ಅತೃಪ್ತರ ಸಭೆಗಳಿಗೆ ಕಾಂಗ್ರೆಸ್‌ ‘ಉಸ್ತುವಾರಿ’ಯ ಬ್ರೇಕ್

7
ಶಾಸಕರ ದೂರು ಆಲಿಸಿದ ಕೆ.ಸಿ.ವೇಣುಗೋಪಾಲ್ * ಜಮೀರ್, ಖಾದರ್‌ಗೆ ನಾಯಕತ್ವದ ಗುಣ ಇಲ್ಲ; ತನ್ವೀರ್ ಸೇಠ್

ಅತೃಪ್ತರ ಸಭೆಗಳಿಗೆ ಕಾಂಗ್ರೆಸ್‌ ‘ಉಸ್ತುವಾರಿ’ಯ ಬ್ರೇಕ್

Published:
Updated:
ಅತೃಪ್ತರ ಸಭೆಗಳಿಗೆ ಕಾಂಗ್ರೆಸ್‌ ‘ಉಸ್ತುವಾರಿ’ಯ ಬ್ರೇಕ್

ಬೆಂಗಳೂರು: ‘ಪಕ್ಷದ ಅನುಮತಿ ಇಲ್ಲದೆ ಪ್ರತ್ಯೇಕ ಸಭೆಗಳನ್ನು ನಡೆಸಲು ಯಾರಿಗೂ ಅಧಿಕಾರವಿಲ್ಲ. ಎಲ್ಲರ ನಡೆಯನ್ನೂ ಹೈಕಮಾಂಡ್ ಗಮನಿಸುತ್ತಿದೆ. ಇಷ್ಟರ ಮೇಲೂ ಮಾತು ಮೀರುವುದಾದರೆ, ಕಟ್ಟುನಿಟ್ಟಿನ ಕ್ರಮ ಎದುರಿಸಲು ಸಜ್ಜಾಗಿ’ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಪಕ್ಷದ ಅತೃಪ್ತ ಶಾಸಕರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಸಮ್ಮಿಶ್ರ ಸರ್ಕಾರದ ಮೊದಲ ‘ಸಮನ್ವಯ ಸಮಿತಿ ಸಭೆ’ಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಬಂದಿದ್ದ ಅವರು, ಗುರುವಾರ ಬೆಳಿಗ್ಗೆ ಕುಮಾರಕೃಪಾ ವಸತಿಗೃಹದಲ್ಲಿ ಶಾಸಕರ ದೂರು–ದುಮ್ಮಾನಗಳನ್ನು ಆಲಿಸಿದ್ದಾರೆ. ಇದೇ ವೇಳೆ, ‘ಅತೃಪ್ತರ ಸಭೆ ಹೆಸರಿನಲ್ಲಿ ಪಕ್ಷಕ್ಕೆ ಮುಜುಗರ ತರಬೇಡಿ’ ಎಂದು ಹೇಳುವ ಮೂಲಕ ಬಹಿರಂಗ ಭಿನ್ನಮತ ಪ್ರದರ್ಶನಕ್ಕೆ ಬ್ರೇಕ್ ಹಾಕಿದ್ದಾರೆ.

ಖಾತೆ ಹಂಚಿಕೆ ನಂತರ ಎಂ.ಬಿ.ಪಾಟೀಲ ಬಣ ಅಸಮಾಧಾನ ಹೊರಹಾಕಿದ್ದ ಬೆನ್ನಲ್ಲೇ, ಶಾಸಕ ಎಚ್.ಕೆ.ಪಾಟೀಲ ನೇತೃತ್ವದಲ್ಲಿ ಮತ್ತೊಂದು ಬಣ ಶಕ್ತಿ ‍ಪ್ರದರ್ಶಿಸಲು ಸಜ್ಜಾಗಿತ್ತು. ವೇಣುಗೋಪಾಲ್ ಆದೇಶದ ಬಳಿಕ ಅತೃಪ್ತರ ಎಲ್ಲ ಸಭೆಗಳೂ ರದ್ದಾಗಿವೆ.

‘ಸಮಸ್ಯೆಗಳನ್ನು ಪಕ್ಷದ ಆಂತರಿಕ ಸಭೆಗಳಲ್ಲೇ ಬಗೆಹರಿಸಿಕೊಳ್ಳೋಣ’ ಎಂಬ ತೀರ್ಮಾನಕ್ಕೆ ಶಾಸಕರು ಬಂದಿದ್ದಾರೆ ಎಂದು ಅತೃಪ್ತ ಬಣದ ನೇತೃತ್ವ ವಹಿಸಿದ್ದ ಹಿರಿಯ ನಾಯಕರೊಬ್ಬರು ತಿಳಿಸಿದರು.

ಅಸಮಾಧಾನದ ಹೊಗೆ..: ‘ನಮಗೂ ಸಚಿವ ಸ್ಥಾನ ನೀಡಿ. ಇಲ್ಲವೆ, ಅದಕ್ಕೆ ಸರಿಹೊಂದುವಂಥ ಬೇರೆ ಯಾವುದಾದರೂ ಜವಾಬ್ದಾರಿ ಕೊಡಿ’ ಎಂದು ಅತೃಪ್ತ ಶಾಸಕರು ವೇಣುಗೋಪಾಲ್ ಅವರಲ್ಲಿ ಮನವಿ ಮಾಡಿದರು.

ಅವರ ಭೇಟಿ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್, ‘ಜಮೀರ್ ಅಹಮದ್ ಖಾನ್‌ ಹಾಗೂ ಯು.ಟಿ.ಖಾದರ್‌ಗೆ ನಮ್ಮ ಸಮುದಾಯವನ್ನು ಪ್ರತಿನಿಧಿಸುವ ಸಾಮರ್ಥ್ಯವಿಲ್ಲ. ಅರ್ಹತೆ ಇಲ್ಲದವರಿಗೆಲ್ಲ ಸಂಪುಟದಲ್ಲಿ ಸ್ಥಾನ ಕಲ್ಪಿಸಲಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಬೇರೆ ಪಕ್ಷದಿಂದ ಬಂದಿರುವ ಜಮೀರ್‌ಗೆ ಸಚಿವ ಸ್ಥಾನ ನೀಡಲಾಗಿದೆ. ಚುನಾವಣೆಯಲ್ಲಿ ನನ್ನನ್ನೇ ಸೋಲಿಸಲು ಯತ್ನಿಸಿದ್ದವರು ಅವರು. ಈ ಎಲ್ಲ ಸೂಕ್ಷ್ಮತೆಗಳನ್ನು ವೇಣುಗೋಪಾಲ್ ಮಾತ್ರವಲ್ಲದೆ ಹೈಕಮಾಂಡ್ ಗಮನಕ್ಕೂ ತಂದಿದ್ದೇನೆ. ಹಾಗೆಯೇ, ಸಮುದಾಯವನ್ನು ಪ್ರತಿನಿಧಿಸುವಂಥ ಇನ್ನೊಬ್ಬ ಮುಸ್ಲಿಂ ನಾಯಕನಿಗೆ ಸಚಿವ ಸ್ಥಾನ ನೀಡಬೇಕೆಂಬ ಮನವಿಯನ್ನೂ ಮಾಡಿದ್ದೇನೆ’ ಎಂದರು.

ಗದಗ ಕ್ಷೇತ್ರದ ಎಚ್‌.ಕೆ.ಪಾಟೀಲ, ‘ನನ್ನ ಹಾಗೂ ಆಪ್ತ ಶಾಸಕರ ಅಭಿಪ್ರಾಯಗಳನ್ನು ವೇಣುಗೋಪಾಲ್ ಗಮನಕ್ಕೆ ತಂದಿದ್ದೇನೆ. ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿಸುವುದಾಗಿ ಭರವಸೆ ನೀಡಿದ್ದಾರೆ. ಶೀಘ್ರದಲ್ಲೇ ಎಲ್ಲ ಸಮಸ್ಯೆಗಳೂ ಬಗೆಹರಿಯಲಿವೆ’ ಎಂದರು.

ಕುಂದಗೋಳದ ಸಿ.ಎಸ್.ಶಿವಳ್ಳಿ, ‘ನಾನು ಉತ್ತರ ಕರ್ನಾಟಕ ಭಾಗದ ಹಿರಿಯ ಶಾಸಕ. ಹೀಗಾಗಿ, ಮೊದಲ ಹಂತದಲ್ಲಿ ಸಚಿವ ಸ್ಥಾನ ಸಿಗುತ್ತದೆ ಎಂದು ಭಾವಿಸಿದ್ದೆ. ಎರಡನೇ ಸುತ್ತಿನಲ್ಲಾದರೂ ಅವಕಾಶ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದೇನೆ. ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ. ನನ್ನ ಹೆಸರನ್ನು ವೇಣುಗೋಪಾಲ್ ಪರಿಗಣಿಸಿರುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ, ‘ನನ್ನ ಸೋದರ ಸತೀಶ ಜಾರಕಿಹೊಳಿ ಮೂರೂವರೆ ವರ್ಷ ಸಚಿವರಾಗಿದ್ದರು. ಆಗ ನಾನು ಎಂದೂ ಆಕ್ಷೇಪ ಎತ್ತಿರಲಿಲ್ಲ. ಆದರೀಗ, ನನಗೆ ಸಚಿವ ಸ್ಥಾನ ಸಿಕ್ಕಿರುವುದಕ್ಕೆ ಅಸಮಾಧಾನ ಹೊರ ಹಾಕುತ್ತಿರುವುದು ಸರಿಯಲ್ಲ. ನಮ್ಮಿಬ್ಬರ ಸಮಸ್ಯೆಯಿಂದ ಬೆಳಗಾವಿ ಜಿಲ್ಲೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿದೆ ಎಂದು ಕೆಲವರು ಟೀಕೆ ಮಾಡಿದ್ದಾರೆ. ಆದರೆ, ಜಿಲ್ಲೆಯಲ್ಲಿ ಶಾಸಕರ ಸಂಖ್ಯೆ 6ರಿಂದ 8ಕ್ಕೆ ಏರಿಕೆಯಾಗಿದೆ. ನಮ್ಮಿಂದ ಪಕ್ಷಕ್ಕೆ ಎಂದೂ ತೊಂದರೆ ಆಗಲ್ಲ’ ಎಂದರು.

ಎಂ.ಬಿ.ಪಾಟೀಲ, ಪಿ.ಟಿ.ಪರಮೇಶ್ವರನಾಯ್ಕ, ಬಿ.ಸಿ.ಪಾಟೀಲ, ಸತೀಶ ಜಾರಕಿಹೊಳಿ, ವಿ.ಮುನಿಯಪ್ಪ ಅವರು ವೇಣುಗೋಪಾಲ್ ಅವರನ್ನು ಭೇಟಿಯಾದರು.

ನಿಗಮ ಮಂಡಳಿಗೆ ಬೇಡಿಕೆ: ‘ಸಿದ್ದರಾಮಯ್ಯ ಆಡಳಿತದಲ್ಲಿ ನೇಮಕಗೊಂಡಿದ್ದ ನಾವು, 18 ತಿಂಗಳ ಕಾಲಾವಕಾಶ ಪೂರ್ಣಗೊಳಿಸಿಲ್ಲ. ಸಮ್ಮಿಶ್ರ ಸರ್ಕಾರ ರಚನೆಯಾಗುತ್ತಿದ್ದಂತೆಯೇ ನಮ್ಮ ಅಧಿಕಾರ ಹೋಗಿದೆ. ಹೀಗಾಗಿ, ಆ ಸ್ಥಾನಗಳಿಗೆ ನಮ್ಮನ್ನೇ ಮುಂದುವರಿಸಬೇಕು’ ಎಂದು ನಿಗಮ ಮಂಡಳಿ ಮಾಜಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ವೇಣುಗೋಪಾಲ್ ಅವರಿಗೆ ಮನವಿ ಸಲ್ಲಿಸಿದರು.

