆ ಭಾನುವಾರ ಸಂಜೆಯಿಂದಲೇ ಎಲ್ಲರೂ ಪೂಜೆಗೆ ತಯಾರಿ ಮಾಡಿಕೊಂಡಿದ್ದೆವು. ಸೋಮವಾರ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಪೂಜಾಕೈಂಕರ್ಯಗಳು, ಅಭಿಷೇಕ ನಡೆಯಿತು. ನಂತರ ಅನ್ನಸಂತರ್ಪಣೆ ನಡೆಯಿತು. ಇಲ್ಲಿನ ಸೋಲಿಗರೂ ಊಟ ಮಾಡಿ ಹೋಗುತ್ತಾರೆ ಎಂದು ನಲ್ಲೂರು ಗ್ರಾಮದ ಸೋಮಶೇಖರ್‌ ಹೇಳಿದರು.

ಮಳೆಯಾಗುವ ನಂಬಿಕೆ: ಕಾಲ ಕಾಲಕ್ಕೆ ಮಳೆಯಾದರೆ ನಾಡಿಗೆ ಒಳಿತು ಆಗುತ್ತದೆ. ಮಳೆ ವಿಳಂಬವಾದಾಗ ಕೂಡಲೇ ಗ್ರಾಮಸ್ಥರೆಲ್ಲರೂ ಈ ದೇವಸ್ಥಾನಕ್ಕೆ ಬಂದು ಪರ್ವ ಮಾಡಿ ಅಡುಗೆ ತಯಾರಿಸಿ ಅನ್ನ ಸಂತರ್ಪಣೆ ಮಾಡುತ್ತೇವೆ. ವಿಶೇಷ ಪೂಜೆ ಸಲ್ಲಿಸಿದ ಮೂರು ಅಥವಾ ನಾಲ್ಕು ದಿನದಲ್ಲಿ ಮಳೆಯಾಗುತ್ತದೆ ಎನ್ನುವ ನಂಬಿಕೆ ಇದೆ ಎಂದು ಗ್ರಾಮಸ್ಥರು ಹೇಳಿದರು.

ಅರಣ್ಯ ಇಲಾಖೆ ಸಹಕಾರ: ಸ್ವಚ್ಛತೆಯೊಂದಿಗೆ ಶಾಂತಿಯುತವಾಗಿ ಪೂಜೆ ಸಲ್ಲಿಸಿ ಊಟ ಮುಗಿಸಿ ಹೋಗುತ್ತೇವೆ. ಇದರಿಂದ ಅರಣ್ಯ ಇಲಾಖೆ ಸಿಬ್ಬಂದಿ ನಮಗೆ ಸಹಕಾರ ನೀಡುತ್ತಿದ್ದಾರೆ. ಸೌದೆ ಹೆಚ್ಚು ಬಳಕೆ ಮಾಡಬಾರದೆಂದು ಸಿಲಿಂಡರ್‌ ನೀಡಿದ್ದಾರೆ ಎಂದು ಮುಖಂಡರು ಹೇಳಿದರು.

ಸ್ವಚ್ಛತೆ: ಅನ್ನಸಂತರ್ಪಣೆ ಬಳಿಕ ಊಟದ ಎಲೆ ಹಾಗೂ ಲೋಟಗಳನ್ನು ಟ್ರಾಕ್ಟರ್‌ನಲ್ಲಿ ಹಾಕುವಂತೆ ಹೇಳುತ್ತಿದ್ದರು. ಟ್ರ್ಯಾಕ್ಟರ್‌ ಬಳಿ ಒಬ್ಬರು ನಿಂತು ಎಲೆಗಳನ್ನು ಇರಿಸುತ್ತಿದ್ದರು. ಕುಡಿಯುವ ನೀರಿಗಾಗಿ ಟ್ಯಾಂಕರ್‌ನಲ್ಲಿ ನೀರು ತಂದಿದ್ದರು. ಹೀಗೆ ಗ್ರಾಮಸ್ಥರು ಅರಣ್ಯದಲ್ಲಿ ಸ್ವಚ್ಛತೆ ಕಾಪಾಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು