ಗುರುವಾರ, 30 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ವಿಕಿ ಡಿಂಡಿಮ!

Last Updated 5 ಸೆಪ್ಟೆಂಬರ್ 2012, 19:30 IST
ಅಕ್ಷರ ಗಾತ್ರ

ಯಾವ ವಿಷಯದ ಬಗ್ಗೆ ಮಾಹಿತಿಗಾಗಿ ಗೂಗಲಿಸಿದರೂ ದೊರೆಯುವ ಫಲಿತಾಂಶದ ಮೊದಲ ಹತ್ತರಲ್ಲಿ ಒಂದಂತೂ ವಿಕಿಪಿಡಿಯದಲ್ಲಿರುವ ಮಾಹಿತಿಯಾಗಿರುತ್ತದೆ. ಈ ವಿಶ್ವಕೋಶಕ್ಕೊಂದು ಕನ್ನಡ ಆವೃತ್ತಿಯೂ ಇದೆ.

ಕೆಲವೇ ವರ್ಷಗಳ ಹಿಂದೆ ಕನ್ನಡದಲ್ಲಿ ಏನು ಗೂಗಲಿಸಿದರೂ ಅದು ಹೋಗುತ್ತಿದ್ದುದು ಕನ್ನಡ ವಿಕಿಪಿಡಿಯದ ಪುಟಗಳಿಗೇ. ಅದರ ಅರ್ಥ ಅಲ್ಲಿ ಮಾಹಿತಿಯ ಮಹಾಸಂಗ್ರಹವಿತ್ತೆಂದಲ್ಲ. ಆ ಕಾಲಕ್ಕೆ ಅಂತರಜಾಲಾಡಿಗಳ ಗೂಗಲಾಟಕ್ಕೆ ಸಿಗುವಂತಿದ್ದ ಕನ್ನಡ ಪಠ್ಯ ಕನ್ನಡ ವಿಕಿಪಿಡಿಯದಲ್ಲಷ್ಟೇ ಇತ್ತು.

ಇಂಗ್ಲಿಷ್‌ನಲ್ಲಿ ವಿಕಿಪಿಡಿಯ ಕಲ್ಪವೃಕ್ಷದಂತೆ ಬೆಳೆದುಬಿಟ್ಟದ್ದರ ಹಿಂದಿನ ಮುಖ್ಯ ಕಾರಣ ಅದಕ್ಕೆ ಮಾಹಿತಿಯನ್ನು ಊಡಿಸುತ್ತಾ ಹೋದ ಸಂಪಾದಕರು. ಕನ್ನಡದಲ್ಲೂ ಅಂಥದ್ದೊಂದು ಸಂಪಾದಕರ ಬಳಗವಿದೆ. ಈ ಮುಕ್ತ ಕನ್ನಡ ವಿಶ್ವಕೋಶವನ್ನು ಕಲ್ಪವೃಕ್ಷವಾಗಿಸಲು ಪ್ರಯತ್ನಿಸುತ್ತಲೇ ಇದ್ದಾರೆ.
 
`ಕನ್ನಡ ವಿಕಿಪಿಡಿಯ~ 2004ರ ಜೂನ್ ತಿಂಗಳಲ್ಲಿ ಆರಂಭವಾಗಿತ್ತಾದರೂ, ಅಧಿಕೃತವಾಗಿ ಅಂತರಜಾಲದಲ್ಲಿ ಜನರ ಬಳಕೆಗೆ ಮುಕ್ತವಾಗಿದ್ದು 2004ರ ಸೆಪ್ಟೆಂಬರ್‌ನಲ್ಲಿ. ಈಗ ಕನ್ನಡ ವಿಕಿಪಿಡಿಯದ ಒಡಲಲ್ಲಿ 12,420 ಲೇಖನಗಳಿವೆ. ಪ್ರತಿ ದಿನ ಸರಾಸರಿ ಮೂರು ಲೇಖನಗಳು ಸೇರ್ಪಡೆಗೊಳ್ಳುತ್ತಿವೆ.


ಸದ್ಯ ಹಿಂದಿ, ತಮಿಳು, ತೆಲುಗು, ಮಲೆಯಾಳ, ಮರಾಠಿ ಸೇರಿದಂತೆದೇಶದ 21 ಭಾಷೆಗಳಲ್ಲಿ ವಿಕಿಪಿಡಿಯ ಲಭ್ಯವಿದೆ. ಆದರೆ, ಉಳಿದ ಭಾಷೆಗಳಿಗೆ ಹೋಲಿಸಿದರೆ ಕನ್ನಡದ ಪ್ರಗತಿ ಉತ್ತಮವಾಗೇನೂ ಇಲ್ಲ.

ಈ ಸವಾಲನ್ನು ಎದುರಿಸಿ ಕನ್ನಡ ವಿಕಿಪಿಡಿಯವನ್ನು ಬೆಳಸುವುದಕ್ಕೆ ಟೊಂಕಕಟ್ಟಿ ನಿಂತಿರುವ ಸಂಪಾದಕರ ಬಳಗವೊಂದಿದೆ. ಈ ಕೆಲಸದಿಂದ ಇವರಾರಿಗೂ ಯಾವ ಬಗೆಯೂ ಲಾಭವೂ ಇಲ್ಲ. ಜ್ಞಾನ ಹಂಚುವ ತೃಪ್ತಿಯೊಂದನ್ನು ಹೊರತು ಪಡಿಸಿದರೆ!

ಏನಿದು ಜ್ಞಾನ ಹಂಚುವ ಸಮುದಾಯ?
ವಿಕಿಪಿಡಿಯ ಭಾಷೆಯಲ್ಲಿ ಹೇಳುವುದಾದರೆ ಲೇಖನಗಳನ್ನು ಸಂಪಾದಿಸುವ, ತಿದ್ದುವ ಸಂಪಾದಕ ಬಳಗ, ತಮಗೆ ತಿಳಿದ ಮಾಹಿತಿಯನ್ನು, ಜ್ಞಾನವನ್ನು ಬಳಗದ ಸದಸ್ಯರು ವಿಕಿಪಿಡಿಯದ ಮೂಲಕ ಆನ್‌ಲೈನ್‌ನಲ್ಲಿಹಂಚುತ್ತಾರೆ. ಈಗಾಗಲೇ ವಿಕಿಪಿಡಿಯದಲ್ಲಿರುವ ಲೇಖನಗಳನ್ನು ತಿದ್ದುತ್ತಾರೆ, ಪರಿಷ್ಕರಿಸುತ್ತಾರೆ. ಒಂದರ್ಥದಲ್ಲಿ ಇವರು ಕನ್ನಡ ಸ್ವತಂತ್ರ ವಿಶ್ವಕೋಶದ ಅಮೂಲ್ಯ ಮುತ್ತುಗಳು.

 ಕನ್ನಡ ವಿಕಿಪಿಡಿಯದಲ್ಲಿ 70ಕ್ಕೂ ಅಧಿಕ ಸಂಪಾದಕರಿದ್ದಾರೆ. ಆರ್ಥಿಕವಾಗಿ ಯಾವುದೇ ಲಾಭ ತರದ ಈ ಜ್ಞಾನ ಹಂಚುವ ಕಾರ್ಯದಲ್ಲಿ ಸ್ವಯಂ ಸೇವಕರಾಗಿ ತೊಡಗಿಕೊಂಡಿರುವ ಇವರ ವೃತ್ತಿ ಬೇರೆ. ವಿಕಿಪಿಡಿಯಕ್ಕೆ ಲೇಖನಗಳನ್ನು ಸಂಪಾದಿಸುವುದು ಇವರ ಹವ್ಯಾಸಗಳಲ್ಲೊಂದು.

ತಮ್ಮ ಬಿಡುವಿನ ಅವಧಿಯ ಸ್ವಲ್ಪ ಸಮಯವನ್ನು ಈ ಕಾರ್ಯಕ್ಕಾಗಿ ಇವರು ಮೀಸಲಿಡುತ್ತಾರೆ. ಸಾಫ್ಟ್‌ವೇರ್ ಎಂಜಿನಿಯರ್‌ಗಳು, ಡಾಕ್ಟರ್‌ಗಳು, ವಕೀಲರು, ಸಾಹಿತಿಗಳು, ಪತ್ರಕರ್ತರು, ಅಧಿಕಾರಿಗಳು, ಬ್ಯಾಂಕ್ ಉದ್ಯೋಗಿಗಳು, ವಿದ್ಯಾರ್ಥಿಗಳು.... ಹೀಗೆಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಯಾರು ಬೇಕಾದರೂ ವಿಕಿಪಿಡಿಯ ಸಂಪಾದಕರಾಗಬಹುದು. ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳುವುದು ಮುಖ್ಯ. ಯಾವುದೇ ಅರ್ಹತೆಗಳು ಬೇಕಿಲ್ಲ. ವಯಸ್ಸಿನ ಮಿತಿಯೂ ಇಲ್ಲ. ವಿಶ್ವಕೋಶದಲ್ಲಿ ದಾಖಲಿಸುವ ವಿಷಯದ ಬಗ್ಗೆ ನಿಖರ ಮಾಹಿತಿ ಇರಬೇಕಷ್ಟೆ.

ವಿಶ್ವಕೋಶದಲ್ಲಿ ನೋಂದಣಿ ಮಾಡಿಕೊಂಡಿರುವ ಸಂಪಾದಕರೆಲ್ಲರೂ ಯಾವಾಗಲೂ ಸಕ್ರಿಯರಾಗಿ ಇರುವುದಿಲ್ಲ. ವೃತ್ತಿಯ ಒತ್ತಡದಿಂದಾಗಿ ಸಂಪಾದಿಸುವ ಕಾರ್ಯದಿಂದ ಬಿಡುವು ತೆಗೆದುಕೊಂಡವರಿದ್ದಾರೆ. ಸಂಪಾದಕರ ಸಕ್ರಿಯತೆ ಅವರ ಬಿಡುವು, ಕೆಲಸದ ಒತ್ತಡಗಳನ್ನು ಅವಲಂಬಿಸಿರುತ್ತದೆ. ಜುಲೈ ತಿಂಗಳ ಅಂಕಿಅಂಶಗಳನ್ನು ಪರಿಗಣಿಸಿದರೆ ಪ್ರಸ್ತುತ 19 ಮಂದಿ ಕನ್ನಡ ವಿಕಿಪಿಡಿಯ ಸಂಪಾದನೆಯಲ್ಲಿ ತೊಡಗಿಕೊಂಡಿದ್ದಾರೆ.

ನಾಲ್ವರು ಮಾತ್ರ ಈ ಕಾರ್ಯದಲ್ಲಿ ಹೆಚ್ಚು ಕ್ರಿಯಾಶೀಲರಾಗಿದ್ದಾರೆ.
`ದೇಶದ ಬೇರೆ ಭಾಷೆಗಳಿಗೆ ಹೋಲಿಸಿದರೆ ಲೇಖನಗಳ ಸಂಪಾದನೆಯಲ್ಲಿ ನಾವು ತುಂಬಾ ಹಿಂದೆ ಇದ್ದೇವೆ~ ಎಂದು ವಿಷಾದದಿಂದಲೇ ಮಾತು ಆರಂಭಿಸುತ್ತಾರೆ ಕನ್ನಡ ವಿಕಿಪಿಡಿಯದ `ವಿಶೇಷ ಆಸಕ್ತಿ ತಂಡ~ದ (SPECIAL INTEREST GROUP)) ನಿರ್ವಹಣೆ ಹೊಣೆ ಹೊತ್ತಿರುವ ಓಂಶಿವಪ್ರಕಾಶ್.

ಮೂಲತಃ ಬೆಂಗಳೂರಿಗರಾದ ಓಂಶಿವಪ್ರಕಾಶ್ ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. 2005ರಿಂದ ಕನ್ನಡ ವಿಶ್ವಕೋಶದಲ್ಲಿ ಸಂಪಾದನೆ ಕಾರ್ಯವನ್ನು ಅವರು ಮಾಡುತ್ತಾ ಬಂದಿದ್ದಾರೆ. ವಿಕಿಪಿಡಿಯದ ಸಂಪಾದಕ ಬಳಗವನ್ನು ವಿಸ್ತರಿಸುವ ನಿಟ್ಟಿನಲ್ಲಿ `ವಿಶೇಷ ಆಸಕ್ತಿ ತಂಡ~ ಕಾರ್ಯನಿರ್ವಹಿಸುತ್ತಿದೆ.

`ತಂತ್ರಜ್ಞಾನ ವಿಷಯಗಳ ಕುರಿತು ಪತ್ರಿಕೆಗಳಲ್ಲಿ ಲೇಖನ ಬರೆಯುತ್ತಿದ್ದೆ. ಬ್ಲಾಗ್‌ಗಳನ್ನು ನಿರ್ವಹಿಸುವ ಹವ್ಯಾಸವೂ ಇದೆ. ತುಂಬಾ ಸ್ಥಳೀಯ ಅನ್ನಿಸುವಂತಹ ವಿಷಯಗಳು ಎಲ್ಲರಿಗೂ ತಿಳಿಯಬೇಕು ಎಂಬ ಉದ್ದೇಶದಿಂದ ಕನ್ನಡ ವಿಕಿಪಿಡಿಯಲ್ಲಿ ತೊಡಗಿಕೊಂಡೆ~ ಎಂದು ತಾವು ಕನ್ನಡ ವಿಶ್ವಕೋಶಕ್ಕೆ ಲೇಖನಗಳನ್ನು ಸಂಪಾದನೆ ಆರಂಭಿಸಲು ಕಾರಣವಾದ ಅಂಶವನ್ನು ವಿಶದಪಡಿಸುತ್ತಾರೆ ಪ್ರಕಾಶ್.
 
ಲೇಖನಗಳ ಸಂಪಾದನೆಗೆ ಕೇವಲ ಆಸಕ್ತಿ ಇದ್ದರೆ ಸಾಲದು, ಆಳವಾಗಿ ಅದರಲ್ಲಿ ತೊಡಗಿಸಿಕೊಳ್ಳಬೇಕು, ಏಕಾಗ್ರತೆಯೂ ಬೇಕು ಎಂಬುದು ಲೇಖನಗಳ ಸಂಪಾದನೆಗೆ ಆಸಕ್ತಿ ಹೊಂದಿರುವವರಿಗೆ ಅವರು ನೀಡುವ ಸಲಹೆ.

`ಭಾರತದಲ್ಲಿರುವ 21 ಭಾಷೆಗಳ ವಿಕಿಪಿಡಿಯದಲ್ಲಿ ಮಲೆಯಾಳ ಮೊದಲ ಸ್ಥಾನದಲ್ಲಿದೆ. ಅಲ್ಲಿ ಲೇಖನದಾತರ (ಕಾಂಟ್ರಿಬ್ಯೂಟರ್) ಸಂಖ್ಯೆ ದೊಡ್ಡದಿದೆ. ಇತ್ತೀಚೆಗೆ ಒಡಿಯಾ ಭಾಷೆಯಲ್ಲಿ ಹೆಚ್ಚು ಕೆಲಸಗಳು ನಡೆಯುತ್ತಿವೆ. ಉಳಿದ ಭಾಷೆಗಳಿಗೆ ಹೋಲಿಸಿದರೆ ನಮ್ಮಲ್ಲೇ ಲೇಖನಗಳ ಸಂಪಾದನೆ ಕಡಿಮೆ. ಲೇಖನದಾತರೂ ಬೆರಳಿಣಿಕೆಯಷ್ಟೇ~ ಎಂದು ವಿವರಿಸುತ್ತಾರೆ ಅವರು.

ಲೇಖನದಾತರ ಸಂಖ್ಯೆ ವೃದ್ಧಿಸುವುದಕ್ಕಾಗಿ ಕಾರ್ಯಾಗಾರಗಳ ಆಯೋಜನೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ವಿಕಿಪಿಡಿಯ ಹಮ್ಮಿಕೊಂಡಿದೆ ಎಂದು ಹೇಳುವ ಓಂಶಿವಪ್ರಕಾಶ್,ಸಂಪಾದನೆ ಕಾರ್ಯದಲ್ಲಿ ಶಾಲಾ ಮಕ್ಕಳನ್ನು ತೊಡಗಿಸುವ ಯೋಜನೆಯನ್ನು ಮುಂದಿಡುತ್ತಾರೆ.

ಅದು ಸುಲಭದ ಕೆಲಸವಲ್ಲ ಎಂಬುದೂ ಅವರಿಗೆ ಗೊತ್ತು. `ಮಕ್ಕಳನ್ನು ಈ ಯೋಜನೆಯಲ್ಲಿ ತೊಡಗಿಸಿಕೊಳ್ಳಲು ಶಿಕ್ಷಕರ ಬೆಂಬಲ ಪಡೆಯಬೇಕು. ಆ ಶಿಕ್ಷಕರಿಗೆ ನಾವು ನೆರವು, ಸಹಕಾರ ನೀಡಬೇಕು. ಆಗ ಮಾತ್ರ ಇದು ಯಶಸ್ವಿಯಾಗಲು ಸಾಧ್ಯ~ ಎಂಬುದು ಅವರ ಅಂಬೋಣ.

ಐದು ವರ್ಷಗಳಿಂದ ನಿರಂತರವಾಗಿ ಕನ್ನಡ ವಿಕಿಪಿಡಿಯದಲ್ಲಿ ಸ್ವಯಂ ಆಗಿ ತೊಡಗಿಸಿಕೊಂಡಿರುವ ಮಾಯಸಂದ್ರದ ತೇಜಸ್ ಅವರು ಕನ್ನಡ ವಿಶ್ವಕೋಶದ ಭಾಗವಾದ ಕತೆ ಕುತೂಹಲಕಾರಿಯಾಗಿದೆ. ಅದನ್ನು ಅವರ ಮಾತುಗಳಲ್ಲೇ ಕೇಳಿ:
`ನಾನು 2007ರಲ್ಲಿ ಕನ್ನಡ ವಿಶ್ವಕೋಶದ ಭಾಗವಾದೆ.

ಆರಂಭದಲ್ಲಿ ಅಗತ್ಯ ಮಾಹಿತಿಗಾಗಿ ಅಂತರಜಾಲದಲ್ಲಿ ಇಂಗ್ಲಿಷ್ ವಿಕಿಪಿಡಿಯವನ್ನು ಅವಲಂಬಿಸುತ್ತಿದ್ದೆ. ಅದರಲ್ಲಿ ಬಳಸುತ್ತಿದ್ದ ಕೆಲವು ಪದಗಳ ಅರ್ಥ ತಿಳಿಯಲು ಕಷ್ಟಪಡಬೇಕಾಗಿತ್ತು. ಇಂಥದ್ದೇ ಕನ್ನಡದಲ್ಲಿ ಇದ್ದರೆ ಚೆನ್ನಾಗಿತ್ತು ಎಂದು ಅಂದುಕೊಂಡಿದ್ದೆ. ಆದರೆ ಆ ವೇಳೆಗಾಗಲೇ ಕನ್ನಡ ವಿಕಿಪಿಡಿಯ ಕಾರ್ಯಾಚರಿಸುತ್ತಿತ್ತು.
 
ಆದರೆ ನನಗೆ ಮಾಹಿತಿ ಇರಲಿಲ್ಲ. ನಂತರ ಈ ಬಗ್ಗೆ ತಿಳಿಯಿತು. ಕನ್ನಡದಲ್ಲಿ ಮಾಹಿತಿ ಸಿಗುವಾಗ ಇಂಗ್ಲಿಷ್ ಅವಲಂಬಿಸುವ ಅಗತ್ಯವಾದರೂ ಏನು ಅಂದುಕೊಂಡೆ. ನಾವೂ ಲೇಖನಗಳನ್ನು ಸಂಪಾದಿಸಬಹುದು, ತಿದ್ದಬಹುದು ಎಂಬುದನ್ನು ತಿಳಿದು ಖುಷಿಯಾಯಿತು. ಅಂದಿನಿಂದ ವಿಕಿಪಿಡಿಯದೊಂದಿಗೆ ನನ್ನನ್ನು ನಾನು ಗುರುತಿಕೊಳ್ಳಲು ಆರಂಭಿಸಿದೆ~.
 

ನೀವು ಸಂಪಾದಕರಾಗಬಹುದು!
*ಕನ್ನಡ ವಿಕಿಪಿಡಿಯ ಮುಖಪುಟಕ್ಕೆ ತೆರಳಿ ಹೆಸರು ನೋಂದಾಯಿಸಿ (
http://kn.wikipedia.org/wiki/-)
* ಯಾವುದೇ ಸಮಸ್ಯೆ ಎದುರಾದರೆ ಸಮುದಾಯಪುಟಕ್ಕೆ ಭೇಟಿ ನೀಡಿ
* ಹೊಸಬರಿಗೆ ಅಗತ್ಯವಾಗಿ ಬೇಕಾಗಿರುವ ಎಲ್ಲಾ ಮಾಹಿತಿಗಳು ಅಲ್ಲಿ ಲಭ್ಯ
*ಲೇಖನಗಳು ಗಮನಾರ್ಹ ವಿಷಯಗಳ ಬಗ್ಗೆ ಇರಲಿ
* ಪ್ರಸಾರ ವ್ಯಾಪ್ತಿ ಗಮನಾರ್ಹವಾಗಿರಲಿ
* ಒಂದಕ್ಕಿಂತ ಹೆಚ್ಚು ವಿಶ್ವಾಸಾರ್ಹ ಮತ್ತು ದೃಢೀಕರಿಸುವ ಮೂಲಗಳಿರಲಿ
* ಲೇಖನಗಳು ನಿಷ್ಪಕ್ಷಪಾತ ದೃಷ್ಟಿಕೋನದಿಂದ ಕೂಡಿರಲಿ
*ಲೇಖನಗಳು ಉಲ್ಲೇಖಗಳನ್ನು ಹೊಂದಿರಲಿ
*ಕೃತಿಚೌರ್ಯ ಮಾಡದಿರಿ
*ಉದ್ದೇಶ ಪೂರ್ವಕವಾಗಿ ಸಮಾಜದ ಶಾಂತಿಭಂಗ ಮಾಡುವ ಲೇಖನಗಳು ಬೇಡ


ಅಂದಹಾಗೆ, ತೇಜಸ್ ಕೂಡ ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಕನ್ನಡ ವಿಕಿಪಿಡಿಯದಲ್ಲಿ ಅಡ್ಮಿನ್ ಮಟ್ಟದಲ್ಲಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ನಮ್ಮ ಸುತ್ತಮುತ್ತಲಿನ ವಿಷಯಗಳನ್ನು ನಮ್ಮದೇ ಭಾಷೆಯಲ್ಲಿ ಲಕ್ಷಾಂತರ ಜನರಿಗೆ ಸಿಗುವಂತೆ ಮಾಡುವುದು ಮನಸ್ಸಿಗೆ ಖುಷಿ ಕೊಡುತ್ತದೆ ಎಂದು ಹೇಳುವ ತೇಜಸ್‌ಗೆ ಕನ್ನಡ ವಿಕಿಪಿಡಿಯ ಎಂಬ ಸ್ವತಂತ್ರ ಮಾಹಿತಿ ಕಣಜ ಅಂತರಜಾಲದಲ್ಲಿ ಲಭ್ಯವಿರುವ ಬಗ್ಗೆ ಕನ್ನಡಗರಿಗೆ ಮಾಹಿತಿ ಇಲ್ಲದಿರುವ ಬಗ್ಗೆ ಬೇಸರವಿದೆ. 

`ಅಂತರಜಾಲದಲ್ಲಿ ಇಂಗ್ಲಿಷ್‌ನಲ್ಲಿ ಸಿಗುವ ಮಾಹಿತಿಗಳು ಕನ್ನಡದಲ್ಲೂ ಸಿಗುತ್ತವೆ, ಕನ್ನಡ ವಿಕಿಪಿಡಿಯ ಇದೆ ಎಂಬುದು ನಮ್ಮಲ್ಲಿ ಹೆಚ್ಚಿನ ಇಂಟರ್‌ನೆಟ್ ಬಳಕೆದಾರರಿಗೆ ಗೊತ್ತಿಲ್ಲ. ಲೇಖನಗಳನ್ನು ಸ್ವತಃ ಸಂಪಾದಿಸಬಹುದು, ಅದನ್ನು ತಿದ್ದಬಹುದು, ಪರಿಷ್ಕರಿಸಬಹುದು ಎಂಬುದೂ ತಿಳಿದಿಲ್ಲ.

ಆ ಕಾರಣದಿಂದಾಗಿಯೇ ನಮ್ಮ ವಿಶ್ವಕೋಶಕ್ಕೆ ಲೇಖನದಾತರ ಕೊರತೆ ಕಾಡುತ್ತಿದೆ. ಈ ನಿಟ್ಟಿನಲ್ಲಿ ಜನರಿಗೆ ಮಾಹಿತಿ ನೀಡುವ ಕೆಲಸ ಆಗಬೇಕಿದೆ~ ಎಂದು ನುಡಿಯುತ್ತಾರೆ ತೇಜಸ್. `ವಿಕಿಪಿಡಿಯ ಪುಟದಲ್ಲಿ ಹೆಸರು ನೋಂದಣಿ ಮಾಡಬೇಕಿರುವುದು ಪ್ರಥಮ ಹಂತ.

ಆ ಬಳಿಕ ಯಾರು ಬೇಕಾದರೂ ಲೇಖನ ಸಂಪಾದಿಸಬಹುದು. ಆರಂಭದಲ್ಲಿ ಈ ಪ್ರಕ್ರಿಯೆ ಕಷ್ಟ ಎನಿಸಬಹುದು. ತಾಂತ್ರಿಕವಾಗಿ ಯಾವುದೇ ಸಮಸ್ಯೆ ಬಂದರೂ, ಅದರ ನಿವಾರಣೆಗೆ ನಾವಿದ್ದೇವೆ~ ಎಂದು ಹೇಳುತ್ತಾ ಹೊಸಬರಿಗೆ ಆಹ್ವಾನ ನೀಡುತ್ತಾರೆ ತೇಜಸ್.

ವಿಕಿಪಿಡಿಯ ಎಂದರೆ?
*ಜಗತ್ತಿನ ಅತಿ ದೊಡ್ಡ ಸ್ವತಂತ್ರ ವಿಶ್ವಕೋಶ
* ಜಿಮ್ಮಿ ವೇಲ್ಸ್ ಮತ್ತು ಲ್ಯಾರಿ ಸ್ಯಾಂಗರ್ ಅವರಿಂದ 2001 ಜನವರಿಯಲ್ಲಿ ಆರಂಭ
* ವಿಕಿಮಿಡಿಯಾ ಪ್ರತಿಷ್ಠಾನದಿಂದ ನಿರ್ವಹಣೆ
* ಜಗತ್ತಿನ ಒಟ್ಟು 285 ಭಾಷೆಗಳಲ್ಲಿ ಲಭ್ಯ
* ಒಟ್ಟು 2.2 ಕೋಟಿ ಲೇಖನಗಳು
* ಇಂಗ್ಲಿಷ್ ಭಾಷೆಯೊಂದರಲ್ಲೇ ಒಟ್ಟು 40 ಲಕ್ಷಕ್ಕೂ ಅಧಿಕ ಲೇಖನಗಳು
* ವಿಶ್ವದಾದ್ಯಂತ 36 ಕೋಟಿಗೂ ಅಧಿಕ ಓದುಗರು
*ಅಂತರಜಾಲದಲ್ಲಿ ಜಗತ್ತಿನ ಅತಿ ಜನಪ್ರಿಯ ಆರನೇ ಜಾಲ ತಾಣ
* ಜಾಗತಿಕವಾಗಿ ಒಂದು ಲಕ್ಷಕ್ಕೂ ಅಧಿಕ ಸಂಪಾದಕರು
* ಇಂಗ್ಲಿಷ್ ಭಾಷೆಯೊಂದರಲ್ಲೇ 80,000 ಸಂಪಾದಕರು
* ಭಾರತದಲ್ಲಿ 21 ಪ್ರಾದೇಶಿಕ ಭಾಷೆಗಳು
*ಭಾರತೀಯ ಭಾಷಾ ವಿಕಿಗಳಲ್ಲಿ 1000ಕ್ಕೂ ಅಧಿಕ ಸಂಪಾದಕರುಬೆಂಗಳೂರಿನಲ್ಲಿ ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾಗರ ಮೂಲದ ಯುವಕ ಹರೀಶ್ ಎಂ.ಜಿ. ಅವರೂ ತೇಜಸ್ ಅಭಿಪ್ರಾಯವನ್ನು ಅನುಮೋದಿಸುತ್ತಾರೆ. ಕನ್ನಡ ವಿಕಿಪಿಡಿಯ ಮತ್ತು ಅವರ ನಂಟು ಆರು ವರ್ಷ ಹಳೆಯದು.

2006ರಲ್ಲಿ ಅವರು ಕನ್ನಡ ವಿಶ್ವಕೋಶಕ್ಕೆ ತಮ್ಮನ್ನು ಪರಿಚಯಿಸಿಕೊಂಡಿದ್ದಾರೆ. ಅಂದಿನಿಂದ ಜ್ಞಾನ ಹಂಚುವ ಕಾರ್ಯದಲ್ಲಿ ಅವರು ಸಕ್ರಿಯ. ಮಾತೃಭಾಷೆಯಾದ ಕನ್ನಡದಲ್ಲಿ ಹೆಚ್ಚು ಹೆಚ್ಚು ಮಾಹಿತಿಗಳು ಸಿಗುವಂತಾಗಬೇಕು ಎಂಬುದು ಅವರ ಕಳಕಳಿ. ಹರೀಶ್ ಕೂಡ ಅಡ್ಮಿನ್ ಮಟ್ಟದಲ್ಲಿ ಕೆಲಸ ಮಾಡುತ್ತಾರೆ.

ಈಗಾಗಲೇ ಇತರರು ಸಂಪಾದಿಸಿ ವಿಕಿಪಿಡಿಯದಲ್ಲಿ ದಾಖಲಿಸಿರುವ ಲೇಖನಗಳಲ್ಲಿ ತಪ್ಪುಗಳಿದ್ದರೆ ತಿದ್ದುವುದು, ಅವುಗಳನ್ನು ಪರಿಷ್ಕರಿಸುವುದು. ಸಂಬಂಧ ಇಲ್ಲದ ಅಂಶಗಳಿದ್ದರೆ ಅವುಗಳನ್ನು ತೆಗೆಯುವುದು ಅವರ ಕೆಲಸ.

`ತುಂಬಾ ಜನರಿಗೆ ಲೇಖನಗಳನ್ನು ಸಂಪಾದಿಸುವುದಕ್ಕೆ ಆಸಕ್ತಿ ಇದೆ. ಆದರೆ ಕಂಪ್ಯೂಟರ್‌ನಲ್ಲಿ ಕನ್ನಡದಲ್ಲಿ ಬರೆಯುವ ವಿಚಾರದಲ್ಲಿ ಅವರು ಸಮಸ್ಯೆ ಎದುರಿಸುತ್ತಿದ್ದಾರೆ~ ಎಂದು ಹೇಳುವ ಹರೀಶ್ ಅವರಿಗೆ ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಲೇಖನದಾತರು ನಮ್ಮ ವಿಶ್ವಕೋಶದ ಭಾಗವಾಗುತ್ತಾರೆ ಎಂಬ ವಿಶ್ವಾಸವಿದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT