ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಕ್ ಟ್ವೇನ್‌ ಹೇಳಿದ ಗಿಲೀಟಿನ ಕಾಲ | ಆಶುತೋಷ್ ವಾರ್ಷ್ಣೇಯ ಅವರ ಅಂಕಣ

Last Updated 1 ಮಾರ್ಚ್ 2023, 3:19 IST
ಅಕ್ಷರ ಗಾತ್ರ

ಅದಾನಿ ಸಮೂಹಕ್ಕೆ ಸಂಬಂಧಿಸಿದ ವಿದ್ಯಮಾನವನ್ನು ಸರಿಯಾದ ದೃಷ್ಟಿಕೋನದಿಂದ ಅರ್ಥಮಾಡಿಕೊಳ್ಳಬೇಕು ಎಂದಾದರೆ, ಅದನ್ನು ತೌಲನಿಕವಾಗಿ ನೋಡಬೇಕು ಹಾಗೂ ಇತಿಹಾಸದ ಅವಲೋಕನ ನಡೆಸಬೇಕು. ಇಲ್ಲಿರುವ ಮುಖ್ಯ ಪ್ರಶ್ನೆ ಹೀಗಿದೆ: ಬಂಡವಾಳಶಾಹಿ ವ್ಯವಸ್ಥೆಯ ವಿಕಾಸದ ಪ್ರಕ್ರಿಯೆಯಲ್ಲಿ ನಮಗೆ ಸರ್ಕಾರ–ವಾಣಿಜ್ಯೋದ್ಯಮದ ನಡುವಿನ ಸಂಬಂಧಗಳ ಬಗ್ಗೆ ಏನು ತಿಳಿದಿದೆ? ಸಮಕಾಲೀನ ಭಾರತದಲ್ಲಿ ಸಾದೃಶ್ಯ ಅಥವಾ ಭಿನ್ನತೆ ಎಷ್ಟರಮಟ್ಟಿಗೆ ಇದೆ?

ವಿಕಾಸ ಹೊಂದಿದ ಬಂಡವಾಳಶಾಹಿ ವ್ಯವಸ್ಥೆಗಳಲ್ಲಿ ಕಂಪನಿಗಳು ಉತ್ಪನ್ನಗಳಲ್ಲಿ ಹೊಸತನವನ್ನು ಹುಡುಕುವ ಆಧಾರದಲ್ಲಿ ಮತ್ತು/ಅಥವಾ ವೆಚ್ಚಗಳನ್ನು ತಗ್ಗಿಸುವ ಆಧಾರದಲ್ಲಿ ಬೆಳೆಯುತ್ತವೆ ಅಥವಾ ಸಾಯುತ್ತವೆ ಎಂದು ನಂಬಲಾಗಿದೆ. ಲಕ್ಷಾಂತರ ಗ್ರಾಹಕರಲ್ಲಿ ಹೊಸ ಆಲೋಚನೆಗಳನ್ನು ಪ್ರಚೋದಿಸುವ ರೀತಿಯಲ್ಲಿ ಕಂಪನಿಗಳು ಉತ್ಪನ್ನಗಳನ್ನು ಹೊರತಂದಿವೆಯೇ– ಅಂದರೆ, ಆ್ಯಪಲ್ ಕಂಪ್ಯೂಟರ್ ರೀತಿಯ ಅಥವಾ ಐಫೋನ್ ರೀತಿಯ ಉತ್ಪನ್ನಗಳನ್ನು ಸಿದ್ಧಪಡಿಸಿವೆಯೇ? ಕಂಪನಿಗಳು ಉತ್ಪಾದನೆಯಲ್ಲಿ ಹೊಸ ತಂತ್ರವನ್ನು ಅನುಸರಿಸಿ, ಇನ್ನಷ್ಟು ಉತ್ತಮವಾದ ಯಂತ್ರಗಳನ್ನು ಬಳಸಿ ಇತರ ಕಂಪನಿಗಳ ಗಮನವನ್ನು ಸೆಳೆದಿವೆಯೇ (ಉದಾಹರಣೆಗೆ, ಸಾರಿಗೆ ಸಲಕರಣೆಗಳನ್ನು ಸಿದ್ಧಪಡಿಸುವ, ಯಂತ್ರಮಾನವರನ್ನು ಬಳಸಿಕೊಳ್ಳುವ ವ್ಯವಸ್ಥೆ ಅಥವಾ ಕೈಗಾರಿಕಾ ಯಂತ್ರೋಪಕರಣಗಳು)?

ಇಂಥವು ಪಠ್ಯಗಳಲ್ಲಿ ಮಾತ್ರ ಕಾಣುವ ವ್ಯವಸ್ಥೆಗಳಾಗಿರಬಹುದು, ವಿಕಾಸ ಹೊಂದಿದ ಬಂಡವಾಳಶಾಹಿ ವ್ಯವಸ್ಥೆಯ ನಿಜ ಚಿತ್ರಣ ಇದಲ್ಲದಿರಬಹುದು. ಹಾಗೆಯೇ, ಈ ಚಿತ್ರಣದಲ್ಲಿನ ಕೆಲವು ಮಾತ್ರ ನಿಜವಿರಬಹುದು. ವಿಕಾಸ ಹೊಂದಿದ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಎಲ್ಲವನ್ನೂ, ಆ್ಯಡಂ ಸ್ಮಿತ್‌ ಹೇಳಿದ ಮಾರುಕಟ್ಟೆಯ ಅಗೋಚರ ಹಸ್ತವೇ (ಸ್ವಹಿತಾಸಕ್ತಿಯನ್ನು ಹೊಂದಿರುವ ವ್ಯಕ್ತಿಗಳು ಪರಸ್ಪರ ಅವಲಂಬನೆಯ ಮೂಲಕ ಸಮಾಜಕ್ಕೆ ಒಳಿತಾಗುವ ಕೆಲಸ ಮಾಡುವುದು) ಮುಂದಕ್ಕೊಯ್ಯುವ ಶಕ್ತಿಯಾಗಿರಲಿಕ್ಕಿಲ್ಲ. ಉದ್ಯಮ ಹಾಗೂ ಸರ್ಕಾರದ ನಡುವೆ ಸಂಬಂಧ ಅಲ್ಲಿಯೂ ಇರುತ್ತದೆ– ಮಿಲಿಟರಿಯಲ್ಲಿ ಇದು ಹೆಚ್ಚು ಖ್ಯಾತ– ಕೈಗಾರಿಕಾ ನೀತಿ ಇರುವೆಡೆಗಳಲ್ಲಿಯೂ ಇಂತಹ ಸಂಬಂಧ ಇರುತ್ತದೆ. ಜೋ ಬೈಡನ್ ಅವರು ಕಳೆದ ವರ್ಷ ಅಮೆರಿಕದ ಸೆಮಿಕಂಡಕ್ಟರ್ ಉದ್ಯಮಕ್ಕೆ ಸಬ್ಸಿಡಿಗಳನ್ನು ಘೋಷಿಸಿದರು. ಪರಿಸರಕ್ಕೆ ಹೆಚ್ಚು ಪೂರಕವಾದ ವಿದ್ಯುತ್ ಚಾಲಿತ ಕಾರುಗಳನ್ನು ತಯಾರಿಸುವ ಕಂಪನಿಗಳಿಗೂ ಸಬ್ಸಿಡಿ ಪ್ರಕಟಿಸಿದರು. ವಿಕಾಸ ಹೊಂದಿದ ಬಂಡವಾಳಶಾಹಿ ವ್ಯವಸ್ಥೆಗಳಲ್ಲಿ ಉದ್ಯಮ–ಸರ್ಕಾರದ ನಡುವೆ ಸಂಬಂಧ ಇರುತ್ತದೆಯಾದರೂ ಅದು ವ್ಯಾಪಕವಾಗಿರುವುದಿಲ್ಲ. ಅಂತಹ ಸಂಬಂಧಗಳು ಗೊತ್ತಾಗಿಬಿಡುತ್ತವೆ. ಅದಕ್ಕೆ ಶಿಕ್ಷೆಯೂ ಆಗುತ್ತದೆ. ಅದಕ್ಕಿಂತ ಹೆಚ್ಚಾಗಿ ನೀತಿಗಳು ಉದ್ಯಮಕ್ಕೆ ನಿರ್ದಿಷ್ಟವಾಗಿರುತ್ತವೆಯೇ ವಿನಾ ಅವು ಒಂದು ಕಂಪನಿ ಅಥವಾ ಒಂದು ಕುಟುಂಬಕ್ಕೆ ನಿರ್ದಿಷ್ಟವಾಗಿ ರೂಪುಗೊಂಡಿರುವುದಿಲ್ಲ.

ಆದರೆ ಇದಕ್ಕೆ ಹೋಲಿಸಿದರೆ, ಬಂಡವಾಳಶಾಹಿ ವ್ಯವಸ್ಥೆಯ ಆರಂಭಿಕ ಹಂತವು ಬಹಳ ಭಿನ್ನವಾಗಿರುತ್ತದೆ. ಬಂಡವಾಳಶಾಹಿ ವ್ಯವಸ್ಥೆಯ ಬೆಳವಣಿಗೆಯ ಜೊತೆಯಲ್ಲಿಯೇ ಭ್ರಷ್ಟಾಚಾರ ಕೂಡ ಇರುತ್ತದೆ ಎಂಬುದು ಇತಿಹಾಸದಲ್ಲಿ ದಾಖಲಾಗಿದೆ. ಗ್ರಾಮೀಣ ಪ್ರದೇಶಗಳ ದೇಶವಾಗಿದ್ದ ಅಮೆರಿಕ ಮೊದಲ ಬಾರಿಗೆ ಬೃಹತ್ ಪ್ರಮಾಣದ ಬಂಡವಾಳಶಾಹಿ ಪರಿವರ್ತನೆಯನ್ನು ಕಂಡ 1865–1900ರ ನಡುವಿನ ಅವಧಿಯನ್ನು ಪರಿಶೀಲಿಸೋಣ. ಮಾರ್ಕ್‌ ಟ್ವೇನ್ ಅವರು ತಮ್ಮ ಸಾಹಿತ್ಯಕ ನೋಟ ಹಾಗೂ ಬೌದ್ಧಿಕ ದೂರದರ್ಶಿತ್ವದ ಸಹಾಯದಿಂದ ಹೊಸ ಆರ್ಥಿಕ ಬದಲಾವಣೆಯ ಸಾರವನ್ನು ಮೊದಲು ಗುರುತಿಸಿದರು. 1873ರಲ್ಲಿ ಅವರು ಇದನ್ನು ‘ಗಿಲ್ಡಡ್ ಏಜ್’ (ಗಿಲೀಟಿನ ಯುಗ) ಎಂದು ಕರೆದರು. ಸರ್ಕಾರದ ಜೊತೆ ಹಲವು ಹಂತಗಳಲ್ಲಿ ಎಲ್ಲ ಬಗೆಯ ಒಪ್ಪಂದಗಳನ್ನು ಮಾಡಿಕೊಳ್ಳುತ್ತ ಅಮೆರಿಕದ ಮೊದಲ ಶತಕೋಟ್ಯಧೀಶರು– ಅಂದರೆ, ಕಾರ್ನೆಗಿ, ರಾಕ್‌ಫೆಲ್ಲರ್, ವಾಂಡರ್‌ಬಿಲ್ಟ್ಸ್‌ ಮತ್ತು ಮಾರ್ಗನ್‌– ಪ್ರವರ್ಧಮಾನಕ್ಕೆ ಬಂದರು. ರೈಲು ಮಾರ್ಗ ನಿರ್ಮಾಣಕ್ಕೆ ‘ನನಗೆ ನಾಲ್ಕು ರಾಜ್ಯಗಳ ಶಾಸಕರು ಬೇಕಿದ್ದರು. ಹಾಗಾಗಿ ನಾನು ನನ್ನದೇ ಹಣದಿಂದ ಅವರನ್ನು ಸೃಷ್ಟಿಸಿದೆ’ ಎಂದು ರೈಲು ಮಾರ್ಗಗಳ ನಿರ್ಮಾಣ ಕ್ಷೇತ್ರದ ದೈತ್ಯ ಜೇ ಗೌಲ್ಡ್ ಹೇಳಿದ್ದರು. ಅನೈತಿಕ ವಾಣಿಜ್ಯ ಚಟುವಟಿಕೆಗಳ ಮೂಲಕ ಶ್ರೀಮಂತಿಕೆ ಪಡೆದವರು ಎನ್ನಲಾದವರು ಸರ್ಕಾರಗಳನ್ನು ಹಾಗೂ ಶಾಸಕರನ್ನು ಸಲೀಸಾಗಿ ‘ಖರೀದಿ’ಸುತ್ತಿದ್ದರು.

ಥಿಯೊಡೊರ್ ರೂಸ್‌ವೆಲ್ಟ್ ಅವರ ಅಧ್ಯಕ್ಷ ಅವಧಿಯಲ್ಲಿ (1901–09) ಒಂದಿಷ್ಟು ಶುಚಿಗೊಳಿಸುವ ಕೆಲಸ ಆರಂಭವಾಯಿತು. ಅದರ ಪರಿಣಾಮಗಳು ಒಂದಿಷ್ಟುಮಟ್ಟಿಗೆ ಕಾಣಿಸಿಕೊಂಡವು. 1860ರ ಹೊತ್ತಿನಲ್ಲಿ ಯುರೋಪಿನ ಪಶ್ಚಿಮ ಭಾಗಕ್ಕೆ ಹೋಲಿಸಿದರೆ ಅಮೆರಿಕವು ಹಿಂದುಳಿದಿತ್ತು. ಆದರೆ 1910ರ ಹೊತ್ತಿಗೆ ಅಮೆರಿಕವು ವಿಶ್ವದ ಅತ್ಯಂತ ಶ್ರೀಮಂತ ದೇಶವಾಗಿತ್ತು. ಶತಮಾನಕ್ಕೂ ಹೆಚ್ಚಿನ ಅವಧಿಯಿಂದ ಕೈಗಾರಿಕಾ ನಾಯಕ ಆಗಿದ್ದ ಬ್ರಿಟನ್ ಹಿಂದೆ ಬಿದ್ದಿತ್ತು.

ಕೊಳೆಯುವಿಕೆಯೂ ಕ್ರಿಯಾಶೀಲತೆಯೂ ಒಟ್ಟೊಟ್ಟಿಗೇ ಇರುವ ಅರ್ಥ ಕೊಡುವ ‘ಗಿಲ್ಡಡ್ ಏಜ್’ ಪದವು ಅಂದಿನಿಂದ ಒಂದು ಪರಿಕಲ್ಪನೆಯನ್ನು ವಿವರಿಸುತ್ತಿದೆ, ಬಳಕೆಗೆ ಬಂದಿದೆ. ಒಂದು ಕಾಲಘಟ್ಟದ ಸ್ಥಿತಿಯನ್ನು ವಿವರಿಸಿದ ‘ಗಿಲ್ಡಡ್ ಏಜ್’ನ ತೀರಾ ಈಚಿನ ಅಭಿವ್ಯಕ್ತಿಯೆಂದರೆ ಯುಯೆನ್ ಯುಯೆನ್ ಆ್ಯಂಗ್ ಅವರು 2021ರಲ್ಲಿ ಬರೆದ ‘ಚೈನಾಸ್ ಗಿಲ್ಡಡ್ ಏಜ್’ ಕೃತಿ. ಅವರು ಇದರಲ್ಲಿ ನಾಲ್ಕು ಭಿನ್ನ ಬಗೆಯ ಭ್ರಷ್ಟಾಚಾರಗಳನ್ನು ಗುರುತಿಸಿದ್ದಾರೆ. 1) ಸಣ್ಣಪುಟ್ಟ ಕಳ್ಳತನ (ಅಂದರೆ, ತಳ ಹಂತದ ಅಧಿಕಾರಿಗಳಿಂದ ನಡೆಯುವ ಸುಲಿಗೆ ಹಾಗೂ ಸಾರ್ವಜನಿಕರ ಹಣದ ದುರ್ಬಳಕೆ), 2) ಭಾರಿ ಪ್ರಮಾಣದ ಕಳ್ಳತನ (ಅಂದರೆ, ರಾಜಕಾರಣದಲ್ಲಿ ಮೇಲಿನ ಹಂತಗಳಲ್ಲಿ ಇರುವವರು ದೊಡ್ಡ ಮಟ್ಟದಲ್ಲಿ ಸಾರ್ವಜನಿಕರ ಹಣವನ್ನು ದುರ್ಬಳಕೆ ಮಾಡಿಕೊಳ್ಳುವುದು), 3) ವೇಗವಾಗಿ ಹಣ ಮಾಡುವುದು (ಅಧಿಕಾರಶಾಹಿ ಸೃಷ್ಟಿಸುವ ಅಡ್ಡಿಗಳನ್ನು ದಾಟಿ ಮುನ್ನಡೆಯಲು ಹಣ ಕೊಡುವುದು), 4) ಸ್ಥಾನಮಾನದ ಹಣ (ಅಂದರೆ, ಗುತ್ತಿಗೆಗೆ ಪ್ರತಿಯಾಗಿ ಉದ್ಯಮಿಗಳು ರಾಜಕಾರಣಿಗಳು ಹಾಗೂ ಅಧಿಕಾರಿಗಳಿಗೆ ಕೊಡುವ ಸೌಲಭ್ಯಗಳು ಮತ್ತು ಹಣ. ಇಂತಹ ಕೊಡುಗೆಗಳು ಒಟ್ಟಾರೆ ಹೂಡಿಕೆಯನ್ನು ಹೆಚ್ಚು ಮಾಡುತ್ತವೆ. ಆ ಮೂಲಕ ಆರ್ಥಿಕ ಚಟುವಟಿಕೆಯನ್ನು ಕೂಡ ಜಾಸ್ತಿ ಮಾಡುತ್ತವೆ).

ಮೊದಲ ಮೂರು ಬಗೆಯ ಭ್ರಷ್ಟಾಚಾರಗಳು ದೇಶದ ಆರ್ಥಿಕ ಬೆಳವಣಿಗೆಗೆ ತೊಂದರೆ ಉಂಟುಮಾಡುತ್ತವೆ ಎಂದು ಲೇಖಕಿ ವಾದಿಸುತ್ತಾರೆ. ಆದರೆ, ಚೀನಾ ದೇಶವು ನಾಲ್ಕನೆಯ ಬಗೆಯ ಭ್ರಷ್ಟಾಚಾರದ ಕಡೆಗೆ ಹೆಚ್ಚೆಚ್ಚು ವಾಲುತ್ತಿದೆ. ಇದು ಹೂಡಿಕೆಗಳನ್ನು ಹೆಚ್ಚಿಸುವ ಭ್ರಷ್ಟಾಚಾರ, ಹಾಗಾಗಿಯೇ ಬೆಳವಣಿಗೆಯನ್ನು ಉತ್ತೇಜಿಸುವಂತಹ ಭ್ರಷ್ಟಾಚಾರ. ಈ ಪ್ರಕ್ರಿಯೆಯಲ್ಲಿ ಕಮ್ಯುನಿಸ್ಟ್ ಪಕ್ಷದ ಎಲ್ಲ ಹಂತಗಳ ಮೇಲ್ವರ್ಗದ ಜನರಿಗೆ ಲಾಭ ಆಗುತ್ತಿದೆ. 1995ರಿಂದ 2015ರ ನಡುವಿನ ಅವಧಿಯಲ್ಲಿ ಚೀನಾದ ಹೂಡಿಕೆ/ಜಿಡಿಪಿ ಅನುಪಾತವು ಶೇಕಡ 40ಕ್ಕಿಂತ ಕಡಿಮೆ ಆಗಿಯೇ ಇಲ್ಲ. ಆ ದೇಶದ ವಾರ್ಷಿಕ ಬೆಳವಣಿಗೆ ಪ್ರಮಾಣವು ಶೇ 9ರ ಮಟ್ಟಕ್ಕಿಂತ ಕಡಿಮೆ ಆಗಿದ್ದು ಬಹಳ ಅಪರೂಪ.

ಅದಾನಿ ಹಾಗೂ ಬಿಜೆಪಿ ನೇತೃತ್ವದ ಸರ್ಕಾರದ ನಡುವಿನ ಸಂಬಂಧವು ನಾಲ್ಕನೆಯ ಬಗೆಯ ಭ್ರಷ್ಟಾಚಾರ ಎಂದು ವಾದಿಸಬಹುದು. ಬಿಜೆಪಿಗೆ ಅವರು ವಿಶೇಷವಾಗಿ ಏನೇ ಕೊಡುಗೆ ನೀಡಿದ್ದಿರಬಹುದು. ಆದರೆ ಅವರ ಹೂಡಿಕೆಗಳು ಹೆಚ್ಚು ಇರುವುದು ಮೂಲಸೌಕರ್ಯ, ಇಂಧನ, ಧಾನ್ಯ ದಾಸ್ತಾನು, ಸಿಮೆಂಟ್ ವಲಯಗಳಲ್ಲಿ. ಅಂದರೆ, ತಾತ್ವಿಕವಾಗಿ ಈ ಹೂಡಿಕೆಗಳು ಬೆಳವಣಿಗೆಯನ್ನು ಉತ್ತೇಜಿಸುವಂಥವು ಎಂದು ಹೇಳಬಹುದು. ಆದರೆ ಈ ಬಗೆಯ ವಾದವು ಬಹಳ ಸರಳೀಕೃತ ಹೋಲಿಕೆ ಆಗುತ್ತದೆ. ಮೋದಿ ನೇತೃತ್ವದ ಭಾರತವನ್ನು ಹೋಲಿಕೆ ಮಾಡಬೇಕಿರುವುದು ಚೀನಾ ಜೊತೆಗೆ ಅಲ್ಲ. ಬದಲಿಗೆ, ಎರಡನೆಯ ಮಹಾಯುದ್ಧದ ನಂತರದ ಮೊದಲ ನಾಲ್ಕು ಏಷ್ಯನ್ ಟೈಗರ್‌ಗಳ ಪೈಕಿ ಒಂದಾದ ದಕ್ಷಿಣ ಕೊರಿಯಾ ಜೊತೆ. 60ರ ದಶಕದ ಆರಂಭದಲ್ಲಿ ದಕ್ಷಿಣ ಕೊರಿಯಾದ ತಲಾವಾರು ಆದಾಯವು ಸರಿಸುಮಾರು ಭಾರತದ ತಲಾವಾರು ಆದಾಯದಷ್ಟೇ ಇತ್ತು. ಆದರೆ 2021ರ ಡಿಸೆಂಬರ್ ಹೊತ್ತಿಗೆ ದಕ್ಷಿಣ ಕೊರಿಯಾದ ತಲಾ ಆದಾಯವು ವಿಶ್ವಬ್ಯಾಂಕ್ ಅಂದಾಜಿನ ಪ್ರಕಾರ 34,758 ಡಾಲರ್ ಆಗಿತ್ತು. ಆ ಹೊತ್ತಿನಲ್ಲಿ ಭಾರತದ ತಲಾ ಆದಾಯವು 2,100 ಡಾಲರ್ ಮಾತ್ರ ಆಗಿತ್ತು. (ತಲಾ ಆದಾಯದ ಲೆಕ್ಕದಲ್ಲಿ ಚೀನಾ ಬಹಳ ದೊಡ್ಡ ಆದಾಯ ಹೊಂದಿರುವ ದೇಶವಲ್ಲ. ಅಲ್ಲಿನ ತಲಾ ಆದಾಯವು 10,262 ಡಾಲರ್ ಮಾತ್ರ.)

ದಕ್ಷಿಣ ಕೊರಿಯಾದ ‘ಗಿಲ್ಡಡ್ ಏಜ್’ 1960ರ ದಶಕದ ಮಧ್ಯಭಾಗದಲ್ಲಿ ಆರಂಭವಾಯಿತು. ಆ ಕಾಲಘಟ್ಟದ ವಿಶಿಷ್ಟ ಲಕ್ಷಣದ ಕಾರಣಕ್ಕಾಗಿ ಭಾರತವನ್ನು ಆ ದೇಶದ ಜೊತೆ ಹೋಲಿಸುವುದು ಹೆಚ್ಚು ಸೂಕ್ತವಾಗುತ್ತದೆ. ಆ ಕಾಲವು ಸ್ಯಾಮ್‌ಸಂಗ್‌, ಹುಂಡೈ, ಎಲ್‌ಜಿ, ಹಾಂಜಿನ್‌ನಂತಹ, ‘ರಾಷ್ಟ್ರದ ಪಾಲಿಗೆ ಚಾಂಪಿಯನ್‌’ಗಳು ಎಂದು ಕರೆಸಿಕೊಂಡ ಕಂಪನಿಗಳನ್ನು ಒಳಗೊಂಡ ಗಿಲ್ಡಡ್ ಏಜ್. ಇವು ವಾಸ್ತವದಲ್ಲಿ ಕುಟುಂಬಗಳ ಪ್ರಾಬಲ್ಯದ, ಹಲವು ವಲಯಗಳಲ್ಲಿ ಕಾರ್ಯಚಟುವಟಿಕೆ ಹೊಂದಿದ್ದ ವಾಣಿಜ್ಯ ಸಮೂಹಗಳು. ಇವು ಕೂಡ ದಕ್ಷಿಣ ಕೊರಿಯಾದ ಅರ್ಥ ವ್ಯವಸ್ಥೆಯ ರೀತಿಯಲ್ಲಿಯೇ ಸರ್ಕಾರದ ಪೋಷಣೆಯಲ್ಲಿ ಬೆಳೆದವು. ಆದರೆ ಇವುಗಳ ಬೆಳವಣಿಗೆಯ ಜೊತೆಯಲ್ಲಿಯೇ ಭ್ರಷ್ಟಾಚಾರವೂ ಬೆಸೆದುಕೊಂಡಿತ್ತು. ದಕ್ಷಿಣ ಕೊರಿಯಾದ ರಾಜಕೀಯ ಅರ್ಥ ವ್ಯವಸ್ಥೆಯ ಬಗ್ಗೆ ಅಧಿಕಾರಯುತವಾಗಿ ಮಾತನಾಡಬಲ್ಲ ವಿದ್ವಾಂಸ, ಸದರ್ನ್ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಡೇವಿಡ್ ಕಾಂಗ್ ಅವರು ‘ಇನ್ ಕ್ರೋನಿ ಕ್ಯಾಪಿಟಲಿಸಂ’ ಕೃತಿಯಲ್ಲಿ ಹೀಗೆ ಬರೆದಿದ್ದಾರೆ: ‘ಕೊರಿಯಾದ ರಾಜಕೀಯದ ಇತಿಹಾಸದಲ್ಲಿ ಹಗರಣಗಳು ಮತ್ತೆ ಮತ್ತೆ ಆಗಿಹೋಗಿವೆ. ರಾಜಕೀಯ ಪ್ರಭಾವಕ್ಕೆ ಬದಲಾಗಿ ಹಣದ ಕೊಡು–ಕೊಳ್ಳುವಿಕೆ ನಡೆದಿರುವುದು ಎಲ್ಲರಿಗೂ ಗೊತ್ತಿರುವ ರಹಸ್ಯ. ಜೈಲು ವಾಸ ಅನುಭವಿಸಿರುವ ಹಾಗೂ ಗಡೀಪಾರಿನ ಶಿಕ್ಷೆಗೆ ಗುರಿಯಾದವರಲ್ಲಿ ಮಾಜಿ ಅಧ್ಯಕ್ಷರು, ಅಧ್ಯಕ್ಷರ ಮಾಜಿ ಸಿಬ್ಬಂದಿ, ಮಿಲಿಟರಿ ಅಧಿಕಾರಿಗಳು, ರಾಜಕಾರಣಿಗಳು, ಅಧಿಕಾರಿಗಳು, ಬ್ಯಾಂಕರ್‌ಗಳು, ಉದ್ಯಮಿಗಳು ಹಾಗೂ ತೆರಿಗೆ ಸಂಗ್ರಹದ ಹೊಣೆಹೊತ್ತಿದ್ದವರು ಇದ್ದಾರೆ. ಬೆಳವಣಿಗೆಯು ಅದೆಷ್ಟು ಅದ್ಭುತ ಮಟ್ಟದಲ್ಲಿತ್ತು ಎಂದರೆ, ಭ್ರಷ್ಟಾಚಾರದ ವಾಸ್ತವವನ್ನು ಮುಚ್ಚಿಹಾಕಲಾಗಿತ್ತು’.

ಆದರೆ ಕುಟುಂಬಗಳ ಪ್ರಾಬಲ್ಯವಿದ್ದ ಕೊರಿಯಾದ ಕಂಪನಿಗಳು ಹಾಗೂ ಅದಾನಿ ಸಮೂಹದ ನಡುವೆ ಇರುವ ಒಂದು ದೊಡ್ಡ ವ್ಯತ್ಯಾಸವೆಂದರೆ, ಕೊರಿಯಾದ ಕಂಪನಿಗಳು ಅಂತರರಾಷ್ಟ್ರೀಯ ಮಟ್ಟದ ವ್ಯಾಪಾರೋದ್ಯಮ ವಹಿವಾಟುಗಳಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದವು. ಸ್ಯಾಮ್‌ಸಂಗ್, ಹುಂಡೈ, ಎಲ್‌ಜಿ ಕಂಪನಿಗಳು ಉತ್ಪನ್ನಗಳನ್ನು ತಯಾರಿಸಿ, ಅವುಗಳ ಮಾರಾಟದಲ್ಲಿ ತೊಡಗಿಸಿಕೊಂಡಂಥವು. ಈ ಕಂಪನಿಗಳು ಕಂಪ್ಯೂಟರ್‌ಗಳನ್ನು, ಮೊಬೈಲ್‌ ಫೋನ್‌ಗಳನ್ನು, ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು, ಸೆಮಿಕಂಡಕ್ಟರ್‌ಗಳನ್ನು, ವಾಹನಗಳನ್ನು ತಯಾರಿಸಿವೆ ಹಾಗೂ ವಿಶ್ವದ ಇತರ ಕಂಪನಿಗಳ ಜೊತೆ ಸ್ಪರ್ಧಿಸಿವೆ. ಅಂತರರಾಷ್ಟ್ರೀಯ ಮಾರುಕಟ್ಟೆಯ ಸ್ಪರ್ಧಾತ್ಮಕತೆಯು ಈ ಕಂಪನಿಗಳ ವಹಿವಾಟುಗಳಿಗೆ ಶಿಸ್ತಿನ ಬೇಲಿಯೊಂದನ್ನು ಹಾಕಿದೆ, ಅದರಿಂದಾಗಿ ಅವುಗಳ ದಕ್ಷತೆಯು ಬಹಳ ದೊಡ್ಡ ಮಟ್ಟದಲ್ಲಿ ಬೆಳೆದಿದೆ.

ಅದಾನಿ ಸಮೂಹವು ಈ ರೀತಿ ಉತ್ಪನ್ನಗಳ ಮಾರಾಟ ವಹಿವಾಟಿನಲ್ಲಿ ಹೆಚ್ಚು ತೊಡಗಿಸಿಕೊಂಡಿಲ್ಲ. ಬಂದರು, ವಿಮಾನ ನಿಲ್ದಾಣ, ಧಾನ್ಯಗಳ ದಾಸ್ತಾನು, ವಿದ್ಯುತ್ ಉತ್ಪಾದನೆ... ಇವೆಲ್ಲ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉತ್ಪನ್ನವಾಗಿ ಮಾರಾಟ ಆಗುವಂಥವಲ್ಲ. ಇವುಗಳೆಲ್ಲ ಸರ್ಕಾರದ ಬೆಂಬಲ ಪಡೆದಿರುವ ಹಾಗೂ ದೇಶಿ ಮಾರುಕಟ್ಟೆಯನ್ನು ಆದ್ಯತೆಯಾಗಿ ಇರಿಸಿಕೊಂಡಿರುವಂಥವು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ವಹಿವಾಟಿನಲ್ಲಿ ತೊಡಗಿಸಿಕೊಳ್ಳುವುದರಿಂದಾಗಿ ಸಿಗುವ ದಕ್ಷತೆ ಇಲ್ಲಿ ಇರುವುದಿಲ್ಲ. ಅದಾನಿ ಸಮೂಹವು ಸ್ಯಾಮ್‌ಸಂಗ್‌ ಅಲ್ಲ– ಕೇಂದ್ರದ ಸಹಾಯ ಇಲ್ಲದೆ ಈ ಸಮೂಹವು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದಾದಂಥದ್ದು ಹೆಚ್ಚೇನೂ ಇಲ್ಲ. ಭಾರತದ ಮಾಹಿತಿ ತಂತ್ರಜ್ಞಾನ ಉದ್ಯಮ ವಲಯ ಹೊಂದಿರುವ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕತೆಯ ಜೊತೆಗೂ ಈ ಸಮೂಹವನ್ನು ಹೋಲಿಸಲಾಗದು. ದಕ್ಷಿಣ ಕೊರಿಯಾ ಜೊತೆ ಹೋಲಿಸಿದರೆ, ಅದಾನಿ–ಸರ್ಕಾರದ ನಡುವಿನ ಸಂಬಂಧವು ಬಹಳ ಭಿನ್ನ. ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕತೆ ಇಲ್ಲದೆ, ಅರ್ಥ ವ್ಯವಸ್ಥೆಯ ಮೇಲೆ ಇದರ ಪ್ರಯೋಜನಗಳು ಬಹಳ ಸೀಮಿತ.

ವಾಸ್ತವದಲ್ಲಿ, ಅದಾನಿ ಸಮೂಹದ ಸುತ್ತ ಮೊದಲ ಶಿಸ್ತಿನ ಚೌಕಟ್ಟು ಅಂತೂ ರೂಪುಗೊಂಡಿರುವುದು ಅಂತರರಾಷ್ಟ್ರೀಯ ವ್ಯಾಪಾರ ವಹಿವಾಟಿನ ಕಾರಣದಿಂದಾಗಿ ಅಲ್ಲ. ಬದಲಿಗೆ, ಅಂತರರಾಷ್ಟ್ರೀಯ ಹಣಕಾಸು ವ್ಯವಸ್ಥೆಯ ಕಾರಣದಿಂದಾಗಿ. ಈ ಸಮೂಹದ ವಾಣಿಜ್ಯೋದ್ಯಮದ ಬಗೆಯನ್ನು ಅಂತರರಾಷ್ಟ್ರೀಯ ಬಂಡವಾಳ ಮಾರುಕಟ್ಟೆಗಳು ಶಿಕ್ಷೆಗೆ ಗುರಿಪಡಿಸಿವೆ. ಕಥೆಯು ಇಲ್ಲಿಗೇ ಕೊನೆಗೊಂಡಿಲ್ಲ. ಮುಂದಿನ ದಿನಗಳಲ್ಲಿ ಇನ್ನಷ್ಟು ಇದೆ...

ಲೇಖಕ ಬ್ರೌನ್ ವಿಶ್ವವಿದ್ಯಾಲಯದ ಅಂತರರಾಷ್ಟ್ರೀಯ ಅಧ್ಯಯನ ಹಾಗೂ ಸಮಾಜ ವಿಜ್ಞಾನದ ಸೋಲ್ ಗೋಲ್ಡ್‌ಮ್ಯಾನ್‌ ಪ್ರೊಫೆಸರ್.

(ಲೇಖನವು ದಿ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ಮೊದಲು ಪ್ರಕಟವಾಗಿತ್ತು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT