ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಲಕ್ಷ್ಯ‘ಕ್ಕೆ ಮದ್ದು ಅರೆದರೆ ಶಿವಕುಮಾರ? ಹಿನ್ನೋಟ ಇಲ್ಲಿದೆ

ಮಂತ್ರವಾಗಿಯೇ ಉಳಿದ ಒಗ್ಗಟ್ಟು: ಪೈಪೋಟಿಯ ಗುಟ್ಟು ರಟ್ಟು
Published 17 ಮೇ 2023, 21:21 IST
Last Updated 17 ಮೇ 2023, 21:21 IST
ಅಕ್ಷರ ಗಾತ್ರ

ವೈ.ಗ. ಜಗದೀಶ್

ಬೆಂಗಳೂರು: ಹತ್ತು ವರ್ಷದ ಹಿಂದಿನ ‘ಅಲಕ್ಷ್ಯ’ದ ಧೋರಣೆಯನ್ನೇ ಸವಾಲಾಗಿ ಸ್ವೀಕರಿಸಿದ ಡಿ.ಕೆ. ಶಿವಕುಮಾರ್‌, ಮುಖ್ಯಮಂತ್ರಿ ಪಟ್ಟಕ್ಕೆ ಬಿಗಿ ಪಟ್ಟು ಹಾಕುವ ಮೂಲಕ ಸಿದ್ದರಾಮಯ್ಯ ಅವರ ಕನಸಿಗೆ ಮದ್ದು ಅರೆದಿದ್ದಾರೆಯೇ?

ಈ ಬಾರಿ ಮುಖ್ಯಮಂತ್ರಿಯಾಗಲೇಬೇಕು ಎಂದು ಶಿವಕುಮಾರ್ ಹಾಕುತ್ತಿರುವ ಒತ್ತಡ ತಂತ್ರದ ಹಿಂದೆ, ಇಂತಹದೊಂದು ಕಾರಣವೂ ಇದೆ. 2013ರಲ್ಲಿ ಕಾಂಗ್ರೆಸ್‌ಗೆ ಪೂರ್ಣ ಅಧಿಕಾರ ಬಂದು ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮೈಸೂರು ಮಿನರಲ್ಸ್‌ಗೆ ನಷ್ಟ ಉಂಟು ಮಾಡಿದ್ದರೆಂಬ ಆರೋಪವನ್ನೇ ಮುಂದಿಟ್ಟು ಶಿವಕುಮಾರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡಿರಲಿಲ್ಲ. ಸಂಪುಟಕ್ಕೆ ಸೇರುವ ಮಹದಾಕಾಂಕ್ಷೆ ಹೊಂದಿದ್ದ ಅವರು, ಹಲವು ರೀತಿಯ ಒತ್ತಡ ಹಾಕಿದ್ದರು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಜತೆಗೆ ಆಪ್ತ ಸಂಬಂಧ ಹೊಂದಿದ್ದ ಸಿದ್ದರಾಮಯ್ಯ, ಪಕ್ಷದಲ್ಲಿ ತಮ್ಮ ಪ್ರಬಲ ಹಿಡಿತ ಸಾಧಿಸಿದ್ದರು. ಸಿದ್ದರಾಮಯ್ಯ ಅವರು ದೆಹಲಿ ಭೇಟಿ ವೇಳೆ ಕರ್ನಾಟಕ ಭವನದಿಂದ ಕಾರಿನಲ್ಲಿ ಹೊರಟಾಗ, ಭೇಟಿಯಾದ ಶಿವಕುಮಾರ್ ಅವರು, ‘ಯಾವಾಗ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುತ್ತೀರಿ’ ಎಂದು ಕೇಳಿಕೊಂಡಿದ್ದರು. ‘ಈಗ ಆಗಲ್ಲ; ಲೋಕಸಭೆ ಚುನಾವಣೆ ಮುಗಿದ ಮೇಲೆ ನೋಡೋಣ’ ಎಂದು ಹೇಳಿದ್ದ ಮುಖ್ಯಮಂತ್ರಿ ಅಲ್ಲಿಂದ ಹೊರಟಿದ್ದರು. ಈ ಅಲಕ್ಷ್ಯದಿಂದ ಕುದಿದಿದ್ದ ಶಿವಕುಮಾರ್, ಆಗ ಸುಮ್ಮನಾಗಿದ್ದರು.

ಸಂಸದರಾಗಿದ್ದುಕೊಂಡೇ ವಿಧಾನಸಭೆ ಚುನಾವಣೆ ಎದುರಿಸಿ ಆಯ್ಕೆಯಾಗಿದ್ದ ಎಚ್‌.ಡಿ. ಕುಮಾರಸ್ವಾಮಿ (ಬೆಂಗಳೂರು ಗ್ರಾಮಾಂತರ) ಹಾಗೂ ಎನ್. ಚೆಲುವರಾಯಸ್ವಾಮಿ (ಮಂಡ್ಯ) ಅವರು ರಾಜೀನಾಮೆ ನೀಡಿದ್ದರು. ಹೀಗಾಗಿ, ಲೋಕಸಭೆಗೆ ಉಪ ಚುನಾವಣೆ ಎದುರಾಗಿತ್ತು. ಈ ಎರಡು ಕ್ಷೇತ್ರಗಳ ಚುನಾವಣೆ 2013ರ ಆಗಸ್ಟ್‌ನಲ್ಲಿ ನಡೆದಿತ್ತು. ಎರಡೂ ಕ್ಷೇತ್ರಗಳ ಚುನಾವಣೆ ಉಸ್ತುವಾರಿ ಶಿವಕುಮಾರ್ ಹೆಗಲೇರಿತ್ತು. ಗ್ರಾಮಾಂತರದಲ್ಲಿ ಡಿ.ಕೆ. ಸುರೇಶ್, ಮಂಡ್ಯದಲ್ಲಿ ರಮ್ಯಾ ಅವರನ್ನು ಗೆಲ್ಲಿಸಿಕೊಂಡು ಬಂದಿದ್ದರು. ಅದಕ್ಕೆ ಸಿದ್ದರಾಮಯ್ಯ ಕೂಡ ನೆರವು ನೀಡಿದ್ದರು.

ಚುನಾವಣೆ ಫಲಿತಾಂಶದ ಬಳಿಕವೂ ಶಿವಕುಮಾರ್ ಆಸೆ ಈಡೇರಿರಲಿಲ್ಲ. ಲೋಕಸಭೆ ಚುನಾವಣೆಯ ಗುಮ್ಮವನ್ನೇ ಮುಂದಿಡಲಾಗಿತ್ತು. ಆಗ ಹಟಕ್ಕೆ ಬಿದ್ದ ಶಿವಕುಮಾರ್, ವರಿಷ್ಠರ ಮೂಲಕ ನಿರ್ದೇಶನ ಕೊಡಿಸಿ 2014ರ ಜೂನ್‌ನಲ್ಲಿ ಸಂಪುಟಕ್ಕೆ ಸೇರಿದ್ದರು. ನಂತರ ನಡೆದ ಉಪ ಚುನಾವಣೆ ಉಸ್ತುವಾರಿಯಲ್ಲಿಯೂ ಯಶಸ್ಸು ತೋರಿದರು.

ಸಚಿವ ಸ್ಥಾನಕ್ಕೆ ಗೋಗರೆಯುವ ಪರಿಸ್ಥಿತಿಯಲ್ಲಿದ್ದ ಶಿವಕುಮಾರ್, ಈಗ ಮುಖ್ಯಮಂತ್ರಿ ಹುದ್ದೆಯನ್ನು ಯಾವುದೇ ಕಾರಣಕ್ಕೂ ಸಿದ್ದರಾಮಯ್ಯಗೆ ಬಿಟ್ಟುಕೊಡುವುದಿಲ್ಲ ಎಂಬಷ್ಟರ ಮಟ್ಟಿಗೆ ಪಕ್ಷದಲ್ಲಿ ತಮ್ಮ ಪ್ರಭಾವವನ್ನು ಬೆಳೆಸಿಕೊಂಡಿದ್ದಾರೆ.

2017ರಲ್ಲಿ ಗುಜರಾತ್ ವಿಧಾನಸಭೆಯಿಂದ ರಾಜ್ಯಸಭಾ ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆ ನಡೆದಿತ್ತು. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರ ಆಪ್ತ ಕಾರ್ಯದರ್ಶಿ ಅಹ್ಮದ್‌ ಪಟೇಲ್‌ ಅವರನ್ನು ಸೋಲಿಸಲು ಅಂದು ಬಿಜೆಪಿ ಅಧ್ಯಕ್ಷರಾಗಿದ್ದ ಅಮಿತ್ ಶಾ ಕಾರ್ಯತಂತ್ರ ಹೆಣೆದಿದ್ದರು. ಆ ಹೊತ್ತಿನಲ್ಲಿ 42 ಶಾಸಕರನ್ನು ಬೆಂಗಳೂರಿಗೆ ಕಳುಹಿಸಿದಾಗ, ಅವರ ರಕ್ಷಣೆ–ಆರೈಕೆಯ ಜವಾಬ್ದಾರಿಯನ್ನು ಪಕ್ಷ ಶಿವಕುಮಾರ್‌ ಅವರಿಗೆ ಹೊರಿಸಿತ್ತು. ಅದನ್ನು ಸಮರ್ಥವಾಗಿ ನಿಭಾಯಿಸಿದರು. ಅಲ್ಲಿಂದ ಸೋನಿಯಾ ಮನಗೆದ್ದ ಶಿವಕುಮಾರ್, ಪಕ್ಷದಲ್ಲಿ ತಮ್ಮ ಹಿಡಿತ ಸಾಧಿಸುತ್ತಲೇ ಹೋದರು.

ಶಿವಕುಮಾರ್ ಅವರ ಈಗಿನ ಛಲ ನೋಡಿದರೆ, ದಶಕದ ಹಿಂದೆ ತಮ್ಮನ್ನು ಅಲಕ್ಷಿಸಿ, ಸಚಿವ ಸ್ಥಾನ ಕೊಡಲು ಸತಾಯಿಸಿದ್ದ ಸಿದ್ದರಾಮಯ್ಯನವರಿಗೆ ಪಾಠ ಕಲಿಸಬೇಕು ಎಂದು ಅವರು ನಿಶ್ಚಯಿಸಿದಂತೆ ತೋರುತ್ತದೆ. ‘2006ರಲ್ಲಿ ಕಾಂಗ್ರೆಸ್‌ ಸೇರಿದ ಸಿದ್ದರಾಮಯ್ಯನವರು 2009ರಿಂದ 2023ರವರೆಗೆ ಶಾಸಕಾಂಗ ಪಕ್ಷದ ನಾಯಕರಾಗಿದ್ದಾರೆ. ಮೈತ್ರಿ ಸರ್ಕಾರದ ಅವಧಿಯಲ್ಲಿ ಸಮನ್ವಯ ಸಮಿತಿಯ ಜತೆಗೆ ಶಾಸಕಾಂಗ ಪಕ್ಷದ ನಾಯಕರೂ ಆಗಿದ್ದರು. ಎಂಟು ವರ್ಷ ವಿರೋಧ ಪಕ್ಷದ ನಾಯಕ, ಐದು ವರ್ಷ ಪೂರ್ಣಾವಧಿ ಮುಖ್ಯಮಂತ್ರಿಯಾಗಿದ್ದಾರೆ. ಈ ಬಾರಿ ತಮಗೆ ಅಧಿಕಾರ ಬಿಟ್ಟುಕೊಡಲಿ’ ಎಂಬ ವಾದವನ್ನೂ ಅವರು ಮುಂದಿಟ್ಟಿದ್ದಾರೆ.

ಮರೆಯಾದ ಒಗ್ಗಟ್ಟು:

ವಿಧಾನಸಭೆ ಚುನಾವಣೆಗೆ ತಯಾರಿ ನಡೆಸಲು ಆರಂಭವಾದಾಗಿನಿಂದ ಸಿದ್ದರಾಮಯ್ಯ–ಶಿವಕುಮಾರ್ ಒಗ್ಗಟ್ಟಾಗಿದ್ದೇವೆ ಎಂದು ಬಿಂಬಿಸಿಕೊಳ್ಳುತ್ತಲೇ ಬಂದಿದ್ದಾರೆ. 

ದಾವಣಗೆರೆಯಲ್ಲಿ ನಡೆದ ‘ಸಿದ್ದರಾಮೋತ್ಸವ’ದಲ್ಲಿ ಇಬ್ಬರನ್ನೂ ಆಲಂಗಿಸಿ, ಒಗ್ಗಟ್ಟು ಪ್ರದರ್ಶಿಸುವಂತೆ ರಾಹುಲ್ ಗಾಂಧಿ ಸೂಚಿಸಿದ್ದರು. ಹೀಗಾಗಿ, ಇಬ್ಬರೂ ವೇದಿಕೆಯೇ ಮೇಲೆ ಭಿನ್ನಮತ ಇಲ್ಲವೆಂದು ತೋರಿಸಿದ್ದರು.

ಚುನಾವಣೆ ಹೊತ್ತಿಗೆ ಇಬ್ಬರೂ ಜತೆಗಿರುವ ಫೋಟೋಗಳನ್ನು ಪಕ್ಷ ಬಿಡುಗಡೆ ಮಾಡಿತ್ತು. ಯಾತ್ರೆಗಳನ್ನು ಜತೆಗೂಡಿಯೇ ಮಾಡಿದ್ದರು. ಮತದಾನ ಹತ್ತಿರವಾಗುತ್ತಿದ್ದಂತೆ ಇಬ್ಬರು ಪರಸ್ಪರ ಸಂದರ್ಶನ ಮಾಡುತ್ತಿರುವಂತಹ ವಿಡಿಯೊಗಳನ್ನು ಪಕ್ಷ ಬಿಡುಗಡೆ ಮಾಡಿತ್ತು. 

ಫಲಿತಾಂಶ ಬಂದ ಮಾರನೇ ದಿನದಿಂದಲೇ ಮುಖಕ್ಕೆ ಮುಖಕೊಟ್ಟು ಮಾತನಾಡದಷ್ಟು ದೂರವಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT