ಅಂಗವೈಕಲ್ಯ ಮೀರಿದ ಯುವಕನ ಕ್ರಿಕೆಟ್ ಸಾಧನೆ..!

ಮಂಗಳವಾರ, ಏಪ್ರಿಲ್ 23, 2019
29 °C
ಆರ್‌ಸಿಬಿಯ ನೆಟ್‌ ಬೌಲರ್‌ ತಾಳಿಕೋಟೆಯ ಶಂಕರ ಸಜ್ಜನ

ಅಂಗವೈಕಲ್ಯ ಮೀರಿದ ಯುವಕನ ಕ್ರಿಕೆಟ್ ಸಾಧನೆ..!

Published:
Updated:
Prajavani

ತಾಳಿಕೋಟೆ: ಪಟ್ಟಣದ ಅಂಗವಿಕಲ ಯುವಕನೊಬ್ಬ ಆರ್‌ಸಿಬಿಯ ನೆಟ್ ಬೌಲರ್ ಆಗಿ ಆಯ್ಕೆಯಾಗಿದ್ದೆ ಅಚ್ಚರಿ. ತಂಡದಲ್ಲಿನ ಖ್ಯಾತನಾಮರಿಗೆ ಬೌಲಿಂಗ್‌ ಮಾಡಿ ಶಹಬ್ಬಾಶ್‌ಗಿರಿ ಪಡೆದಿದ್ದು ಇನ್ನೂ ಹೆಮ್ಮೆಯ ವಿಷಯ.

ಕಡು ಬಡತನದ ಕುಟುಂಬ. ಹುಟ್ಟುವಾಗಲೇ ತಿರುಚಿಕೊಂಡಿದ್ದ ತುಂಡು ಕೈಗಳು. ಎರಡನೇ ವಯಸ್ಸಿನಲ್ಲೇ ಅವ್ವನನ್ನು ಕಳೆದುಕೊಂಡ ನತದೃಷ್ಟ. ಬೆಳೆದಂತೆ ಕ್ರಿಕೆಟ್‌ನತ್ತ ಒಲವು. ಪರಿಶ್ರಮದ ಸಾಧನೆಗೆ ಅರಸಿ ಬಂದ ಯಶಸ್ಸು... ಇದು ತಾಳಿಕೋಟೆಯ ಶಂಕರ ಸಜ್ಜನ ಸಾಧನೆಯ ಹಾದಿ.

ಇಲ್ಲಿಗೆ ಸಮೀಪದ ಸುರಪುರ ತಾಲ್ಲೂಕಿನ ಯಾಳಗಿಯಲ್ಲಿ 1998ರಲ್ಲಿ ಶಂಕರ ಜನಿಸಿದರು. ಬಡತನದ ಬೇಗೆಯಲ್ಲಿ ಬೆಂದಿದ್ದ ತಂದೆಯಿಂದ, ತಾಯಿಯಿಲ್ಲದ ತಬ್ಬಲಿಯ ಸಾಕುವ ಹೊಣೆ ಹೊತ್ತು, ಜೋಪಾನಗೈದು ಶಿಕ್ಷಣ ನೀಡಿದ್ದು, ಹತ್ತಿರದ ಸಂಬಂಧಿಗಳಾದ ತಾಳಿಕೋಟೆಯ ಘನಮಠೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್.ಎಂ.ಸಜ್ಜನ, ಇವರ ಪತ್ನಿ ಅನಿತಾ ಸಜ್ಜನ.

ಚಿಕ್ಕವನಿದ್ದಾಗ ರಬ್ಬರ್ ಬಾಲ್‌ನಿಂದ ಕ್ರಿಕೆಟ್‌ ಆಡುತ್ತಿದ್ದ ಶಂಕರ, ಎಸ್ಸೆಸ್ಸೆಲ್ಸಿಯಲ್ಲಿದ್ದಾಗ ವಿಜಯಪುರದ ಕ್ರಿಕೆಟ್ ಕ್ಲಬ್‌ವೊಂದರಲ್ಲಿ ಒಂದು ತಿಂಗಳು ಕೋಚಿಂಗ್‌ ಪಡೆದ. ಅಲ್ಲಿಂದ ಈತನ ಕ್ರಿಕೆಟ್‌ ಬದುಕೇ ಬದಲಾಯ್ತು.

ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭ 2016ರ ಜನವರಿಯಲ್ಲಿ ‘ಸ್ಪಿನ್ನರ್‌ಗಳ ಪ್ರತಿಭಾ ಅನ್ವೇಷಣೆ’ ಸುದ್ದಿಯ ತುಣಕೊಂದನ್ನು ಶಂಕರ ಪತ್ರಿಕೆಯಲ್ಲಿ ಓದಿದರು. ಅಭ್ಯಾಸ ಬಿಟ್ಟು ಹೊರಟರೆ, ಪೋಷಕರು ಬಿಡಲಿಕ್ಕಿಲ್ಲವೆಂದು ಅವರಿಗೂ ತಿಳಿಸದೆ, ಕೈನಲ್ಲಿದ್ದ ಇನ್ನೂರು ರೂಪಾಯಿಯನ್ನೇ ಕಿಸೆಯಲ್ಲಿಟ್ಟುಕೊಂಡು ಬೆಂಗಳೂರಿನ ಹಾದಿ ತುಳಿದರು. ರಾಜಧಾನಿ ತಲುಪುವಷ್ಟರಲ್ಲೇ ಹಣ ಖಾಲಿ ಖಾಲಿ...

ಮನದಲ್ಲಿ ಮೊಳೆತಿದ್ದ ಕನಸಿನ ಸಾಕಾರಕ್ಕಾಗಿ ಹಲವು ಸಂಕಷ್ಟಗಳ ನಡುವೆಯೇ ಸ್ಫರ್ಧಾ ಸ್ಥಳಕ್ಕೆ ಶಂಕರ ತೆರಳಿದರು. ವಾರಕ್ಕೂ ಹೆಚ್ಚು ಅವಧಿ ಕ್ರೀಡಾಂಗಣದ ಉಸ್ತುವಾರಿ ಹೊತ್ತವರ ಪ್ರೀತಿ ಗಳಿಸಿ, ಉಪವಾಸ ಬಿದ್ದು, ಖ್ಯಾತ ಸ್ಪಿನ್ನರ್‌ ಅನಿಲ್‌ ಕುಂಬ್ಳೆ ಅವರ ಟೆನ್ವಿಕ್ ಕ್ರಿಕೆಟ್ ಅಕಾಡೆಮಿಯ ಬಾಗಿಲು ತಟ್ಟಿದರು.

ಸ್ಪರ್ಧೆಯಲ್ಲಿದ್ದ 3000 ಜನರನ್ನು ಹಿಂದಿಕ್ಕಿ, 21ರೊಳಗಿನ ಪಟ್ಟಿಯಲ್ಲಿ ಸ್ಥಾನ ಪಡೆಯಲು ಯಶಸ್ವಿಯಾದ ಸಜ್ಜನ, ಅಂತಿಮವಾಗಿ ಅನಿಲ್‌ ಕುಂಬ್ಳೆ, ಬ್ರಿಜೇಶ್‌ ಪಟೇಲರಿಂದಲೇ ‘ಸ್ಪಿನ್ ಸ್ಟಾರ್’ ಪ್ರಶಸ್ತಿ ಪಡೆದ ಛಲದಂಕ ಮಲ್ಲ. ಕೆಸಿಎಲ್ -19 ವಯೋಮಾನದೊಳಗಿನ ತಂಡಕ್ಕೆ ಆಯ್ಕೆಯಾಗಿ, ಶ್ರೀಲಂಕಾ ಪ್ರವಾಸಗೈದ. ಮೂರು ಟೆಸ್ಟ್ ಆಡಿ, 9 ವಿಕೆಟ್ ಬಾಚಿಕೊಂಡಿದ್ದು ಈತನ ಸಾಧನೆ.

ಅಕಾಡೆಮಿಯ ತರಬೇತಿ ನಂತರ ವಿಜಯಪುರದಲ್ಲಿ ನಡೆದ ವಿಬಿಪಿಎಲ್ ಪ್ರೀಮಿಯರ್ ಲೀಗ್‌ನಲ್ಲಿ, ಚಾಣಕ್ಯ ಬ್ರೂಟ್ ತಂಡದ ಪರ 2 ಪಂದ್ಯವಾಡಿ 5 ವಿಕೆಟ್, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ನಡೆಸುವ ಮೊದಲನೇ ಡಿವಿಷನ್‌ನ 5 ಪಂದ್ಯಗಳಲ್ಲಿ 16 ವಿಕೆಟ್ ಪಡೆದಿದ್ದಾರೆ. ಭಾರತ–ಆಪ್ಘಾನಿಸ್ತಾನದ ನಡುವೆ ನಡೆದ ಏಕೈಕ ಟೆಸ್ಟ್‌ ಪಂದ್ಯದಲ್ಲಿಯೂ; ಈತ ನೆಟ್‌ ಬೌಲರ್‌ ಆಗಿ ಬೌಲಿಂಗ್‌ ಮಾಡಿದ್ದಾನೆ.

‘ನನ್ನ ಬದುಕಿನ ಬೆಳವಣಿಗೆಗೆ ಬಡತನದಲ್ಲಿಯೇ ತಂದೆಯೂ ಕೂಲಿ ಮಾಡಿ ಹಣ ಕೊಟ್ಟಿದ್ದಾರೆ. ಹೆತ್ತವರಿಗಿಂತ ಹೆಚ್ಚಾಗಿ ಆರೈಕೆ ಮಾಡಿ ಶಿಕ್ಷಣ ಕೊಟ್ಟ, ಘನಮಠೇಶ್ವರ ಸಂಸ್ಥೆಯ ಅಧ್ಯಕ್ಷ ದಂಪತಿ ಬೆಂಬಲವೇ ನನ್ನ ಹಿಂದಿನ ಶಕ್ತಿ’ ಎನ್ನುತ್ತಾನೆ ಶಂಕರ ಸಜ್ಜನ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !