ಬೆಂಗಳೂರಿನಲ್ಲಿರುವ ವಿಕ್ಟೋರಿಯಾ ಆಸ್ಪತ್ರೆಯನ್ನು ಶಾಂತವೇರಿ ಗೋಪಾಲಗೌಡ ಆಸ್ಪತ್ರೆ ಎಂದು ಮರುನಾಮಕರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ನಲ್ಲಿ ಘೋಷಿಸಿದ ಬಳಿಕ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾದವು. ಮೈಸೂರು ಭಾಗದ ಕೆಲವರು ಅದನ್ನು ವಿರೋಧಿಸಿದರೆ, ಗೋಪಾಲಗೌಡರ ಊರಾದ ಶಿವಮೊಗ್ಗದ ಮಂದಿ ಅದನ್ನು ಸ್ವಾಗತಿಸಿ ಸಂಭ್ರಮಿಸಿದರು.

ವಿರೋಧಿಸಿದವರು, ಸರ್ಕಾರದ ಈ ನಿರ್ಧಾರವನ್ನು ಐತಿಹಾಸಿಕ ಅಪಚಾರವೆಂದರು. ‘ಪ್ಲೇಗ್ನಂತಹ ಮಹಾಮಾರಿಯಿಂದ ಜನರನ್ನು ರಕ್ಷಿಸಲು 126 ವರ್ಷಗಳ ಹಿಂದೆ (1900) ಮೈಸೂರು ಸಂಸ್ಥಾನದ ಮಹಾರಾಣಿ ಕೆಂಪನಂಜಮ್ಮಣ್ಣಿಯವರು ಕಟ್ಟಿಸಿ ಜನರಿಗೆ ಸಮರ್ಪಿಸಿದ, ಏಷ್ಯಾದಲ್ಲೇ ಅತಿದೊಡ್ಡ ಆಸ್ಪತ್ರೆಯದು. ಬೆಂಗಳೂರಿನ ಪರಂಪರೆಯ ಕೊಂಡಿಯಾಗಿದ್ದ ಅದರ ಹೆಸರು ಬದಲಿಸುವುದು ಸರಿಯಲ್ಲ’ ಎಂಬುದು ಅವರ ವಾದವಾಗಿತ್ತು.

ಸ್ವಾಗತಿಸಿದವರು, ಅದೊಂದು ಮಾದರಿ ನಿರ್ಧಾರವೆಂದರು. ಕರ್ನಾಟಕದಲ್ಲಿ ಸಮಾಜವಾದಿ ಹೋರಾಟದ ಮುಂಚೂಣಿ ನಾಯಕರಲ್ಲಿ ಒಬ್ಬರಾದ ಗೋಪಾಲಗೌಡರು ತತ್ವನಿಷ್ಠ ಹೋರಾಟಗಾರ. ಕಾಗೋಡು ಸತ್ಯಾಗ್ರಹದ ಮೂಲಕ 'ಉಳುವವನೇ ಹೊಲದೊಡೆಯ' ಎಂಬ ಹೋರಾಟಕ್ಕೆ ಚಾಲನೆ ನೀಡಿದ ಅವರ ಹೆಸರನ್ನು ಆಸ್ಪತ್ರೆಗೆ ಇಡುವುದು ಸಮಾಜವಾದಿ ಆಶಯಗಳಿಗೆ ನೀಡಿದ ಗೌರವವೆಂಬುದು ಅವರ ಪ್ರತಿಪಾದನೆಯಾಗಿತ್ತು.

ಅಂದ ಹಾಗೆ, ಗೋಪಾಲಗೌಡರು ಹುಟ್ಟಿದ ಮಾರ್ಚ್ ತಿಂಗಳಲ್ಲೇ ಆಸ್ಪತ್ರೆಯ ಹೆಸರು ಬದಲಾವಣೆಯ ಘೋಷಣೆ ಹೊರಬಿದ್ದಿದೆ. ಇದೇ ಆಸ್ಪತ್ರೆಯಲ್ಲೇ ಅವರು ಕೊನೆಯುಸಿರೆಳೆದರು. ಬೆಂಗಳೂರಿನ ವಿಧಾನಸೌಧದ ಮುಂದೆ ಇರುವ ವೃತ್ತಕ್ಕೆ ಅವರ ಹೆಸರನ್ನಿಡಲಾಗಿದೆ. ವಿಕ್ಟೋರಿಯಾ ಆಸ್ಪತ್ರೆಗೆ ಹೊಂದಿಕೊಂಡೇ ವಾಣಿವಿಲಾಸ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯೂ ಇದೆ.

ಯುಪಿಐ ಸ್ಕ್ಯಾನರ್ ಬಳಸಿ ₹23 ಲಕ್ಷ ದೋಚಿದ ಆರೋಪದ ಮೇರೆಗೆ ಇದೇ ಆಸ್ಪತ್ರೆಯ ಸಿಬ್ಬಂದಿ ವಿರುದ್ಧ ಎಫ್ಐಆರ್ ದಾಖಲಾಗಿ ಒಂದು ತಿಂಗಳಾಗಿದೆ. ಅದರೊಂದಿಗೆ, ‘ಸರ್ಕಾರವು ಆಸ್ಪತ್ರೆಯಲ್ಲಿರುವ ಭ್ರಷ್ಟಾಚಾರವನ್ನು ಮೊದಲು ತಡೆಗಟ್ಟಲಿ’ ಎಂಬ ಆಗ್ರಹವೂ ಹೊರಬಿದ್ದಿದೆ. ಒಂದೂಕಾಲು ಶತಮಾನ ದಾಟಿರುವ ವಿಕ್ಟೋರಿಯಾ ಆಸ್ಪತ್ರೆಯ ಹೆಸರನ್ನು ಬದಲಾಯಿಸುವ ನಿರ್ಧಾರ ಕೈಗೊಳ್ಳುವ ಮುನ್ನ ರಾಜ್ಯ ಸರ್ಕಾರವು ಸಾರ್ವಜನಿಕರಿಂದ ಆಕ್ಷೇಪಣೆಗಳನ್ನೂ ಆಹ್ವಾನಿಸಿದಂತೆ ಕಾಣಲಿಲ್ಲ.

ಶಿವಮೊಗ್ಗದಲ್ಲಿ ಆಸ್ಪತ್ರೆ ಕಟ್ಟಿಸಿ ಹೆಸರಿಡಲಿ..

ಮರುನಾಮಕರಣವನ್ನು ಸ್ವಾಗತಿಸಿದವರು ಮತ್ತು ಅಪಚಾರವೆಂದವರ ನಡುವೆ ಇನ್ನೊಂದು ಸಮುದಾಯವಿದೆ. ಅದು ಮೈಸೂರು ಅರಸು ಸಮುದಾಯ. ಅವರಲ್ಲಿ ಈ ಬಗ್ಗೆ ಅಸಮಾಧಾನವಿದ್ದರೂ ಅದನ್ನು ಯಾರೂ ಬಹಿರಂಗವಾಗಿ ವ್ಯಕ್ತಪಡಿಸಿಲ್ಲ. ಸಮುದಾಯದ ಕೆಲವರಿಗೆ, ಈ ವಿಷಯವನ್ನು ಗ್ರಹಿಸುವುದು ಮತ್ತು ಪ್ರತಿಕ್ರಿಯಿಸುವುದು ಹೇಗೆ ಎಂಬುದರ ಬಗ್ಗೆಯೂ ಪೂರ್ಣ ಸ್ಪಷ್ಟತೆ ಇಲ್ಲ. ಮರುನಾಮಕರಣದ ವಿಚಾರದಲ್ಲಿ ಮಹಾರಾಣಿ ಕೆಂಪನಂಜನಮ್ಮಣ್ಣಿಯವರ ಹೆಸರು ಮುನ್ನೆಲೆಯಲ್ಲಿ ಇಲ್ಲದಿರುವುದು ಕೂಡ ಈ ಸನ್ನಿವೇಶಕ್ಕೆ ಕಾರಣವಿರಬಹುದು. ಮೈಸೂರು–ಕೊಡಗು ಸಂಸದರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಕೂಡ ಇದಕ್ಕೆ ಪ್ರತಿಕ್ರಿಯಿಸಿಲ್ಲ.

ಆದರೆ ಇದೇ ಸಮುದಾಯದ, ಪ್ರಖರ ಐತಿಹಾಸಿಕ ಪ್ರಜ್ಞೆಯುಳ್ಳವರಲ್ಲಿ ಇದು ಕುದಿತವನ್ನು ಉಂಟು ಮಾಡಿದೆ. ‘ಗೋಪಾಲಗೌಡರ ಬಗ್ಗೆ ನಮಗೆ ಅಪಾರ ಗೌರವವಿದೆ. ಆದರೆ ಅವರ ಹೆಸರನ್ನೇ ಇಡುವುದಾದರೆ, ಶಿವಮೊಗ್ಗದಲ್ಲಿ ಸರ್ಕಾರವೇ ಒಂದು ದೊಡ್ಡ ಆಸ್ಪತ್ರೆ ಕಟ್ಟಿಸಿ ಅದಕ್ಕೆ ಹೆಸರಿಡಲಿ. ನೂರಾರು ವರ್ಷಗಳ ಹಿಂದೆ ಮಹಾರಾಣಿ ಕಟ್ಟಿಸಿದ ಕಟ್ಟಡಕ್ಕೆ ಹೆಸರಿಡುವುದರಿಂದ ಯಾವ ಪ್ರಯೋಜನವೂ ಇಲ್ಲ’ ಎಂಬುದು ಆ ಕುದಿಮನಸುಗಳ ಮಾತು.

ಇದರ ನಡುವೆ, ಮುಖ್ಯಮಂತ್ರಿಯವರ ಘೋಷಣೆಯು ಇಬ್ಬರು ಮಹಾರಾಣಿಯರ ನೆನಪುಗಳನ್ನೂ ರಾಜಪ್ರಭುತ್ವದ ಆಡಳಿತ ವೈಖರಿಯನ್ನು ಈ ಕಾಲದಲ್ಲಿ ನೆನಪಿಸಿಕೊಳ್ಳುವಂತೆ ಮಾಡಿದೆ.

ಇಬ್ಬರು ಮಹಾರಾಣಿಯರು..
ಒಬ್ಬರು ಇಂಗ್ಲೆಂಡ್ನ ವಿಕ್ಟೋರಿಯಾ ರಾಣಿ, ಮತ್ತೊಬ್ಬರು ಮೈಸೂರಿನ ಮಹಾರಾಣಿ ಕೆಂಪನಂಜಮ್ಮಣ್ಣಿ. ಒಬ್ಬರು ಬ್ರಿಟಿಷ್ ಚಕ್ರಾಧಿಪತ್ಯದ ಪ್ರತೀಕ. ಮತ್ತೊಬ್ಬರು ಅ ಚಕ್ರಾಧಿಪಥ್ಯದ ನೆರಳಲ್ಲೇ ನಡೆದ ಮಹಿಳಾ ಆಡಳಿತದ ಪ್ರತೀಕ. ಒಬ್ಬರ ಹೆಸರು ಹೇಳಿದರೆ ಇನ್ನೊಬ್ಬರ ಹೆಸರು ನೆನಪಾಗಲೇಬೇಕು ಎಂಬಂತೆ ಬದುಕಿದವರು. ಅವರ ಹೆಸರನ್ನು ಇವರು, ಇವರ ಹೆಸರನ್ನು ಅವರು ಉಳಿಸಿ ಹೋದವರು.

ಕೆಂಪನಂಜಮ್ಮಣ್ಣಿ ತಮ್ಮ ಪತಿಯನ್ನು ಕಳೆದುಕೊಂಡ ಬಳಿಕ, ಅಪ್ರಾಪ್ತ ವಯಸ್ಸಿನ ಐವರು ಮಕ್ಕಳ ಪಾಲನೆ, ಪೋಷಣೆ ಜೊತೆಗೆ ರಾಜ್ಯಭಾರವನ್ನು ಹೊತ್ತಾಕೆ. ಮಗನಿಗೆ ಪಟ್ಟಾಭಿಷೇಕ ಮಾಡುವವರೆಗೂ ನಿರಂತರವಾಗಿ ಮನೆವಾರ್ತೆ, ಆಡಳಿತಗಳನ್ನು ಒಟ್ಟಿಗೇ ನಿಭಾಯಿಸಿದ ರಾಜತಂತ್ರಜ್ಞೆ. ಹೆತ್ತ ಮಕ್ಕಳೊಂದಿಗೆ ರಾಜ್ಯದ ಜನತೆಯನ್ನೂ ಮಕ್ಕಳೆಂದು ಪರಿಪಾಲಿಸಿದ ಬಗೆ ಆಧುನಿಕ ಮೈಸೂರು ಚರಿತ್ರೆಯಲ್ಲಿ ವೈವಿಧ್ಯಮಯ ಅಧ್ಯಾಯ. ಪುತ್ರ ವಾತ್ಸಲ್ಯ ಮತ್ತು ಪ್ರಜಾವಾತ್ಸಲ್ಯವೆರಡೂ ಏಕಕಾಲಕ್ಕೆ ಮೇಳೈಸಿ, ‘ಸನ್ನಿಧಾನ’ ಎಂಬ ಪದಕ್ಕೆ ಘನತೆ ತಂದುಕೊಟ್ಟಾಕೆ.

ಇದೇ ಕಾರಣಕ್ಕೆ, ಮಹಾರಾಣಿ ಕೆಂಪನಂಜಮ್ಮಣ್ಣಿ ಎಂಬ ಹೆಸರಿಗಿಂತಲೂ ನಾಡಜನರಿಗೆ ‘ವಾಣಿ ವಿಲಾಸ ಸನ್ನಿಧಾನ’ ಎಂದು ಹೇಳುವುದೇ ಪ್ರಿಯವಾಗಿತ್ತು. ಆಗಲೂ ಈಗಲೂ.

ಪತಿ, 31ರ ಹರೆಯದ ಚಾಮರಾಜ ಒಡೆಯರ್ ಡಿಪ್ತೀರಿಯಾದಿಂದ ಮೃತಪಟ್ಟಾಗ, ಮಹಾರಾಣಿಗೆ ಕೇವಲ 26 ವರ್ಷ ವಯಸ್ಸು. ಅದು ದಿಢೀರ್ ಆಘಾತ. ಅದಕ್ಕಾಗಿ ತಮ್ಮ ವಿಧಿಯನ್ನು ಹಳಿಯುತ್ತಾ, ರೋದಿಸುತ್ತಾ, ಅವರು ಮೂರ್ಛೆ ಬಿದ್ದಿದ್ದರು. ಚೇತರಿಸಿಕೊಂಡು ಎದ್ದ ಬಳಿಕ, ಸಂಸ್ಥಾನವನ್ನು ಮುನ್ನಡೆಸುವ ಸವಾಲು ಎದುರಿಸಲೆಂದೇ ತಮ್ಮ ಬದುಕನ್ನೂ ಬದಲಿಸಿಕೊಂಡರು. ಸಂಸ್ಥಾನದ ಬದುಕನ್ನೂ ಬದಲಾಯಿಸಿದರು. ತಾವು ಹುಟ್ಟಿದ ಕಳಲೆ ವಂಶಕ್ಕೂ ಕೀರ್ತಿ ತಂದರು.

ಬ್ರಿಟಿಷರಿಂದ ಅಧಿಕಾರ ಪಡೆದು ಒಂದು ದಶಕಕ್ಕೂ ಹೆಚ್ಚು ಕಾಲ ಆಡಳಿತ ನಡೆಸಿದ್ದ ಪತಿಯ ಜನಪರ ಮಾದರಿಯಷ್ಟೇ ಅವರ ಮುಂದಿದ್ದ ದಾರಿ. ಜೊತೆಗೆ ಮಡಿಲಲ್ಲಿ ಜಯಲಕ್ಷ್ಮಮ್ಮಣ್ಣಿ, ಕೃಷ್ಣರಾಜಮ್ಮಣ್ಣಿ, ಕೃಷ್ಣರಾಜ ಒಡೆಯರ್, ಕಂಠೀರವ ನರಸಿಂಹರಾಜ ಒಡೆಯರ್ ಮತ್ತು ಚೆಲುವಾಜಮ್ಮಣ್ಣಿ ಎಂಬ ಕೂಸುಗಳಿದ್ದವು. ಆ ಕಾಲಘಟ್ಟದ ಗಟ್ಟಿ ಮಹಿಳೆಯಾಗಿ ಹೊರಹೊಮ್ಮಲು, ಕಷ್ಟಕರವಾದ ಈ ಸನ್ನಿವೇಶವನ್ನೇ ಅವರು ಅವಕಾಶಗಳನ್ನಾಗಿ ಬದಲಾಯಿಸಿಕೊಂಡರು.

ದೊಡ್ಡ ಮಗ ನಾಲ್ವಡಿ ಕೃಷ್ಣರಾಜ ಒಡೆಯರ್ ಪಟ್ಟಾಭಿಷೇಕಕ್ಕೆ ಬರುವವರೆಗೂ ರೀಜೆಂಟರಾಗಿ ಅಂದರೆ ರಾಜ ಪ್ರತಿನಿಧಿಯಾಗಿ ಅವರು ಮೈಸೂರು ಸಂಸ್ಥಾನವನ್ನು ಮುನ್ನಡೆಸಿದ್ದು ಬೆರಗು ಮೂಡಿಸುವ ಕಾಲಘಟ್ಟ. ಅದು ಏಕಕಾಲಕ್ಕೆ ಅವರ ಕುಟುಂಬ ಮತ್ತು ಸಂಸ್ಥಾನದ ಅಭಿವೃದ್ಧಿಗೆ ಹಿಡಿದ ನಿಲುವುಗನ್ನಡಿ.

ಮಹಿಳೆಯರು ತೆರೆಯ ಹಿಂದೆಯೇ ನಿಲ್ಲಬೇಕಾಗಿದ್ದ ಕಾಲಘಟ್ಟದಲ್ಲಿ ತೆರೆಯಾಚೆಗಿನ ಲೋಕಾಂತಕ್ಕೆ ಬಂದವರು ಅವರು. ಬೆಂಗಳೂರು ಮತ್ತು ಮೈಸೂರಿನಲ್ಲಿರುವ ಮಹಾರಾಣಿ ಕಾಲೇಜುಗಳಲ್ಲಿರುವ ‘ಮಹಾರಾಣಿ’ ಈಕೆಯೇ. ಮಹಿಳಾ ಸಬಲೀಕರಣಕ್ಕೂ ಈಕೆ ಸಾರ್ವಕಾಲಿಕ ಮಾದರಿ. ಅದು ಅಂದಿನ ಜನಜೀವನವನ್ನು ಆವರಿಸಿದ್ದ ಎಲ್ಲ ಬಗೆಯ ಬರಗಾಲಗಳಿಗೂ ಪರಿಹಾರ ಹುಡುಕಿದ ಕಾಲ. ಬಿಡಿಬಿಡಿಯಾಗಿ ಹೇಳಹೊರಟರೆ ಹಲವು ಅಧ್ಯಾಯಗಳ ದೊಡ್ಡ ಚರಿತ್ರೆ. ಆದರೆ ಅದನ್ನು ಬರೆದವರು ಕಡಿಮೆ.

ಮೈಸೂರಿನ ಈ ಮಹಾರಾಣಿಯು ತಾನು ಹಿಂದೆ ಸರಿದು, ಬ್ರಿಟಿಷ್ ರಾಣಿ ವಿಕ್ಟೋರಿಯಾ ಹೆಸರನ್ನು ಮುಂದಕ್ಕೆ ತಂದು ಜನರಿಗೆ ತುರ್ತುಕಾಲದಲ್ಲಿ ನೆರವಾದ ಕತೆ ಇದೆ. ಇದು ಕತೆಯೂ ಹೌದು. ನಿಜವೂ ಹೌದು.

ತಲೆ ಎತ್ತಿದ ವಿಕ್ಟೋರಿಯಾ ಆಸ್ಪತ್ರೆ

ಅದು ಪ್ಲೇಗ್ ಮಹಾಮಾರಿ ಇಡೀ ಸಂಸ್ಥಾನನ್ನು ಆವರಿಸಿ ಸಾವಿರಾರು ಮಂದಿಯನ್ನು ಬಲಿತೆಗೆದುಕೊಂಡ ಕಾಲ. ಜನರಿಗೆ ಒಂದೇ ಸೂರಿನಡಿ ಚಿಕಿತ್ಸೆಯನ್ನು ಒದಗಿಸಬೇಕಾದ ತುರ್ತು ಏರ್ಪಟ್ಟಿತ್ತು. ದಿವಾನರು, ಅಧಿಕಾರಿಗಳೊಂದಿಗೆ ಸತತವಾದ ಚರ್ಚೆಯ ಬಳಿಕ ಬೆಂಗಳೂರಿನಲ್ಲಿ ಆಸ್ಪತ್ರೆಯನ್ನು ನಿರ್ಮಿಸಲು ನಿರ್ಧರಿಸಲಾಯಿತು.

ಮಹಾರಾಣಿ ವಿಕ್ಟೋರಿಯಾ ಆಡಳಿತವು 60 ವರ್ಷ ಪೂರೈಸಿದ ನೆನಪಿನಲ್ಲಿ ಲಂಡನ್ನಲ್ಲಿ ಮೆರವಣಿಗೆ ನಡೆಯುತ್ತಿದ್ದ ದಿನವೇ (ಜೂನ್ 22, 1897) ಬೆಂಗಳೂರಿನಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಇಲ್ಲಿನ ಮಹಾರಾಣಿಯು ಶಂಕುಸ್ಥಾಪನೆ ಮಾಡಿದ್ದು ವಿಶೇಷ. ಈ ವಿಶೇಷ ಸಂದರ್ಭದ ನೆನಪಿಗಾಗಿಯೇ ಆಸ್ಪತ್ರೆಗೆ ವಿಕ್ಟೋರಿಯಾ ರಾಣಿಯ ಹೆಸರನ್ನೇ ಇಡಲಾಯಿತು.

ಬ್ರಿಟಿಷರ ಕೃಪೆಯಲ್ಲಿ ಆಡಳಿತ ನಡೆಸುತ್ತಿದ್ದ ಮೈಸೂರು ಮಹಾರಾಣಿ ಹೀಗೆ ತಮ್ಮ ಕೃತಜ್ಞತೆಯನ್ನು ಸಲ್ಲಿಸಿದ್ದರು. ಅದು ಬ್ರಿಟಿಷರ ಮುಂದೆ ತಮ್ಮ ವಿಧೇಯತೆಯ ಪ್ರದರ್ಶನವೂ, ಸಂಸ್ಥಾನದ ಜನರಿಗೆ ನೀಡಿದ ಅಭಯಹಸ್ತವೂ ಆಗಿತ್ತು. ಆಗಿನ ಕಾಲಕ್ಕೆ ಈ ಆಸ್ಪತ್ರೆಗೆ ಏಷ್ಯಾ ಖಂಡಲ್ಲೇ ಅತಿ ದೊಡ್ಡ ಆಸ್ಪತ್ರೆ ಎಂಬ ಹೆಗ್ಗಳಿಕೆಯೂ ಇತ್ತೆಂಬುದು ವಿಶೇಷ. ಆಸ್ಪತ್ರೆಗೆ ಶಂಕುಸ್ಥಾಪನೆಯಾಗಿ ಮುಂದಿನ ಜೂನ್ಗೆ 130 ವರ್ಷ ತುಂಬುತ್ತದೆ. ಅಂದಿನ ವೈಸ್ರಾಯ್ ಕರ್ಜನ್ ಅದನ್ನು ಉದ್ಘಾಟಿಸಿದ್ದರು.

ಕೃಷ್ಣರಾಜ ಸಾಗರವನ್ನು ಕಟ್ಟಲು ಹಣದ ಕೊರತೆಯಾದಾಗ ನಾಲ್ವಡಿಯವರು ಒತ್ತೆ ಇಟ್ಟಿದ್ದೂ ಇದೇ ಮಹಾರಾಣಿಯ ಒಡವೆಗಳನ್ನು. ಜನಪರವಾದ ಅವರ ಇಂಥ ತ್ಯಾಗ–ಬದ್ಧತೆಗಳಿಗೆ ನಿದರ್ಶನಗಳು ಅನೇಕ.

ಮಹಿಳಾ ಆಡಳಿತದ ಶ್ರೀಮಂತ ಪರಂಪರೆ

ಹೀಗೆ ಅವರು ಮೈಸೂರು ಸಂಸ್ಥಾನದಲ್ಲಿ ಮಹಿಳಾ ಆಡಳಿತದ ಶ್ರೀಮಂತ ಪರಂಪರೆಯ ನಿರ್ಮಾತೃವಾಗಿ ಜನಮಾನಸದಲ್ಲಿ ಉಳಿದಿದ್ದಾರೆ. ದಿವಾನರು ಮತ್ತು ಆಡಳಿತ ಮಂಡಳಿಯ ಸಹಯೋಗದೊಂದಿಗೆ ಅವರು ಹಲವು ಆಸ್ಪತ್ರೆಗಳು, ಶಾಲೆಗಳು, ದೇವಾಲಯಗಳು, ಅಣೆಕಟ್ಟುಗಳನ್ನು ನಿರ್ಮಿಸಿದರು. ಈಗಲೂ ಅವು ದೂರದೃಷ್ಟಿಯುಳ್ಳ ಮತ್ತು ಜನಪರ ಆಡಳಿತದ ದ್ಯೋತಕವಾಗಿಯೇ ಕಾಣುತ್ತವೆ.

ಮುನ್ನೋಟ, ತಾಳ್ಮೆ, ಕ್ಷಮಾಗುಣ, ಧಾರಣಶಕ್ತಿಯಿಂದ ಜೀವನ ನಡೆಸಿ, ಸಂಸ್ಥಾನವನ್ನು ಮುನ್ನಡೆಸಿದ ಕೆಂಪನಂಜಮ್ಮಣ್ಣಿಯವರ ಹೆಸರು ಎಲ್ಲೆಲ್ಲೂ ಹರಡಿಕೊಂಡಿದೆ. ಮೈಸೂರು ಮತ್ತು ಬೆಂಗಳೂರಿನಲ್ಲಿರುವ ವಾಣಿ ವಿಲಾಸ ವೃತ್ತ, ವಾಣಿವಿಲಾಸ ಆಸ್ಪತ್ರೆ, ವಾಣಿ ವಿಲಾಸ ರಸ್ತೆ, ವಾಣಿವಿಲಾಸ ಮೊಹಲ್ಲಾ, ವಾಣಿವಿಲಾಸ ನೀರು ಸರಬರಾಜು ಕೇಂದ್ರ, ಚಿತ್ರದುರ್ಗದ ವಾಣಿವಿಲಾಸ ಸಾಗರ, ಬೆಂಗಳೂರಿನ ಹೆಸರಘಟ್ಟ ಜಲಾಶಯ, ಮಂಡ್ಯದ ಶಿವನಸಮುದ್ರ, ಬೆಂಗಳೂರಿನಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆ.... ಹೀಗೆ ಅವರ ಸ್ಮರಣೆಗೆ ಎಷ್ಟೊಂದು ದಾರಿಗಳು, ಎಷ್ಟೊಂದು ಸ್ಮಾರಕಗಳು..!

ಚಾಮರಾಜೇಂದ್ರ ಒಡೆಯರ್ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ ಅವಧಿಯ ಹತ್ತಾರು ದೊಡ್ಡ ಸಾಧನೆಗಳ ಬಗ್ಗೆ ಚರಿತ್ರೆ ಎಷ್ಟೇ ಹಾಡಿ ಹೊಗಳಿದರೂ, ಈ ಇಬ್ಬರು ರಾಜರುಗಳ ತಾಯಿ ಕೆಂಪನಂಜಮ್ಮಣ್ಣಿಯವರ ಉಲ್ಲೇಖವಿಲ್ಲದೆ ಎಲ್ಲವೂ ಅಪೂರ್ಣವೇ. ಅವರು ಮಾದರಿ ಆಡಳಿತಕ್ಕೂ ತಾಯಿಯೇ.

‘ಗೋಪಾಲಗೌಡರು ಕೊನೆಯುಸಿರೆಳೆದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ "ಶಾಂತವೇರಿ ಗೋಪಾಲಗೌಡ ಆಸ್ಪತ್ರೆ" ಎಂದು ಮರುನಾಮಕರಣ ಮಾಡುವ ಮೂಲಕ, ಅವರ ಹೋರಾಟದ ಋಣ ತೀರಿಸುವ ಪ್ರಯತ್ನವನ್ನು ಮಾಡಿದ್ದೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಸಾಮ್ರಾಜ್ಯಶಾಹಿಯ ಬದಲು ಸಮಾಜವಾದಿಯ ಹೆಸರಿರಲಿ ಎಂಬ ನಿಲುವು ಈ ನಿರ್ಧಾರದ ಹಿಂದೆ ಇರಬಹುದು. ಆಸ್ಪತ್ರೆಯ ಹೆಸರನ್ನೇನೋ ಬದಲಿಸಬಹುದು. ಆದರೆ, ಚರಿತ್ರೆಯನ್ನು ಬದಲಿಸಲು ಸಾಧ್ಯವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.