ಮಂಗಳವಾರ, ಮಾರ್ಚ್ 2, 2021
23 °C

ಅಂಚೆ ಕಚೇರಿಗೆ ಸ್ವಂತ ದುಡ್ಡು

ಜಾದವ್‌ Updated:

ಅಕ್ಷರ ಗಾತ್ರ : | |

Deccan Herald

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಹೆರೂರು ಎಂಬ ಪುಟ್ಟ ಗ್ರಾಮದ ಮುಖ್ಯರಸ್ತೆಗೆ ಹೊಂದಿಕೊಂಡಂತೆ ಹೊಸ ಅಂಚೆ ಕಚೇರಿಯೊಂದು ತಲೆ ಎತ್ತಿದೆ. ಕೆಂಪು ಬಣ್ಣ ಬಳಿದುಕೊಂಡು, ಗೋಡೆಮೇಲೆ ಪೋಸ್ಟ್‌ ಆಫೀಸ್ ಚಿಹ್ನೆ ಅಂಟಿಸಿಕೊಂಡು ತುಸು ಆಧುನಿಕ ಕಚೇರಿಯಂತೆ ಕಾಣುತ್ತದೆ. 

ಸಾಮಾನ್ಯವಾಗಿ ಹಳ್ಳಿಗಳಲ್ಲಿ ಅಂಚೆ ಕಚೇರಿಗಳು ಹಳೆಯ ಅಥವಾ ಪುಟ್ಟ ಮನೆಯಲ್ಲಿರುತ್ತವೆ. ಈ ಊರಿನಲ್ಲೂ ಹಾಗೆ ಇತ್ತು. ಆದರೆ, ಈಗ ಹೇಗೆ ಸುಸಜ್ಜಿತವಾಯಿತು? ಸರ್ಕಾರ ಏನಾದರೂ ಸ್ಪೆಷಲ್ ಗ್ರಾಂಟ್ ಕೊಟ್ಟಿರಬಹುದಾ?

ಖಂಡಿತ ಇಲ್ಲ. ಇದು ಯಾವುದೇ ಸರ್ಕಾರಿ ಅನುದಾನದಿಂದ ನವೀಕರಣಗೊಂಡ ಅಂಚೆ ಕಚೇರಿಯಲ್ಲ. ಇದೇ ಕಚೇರಿಯಲ್ಲಿ 30 ವರ್ಷಗಳಿಂದ ಗ್ರಾಮೀಣ ಡಾಕ್ ಸೇವಕನಾಗಿ ಕೆಲಸ ಮಾಡುತ್ತಿರುವ ಮುದೇಗೌಡರ ಸ್ವಂತ ಹಣ ಮತ್ತು ಪರಿಶ್ರಮದಿಂದ ನಿರ್ಮಾಣವಾದ ಅಂಚೆ ಕಚೇರಿ.

ಇತ್ತೀಚೆಗೆ ಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ 7ನೇ ವೇತನ ಆಯೋಗದ ಅನ್ವಯ ವೇತನ ಹೆಚ್ಚಾಯಿತು. ಹಾಗೆಯೇ ಮುದೇಗೌಡರಿಗೆ ವೇತನದಲ್ಲಿ ಹೆಚ್ಚಿಗೆಯಾಯಿತು. ಅವರಿಗೆ ಒಂದು ವರ್ಷದ ಬಾಕಿ ವೇತನ ಮೊತ್ತವಾಗಿ ಸುಮಾರು ₹35 ಸಾವಿರ ಬಂದಿತು. ಅದಕ್ಕೆ ₹10 ಸಾವಿರ ಸೇರಿಸಿ, ಅಂಚೆ ಕಚೇರಿ ನವೀಕರಣಕ್ಕೆ ವೆಚ್ಚ ಮಾಡಿದರು.

ಈ ಮೊದಲು ಹೆರೂರಿನ ಒಂದು ಪುಟ್ಟ ಮನೆಯಲ್ಲಿ ಪೋಸ್ಟ್‌ ಆಫೀಸ್ ಇತ್ತು. ಈಗ ನವೀಕೃತಗೊಂಡಿರುವ ಕಟ್ಟಡ ಗ್ರಾಮ ಪಂಚಾಯ್ತಿ ಅಧೀನದಲ್ಲಿತ್ತು. ಊರಿನ ಹಿರಿಯರು ಮತ್ತು ಗ್ರಾಮ ಪಂಚಾಯ್ತಿ ಸದಸ್ಯರ ಮನವೊಲಿಸಿದ ಮುದೇಗೌಡರು, ಅಂಚೆ ಕಚೇರಿಯನ್ನು ಪಂಚಾಯ್ತಿ ಕಟ್ಟಡಕ್ಕೆ ಸ್ಥಳಾಂತರಿಸುವ ಜತೆಗೆ, ನವೀಕರಣ ಮಾಡಿಸುವುದಕ್ಕೂ ಒಪ್ಪಿಸಿದರು. ಆ ನವೀಕರಣದ ಹಣವನ್ನು ಕೊಟ್ಟರು. ಈ ಕಟ್ಟಡ ನವೆಂಬರ್ 1 ರಂದು ನಡೆದ ಕನ್ನಡ ರಾಜ್ಯೋತ್ಸವದಂದು ಸರಳವಾಗಿ ಉದ್ಘಾಟನೆಯಾಯಿತು.

‘ಆ ಮೂವತ್ತೈದು ಸಾವಿರ ರೂಪಾಯಿಯಲ್ಲಿ ಒಂದಷ್ಟು ಬಂಗಾರ ಮಾಡಿಸಿಕೊಳ್ಳಬಹುದಿತ್ತು. ಆದರೆ ಅದು ನನ್ನ ಸ್ವಂತಕ್ಕಾಗುತ್ತಿತ್ತು. ನನಗೆ ಇಷ್ಟು ವರ್ಷ ಕೆಲಸ ಕೊಟ್ಟಿರುವ ನನ್ನ ಕಚೇರಿಯನ್ನು ನವೀಕರಣ ಮಾಡಿಸಿದರೆ, ಸಾರ್ವಜನಿಕರ ಬಳಕೆಗೆ ಅನುಕೂಲವಾಗುತ್ತದೆ ಎನ್ನಿಸಿತು. ಅದಕ್ಕೆ ಆ ಹಣವನ್ನು ಕಚೇರಿ ಕೆಲಸಕ್ಕೆ ಬಳಸಿದೆ’ ಎಂದು ತನ್ನ ಅಂಚೆ ಕಚೇರಿಯ ಬಗೆಗಿನ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ ಮುದೇಗೌಡರು.

ಪೋಸ್ಟ್‌ ಆಫೀಸಿನ ಶಾಖಾ ಅಂಚೆ ಅಧಿಕಾರಿ ನಸೀಮಾ ಬಾನು ಅವರ ಸಲಹೆ, ಮಾರ್ಗದರ್ಶನ ಮತ್ತು ನೇತೃತ್ವದಲ್ಲಿ ಮುದೇಗೌಡರು ನವೀಕರಣ ಕಾರ್ಯ ಕೈಗೊಂಡಿದ್ದಾರೆ. ಎಲ್ಲರ ಪ್ರಶಂಸೆಗೆ ಪಾತ್ರವಾಗಿದ್ದಾರೆ. ಗೌಡರ ಈ ಕಾರ್ಯಕ್ಕೆ ಮೇಲಾಧಿಕಾರಿಗಳು ‘ಇದೊಂದು ರಾಜ್ಯ ಹಾಗೂ ರಾಷ್ಟ್ರಕ್ಕೆ ಮಾದರಿಯಾದ ಕಾರ್ಯ’ ಎಂದು ಪ್ರಶಂಸಿಸಿದ್ದಾರೆ.

ಸರ್ಕಾರದ ಹಣವನ್ನು ದುರುಪಯೋಗವಾಗುವುದೇ ಹೆಚ್ಚಾಗಿರುವ ಈ ಕಾಲದಲ್ಲಿ ಮುದೇಗೌಡ ಅವರು ಸ್ವಂತ ಹಣದಿಂದ ಕಚೇರಿ ಆಧುನಿಕರಣಗೊಳಿಸಿದ್ದು ಮಾದರಿಯಾಗುವಂತಹ ಕೆಲಸ. ಮುದೇಗೌಡ ಅವರ ಮೊಬೈಲ್ ಸಂಖ್ಯೆ-9901370941.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು