ಶ್ರಾವಣ ಶನಿವಾರ: ವಿಶೇಷ ಪೂಜೆಗೆ ಸಿದ್ಧತೆ

7
ಬಿಳಿಗಿರಿರಂಗನಾಥ ಸ್ವಾಮಿ ಬೆಟ್ಟಕ್ಕೆ ಹರಿದು ಬರಲಿದೆ ಭಕ್ತರ ದಂಡು

ಶ್ರಾವಣ ಶನಿವಾರ: ವಿಶೇಷ ಪೂಜೆಗೆ ಸಿದ್ಧತೆ

Published:
Updated:
Deccan Herald

ಯಳಂದೂರು: ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆಯೇ ಜಿಲ್ಲೆಯಾದ್ಯಂತ ದೇವಾಲಯಗಳಲ್ಲಿ ಧಾರ್ಮಿಕ ಚಟುವಟಿಕೆಗಳು ಆರಂಭವಾಗಿವೆ. ಶ್ರಾವಣ ತಿಂಗಳಲ್ಲಿ ಬರುವ ಶನಿವಾರಗಳಂದು ದೇವಾಲಯಗಳಲ್ಲಿ ವಿಶೇಷ ‍ಪೂಜೆ ನಡೆಯುತ್ತದೆ.  

ಆ ದಿನಗಳಲ್ಲಿ ಭಕ್ತರು ದೇವಾಲಯಗಳಿಗೆ ಭೇಟಿ ವಿಶೇಷ ಪೂಜೆ ಸಲ್ಲಿಸುವ ಸಂಪ್ರದಾಯ ಶತಮಾನಗಳಿಂದ ಚಾಲ್ತಿಯಲ್ಲಿದೆ. ಇಂದು ಮೊದಲ ಶ್ರಾವಣ ಶನಿವಾರದ ಸಂಭ್ರಮವಾಗಿದ್ದು, ದೇಗುಲಗಳಲ್ಲಿ ಸಿದ್ಧತೆ ಜೋರಾಗಿದೆ.

ಶ್ರಾವಣ ಮಾಸದಲ್ಲಿ ಜಿಲ್ಲೆಯ ಪ್ರಮುಖ ಶ್ರದ್ಧಾಭಕ್ತಿಯ ತಾಣವಾದ ಬಿಳಿಗಿರಿರಂಗನಾಥನ ಬೆಟ್ಟಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಅವರವರ ಭಕ್ತಿಗೆ ಅನುಸಾರ ಹರಕೆ ಹೊತ್ತು, ದೇವರಿಗೆ ಅರ್ಪಿಸಿ ಕೃತಾರ್ಥರಾಗುತ್ತಾರೆ.

ರಂಗನಾಮ ಸ್ಮರಣೆ: ಶ್ರಾವಣ ಮಾಸದಲ್ಲಿ ದಾಸರು ಹಳದಿ ವಸ್ತ್ರ ಧರಿಸಿ ಜಾಗಟೆ ಮತ್ತು ಶಂಖನಾದ ಮೊಳಗಿಸುತ್ತಾ ಮನೆ ಮನೆಗೆ ಭಿಕ್ಷಾಟನೆಗೆ ತೆರಳುವ ಸಂಪ್ರದಾಯವಿದೆ. ಈ ಸಮಯದಲ್ಲಿ ಅವರು ರಂಗನ ಗುಣಗಾನ ಮಾಡುತ್ತಾರೆ.

ದಾಸರ ಕಲರವ:  ಬಹುತೇಕ ರಂಗಪ್ಪನ ಒಕ್ಕಲಿನವರಿಗೆ ಇದು ವಿಶೇಷ ಹಬ್ಬ. ದಾಸರು ಬಿಳಿಗಿರಿರಂಗನಾಥನ ಬೆಟ್ಟದಲ್ಲಿ ‘ಬೇಟೆಮನೆ’ ಹಾಗೂ ‘ಆಪಾರಕ್‌ ಗೋಪರಾಕ್‌’ ಹರಕೆಯನ್ನು ನೆರವೇರಿಸುತ್ತಾರೆ. ನೈವೇದ್ಯ ಮಾಡಿದ ನೆನೆಸಿದ ಅಕ್ಕಿ, ಬೆಲ್ಲ, ಎಳ್ಳು, ಕಾಯಿ ಸೇರಿಸಿ ನಾಲ್ಕು ದಿಕ್ಕಿನಲ್ಲಿ ನಾಲ್ಕು ಹಿಡಿ ಇಡಲಾಗುತ್ತದೆ. ನೈವೇದ್ಯವನ್ನು ಮೂರು ಸುತ್ತು ಬಳಸಿದ ದಾಸರು ಹೋರಾಟ ಮಾಡುತ್ತಾ ಅದನ್ನು ತಿನ್ನುತ್ತಾರೆ. ಇಲ್ಲಿಗೆ ಭಕ್ತರ ಹರಕೆ ತೀರುತ್ತದೆ.

ಸಿದ್ಧತೆ: ‘ಶ್ರಾವಣ ಮಾಸದಲ್ಲಿ ಭಕ್ತರ ಸಂಖ್ಯೆ ಹೆಚ್ಚಿರುತ್ತದೆ. ಹಾಗಾಗಿ ಯಳಂದೂರಿನಿಂದ ಹೆಚ್ಚು ಬಸ್‌ಗಳನ್ನು ಓಡಿಸಲಾಗುತ್ತದೆ. ಭಕ್ತರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಸಿದ್ಧತೆ ಮಾಡಲಾಗಿದೆ. ದೇವಾಲಯದ ನವೀಕರಣ ಕಾರ್ಯ ನಡೆಯುತ್ತಿರುವುದರಿಂದ ಕೆಲವು ಸಾಂಪ್ರದಾಯಿಕ ಆಚರಣಗಳು ಮಿತಿಗೊಂಡಿವೆ. ಮಾರ್ಚ್‌ ವೇಳೆಗೆ ನವೀಕೃತ ದೇವಾಲಯ ತೆರೆಯಲಿದೆ’ ಎನ್ನುತ್ತಾರೆ ದೇಗುಲದ ಕಾರ್ಯಾ ನಿರ್ವಾಹಕ ಅಧಿಕಾರಿ ಎಂ.ಎಸ್‌. ವೆಂಕಟೇಶ್ ಪ್ರಸಾದ್.

ನೆರವಿನ ಮಹಾಪೂರ: ನೂತನ ದೇವಾಲಯ ನಿರ್ಮಾಣಕ್ಕಾಗಿ ಭಕ್ತರಿಂದ ಭಾರಿ ಪ್ರಮಾಣದಲ್ಲಿ ಕೊಡುಗೆಗಳು ಬಂದಿವೆ. ಮೈಸೂರು ವರುಣದ ಮರಿಗೌಡನಹುಂಡಿಯ ಶಿವಕುಮಾರ್‌ ₹25 ಲಕ್ಷ ವೆಚ್ಚದಲ್ಲಿ ತೇಗದ 9 ಬಾಗಿಲು. ಬೆಂಗಳೂರಿನ ಉಮಾ ವಿಶ್ವನಾಥ್‌ ಕುಟುಂಬ ₹5 ಲಕ್ಷ ಬೆಲೆಯ 4 ದೊಡ್ಡ ದೀಪಾಲೆ ಕಂಬ ಹಾಗೂ 4 ತೂಗುದೀಪ ಸೇರಿದಂತೆ ಹಲವಾರು ಭಕ್ತರು ಅಗತ್ಯವಾದ ವಸ್ತುಗಳನ್ನು ಕೊಡುಗೆಯಾಗಿ ನೀಡಿದ್ದಾರೆ.

ಚಾಮರಾಜನಗರದಲ್ಲೂ ವಿಶೇಷ ಪೂಜೆ

ಶ್ರಾವಣ ಶನಿವಾರಗಳಂದು ಚಾಮರಾಜನಗರ ತಾಲ್ಲೂಕಿನ ಕರಿವರದರಾಜನ ಬೆಟ್ಟದಲ್ಲಿರುವ ಕರಿವರದರಾಜ ಸ್ವಾಮಿ ದೇವಾಲಯ, ಹರಳಕೋಟೆಯ ಆಂಜನೇಯ ಸ್ವಾಮಿ ಹಾಗೂ ಜನಾರ್ದನ ಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯುತ್ತವೆ. ನೂರಾರು ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !