ಭಾರತದ ಸಾಮಾಜಿಕ ಇತಿಹಾಸದಲ್ಲಿ ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಮಾನವ ಹಕ್ಕುಗಳಿಗಾಗಿ ಹೋರಾಡಿದವರು ವೈಚಾರಿಕ ಚಿಂತಕ ಭಕ್ತಿ ಭಂಡಾರಿ ಬಸವೇಶ್ವರರು. ಅವರು ಪ್ರತಿಪಾದಿಸಿದ ಆಶಯಗಳು, ಸಮಾಜದ ಪರಿವರ್ತನೆಗೆ ಶ್ರಮಿಸಿದ ಪರಿ ಇಂದಿಗೂ ಆದರ್ಶ ಎನ್ನುವುದರಲ್ಲಿ ಎರಡು ಮಾತಿಲ್ಲ.

12ನೇ ಶತಮಾನದಲ್ಲಿ ಸಮಾಜದಲ್ಲಿ ಅನೇಕ ಕಟ್ಟುಪಾಡುಗಳಿಂದ ನಿರ್ಮಿತವಾದ ವರ್ಣಾಶ್ರಮ ಪದ್ಧತಿಯ ಕಾಲವಾಗಿತ್ತು. ದಲಿತ ಮತ್ತು ಕೆಳ ಸ್ತರದ, ಶೋಷಿತ ವರ್ಗಗಳ ಪರವಾಗಿ ಹೋರಾಡಿ, ಅಗ್ರಹಾರ ಸಂಸ್ಕೃತಿಯಿಂದ ಹೊರಬಂದು, ಅನುಭವ ಮಂಟಪವನ್ನು ಕಟ್ಟಿ, ಶೋಷಿತ, ದಲಿತ, ಹಿಂದುಳಿದ ವರ್ಗದವರ ಪರವಾಗಿ, ಸಾಮಾಜಿಕ ಸಮಾನತೆಗಾಗಿ ಶ್ರಮಿಸಿದವರು ಬಸವೇಶ್ವರರು.

ಮಡಿವಾಳ ಮಾಚಿದೇವ, ಡೋಹರ ಕಕ್ಕಯ್ಯ, ಅಂಬಿಗರ ಚೌಡಯ್ಯ, ಕುಂಬಾರ ಗುಂಡಯ್ಯ, ಹಡಪದ ಅಪ್ಪಣ್ಣ, ಮಾದರ ಚೆನ್ನಯ್ಯ ಮುಂತಾದ ಅನೇಕ ತಳ ಸಮುದಾಯದ ಶೋಷಿತ ಜನರು ಬಸವಣ್ಣನವರ ಆಪ್ತರಾಗಿದ್ದರು. ಅದರಲ್ಲಿಯೂ ಬಸವಣ್ಣರ ಆಪ್ತ ಕಾರ್ಯದರ್ಶಿ ಹಡಪದ ಅಪ್ಪಣ್ಣ ಆಗಿದ್ದುದು ವಿಶೇಷ. ಈ ಮೂಲಕ ಈ ಶೋಷಿತ ವರ್ಗಕ್ಕೆ ಬಸವಣ್ಣನವರು ಎಷ್ಟು ಪ್ರಾಧಾನ್ಯತೆ ನೀಡುತ್ತಿದ್ದರು ಎಂಬುದನ್ನು ಮನಗಾಣಬಹುದು.

ಸೆಟ್ಟಿಯೆಂಬೆನೆ ಸಿರಿಯಾಳನ?

ಮಡಿವಾಳನೆಂಬನೆ ಮಾಚಯ್ಯನ?

ಡೋಹರನೆಂಬೆನೆ ಕಕ್ಕಯ್ಯನ?

ಮಾದಾರನೆಂಬೆನೆ ಚನ್ನಯ್ಯನ?

ಆನು ಹಾರುವನೆಂದರೆ ಕೂಡಲ ಸಂಗಯ್ಯ ನಗುವನಯ್ಯ?

ಎಂದು ಹೇಳುವ ಮೂಲಕ ಕೆಳಸ್ತರದ ವ್ಯಕ್ತಿಗಳಲ್ಲಿ ಎಷ್ಟು ಆಸಕ್ತಿಯನ್ನು ಇಟ್ಟುಕೊಂಡು ಎಲ್ಲರೂ ಸಮಾನರೆಂದು ಬಸವಣ್ಣನವರು ಅರ್ಥೈಸಿದ ರೀತಿ ಬಹಳ ವಿಶೇಷವಾದದ್ದು. ಅನುಭವ ಮಂಟಪದ ಶಿವಶರಣರು ಸಾಮಾನ್ಯ ಭಾಷೆಯಾದ ಕನ್ನಡದಲ್ಲಿ ವಚನಗಳನ್ನು ಬರೆದು, ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಅವಕಾಶ ನೀಡಿದ ಕಾಲಘಟ್ಟವಾಗಿ ನಮ್ಮ ಮುಂದೆ ಇದೆ. ಇಂದಿಗೂ ಅಂತರ್ಜಾತಿ ವಿವಾಹವೆಂದರೆ ಮೂಗುಮುರಿಯುವ ಮತ್ತು ಜಾತಿ ಪ್ರತಿಷ್ಠೆಗೆ ಕುಂದು ಎಂದು ಭಾವಿಸುವ ಸಂದರ್ಭವಿರುವಾಗ ಶರಣ ಹರಳಯ್ಯನ ಮಗನಿಗೆ, ಮಧುವರಸನ ಮಗಳೊಂದಿಗೆ ಮದುವೆಯನ್ನು ಮಾಡಿ ಅಂತರ್ಜಾತಿಯ ವಿವಾಹಕ್ಕೆ ಮುನ್ನುಡಿ ಬರೆದ ಪರಿ ನಿಜಕ್ಕೂ ವಿಶೇಷವಾದದ್ದು.

ಜಾತಿ ಪದ್ಧತಿಯ ನಿರ್ಮೂಲನೆ

12ನೇ ಶತಮಾನದಲ್ಲೇ ‘ಇವನಾರವ ಇವನಾರವ ಎನ್ನದೆ, ಇವ ನಮ್ಮವ, ಇವ ನಮ್ಮವ ಎಂದೆನಿಸಯ್ಯ’ ಎಂದು ಸಾರುವ ಮೂಲಕ ಜಾತಿ ರಹಿತ ಸಮಾಜದ ಕನಸು ಕಂಡವರು. ಅನುಭವ ಮಂಟಪದ ಮೂಲಕ ಕೆಳವರ್ಗದವರಿಗೆ ಧಾರ್ಮಿಕ ಮತ್ತು ಸಾಮಾಜಿಕ ಸಮಾನತೆ ನೀಡಿದ ಬಸವಣ್ಣನವರ ನಿಲುವು ಅನುಕರಣೀಯ ಮತ್ತು ಆದರ್ಶವಾದುದು. ಅಸ್ಪೃಶ್ಯತೆಯನ್ನು ಹೋಗಲಾಡಿಸಿ ಪ್ರತಿಯೊಬ್ಬರಿಗೂ ಸಮಾನ ಹಕ್ಕುಗಳನ್ನು ಒದಗಿಸುವ, ಜಾತಿ ಪದ್ಧತಿಯನ್ನು ತೊಡೆದು ಹಾಕುವ ಗುರಿಯನ್ನು ಹೊಂದಿದ್ದರು. ಸಾಮಾನ್ಯ ಕೂಲಿಕಾರನಾಗಲಿ, ದೇಶವನ್ನಾಳುವ ದೊರೆ ಆಗಲಿ ಒಂದೇ, ಎಲ್ಲರೂ ಪ್ರಜೆಗಳು ಎಂಬ ಭಾವನೆ ಬರುವಲ್ಲಿ ಶ್ರಮಿಸಿದರು.

ಕಾಯಕ ಮತ್ತು ಶ್ರಮದ ಗೌರವ

ಬಸವಣ್ಣನವರು 'ಕಾಯಕವೇ ಕೈಲಾಸ' ಎಂಬ ತತ್ವದ ಮೂಲಕ ತಾವು ನಿರ್ವಹಿಸುವ ಕೆಲಸಕ್ಕೆ ದೈವತ್ವವನ್ನು ನೀಡಿದವರು. ಯಾವುದೇ ಕೆಲಸ ಕೀಳಲ್ಲ ಯಾವುದೇ ಕೆಲಸ ಮೇಲಲ್ಲ ಎಂದು ಪ್ರತಿಪಾದಿಸಿದರು. ‘ದೇವ ಸಹಿತ ಭಕ್ತ ಮನೆಗೆ ಬಂದರೆ ನಿಮ್ಮ ಕಾಯಕ ಆವುದೆಂದು ಬೆಸಗೊಂಡಡೆಯಾದರೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ ತಲೆದಂಡ’ ಎಂದು ಹೇಳುವ ಮೂಲಕ ಕಾಯಕ ತತ್ವಕ್ಕೆ ಹೊಸ ವ್ಯಾಖ್ಯಾನ ನೀಡಿದರು. ತಾವು ಕೆಲಸ ನಿರ್ವಹಿಸುವ ಸಂದರ್ಭದಲ್ಲಿ ಸಾಕ್ಷಾತ್ ದೇವರೇ ಬಂದರೂ ಮಾಡುವ ಕೆಲಸ ಮುಖ್ಯ ಎಂಬುದನ್ನು ಪ್ರತಿಪಾದಿಸಿದರು.

ಸ್ತ್ರೀ ಸಮಾನತೆ

ಬಸವಣ್ಣನವರು ಹನ್ನೆರಡನೆಯ ಶತಮಾನದ ಸಂಪ್ರದಾಯ ಬದ್ಧ ಸಮಾಜದಲ್ಲಿ, ಮಹಿಳೆಯರಿಗೆ ಅನುಭವ ಮಂಟಪದಲ್ಲಿ ಅವಕಾಶ ನೀಡಿ ಅವರು ವಚನಗಳನ್ನು ರಚಿಸಲು ಪ್ರೇರೇಪಿಸಿದರು. ಬಾಗೇವಾಡಿಯ ಅಗ್ರಹಾರದಲ್ಲಿ ಅಕ್ಕ ನಾಗಮ್ಮನಿಗೆ ಜನಿವಾರ ಹಾಕುವುದಿಲ್ಲ ಎಂದು ತಿಳಿದಾಗ ಈ ಅಸಮಾನತೆಯ ವ್ಯವಸ್ಥೆಯಲ್ಲಿ ತಾನು ಇರುವುದು ಬೇಡ ಎಂದು ಹೊರ ನಡೆದ ಬಸವಣ್ಣನವರು ಮಹಿಳಾ ಸಮಾನತೆಗಾಗಿ, ಪುರುಷ ಮತ್ತು ಮಹಿಳೆ ಬೇರೆಯಲ್ಲ ಎಂಬುದನ್ನು ಪ್ರತಿಪಾದಿಸಿದ್ದು ಬಹಳ ವಿಶೇಷವಾದದ್ದು. ಕಲ್ಯಾಣದ ರಾಜ ಬೀದಿಯಲ್ಲಿ ಕಸಗುಡಿಸುವ ಸತ್ಯಕ್ಕ, ನೀಲಮ್ಮ, ಸೂಳೆ ಸಂಕವ್ವೆ, ನಾಗಮ್ಮ, ಗೊಗ್ಗವ್ವೆ, ಕೇತಲದೇವಿ ಮುಂತಾದ ಅನೇಕ ವಚನಕಾರ್ತಿಯರು ಅನುಭವ ಮಂಟಪದಲ್ಲಿ ತಮ್ಮ ವಚನಗಳನ್ನು ರಚಿಸುವ ಮೂಲಕ ಪುರುಷನಷ್ಟೇ ‘ನಡುವೆ ಸುಳಿವ ಆತ್ಮ ಗಂಡೂ ಅಲ್ಲ, ಹೆಣ್ಣೂ ಅಲ್ಲ ಕಾಣಾ’ ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ.

ಏಕೆಂದರೆ ಮಹಿಳೆಯನ್ನು ದೇವತೆಯ ಸ್ಥಾನದಲ್ಲಿ ನಿಲ್ಲಿಸಿ, ಪೂಜನೀಯ ಗೌರವವನ್ನು ತೋರಿಸಿದರೂ, ಆಕೆ ಶೋಷಣೆಯಿಂದ ಮುಕ್ತವಾಗಿರಲಿಲ್ಲ ಎಂಬುದನ್ನು ಸಮಾಜ ಅರಿತಿದ್ದಿದೆ. ಎಲ್ಲಾ ಮನುಷ್ಯರು ಸಮಾನರು ಎಂಬ ತತ್ವಕ್ಕೆ ಬದ್ಧರಾಗಿದ್ದರು.

ಶಿಕ್ಷಣ ಮತ್ತು ಜನಜಾಗೃತಿ

ಬಸವಣ್ಣನವರು ಸಂಸ್ಕೃತದಲ್ಲಿದ್ದ ಜ್ಞಾನವನ್ನು ಸಾಮಾನ್ಯ ಜನರಿಗೆ ಅರ್ಥವಾಗುವಂತೆ, ಜನರಾಡುವ ಭಾಷೆಯಾದ ಕನ್ನಡ ಭಾಷೆಯಲ್ಲಿ ವಚನಗಳನ್ನು ರಚಿಸುವ ಮೂಲಕ ಜನಸಮುದಾಯಕ್ಕೆ ತಲುಪಿಸುವ ಪ್ರಯತ್ನ ಮಾಡಿದವರು. 'ದೇವವಾಣಿ ಜನವಾಣಿಯಾಗದಿದ್ದಾಗ ಜನವಾಣಿಯನ್ನು ದೇವವಾಣಿಯನ್ನಾಗಿಸಿದ' ಶರಣರ ವಚನಗಳು ಜನ ಸಮುದಾಯಕ್ಕೆ ಶಿಕ್ಷಣವನ್ನು ನೀಡುವ ಮೂಲಕ, ತಮ್ಮಲ್ಲಿರುವ ಅಜ್ಞಾನ, ಅಂಧಕಾರ, ಮೂಢನಂಬಿಕೆಗಳಿಂದ ಜಾಗೃತರಾಗಿ, ವೈಚಾರಿಕವಾಗಿ ಚಿಂತಿಸಿ, ತಮ್ಮ ಬದುಕನ್ನು ಕಟ್ಟಿಕೊಳ್ಳುವಲ್ಲಿ ವಚನಗಳು ನೆರವಾದದ್ದು ವಿಶೇಷ. ತಮ್ಮ ಸುತ್ತ ಕಾಣುವ, ಸಮಾಜ ನಿರ್ಬಂಧಿಸಿರುವ, ಸ್ವಾಭಿಮಾನಕ್ಕೆ ಧಕ್ಕೆಯನ್ನು ನೀಡುವ, ವೈಚಾರಿಕವಲ್ಲದ ಅನೇಕ ವಿಷಯಗಳು ವಚನಗಳ ಮೂಲಕ ಸಮುದಾಯದ ಪ್ರಜ್ಞೆಯಾಗಿ ಸಮುದಾಯವನ್ನು ತಿದ್ದುವಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸಿದವು.

ದಾಸೋಹಕ್ಕೆ ಹೊಸ ವ್ಯಾಖ್ಯಾನ

ಕಾಯಕಕ್ಕೆ ಆದ್ಯತೆ ನೀಡಿದಂತೆಯೇ ದಾಸೋಹಕ್ಕೆ ವಿಶೇಷ ವ್ಯಾಖ್ಯಾನ ಬರೆದದ್ದು ಬಸವಣ್ಣನವರ ಹೆಗ್ಗಳಿಕೆ. ಅನುಭವ ಮಂಟಪದಲ್ಲಿ ಎಲ್ಲರೂ ಹಂಚಿ ಉಣ್ಣುವ ಮೂಲಕ ಲಕ್ಷದ ಮೇಲೆ ತೊಂಬತ್ತಾರು ಸಾವಿರ ಗಣಂಗಳು ಸಮಾನವಾಗಿ ಕುಳಿತು ಭೋಜನ ಸ್ವೀಕರಿಸಿದ್ದು ವಿಶೇಷ. ‘ಸೋಹಂ ಎಂದೆನಿಸದೆ, ದಾಸೋಹಂ ಎಂದೆನಿಸಯ್ಯ' ಎಂಬ ಮಾತಿನಂತೆ’ ಕಾಗೆ ಕೋಳಿಗಳು ಹಂಚಿ ತಿನ್ನುವಾಗ, ಮನುಷ್ಯ ತಾನು ಕೂಡ ಪರಸ್ಪರರಿಗೆ ಕೊಟ್ಟು ತಿನ್ನುವ, ಹಂಚಿ ತಿನ್ನುವ' ಗುಣವನ್ನು ಬೆಳೆಸಿಕೊಳ್ಳಬೇಕೆಂದು ಪ್ರತಿಪಾದಿಸಿದರು.

ಪ್ರಜಾಪ್ರಭುತ್ವದ ಆಶಯ

ಬಸವಣ್ಣನವರು ಪ್ರಜಾಪ್ರಭುತ್ವದ ಆಶಯವನ್ನು ಎತ್ತಿ ಹಿಡಿದವರು. ಅನುಭವ ಮಂಟಪವನ್ನು ವಿಶ್ವದ ಮೊದಲ ಸಂಸತ್ತು ಎನ್ನಲಾಗುತ್ತದೆ. ಇಲ್ಲಿ ಚರ್ಚೆ ಮತ್ತು ಸಂವಹನಕ್ಕೆ ಮುಕ್ತ ಅವಕಾಶವಿದ್ದು, ಎಲ್ಲರೂ ತಮ್ಮ ಭಾವನೆಗಳನ್ನು ಅನಿಸಿಕೆಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಅವಕಾಶ ನೀಡಿದ ಕಾಲಘಟ್ಟ.

ಆರ್ಥಿಕ ಚಿಂತನೆ

ಬಸವಣ್ಣನವರು ಬಿಜ್ಜಳನ ಆಸ್ಥಾನದಲ್ಲಿ ಆರ್ಥಿಕ ಮಂತ್ರಿಯಾಗಿ ಸಾಮಾಜಿಕ ವ್ಯವಸ್ಥೆಯನ್ನು ಸರಿದೂಗಿಸಿದ್ದು ಬಹಳ ವಿಶೇಷ. ಕಾಯಕದಿಂದಷ್ಟೇ ಬರುವ ಪ್ರತಿಫಲ ತನ್ನದು, ಉಳಿದ ಹಣ ತನ್ನದಲ್ಲ ಎಂಬ ನಿಲುವಿನವರು. ಬಿಜ್ಜಳನ ಭಂಡಾರದ ಹಣ ಸಮಾಜಕ್ಕೆ ದುರ್ಬಳಕೆಯಾಗುತ್ತಿದೆ ಎಂದು ಹಲವರು ಆರೋಪಿಸಿದಾಗ 'ಊರ ಮುಂದೆ ಹಾಲ ಹಳ್ಳ ಹರಿಯುತ್ತಿರಲು ಬಿಜ್ಜಳನ ಭಂಡಾರಕ್ಕೆ ಆಸೆ ಪಡುವುದು ತರವಲ್ಲ'ವೆಂದು 'ಹೊನ್ನು, ವಸ್ತ್ರದಲ್ಲಿ ಇಂದಿಂಗೆ, ನಾಳಿಂಗೆ ಬೇಕೆಂದು ಬಯಸುವುದಿಲ್ಲ' ಎಂದು ಹೇಳುವ ಮೂಲಕ ಶುದ್ಧ ಕೈಯಾಗಿ ಬದುಕಿದವರು ಬಸವಣ್ಣನವರು.

ಒಟ್ಟಾರೆ ಬಸವಣ್ಣನವರು ಹನ್ನೆರಡನೆಯ ಶತಮಾನದಲ್ಲಿಯೇ ಸಾಮಾಜಿಕ ಕ್ರಾಂತಿ ಮಾಡಿದವರು. ಅವರು ಕೇವಲ ಧಾರ್ಮಿಕ ಸುಧಾರಕರಲ್ಲ, ಒಬ್ಬ ಶ್ರೇಷ್ಠ ಸಮಾಜ ವಿಜ್ಞಾನಿಯಾಗಿ, ಆರ್ಥಿಕ ಸಚಿವರಾಗಿ, ಕಾಯಕ - ದಾಸೋಹದ ರೂವಾರಿಗಳಾಗಿ ಸಂಪತ್ತನ್ನು ಸಂಗ್ರಹಿಸದೆ ಸಮಾಜಕ್ಕೆ ಹಂಚುವ ತತ್ವವನ್ನು ಸಾರಿದವರು. ಅದೇ ರೀತಿ ಅಂಬೇಡ್ಕರ್ ಅವರು ನವ ಭಾರತದ ನಿರ್ಮಾಣದಲ್ಲಿ ಅಡಿಪಾಯ ಹಾಕಿದವರು ಮತ್ತು ಶೋಷಿತರ ಧ್ವನಿಯಾದವರು.

ಬಸವಣ್ಣನವರು ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವದ ಬೀಜ ಬಿತ್ತಿದರು ಮತ್ತು ಅಧ್ಯಾತ್ಮ ಮತ್ತು ಸಾಮಾಜಿಕ ಕ್ರಾಂತಿಯ ಮೂಲಕ ಸಮಾನತೆಯ ದಾರಿ ತೋರಿಸಿದರು. ಧರ್ಮ, ಜಾತಿ, ಮತ, ಪಂಥ ಎಂಬ ಸಂಕುಚಿತತೆ, ಅಸಮಾನತೆ ದೂರವಾಗಿ, ಸಹೋದರತೆ, ಸಮಾನತೆ ಭ್ರಾತೃತ್ವ, ‘ಸರ್ವರಿಗೆ ಸಮಪಾಲು ಸರ್ವರಿಗೆ ಸಮಬಾಳು’ ಎಂಬ ತತ್ವದಡಿಯಲ್ಲಿ ಎಲ್ಲರೂ ಹಂಚಿ ತಿನ್ನುವ, ಅಹಿಂಸಾತ್ಮಕವಾಗಿ, ಪರಸ್ಪರ ಪ್ರೀತಿ- ಸೌಹಾರ್ದದಿಂದ ಬದುಕುವ ವಾತಾವರಣ ನಿರ್ಮಾಣವಾದಾಗ ಬಸವೇಶ್ವರರ ಆದರ್ಶಗಳು ನಿಜವಾಗಿಯೂ ಸಾಕಾರಗೊಳ್ಳುವಲ್ಲಿ ಎರಡು ಮಾತಿಲ್ಲ.

ಲೇಖಕರು: ಡಾ. ಗೋವಿಂದರಾಯ ಎಂ, ಕನ್ನಡ ಪ್ರಾಧ್ಯಾಪಕರು ಮತ್ತು ವಿಭಾಗದ ಮುಖ್ಯಸ್ಥರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.