ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನ ನಾಪತ್ತೆ: ಶೋಧಕ್ಕೆ ದೈತ್ಯ ಸವಾಲು

Last Updated 24 ಮೇ 2014, 19:30 IST
ಅಕ್ಷರ ಗಾತ್ರ

ನಿಗೂಢವಾಗಿ ನಾಪತ್ತೆಯಾದ ಮಲೇಷ್ಯಾ ವಿಮಾನ, ವಿಜ್ಞಾನದಲ್ಲಿ ಮಾನವನ ಸಾಧನೆಗಳನ್ನು ಒಂದು ಹಿಡಿಯಲ್ಲಿ ನಿವಾಳಿಸಿ ಹಾಕಿತೆ? ಮಾನವ ಪ್ರಕೃತಿ ಮುಂದೆ ಇನ್ನೂ ಕುಬ್ಜ ಎಂದು ಅಣಕವಾಡಿತೆ? ತನಿಖೆ ಮತ್ತು ಶೋಧ ಕಾರ್ಯದ ದಿಕ್ಕುದಿಸೆಯನ್ನು ಕ್ಷಣ ಕ್ಷಣಕ್ಕೂ ತಪ್ಪಿಸಿದ, ಇದೇ ಹೊತ್ತಿಗೆ ತಿಂಗಳುಗಟ್ಟಲೆ ನಡೆದ ಭಾರಿ ಕಾರ್ಯಾಚರಣೆಯಿಂದ ಕೋಟಿಗಟ್ಟಲೆ ಹಣವನ್ನು ಸಾಗರದಲ್ಲಿ ಹೋಮ ಮಾಡಿದಂತಾಗಿದೆ.ನಿಗೂಢವಾಗಿ ಕಣ್ಮರೆಯಾದ ಮಲೇಷ್ಯಾ ವಿಮಾನ ಇಡೀ ಮಾಹಿತಿ ತಂತ್ರಜ್ಞಾನ ರಂಗಕ್ಕೇ ಕಠಿಣ ಸವಾಲೊಡ್ಡುತ್ತದೆ ಎಂದು ಬಹುಶಃ ಯಾರೂ ಭಾವಿಸಿರಲಿಲ್ಲ.

ಇದು ವಿಮಾನ ಅಪಹರಣದ ಕೃತ್ಯ, ಭಯೋತ್ಪಾದಕರೇ ಇದನ್ನು ಮಾಡಿರಬಹುದು ಎಂಬುದೇ ಮೊದಲು ಎಲ್ಲರ ಶಂಕೆ ಆಗಿತ್ತು. ಮೂರು ನಾಲ್ಕು ದಿನ ಕಳೆದರೂ ಈ ಅಂಶ ದೃಢವಾಗದಿದ್ದಾಗ ಸಂಶಯ ಪೈಲಟ್‌,  ಸಿಬ್ಬಂದಿ ವರ್ಗ ಮತ್ತು ಪ್ರಯಾಣಿಕರ ಮೇಲೆ ಮೂಡಿತು. ತಾಂತ್ರಿಕ ದೋಷದಿಂದ ವಿಮಾನ ಸ್ಫೋಟಗೊಂಡಿರಬೇಕು... ಈ ರೀತಿ ಏನೆಲ್ಲಾ ಸಂದೇಹಗಳು ಅಧಿಕಾರಸ್ಥರಲ್ಲಿ ಮನೆ ಮಾಡಿದವು. ಆದರೆ, ಇದ್ಯಾವುದೂ ಸ್ಥಿರಗೊಳ್ಳಲಿಲ್ಲ.

ವಿಮಾನ ನಾಪತ್ತೆಯಾಗಿ ಹತ್ತು ವಾರಗಳು ಕಳೆದರೂ ಅದರ ಭಗ್ನಾವಶೇಷಗಳಿರಲಿ, ವಿಮಾನ ನಾಪತ್ತೆಗೆ ನಿಖರ ಕಾರಣ ಇನ್ನೂ ಗೊತ್ತೇ ಆಗಿಲ್ಲ! ವಿಮಾನದ ಬಗ್ಗೆ ಕರಾರುವಾಕ್ಕು ಸುಳಿವು ನೀಡುವಂತಹ ಯಾವುದೇ ಮಾಹಿತಿಯೂ ಲಭ್ಯವಾಗಿಲ್ಲ.

ದಿನದಿಂದ ದಿನಕ್ಕೆ ಎದುರಾದ ಕಠಿಣ ಸವಾಲುಗಳು, ಗೊಂದಲ ಮೂಡಿಸುವ ಅರೆಬರೆ ಮಾಹಿತಿಗಳು ವಿಮಾನ ಶೋಧ ಕಾರ್ಯ ಮತ್ತು ವಿಮಾನದ ಭಗ್ನಾವಶೇಷಕ್ಕೆ ಅವಿರತ ಹುಡುಕಾಟ ನಡೆಸಿದ ಅಂತರರಾಷ್ಟ್ರೀಯ ಮಟ್ಟದ ತನಿಖಾ ತಂಡಗಳನ್ನು ಕಂಗಾಲು ಮಾಡಿದ್ದು ಸುಳ್ಳಲ್ಲ.

ಅಂಡಮಾನ್‌ ಸಮುದ್ರದಿಂದ ದಕ್ಷಿಣ ಚೀನಾ ಸಮುದ್ರದವರೆಗೆ, ದಕ್ಷಿಣ ಹಿಂದೂ ಮಹಾಸಾಗರದ ಪರ್ಯಂತ ಹಾಗೂ ಉತ್ತರದ ಕಜಕಸ್ತಾನ, ತುರ್ಕಮೇನಿಸ್ತಾನಗಳ ಗಡಿಯಿಂದ ದಕ್ಷಿಣದ ಶ್ರೀಲಂಕಾ, ಇಂಡೊನೇಷ್ಯಾಗಳಿಂದ ನ್ಯೂಜಿಲೆಂಡ್‌ ಅಂಚಿನವರೆಗೆ 11 ರಾಷ್ಟ್ರಗಳ  ಭೂ, ಜಲ ಗಡಿಗಳಲ್ಲಿ ತಡಕಾಡಿದರೂ ವಿಮಾನದ ಬಗ್ಗೆ ನಿಖರ ಸುಳಿವು ದೊರಕಲೇ ಇಲ್ಲ. 26 ರಾಷ್ಟ್ರಗಳ ಸಹಯೋಗದಲ್ಲಿ ವಿಮಾನ ಪತ್ತೆಗಾಗಿ ನಡೆದ ಶೋಧ ಕಾರ್ಯ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತೆ ಆಗಿದೆ.

ನಾಪತ್ತೆಯಾದ ವಿಮಾನ ಮೂರು ವಾರಗಳಾದರೂ ಪತ್ತೆಯಾಗದೆ ಪ್ರಯಾಣಿಕರ ಬಂಧುಗಳ, ಅದರಲ್ಲೂ ಚೀನಾದವರ ಒತ್ತಡ ಹೆಚ್ಚಾದಾಗ ಮಲೇಷ್ಯಾ ಸರ್ಕಾರ ಆಸ್ಟ್ರೇಲಿಯಾದ ಪರ್ತ್‌ ಬಳಿಯ ಹಿಂದೂ ಮಹಾಸಾಗರದಲ್ಲಿ ಈ ವಿಮಾನ ಪತನವಾಗಿದೆ ಎಂದು ಮಾರ್ಚ್ 24ರಂದು ಅಧಿಕೃತವಾಗಿ ಘೋಷಿಸಿತು. ಆದರೆ, ವಿಮಾನದ ಭಗ್ನಾವಶೇಷ ಬಿದ್ದಿರುವ ಸ್ಥಳದ ಬಗ್ಗೆ ಖಚಿತವಾಗಿ ಹೇಳಲಿಲ್ಲ.

ತಾನು ಮಾಡಿದ ಘೋಷಣೆಗೆ  ಜಾಗತಿಕವಾಗಿ ಮೊಬೈಲ್‌ ದೂರವಾಣಿಗಳಿಗೆ ಉಪಗ್ರಹ ಸಂವಹನ ಸೇವೆಗಳನ್ನು ಒದಗಿಸುವ ಬ್ರಿಟನ್ನಿನ ಉಪಗ್ರಹ ಆಧಾರಿತ ದೂರಸಂಪರ್ಕ ಕಂಪೆನಿ ‘ಇನ್‌ಮಾರ್ಸಾಟ್‌’,  ನಾಪತ್ತೆಯಾದ ವಿಮಾನ ಉತ್ತರ ಇಲ್ಲವೆ ದಕ್ಷಿಣ ವಾಯು ಸಂಚಾರ ವಲಯದಲ್ಲಿ ಸಾಗಿರಬೇಕು ಎಂದಿರುವುದು ಮತ್ತು  ಈ ಸುಳಿವನ್ನು ಆಧರಿಸಿ ‘ಬ್ರಿಟನ್ನಿನ ವಾಯು ಸಂಚಾರ ಅಪಘಾತ ಪ್ರಕರಣಗಳ ತನಿಖಾ ದಳ (ಎಎಐಬಿ) ತನ್ನ ಅತ್ಯಾಧುನಿಕ ಸಾಧನಗಳಿಂದ ವಿಮಾನವು ಹಿಂದೂ ಮಹಾಸಾಗರದ ದಕ್ಷಿಣ ಮಾರ್ಗದಲ್ಲೇ ಪತನವಾಗಿದೆ ಎಂದು ಹೇಳಿರುವುದು ಆಧಾರ ಎಂದು ಮಲೇಷ್ಯಾ ಹೇಳಿತು.
ಮೊದಲೇ ವಿಮಾನದ ಪ್ರಯಾಣಿಕರ ಬಂಧುಗಳ ಆಕ್ರೋಶವನ್ನು ಎದುರಿಸುತ್ತಿದ್ದ ಚೀನಾ, ಮಲೇಷ್ಯಾ  ನೀಡಿದ ಈ ಅಸ್ಪಷ್ಟ ಹೇಳಿಕೆಯಿಂದ ಮತ್ತಷ್ಟು ಸಿಟ್ಟಿಗೆದ್ದಿತು. ವಿಮಾನ ಪತನವಾಗಿರುವುದಕ್ಕೆ ಖಚಿತ ಪುರಾವೆ ನೀಡುವಂತೆ ಆಕ್ರೋಶದಿಂದ ಕೇಳಿತು.

ವಿಮಾನ ಹಿಂದೂ ಮಹಾಸಾಗರದ ದಕ್ಷಿಣ ಭಾಗದಲ್ಲಿ ಪತನವಾಗಿದೆ ಎಂದು ಮಲೇಷ್ಯಾದ ಪ್ರಕಟಣೆಯಿಂದ ಆದ ಲಾಭ ಏನೆಂದರೆ 17 ದಿನಗಳಿಂದ ನಡೆಯುತ್ತಿದ್ದ ಶೋಧ ಕಾರ್ಯಕ್ಕೆ ತಾರ್ಕಿಕ ಅಂತ್ಯ ದೊರೆಕಿದ್ದು. ಈ ಅವಧಿಯಲ್ಲಿ ನೂರಾರು ನೌಕೆಗಳು, ಯುದ್ಧ ವಿಮಾನಗಳು ಅಂದಾಜು 70.7 ಲಕ್ಷ ಚದರ ಕಿ.ಮೀ ವ್ಯಾಪ್ತಿಯಲ್ಲಿ ವಿಮಾನಕ್ಕೆ ತಡಕಾಡಿದ್ದವು.

ಪರ್ತ್‌ ಸುತ್ತಲಿನಲ್ಲಿ ನಡೆದ ಶೋಧ
ಎರಡನೇ ಹಂತದಲ್ಲಿ ಆಸ್ಟ್ರೇಲಿಯಾದ ಪಶ್ಚಿಮ ಕರಾವಳಿಯಲ್ಲಿ ವಿಮಾನದ ಭಗ್ನಾವಶೇಷ ಮತ್ತು ಬ್ಲ್ಯಾಕ್‌ ಬಾಕ್ಸ್‌ನ ಹುಡುಕಾಟ ಮಾರ್ಚ್‌ ಕಡೆಯ ವಾರದಲ್ಲಿ ಬಿರುಸಿನಿಂದಲೇ ಆರಂಭವಾಯಿತು. ಆಸ್ಟ್ರೇಲಿಯಾ ನೇತೃತ್ವದಲ್ಲಿ ಏಳು ರಾಷ್ಟ್ರಗಳ ಸುಮಾರು 600 ಯೋಧರು 334 ವಿಮಾನಗಳು, ನೂರಾರು ಹಡಗುಗಳ ಬೆನ್ನೇರಿ ಹಿಂದೂ ಮಹಾಸಾಗರದ ದಕ್ಷಿಣದಲ್ಲಿ 45.50 ಲಕ್ಷ ಚದರ ಕಿ.ಮೀ.ಗಳಲ್ಲಿ ನಡೆಸಿದ ವ್ಯಾಪಕ ಶೋಧ ಕಾರ್ಯವೂ ನಿಷ್ಫಲವಾಯಿತು.

ವಿಮಾನದ ‘ಬ್ಲ್ಯಾಕ್‌ ಬಾಕ್ಸ್‌’ ಹೆಕ್ಕಿ ತೆಗೆಯುವ ಸಾಮರ್ಥ್ಯವಿರುವ ಅಮೆರಿಕ ನೌಕಾಪಡೆಯ ಅತ್ಯಾಧುನಿಕ ನೌಕೆಯು ಜಲದೊಳಗಿನ ಅತಿ ಸೂಕ್ಷ್ಮ ಧ್ವನಿ ತರಂಗಗಳನ್ನು ಗ್ರಹಿಸುವ ಸಾಧನವನ್ನು (ಟೌಡ್‌ ಪಿಂಗರ್‌ ಲೊಕೇಟರ್‌– ಟಿಪಿಎಲ್‌25) ತನ್ನ ಬೆನ್ನಿಗೆ ಸಿಕ್ಕಿಸಿಕೊಂಡು ಹಿಂದೂ ಮಹಾಸಾಗರದ ಆಳದಲ್ಲಿ ಪಾತಾಳ ಗರಡಿ ಹಾಕಿತು.

ವಿಮಾನ ಪತನವಾಗಿ ಒಂದು ತಿಂಗಳವರೆಗೆ ಸಕ್ರಿಯವಾಗಿರುವ ಬ್ಲ್ಯಾಕ್‌ ಬಾಕ್ಸ್‌ನ ಬ್ಯಾಟರಿ ಹೊರಹಮ್ಮಿಸುವ ‘ಪಿಂಗ್‌’ ಶಬ್ದವನ್ನು ನಿಖರವಾಗಿ ಇದು ಗುರುತಿಸಲು ಆಗಲೇ ಇಲ್ಲ. ಗರಿಷ್ಠ 20 ಸಾವಿರ ಅಡಿ ಆಳದಲ್ಲಿ (ಆರು ಕಿ.ಮೀ.) ಬ್ಲ್ಯಾಕ್‌ ಬಾಕ್ಸ್‌ ಬಿದ್ದಿದ್ದರೂ ಅದನ್ನು ಕರಾರುವಾಕ್ಕಾಗಿ ಪತ್ತೆ ಮಾಡುತ್ತದೆ ಎಂಬ ಅಮೆರಿಕದ ಪೆಂಟಗಾನ್‌ (ರಕ್ಷಣಾ ಇಲಾಖೆ) ಅದರ ಸಾಮರ್ಥ್ಯದ ಬಗ್ಗೆ  ಹೇಳಿಕೊಂಡದ್ದು ಕೆಲಸಕ್ಕೆ ಬಾರಲಿಲ್ಲ.

ಬ್ಲ್ಯಾಕ್‌ ಬಾಕ್ಸ್‌ ಪತ್ತೆಗಾಗಿ ಮೊದಲು ವಿಮಾನ ಭಗ್ನಾವಶೇಷವನ್ನು ಪತ್ತೆ ಮಾಡಬೇಕಿದ್ದ ಮಾನವ ರಹಿತ ಸ್ವಯಂಚಾಲಿತ ‘ಬ್ಲೂ ಫಿನ್‌21’ ಕಿರು ಜಲಾಂತರ್ಗಾಮಿಗಳು ಸಾಗರದ ಆಳದಲ್ಲಿ ಗಸ್ತುಹೊಡೆದು ಸುಸ್ತಾದವು. ಇದರಲ್ಲಿ ಅಳವಡಿಸಲಾಗಿದ್ದ ಜಲಾಂತರ ಶಬ್ದ ಶೋಧಕ ಸಾಧನಗಳಿಂದ (ಸೋನಾರ್‌) ಹೆಚ್ಚೇನು ಸಹಾಯ ಆಗಲಿಲ್ಲ.

ಏಪ್ರಿಲ್‌ ಅಂತ್ಯಕ್ಕೆ ವೈಮಾನಿಕ ಶೋಧ ಕಾರ್ಯ ಅಧಿಕೃತವಾಗಿ ಅಂತ್ಯಗೊಂಡಿತು. ಈ ಮಧ್ಯೆ, ಮಲೇಷ್ಯಾ ಸರ್ಕಾರ ವಿಮಾನ ನಾಪತ್ತೆಗೆ ನಿಖರ ಕಾರಣ ಪತ್ತೆ ಮಾಡಲು ಅಂತರರಾಷ್ಟ್ರೀಯ ತನಿಖಾ ತಂಡವನ್ನು ರಚಿಸಿತು. ಈ ತಂಡದಲ್ಲಿ ಅಮೆರಿಕ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ (ಎನ್‌ಟಿಎಸ್‌ಬಿ), ಬ್ರಿಟನ್ನಿನ ವೈಮಾನಿಕ ಅಪಘಾತ ತನಿಖಾ ಕೇಂದ್ರ ಮತ್ತು ಚೀನಾದ ವಿಮಾನ ಅಪಘಾತ ತನಿಖಾ ಇಲಾಖೆಯ ಪ್ರತಿನಿಧಿಗಳು ಇದ್ದಾರೆ.  ಈ ತಂಡಕ್ಕೆ ವಿಮಾನ ನಿರ್ಮಾಣ ಕಂಪೆನಿ ಬೋಯಿಂಗ್‌, ವಿಮಾನದ ಎಂಜಿನ್‌ ತಯಾರಿಸಿದ್ದ ರೋಲ್ಸ್‌ ರಾಯ್ಸ್‌ ಕಂಪೆನಿ ಹಾಗೂ ಬ್ರಿಟನ್ನಿನ ‘ಇನ್‌ಮಾರ್ಸಾಟ್‌’ ನೆರವು ನೀಡುತ್ತಿವೆ.

ಶೋಧ ಕಾರ್ಯದ ಮುಂದಿನ ನಡೆ ಕುರಿತು ಚರ್ಚೆ ನಡೆಸಿದ ಮಲೇಷ್ಯಾ, ಚೀನಾ, ಆಸ್ಟ್ರೇಲಿಯಾ ದೇಶಗಳು ಇನ್ನಷ್ಟು ಸುಧಾರಿತ ಮತ್ತು ಹೊಸ ಜಲಾಂತರ ಶಬ್ದ ಶೋಧಕ ಸಾಧನಗಳನ್ನು ಎರಡು ತಿಂಗಳಲ್ಲಿ ಹೊಂದಿಸಿಕೊಂಡು ವಿಮಾನದ ಭಗ್ನಾವಶೇಷ ಹುಡುಕಲು ಕಡಲಿಗೆ ಇಳಿಯುವುದಾಗಿ ಹೇಳಿವೆ.

ಪರ್ತ್ ನಗರದ ವಾಯವ್ಯಕ್ಕೆ ಸುಮಾರು 1600 ಕಿ.ಮೀ. ದೂರದಲ್ಲಿ 60 ಲಕ್ಷ ಚದರ ಕಿ.ಮೀ. ವ್ಯಾಪ್ತಿಯಲ್ಲಿ ಶೋಧ ಕಾರ್ಯವನ್ನು ಹೊಸ ಹುರುಪಿನಿಂದ ನಡೆಸುವುದಾಗಿ ಘೋಷಿಸಿವೆ. ಈ ಶೋಧ ಕಾರ್ಯಕ್ಕೆ ಸುಮಾರು 5.55 ಕೋಟಿ ಅಮೆರಿಕದ ಡಾಲರ್‌ (ಅಂದಾಜು ₨344.59 ಕೋಟಿ) ವ್ಯಯವಾಗಬಹುದು ಎಂದು ಅಂದಾಜಿಸಿವೆ. ಈ ಕಾರ್ಯವು ಒಂದು ವರ್ಷದವರೆಗೆ ಮುಂದುವರಿಯ ಬಹುದು ಎಂದಿವೆ. ಈಗ ಎರಡು ತಿಂಗಳ ಶೋಧ ಕಾರ್ಯಕ್ಕೆ 10 ಕೋಟಿ ಅಮೆರಿಕನ್‌ ಡಾಲರ್‌ಗೂ (ಸುಮಾರು ₨ 620 ಕೋಟಿ) ಅಧಿಕ ವೆಚ್ಚ ಆಗಿರುವ ಅಂದಾಜು ಇದೆ.

ವಿಮಾನದ ಹಿನ್ನೆಲೆ
ಮಲೇಷ್ಯಾ ರಾಜಧಾನಿ ಕ್ವಾಲಾಲಂಪುರದಿಂದ ಚೀನಾ ರಾಜಧಾನಿ ಬೀಜಿಂಗ್‌ಗೆ ಮಾರ್ಚ್‌ 7ರ ಶುಕ್ರವಾರ ಮಧ್ಯರಾತ್ರಿ 12.41ಕ್ಕೆ (ಸ್ಥಳೀಯ ಕಾಲಮಾನ) ಹೊರಟ ಮಲೇಷ್ಯಾ ವಿಮಾನಯಾನ ಸಂಸ್ಥೆಯ ‘ಎಂಎಚ್‌ 370’ ಬೋಯಿಂಗ್‌ 777200ಇಆರ್‌ ವಿಮಾನ, ಹಾರಾಟ ಆರಂಭಿಸಿದ ಒಂದು ತಾಸಿನ ಒಳಗೆ (ಮಾ.8ರ ನಸುಕಿನ 1.19) ನಿಗೂಢವಾಗಿ ಕಣ್ಮರೆಯಾಗಿತ್ತು.

ಕಣ್ಮರೆಯಾದ ಸಮಯದಲ್ಲಿ ವಿಮಾನವು ಮಲೇಷ್ಯಾದ ಪೂರ್ವ ಕರಾವಳಿ ತೀರದ ಪಟ್ಟಣ ಕೋಟ ಭರು ಮತ್ತು ವಿಯೆಟ್ನಾಂನ ದಕ್ಷಿಣ ತುದಿಯ ಮಧ್ಯೆ ಸಂಚರಿಸುತ್ತಿತ್ತು. ಈ ಸಂದರ್ಭದಲ್ಲಿ ವಿಮಾನವು 35 ಸಾವಿರ ಅಡಿ ಎತ್ತರದಲ್ಲಿ ಹಾರಾಟ ಮಾಡುತ್ತಿತ್ತು ಎನ್ನಲಾಗಿದೆ.

ವಿಮಾನದಲ್ಲಿ ಭಾರತದ ಐವರು, ಚೀನಾದ 154 ಮತ್ತು ಮಲೇಷ್ಯಾದ 38 ಮಂದಿ ಸೇರಿ 227 ಪ್ರಯಾಣಿಕರಿದ್ದರು. 12 ಸಿಬ್ಬಂದಿ ವರ್ಗದವರು ಸೇರಿ ವಿಮಾನದಲ್ಲಿದ್ದ ಒಟ್ಟು 239 ಜನರಿದ್ದರು.

ಕಾಡಿದ ಹಲವು ಸಂಶಯಗಳು
* ವಿಮಾನ ಸ್ಫೋಟ/ಉಗ್ರರಿಂದ ಅಪಹರಣ/ ತಾಂತ್ರಿಕ ದೋಷ.

* ವಿಮಾನ ನಿಗದಿತ ಮಾರ್ಗ ಉದ್ದೇಶಪೂರ್ವಕವಾಗಿ ಬದಲಿಸಿದ್ದೇಕೆ?

* ವಿಮಾನದ ಸಂವಹನ ಸಾಧನಗಳನ್ನು ವ್ಯವಸ್ಥಿತವಾಗಿ ಸ್ಥಗಿತಗೊಳಿಸಲಾಯಿತೆಂಬ ಶಂಕೆ. ಸಾಧನಗಳನ್ನು ನಿಷ್ಕ್ರಿಯಗೊಳಿಸಿದ ನಂತರ ವಿಮಾನ ಏನಾಯಿತು?  

* ಪೈಲಟ್‌ ಅಥವಾ ಪ್ರಯಾಣಿಕರ ಮಾನಸಿಕ ಅಸಮತೋಲನದ ಅನುಮಾನಗಳು.  ಪೈಲಟ್‌ ಜಹರಿ ಅಹ್ಮದ್‌  ಮತ್ತು ಸಹ ಪೈಲಟ್ ಫರಿಕ್‌ ಅಬ್ದುಲ್‌ ಹಮೀದ್‌ ಬಗ್ಗೆ ಕಾಡಿರುವ ಅನುಮಾನಗಳು.

* ಸಾಗರದಲ್ಲಿ ತೇಲುತ್ತಿರುವ ವಸ್ತುಗಳು ನಾಪತ್ತೆಯಾದ  ವಿಮಾನದ ಭಾಗಗಳೇ ಎಂಬ ಸಂಶಯಕ್ಕೆ ಸಿಗದ ಸ್ಪಷ್ಟ ಉತ್ತರ.

* ವಿಮಾನ ನಾಪತ್ತೆಯಾದ ಹತ್ತನೇ ವಾರದಲ್ಲಿ ಹೊಸದೊಂದು ಸಾಧ್ಯತೆಯ ಶಂಕೆ ವ್ಯಕ್ತವಾಗಿದೆ. ಥಾಯ್ಲೆಂಡ್‌– ಅಮೆರಿಕ ಜಂಟಿ ಸಮರಾಭ್ಯಾಸದ ವೇಳೆಯಲ್ಲಿ ಈ ‘ಎಂಎಚ್‌ 370’ ವಿಮಾನವನ್ನು ಆಕಸ್ಮಿಕವಾಗಿ ಹೊಡೆದುರುಳಿಸಲಾಗಿದೆ ಎಂಬ ಅನುಮಾನವನ್ನು ಲೇಖಕರೊಬ್ಬರು ಪುಸ್ತಕದಲ್ಲಿ ವ್ಯಕ್ತಪಡಿಸಿದ್ದಾರೆ.

ಹೀಗೆ ಪತನವಾದ ಅವಶೇಷವು ಥಾಯ್ಲೆಂಡ್‌ ಕೊಲ್ಲಿಯಲ್ಲಿ ಬಿದ್ದಿದೆ. ನಾಪತ್ತೆಯಾದ ವಿಮಾನದ ಶೋಧ ಕಾರ್ಯಾಚರಣೆಯ ದಿಕ್ಕು ತಪ್ಪಿಸಲು ಇನ್ನೊಂದು ಬ್ಲ್ಯಾಕ್‌ ಬಾಕ್ಸ್‌ ಅನ್ನು ಆಸ್ಟ್ರೇಲಿಯಾದ ಕರಾವಳಿಯಲ್ಲಿ ಹಾಕಲಾಗಿದೆ ಎಂದು ಆಂಗ್ಲೊ– ಅಮೆರಿಕ ಪತ್ರಕರ್ತ ಮತ್ತು ಲೇಖಕ ನೀಗೆಲ್‌ ಕಾಥೋರ್ನೆ ಅವರ ‘ಫ್ಲೈಟ್‌ ಎಂಎಚ್‌370: ದಿ ಮಿಸ್ಟರಿ’ ಪುಸ್ತಕದಲ್ಲಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT