ಮೈಸೂರಿನ ಇತರೆಲ್ಲ ಊರು–ಕೇರಿಗಳಿಗಿಂತ ಇದು ಭಿನ್ನ. ಚಿಂತನೆಯಲ್ಲಿ, ಬದುಕಿನಲ್ಲಿ, ಸ್ವಾಭಿಮಾನದಲ್ಲಿ, ಸ್ವಂತಿಕೆಯಲ್ಲಿ, ಒಗ್ಗಟ್ಟಿನಲ್ಲಿ, ಸಂಘರ್ಷ– ಹೋರಾಟದಲ್ಲಿ... ಅಶೋಕಪುರಂ ತನಗೆ ತಾನೇ ಮಾದರಿ. ಇದು ಹಲವರಿಗೆ 'ತಾಯಿ ನೆಲ'.

ರಾಜಾಡಳಿತದ ಕಾಲದಿಂದ ಪ್ರಜಾಪ್ರಭುತ್ವದವರೆಗೂ ಮೈಸೂರು ಸಂಸ್ಥಾನದ ಚರಿತ್ರೆಯಲ್ಲಿ ಅನನ್ಯ ಚಹರೆಗಳಿಂದ ಗಮನ ಸೆಳೆಯುವ ಅಶೋಕಪುರಂಗೆ ತನ್ನದೇ ಆದ ಚರಿತ್ರೆಯುಂಟು.

ಹೊಲೆಯ ಸಮುದಾಯದವರು ಹೆಚ್ಚಿದ್ದರಿಂದಲೇ ಅಶೋಕಪುರಂ ಅನ್ನು ಆ ಕಾಲದಲ್ಲಿ ‘ದೊಡ್ಡ ಹೊಲಗೇರಿ’ ಎಂದೇ ಕರೆಯಲಾಗುತ್ತಿತ್ತು. ಇಲ್ಲಿರುವವರೆಲ್ಲರೂ ಮೇಲುಕೋಟೆ, ಚುಂಚನಗಿರಿ, ಚುಂಚನಕಟ್ಟೆ, ಕಪ್ಪಡಿ, ಪಿರಿಯಾಪಟ್ಟಣ ಪ್ರದೇಶಗಳ ಮೂಲೆಗಳಿಂದಷ್ಟೇ ಅಲ್ಲದೆ, ಮೈಸೂರು ಸಂಸ್ಥಾನದ ಹೊರಗಿನ ಊರುಗಳಿಂದಲೂ ವಲಸೆ ಬಂದವರು. ವಿಜಯನಗರ ಸಂಸ್ಥಾನ ಅವುಗಳಲ್ಲಿ ಒಂದು.

ಅರಮನೆಯ ಕೋಟೆಯಲ್ಲಿದ್ದು, ಅಲ್ಲಿಂದ ಹೊರಬಂದವವರು ನಗರದಲ್ಲಿ ಹಂಚಿ ಹೋಗಿದ್ದರು. ನಂತರ‘ಲಕ್ಷ್ಮಿಪುರಂ’ ಮೊದಲ ಆವಾಸಸ್ಥಾನವಾಯಿತು. ಆಮೇಲೆ ಅಶೋಕಪುರಂ ಶಾಶ್ವತ ನೆಲೆ. ವಿಳೇದೆಲೆ ಬೇಸಾಯವೇ ಎಲ್ಲರ ಬದುಕಾಗಿದ್ದ ಕಾಲವೂ ಇತ್ತು. ಅಶೋಕಪುರಂ ಎಂದರೆ ಎಲ್ಲಿಂದಲೋ ಬಂದವರು ಪ್ರೀತಿ-ಸಂಘರ್ಷಗಳೊಂದಿಗೇ ಒಂದಾದ ಅಪರೂಪದ ಕತೆ. ಈಗ ಮೈಸೂರಿನ ಇತರೆಲ್ಲ ಬಡಾವಣೆಗಳಂತೆ ಆಧುನಿಕತೆಗೆ ತೆರೆದುಕೊಂಡ‘ಬಡಾವಣೆ ಲೋಕ'ವೂ ಇದೆ.

ಅರಸು ಮನೆತನದ ಕೃತಜ್ಞತೆಯ ಕುರುಹು..

ಇವರನ್ನೆಲ್ಲ ಇಲ್ಲಿಗೆ ಕರೆತಂದು ಒಟ್ಟಿಗೆ ಸೇರಿಸುವಲ್ಲಿ ನಾಲ್ವಡಿ, ಕೆಂಪನಂಜಮ್ಮಣ್ಣಿ ಹಾಗೂ ದಿವಾನ್ ಎಂ,ಕಾಂತರಾಜ ಅರಸರ ದೂರದೃಷ್ಟಿಯುಳ್ಳ ಆಡಳಿತದ ಕೊಡುಗೆಯನ್ನೂ ಜನ ಸ್ಮರಿಸುತ್ತಾರೆ. ಮರದ ಅರಮನೆಗೆ ಬೆಂಕಿ ಬಿದ್ದಾಗ ತಮ್ಮ ಪ್ರಾಣ ಉಳಿಸಿದ ಈ ಸಮುದಾಯದ ಕುರಿತು ರಾಜಮನೆತನದ ಕೃತಜ್ಞತೆಯ ಕುರುಹು ಅದು ಎಂಬ ಮಾತೂ ಉಂಟು. ಅದು ಮೈಸೂರು ಸಂಸ್ಥಾನದ ಚರಿತ್ರೆಯಲ್ಲಿ ಭಿನ್ನ ಅಧ್ಯಾಯ.

ರಾಮ ಮಂದಿರಗಳು, ಭಜನೆ ಮಂದಿರಗಳು, ದೇವಿ ಗುಡಿಗಳು ಹೆಚ್ಚಿರುವ, ಕೇರಿಗಳು, ಬೀದಿಗಳು, ಉಪಬೀದಿಗಳು, ಗರಡಿಮನೆಗಳೊಂದಿಗೆ, ‘ಕುರಿತೋದದೆಯೂ ಕಾವ್ಯ ಪರಿಣತಮತಿ’ಗಳಿಂದ ಜಾನಪದ ಸಿರಿಯಾಗಿದ್ದ ಅಶೋಕಪುರಂನ ದಲಿತರಿಗೂ ಮೇಲುಕೋಟೆಯ ಚೆಲುವಯ್ಯನಿಗೂ ಅವಿನಾಭಾವ ಸಂಬಂಧ.

ಇಲ್ಲಿ ಚೆಲುವನಾರಾಯಣಸ್ವಾಮಿಯ ಒಕ್ಕಲಿನವರೂ ಇದ್ದಾರೆ. ಅದೇ ಅವರ ಮನೆ ದೇವರು. ಇದು ಇವತ್ತಿನ ವಿಷಯವಲ್ಲ. ಹಲವು ತಲೆಮಾರುಗಳು ಬದುಕಿದ ಬಗೆ. ಶ್ರೀ ವೈಷ್ಣವ ಪಂಥದ ಪ್ರಮುಖ ಕೇಂದ್ರ ಮತ್ತು ದಲಿತರ ಕೇರಿಯೊಂದರ ಸೌಹಾರ್ದ ಸಂಬಂಧಕ್ಕೂ ಇದು ಕನ್ನಡಿ ಹಿಡಿಯುತ್ತದೆ. ಮಲೆಮಾದಪ್ಪ, ಸಿದ್ದಪ್ಪಾಜಿ, ರಾಚಪ್ಪಾಜಿ ಒಕ್ಕಲಿನವರೂ ಇಲ್ಲಿ ಮೇಳೈಸಿದ್ದಾರೆ. ಇಲ್ಲಿರುವ ಹದಿಮೂರು ಬೀದಿಗಳು ಹದಿಮೂರು ವೈವಿಧ್ಯಮಯ ಜಗತ್ತುಗಳಂತೆ. ಇವೆಲ್ಲವೂ ಸೇರಿ ಆಗಿರುವ ಅದನ್ನು ಒಂದು ಮಿನಿ ಗ್ರಾಮ ಭಾರತ ಎನ್ನಲೂಬಹುದು.

ಹರಿಜನೋತ್ಸವ ಎಂದೇ ಪ್ರಸಿದ್ಧ

ದಲಿತರ ದೇಗುಲ ಪ್ರವೇಶಕ್ಕೆ ನಿರಾಕರಿಸುವ ಅಸ್ಪೃಶ್ಯತೆ ಆಚರಣೆಗಳು ದೇಶದಲ್ಲಿ ಜೀವಂತವಿರುವ ಈ ಕಾಲದಲ್ಲೇ, ಸಂಪ್ರದಾಯವನ್ನು ಬಿಡದೆ ವೈಷ್ಣವರ ದೇವರಾದ ಚೆಲುವನಾರಾಯಣಸ್ವಾಮಿಯನ್ನು ದಲಿತರು ಪೂಜಿಸುವ ಆಚರಣೆಯೂ ಜಾರಿಯಲ್ಲಿದೆ. ಇದು ಅಂದೂ ಇಂದೂ ‘ಹರಿಜನೋತ್ಸವ’ ಎಂದೇ ಪ್ರಸಿದ್ಧ. ಹರಿಜನ ಪದ ಬಳಕೆಯನ್ನು ನಿಷೇಧಿಸಿದ ಬಳಿಕವೂ ಉತ್ಸವದ ಹೆಸರಿನಲ್ಲಿ ಇದರ ಬಳಕೆಗೆ ಯಾವ, ಯಾರ ಆಕ್ಷೇಪವೂ ಇಲ್ಲ. ಭಕ್ತಿಗೆ ಯಾವ ನೇಮ?

'ಅಸ್ಪೃಶ್ಯತೆಯನ್ನು ಜೀವಂತವಿಡುವ ಯಾವ ದೇವರೂ ದೇವಾಲಯವೂ ನಮಗೆ ಬೇಡ’ ಎಂದು ಪ್ರತಿಪಾದಿಸುವ ದಲಿತರ ನಡುವೆಯೇ, ‘ನಿಮ್ಮ ದೇವರನ್ನು ಪೂಜಿಸುವುದು ನಮ್ಮ ಸಂಪ್ರದಾಯ’ ಎಂಬ ಭಕ್ತಿಪೂರ್ವಕ ಆಚರಣೆಯು ಒಟ್ಟೊಟ್ಟಿಗೇ ಸಾಗುವ ಬಗೆಯು ಚೆಲುವನಾರಾಯಣನ ವೈರಮುಡಿ ಉತ್ಸವದಲ್ಲಿ ಅನಾವರಣಗೊಳ್ಳುವುದು ವಿಶೇಷ. ಅವರಿಗೆ ಚಲುವನಾರಾಯಣ ಬ್ರಾಹ್ಮಣರ ದೇವರಲ್ಲ. ತಮ್ಮ ನಲ್ಮೆಯ ಚೆಲುವಯ್ಯ. ಅದಕ್ಕೆ ಹಲವು ಐತಿಹ್ಯಗಳೂ ಉಂಟು. ಈ ಒಕ್ಕಲಿನವರು ಮೇಲುಕೋಟೆಯಿಂದ ಮೈಸೂರಿಗೆ ವಲಸೆ ಬಂದವರೆಂಬ ಪ್ರತೀತಿಯೂ ಇದೆ.

ಪ್ರತಿ ವರ್ಷ ಮೇಲುಕೋಟೆಯಲ್ಲಿ ವೈರಮುಡಿ ಉತ್ಸವದ ಹತ್ತು ದಿನದ ಆಚರಣೆಗಳು ಶುರುವಾಗುತ್ತಿದ್ದಂತೆ ಅಶೋಕಪುರಂನಲ್ಲೂ ಸಂಭ್ರಮ ಮೈದಾಳತೊಡಗುತ್ತದೆ. ಕಾಳಿಕಾಂಬ ದೇವಾಲಯದ ಟ್ರಸ್ಟ್ ಗೆ ಮೇಲುಕೋಟೆಯಿಂದ ವಿಶೇಷ ಆಹ್ವಾನವೂ ಬರುತ್ತದೆ.

ಮೀಸಲು ಬುತ್ತಿಯೊಂದಿಗೆ ವಾಸ್ತವ್ಯ

ಉತ್ಸವದ ಮೂರು ದಿನಗಳ ಕಾಲ ಮೈಸೂರಿನಿಂದ ಸಾವಿರಾರು ಭಕ್ತರು ಮೀಸಲು ಬುತ್ತಿಯೊಂದಿಗೆ ಅಲ್ಲಿಗೆ ಹೋಗಿ ವಾಸ್ತವ್ಯ ಹೂಡುತ್ತಾರೆ. ವೈರಮುಡಿ ಉತ್ಸವ ಆದ ಮೂರನೇ ದಿನಕ್ಕೆ ನಡೆಯುವ ಪಲ್ಲಕ್ಕಿ ಉತ್ಸವಕ್ಕೆ ಅಶೋಕಪುರಂ ದಲಿತರದ್ದೇ ನೇತೃತ್ವ. ಮೈಸೂರು ಮಲ್ಲಿಗೆ, ವೀಳ್ಯೆದೆಲೆ ಸೇರಿ ಹೂವು ಕಾಯಿ ಹಣ್ಣು ಎಲ್ಲವೂ ಅವರದ್ದೇ. ಪೂಜೆಯ ನೇತೃತ್ವವೂ ಅವರದ್ದೇ. ಅಂದ ಹಾಗೆ ಅಲ್ಲಿ ಅವರಿಗೆಂದೇ ಛತ್ರವೂ ಇದೆ. ದೇಶಕ್ಕೆ ಸ್ವಾತಂತ್ರ್ಯ ಬಂದ ಹೊಸತರಲ್ಲಿ ಕಟ್ಟಿದ್ದು ಅದು. ಆದಿಕರ್ನಾಟಕ ಛತ್ರ ಎಂದೇ ಪ್ರಸಿದ್ಧ.

ತೀರ್ಥೋದ್ಭವವಾದ ಮಾರನೇ ದಿನ ಮಹಾರಥೋತ್ಸವ ಸಂಭ್ರಮ ಮೈದಾಳುತ್ತದೆ. ಅಂದು ರಾತ್ರಿ ನಡೆಯುವ ಪಲ್ಲಕ್ಕಿ ಉತ್ಸವವೇ ವಿಶೇಷ. ವೈಷ್ಣವ ಅರ್ಚಕರು ಉತ್ಸವಮೂರ್ತಿಯನ್ನು ತಂದು ದಲಿತರಿಗೆ ನೀಡುತ್ತಾರೆ. ಇದು ವೈರಮುಡಿ ಉತ್ಸವ ಸಂಪ್ರದಾಯದ ಮಹತ್ವದ ಅಂಶವಾದರೂ ಆ ಬಗ್ಗೆ ಚರ್ಚೆಯಾಗಿದ್ದು ಕಡಿಮೆ.

ಉತ್ಸವಮೂರ್ತಿಗೆ ತಾವು ತಂದ ಪೂಜಾ ಸಾಮಗ್ರಿಗಳಿಂದ ತಮ್ಮದೇ ರೀತಿಯಲ್ಲಿ ಅವರು ಅಲಂಕಾರ ಮಾಡುತ್ತಾರೆ. ಪೂಜೆ ಸಲ್ಲಿಸುತ್ತಾರೆ. ತಮ್ಮದೇ ವಾದ್ಯಮೇಳಗಳೊಂದಿಗೆ ಪಲ್ಲಕ್ಕಿ ಹೊತ್ತು ಉತ್ಸವ ಮಾಡುತ್ತಾರೆ. ಇತರೆ ಜಾತ್ರೆ, ಉತ್ಸವಗಳಲ್ಲಿ ಕಂಡು ಬರುವಂತೆ ಇಲ್ಲಿಯೂ ವಿವಿಧ ಜಾತಿ ಸಮುದಾಯಗಳಿಗೆ ನಿರ್ದಿಷ್ಟ ಜವಾಬ್ದಾರಿಗಳನ್ನು ನೀಡಲಾಗಿದೆ. ಆದರೆ ಉತ್ಸವ ನಡೆಸುವ ಅವಕಾಶ ದಲಿತರಿಗೆ ಬಹಳ ಅಪರೂಪ.

ಸಮಾನತೆಯ ಟಿಸಿಲುಗಳು..

ವಿಜಯನಗರ ಜಿಲ್ಲೆಯ ಕೊಟ್ಟೂರಿನಲ್ಲಿ ನಡೆಯುವ ಐತಿಹಾಸಿಕ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ರಥೋತ್ಸವದಲ್ಲೂ ಇಂಥದ್ದೊಂದು ಆಚರಣೆಯುಂಟು. ಉತ್ಸವಮೂರ್ತಿಯು ದಲಿತರ ಮನೆಗೆ ಭೇಟಿ ನೀಡಿ, ಅವರು ಹಾಲಿನಿಂದ ತಯಾರಿಸಿದ ಗಿಣ್ಣು ನೈವೇದ್ಯವನ್ನು ಸ್ವೀಕರಿಸಿದ ಬಳಿಕವಷ್ಟೇ ರಥೋತ್ಸವಕ್ಕೆ ಚಾಲನೆ ನೀಡುವ ಸಂಪ್ರದಾಯವದು.

ಇಂಥ ಆಚರಣೆಗಳಲ್ಲಿ ದಲಿತರಿಗೆ ದೇಗುಲ ಪ್ರವೇಶಿಸುವ, ದೇವರ ಮೂರ್ತಿಯನ್ನು ನೋಡುವ, ಮುಟ್ಟುವ, ಏನನ್ನಾದರೂ ಅರ್ಪಿಸುವ, ಹರಕೆ ತೀರಿಸಿ ಸೇವೆ ಸಲ್ಲಿಸುವ ಅವಕಾಶವನ್ನೇ ಸಮಾನತೆಯ ಮತ್ತು ಸೌಹಾರ್ದತೆಯ ಸಂಕೇತ ಎಂಬ ಪ್ರತಿಪಾದನೆಯೂ ಮುಂದುವರಿದಿದೆ. ವರ್ಷಕ್ಕೊಮ್ಮೆ ಚೆಲುವಯ್ಯನಿಗೆ ದಲಿತರಿಂದ ವಿಜೃಂಭಣೆಯ ಪೂಜೆ ನಡೆದಿದೆ. ನಂತರ ಊರು ಕೇರಿಗಳಲ್ಲಿ ಎಂದಿನಂತೆ ಬದುಕೂ ತೆರೆದುಕೊಳ್ಳುತ್ತದೆ. ಸಮಾನತೆಯ ಆಶಯವೂ ಮತ್ತೆ ಮತ್ತೆ ಟಿಸಿಲೊಡೆಯತೊಡಗುತ್ತದೆ.

(ಈ ಅಂಕಣ ಬರಹ ಪ್ರಕಟವಾಗುವ ಹೊತ್ತಿನಲ್ಲಿ, ಮಾರ್ಚ್ 31 ರಂದು ಮೇಲುಕೋಟೆಯಲ್ಲಿ ನಡೆಯಲಿರುವ ಪಲ್ಲಕ್ಕಿ ಉತ್ಸವಕ್ಕೆ ಅಶೋಕಪುರಂನಲ್ಲಿ ಸಿದ್ಧತೆಗಳು ನಡೆದಿದ್ದವು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.