ಸಚಿವರ ಕಾರ್ಯವೈಖರಿ ಮೌಲ್ಯಮಾಪನ

‘ಸದ್ಯಕ್ಕಂತೂ ಸಂಪುಟ ಪುನರ್‌ರಚನೆ ಮಾಡುವುದಿಲ್ಲ. ಆರು ತಿಂಗಳ ಬಳಿಕ ಸಚಿವರ ಕಾರ್ಯವೈಖರಿಯನ್ನು ಮೌಲ್ಯಮಾಪನ ಮಾಡುತ್ತೇವೆ. ತೃಪ್ತಿ ಎನಿಸದಿದ್ದರೆ, ಅಂಥವರನ್ನು ಬದಲಾವಣೆ ಮಾಡುತ್ತೇವೆ. ಉಳಿದ ಸಚಿವ ಸ್ಥಾನಗಳ ಭರ್ತಿ ಕಾರ್ಯ ಸದ್ಯದಲ್ಲೇ ನಡೆಯಲಿದ್ದು, ಮೊದಲ ಬಾರಿಗೆ ಶಾಸಕರಾದವರನ್ನು ಆಯ್ಕೆ ಮಾಡುವುದಿಲ್ಲ’ ಎಂದು ವೇಣುಗೋಪಾಲ್ ಸ್ಪಷ್ಟಪಡಿಸಿದರು.

‘ಹೊಟ್ಟೆ ಕಿಚ್ಚಿಗೆ ಮದ್ದಿಲ್ಲ’

‘ಲಕ್ಷ್ಮಿ ಅವರ ಪದಪ್ರಯೋಗ ಸರಿಯಿಲ್ಲ. ಅದು ರಾಹುಲ್ ಗಾಂಧಿ ಅವರ ನಿರ್ಧಾರವನ್ನೇ ಪ್ರಶ್ನಿಸುವಂತಿದೆ. ಜಗತ್ತಿನಲ್ಲಿ ಎಲ್ಲ ಕಾಯಿಲೆಗಳಿಗೂ ಔಷಧಗಳಿವೆ. ಆದರೆ, ಹೊಟ್ಟೆಕಿಚ್ಚಿಗೆ ಯಾವುದೇ ಮದ್ದಿಲ್ಲ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಜಯಮಾಲಾ ತಿರುಗೇಟು ನೀಡಿದರು.

‘ಜಯಮಾಲಾ ಅವರ ಸೇವೆ ಪಕ್ಷದ ನಾಯಕರಿಗೆ ಇಷ್ಟವಾಗಿರಬಹುದು’ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ ಟೀಕಿಸಿದ್ದರು. ಇದಕ್ಕೆ ಸಚಿವೆ ಕಟುವಾಗಿಯೇ ಪ್ರತಿಕ್ರಿಯೆ ನೀಡಿದರು.

‘ಕಾಂಗ್ರೆಸ್‌ಗೆ ಶಕ್ತಿ ತುಂಬಿದ ಇಂದಿರಾಗಾಂಧಿ ಹಾಗೂ ಸೋನಿಯಾ ಗಾಂಧಿ ಸಹ ಮಹಿಳೆಯರೇ. ಇವರು ಪಕ್ಷಕ್ಕೆ ಮರು ಚೇತನ ನೀಡಿದ್ದಾರೆ. ಹಾಗೆಯೇ, ಪರಿಷತ್ ಸಭಾ ನಾಯಕಿಯಾಗಿ ಕೆಲಸ ಮಾಡುವ ಶಕ್ತಿ ನನಗಿದೆ. ರಾಜಕೀಯ ಗೊತ್ತಿಲ್ಲದೆ ಬಂದವಳಲ್ಲ’ ಎಂದು ಜಯಾಮಾಲಾ ಆಕ್ರೋಶದಿಂದಲೇ ಹೇಳಿದರು.

* ಕೆಪಿಸಿಸಿ ಅಧ್ಯಕ್ಷರನ್ನು ಯಾವಾಗ ಬದಲಾವಣೆ ಮಾಡಬೇಕು ಎಂಬುದನ್ನು ರಾಹುಲ್ ಗಾಂಧಿ ತೀರ್ಮಾನ ತೆಗೆದುಕೊಳ್ಳುತ್ತಾರೆ

- ಕೆ.ಸಿ.ವೇಣುಗೋಪಾಲ್, ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry