5

ಒರಟು ಕೂದಲಿಗೆ ಮನೆಯಲ್ಲೇ ಆರೈಕೆ

Published:
Updated:

ನೀಳಕೇಶರಾಶಿ ಎಲ್ಲರ ಆಸೆ. ಆದರೆ ಇತ್ತೀಚೆಗೆ ತಲೆಕೂದಲು ಉದುರುವುದು ಸಾಮಾನ್ಯ ಎಂಬಂತಾಗಿಬಿಟ್ಟಿದೆ. ಇದರಿಂದ ಸೌಂದರ್ಯ ಹಾಳಾಗುವುದರ ಜೊತೆಗೆ ಮುಜುಗರವೂ ಆಗುತ್ತದೆ. ಆಹಾರಕ್ರಮ, ಆನುವಂಶಿಕ, ಒತ್ತಡ, ವಾಯುಮಾಲಿನ್ಯ– ಇವುಗಳ ಜೊತೆ ಗಡಸು ನೀರಿನಿಂದಲೂ ತಲೆಕೂದಲು ಉದುರುತ್ತದೆ.

ನಗರ ಪ್ರದೇಶಗಳಲ್ಲಿ ಹಾಗೂ ಕೆಲವು ಹಳ್ಳಿಗಳಲ್ಲಿ ಗಡಸು ನೀರಿನ ಸಮಸ್ಯೆ ಇದೆ. ಗಡಸು ನೀರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮ್ಯಾಗ್ನೇಶಿಯಂ, ಸಿಲಿಕಾ ಹಾಗೂ ಕ್ಯಾಲ್ಸಿಯಂ ಇರುತ್ತವೆ. ಇದು ಕೂದಲು ಸೀಳುವಿಕೆ, ಒಣ ಕೂದಲು ಸಮಸ್ಯೆ ಹಾಗೂ ಕೂದಲಿನ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತವೆ. ಹೆಚ್ಚು ಖನಿಜಾಂಶಗಳಿರುವ ಈ ನೀರಿನ ಸತತ ಬಳಕೆಯಿಂದ ಕೂದಲು ಉದುರುವ ಸಮಸ್ಯೆ ಆರಂಭವಾಗುತ್ತದೆ. ಇದು ಕೂದಲನ್ನು ಒಣ ಹಾಗೂ ಶುಷ್ಕವನ್ನಾಗಿಸುವುದಲ್ಲದೇ ಹೊಳಪನ್ನೂ ಕಳೆದುಕೊಳ್ಳುವಂತೆ ಮಾಡುತ್ತದೆ.

ಗಡಸು ನೀರಿನ ಖನಿಜಾಂಶಗಳನ್ನು ಹೊರತೆಗೆದು, ಕುಡಿಯಲು ಹಾಗೂ ಸ್ನಾನಕ್ಕೆ ಯೋಗ್ಯವಾಗುವಂತೆ ಮಾಡುವ ಯಂತ್ರಗಳು ಈಗ ಸಿಗುತ್ತವೆ. ಈ ಯಂತ್ರಗಳು ನೀರಿನಲ್ಲಿನ ಕ್ಯಾಲ್ಸಿಯಂ ಹಾಗೂ ಮಾಗ್ನೇಶಿಯಂಗಳನ್ನು ಹೊರ ಹಾಕುತ್ತವೆ. ಆ ಮೆದು ನೀರಿನಲ್ಲಿ ಕೂದಲು ತೊಳೆಯಬಹುದು. ಶ್ಯಾಂಪೂ ಅಥವಾ ಕಂಡೀಷನರ್‌ ಬಳಕೆ ನಂತರ ಶವರ್‌ನಿಂದ ಸ್ನಾನ ಮಾಡಿದರೆ ಕೂದಲು ತುಂಬ ಉದುರುವುದಿಲ್ಲ. ಯಂತ್ರಗಳ ಬಳಕೆ ಅಸಾಧ್ಯ ಎಂದಾದಲ್ಲಿ ಗಡಸು ನೀರಿನಿಂದ ತಲೆ ತೊಳೆದ ಬಳಿಕ ಕೊನೆಯದಾಗಿ ಫಿಲ್ಟರ್‌ ಮಾಡಿದ ಬಾಟಲಿ ನೀರಿನಿಂದ ತಲೆ ತೊಳೆಯಬೇಕು. ಇದರಿಂದ ಹೆಚ್ಚು ಹಾನಿ ತಪ್ಪುತ್ತದೆ.

ಈಗ ಮಾರುಕಟ್ಟೆಗಳಲ್ಲಿ ಗಡಸು ನೀರಿಗಾಗಿ ಬಳಕೆ ಮಾಡುವಂತಹ ಶ್ಯಾಂಪೂ ಹಾಗೂ ಎಣ್ಣೆ ಲಭ್ಯವಿವೆ. ಶ್ಯಾಂಪೂವಿನಿಂದ ತಲೆಕೂದಲು ತೊಳೆದ ನಂತರ ಮಾಯಿಶ್ಚರೈಸಿಂಗ್‌ ಕಂಡೀಷನರ್‌ ಹಚ್ಚಬೇಕು. ಆದರೆ ಶ್ಯಾಂಪೂ ಬಳಕೆ ಮಾಡುತ್ತಿದ್ದರೂ ಗಡಸು ನೀರಿನ ಸಮಸ್ಯೆ ಇದ್ದಲ್ಲಿ ವಾರದಲ್ಲಿ ಒಂದೇ ಬಾರಿ ಕೂದಲು ತೊಳೆಯುವುದು ಒಳ್ಳೆಯದು.

ಗಡಸು ನೀರಿನಿಂದ ತಲೆ ಕೂದಲು ತೊಳೆದ ನಂತರ 3–4 ಹನಿ ತೆಂಗಿನೆಣ್ಣೆಯನ್ನು ಕೈಯಲ್ಲಿ ತೆಗೆದುಕೊಂಡು ಕೂದಲಿಗೆ ಮಸಾಜ್‌ ಮಾಡಬೇಕು. ಇದು ಕೂದಲು ಹೊಳಪು ಕಳೆದುಕೊಳ್ಳುವುದನ್ನು ತಡೆಗಟ್ಟುತ್ತದೆ. 

ಗಡಸು ನೀರು ಬಳಕೆ ಅನಿವಾರ್ಯವಾದರೆ ಸ್ನಾನಕ್ಕೆ ಮೊದಲು ಒಂದು ಬಕೆಟ್‌ ನೀರಿಗೆ ಮೂರು– ನಾಲ್ಕು ಚಮಚ ವಿನೆಗರ್‌ ಬೆರೆಸಬೇಕು. ವಿನೆಗರ್‌ ಗಡಸು ನೀರನ್ನು ಮೆದು ನೀರನ್ನಾಗಿಸುವ ಸಾಮರ್ಥ್ಯ ಹೊಂದಿದೆ. ನೀರಿನಲ್ಲಿನ ವಿನೆಗರ್‌ ಅಂಶ ಕೂದಲನ್ನು ಹೊಳಪಾಗಿಸುತ್ತದೆ. ಶರೀರದ ಆರೋಗ್ಯಕ್ಕೂ ಉತ್ತಮ. 

ವಿನೆಗರ್‌ನಂತೆಯೇ ನಿಂಬೆರಸವನ್ನೂ ಬಳಕೆ ಮಾಡಬಹುದು. ಕೂದಲನ್ನು ಖನಿಜಗಳ ದುಷ್ಪರಿಣಾಮದಿಂದ ಕಾಪಾಡುತ್ತದೆ. ಆದರೆ ಒಂದು ಎಚ್ಚರಿಕೆ, ನಿಂಬೆರಸವು ಕೂದಲಿನ ಜಿಡ್ಡಿನಂಶವನ್ನೂ ತೊಡೆದು ಹಾಕುತ್ತದೆ. ತಲೆಗೆ ಶ್ಯಾಂಪೂ ಹಾಕಿದ ನಂತರ, ನಿಂಬೆರಸ ಹಾಕಿದ ನೀರಿನಿಂದ ತಲೆಯನ್ನು ತೊಳೆಯಬೇಕು.

ಗಡಸು ನೀರಿನಿಂದ ಶುಷ್ಕತೆ ಪಡೆದುಕೊಂಡಿರುವ ಕೂದಲಿಗೆ ಮಳೆನೀರು ಒಳ್ಳೆಯ ಕಂಡೀಷನರ್‌. ಕೂದಲ ಬೆಳವಣಿಗೆಗೆ ಬೇಕಾದ ಅಗತ್ಯ ಪೋಷಕಾಂಶಗಳು ಈ ನೀರಲ್ಲಿದೆ. ಸಂಗ್ರಹಿಸಿಟ್ಟುಕೊಂಡ ಮಳೆ ನೀರನ್ನು ಕೊಂಚ ಬಿಸಿ ಮಾಡಿ ಬಳಿಕ ತಲೆ ಸ್ನಾನ ಮಾಡಬೇಕು.

ಕೂದಲು ಆರೈಕೆಯ ವಿಧಾನಗಳು

ನೆಲ್ಲಿಕಾಯಿಎಣ್ಣೆ ಗಡಸು ನೀರಿನ ಬಳಕೆಯಿಂದ ಶುಷ್ಕತೆ ಕಳೆದುಕೊಂಡ ಕೂದಲನ್ನು ಆರೈಕೆ ಮಾಡುತ್ತದೆ. ಇದರಲ್ಲಿರುವ ವಿಟಮಿನ್‌ ಸಿ ಕೂದಲ ಬೆಳವಣಿಗೆಯನ್ನು ಹೆಚ್ಚಿಸಿ, ಕೂದಲು ಬುಡದಿಂದಲೇ ಉದುರುವುದನ್ನು ಕಡಿಮೆ ಮಾಡುತ್ತದೆ. ನಿಂಬೆರಸ, ನೀರು ಹಾಗೂ ನೆಲ್ಲಿಕಾಯಿ ಪುಡಿಯನ್ನು ಬೆರಿಸಿ ಗಟ್ಟಿಯಾಗಿ ಕಲೆಸಿ ಕೂದಲಿಗೆ ಹಚ್ಚಿ, ಒಂದು ಗಂಟೆ ಬಿಟ್ಟು ತೊಳೆಯಬೇಕು. 

ಮೆಂತ್ಯಕಾಳು ಕೂಡ ಕೂದಲ ಆರೈಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಒಂದು ಕಪ್‌ ಮೆಂತ್ಯದ ಕಾಳನ್ನು ನೀರಿನಲ್ಲಿ ರಾತ್ರಿಯಿಡಿ ನೆನೆಸಿ, ಬೆಳಿಗ್ಗೆ ನುಣ್ಣಗೆ ಮಿಕ್ಸಿಯಲ್ಲಿ ಅರೆದು, ತಲೆಗೆ ಹಚ್ಚಬೇಕು. ಒಂದು ಗಂಟೆ ಬಳಿಕ ತಣ್ಣೀರಿನಿಂದ ತೊಳೆಯಬೇಕು. ಇದು ಕೂದಲನ್ನು ಆರೋಗ್ಯವಾಗಿಸುತ್ತದೆ. 

ಬೀಟ್‌ರೂಟ್‌ನಲ್ಲಿ ಕಾರ್ಬೋಹೈಡ್ರೇಟ್‌, ಪ್ರೋಟಿನ್‌, ವಿಟಮಿನ್‌ ಬಿ ಮತ್ತು ಸಿ ಹೇರಳವಾಗಿವೆ. ಈ ಎಲ್ಲಾ ಪೋಷಕಾಂಶಗಳು ಕೂದಲಿಗೆ ಒಳ್ಳೆಯದು. ಬೀಟ್‌ರೂಟ್‌ ಅಥವಾ ಬೀಟ್‌ರೂಟ್‌ ಎಲೆಯನ್ನು ಮದರಂಗಿ ಜೊತೆ ಅರೆದು ಕೂದಲಿಗೆ ಹಚ್ಚಬಹುದು. ವಾರದಲ್ಲಿ ಎರಡು ಬಾರಿ ಹಚ್ಚುತ್ತಾ ಬಂದರೆ ಕೂದಲು ರೇಷ್ಮೆಯಂತಾಗುತ್ತದೆ. 

ತಲೆಕೂದಲ ಬುಡಕ್ಕೆ, ತಲೆಕೂದಲ ಪೋಷಣೆಗೆ ತೆಂಗಿನೆಣ್ಣೆಯೇ ಉತ್ತಮ ಮದ್ದು, ಇದರಲ್ಲಿ ಕಬ್ಬಿಣದ ಅಂಶ ಹಾಗೂ ಪೊಟಾಷಿಯಂ, ಕೊಬ್ಬು, ಪ್ರೋಟಿನ್ಸ್‌ ಅಧಿಕವಿದೆ. ತೆಂಗಿನೆಣ್ಣೆಯನ್ನು ಅಂಗೈಗೆ ತೆಗೆದುಕೊಂಡು ನೆತ್ತಿಗೆ ಹಚ್ಚಿ, ಬಳಿಕ ಎಲ್ಲಾ  ಕಡೆಗಳ ಕೂದಲ ಬುಡಕ್ಕೂ ಹಚ್ಚಬೇಕು. ಬಳಿಕ ಎರಡು– ಮೂರು ಗಂಟೆ ಬಳಿಕ ಶ್ಯಾಂಪೂವಿನಿಂದ ತಲೆ ಕೂದಲ ತೊಳೆಯಿರಿ. 

ಈರುಳ್ಳಿರಸದಲ್ಲಿನ ಗಂಧಕ (ಸಲ್ಫರ್) ಅಂಶ ರಕ್ತದ ಸಂಚಾರವನ್ನು ಹೆಚ್ಚು ಮಾಡುತ್ತದೆ. ಈ ರಸವನ್ನು ಹಚ್ಚಿ 30 ನಿಮಿಷದ ಬಳಿಕ ತೊಳೆದರೆ ಕೂದಲ ಬೆಳವಣಿಗೆಗೆ ಸಹಾಯಕ.

ಜೀವನಕ್ರಮ ಬದಲಾವಣೆ

ಒತ್ತಡದ ಕಾರಣದಿಂದಾಗಿ ಕೂದಲು ಉದುರುವುದನ್ನು ತಡೆಯಲು ಜೀವನಕ್ರಮದ ಬದಲಾವಣೆಯೇ ಮುಖ್ಯ. ಮಾನಸಿಕ ಒತ್ತಡ ನಿವಾರಣೆಗೆ ಯೋಗ ಮತ್ತು ಧ್ಯಾನ ಉತ್ತಮ ಮಾರ್ಗ. ಉಸಿರಾಟಕ್ಕೆ ಸಂಬಂಧಿಸಿದ ವ್ಯಾಯಾಮ ಮಾಡುವುದು ಒಳ್ಳೆಯದು. ಧ್ಯಾನ ಮತ್ತು ಉಸಿರಾಟ ಸಂಬಂಧಿ ವ್ಯಾಯಾಮ ಮಾಡುವುದರಿಂಂದ ಮಿದುಳು ಮತ್ತು ನೆತ್ತಿಯ ನರಗಳು ಶಾಂತವಾಗುತ್ತವೆ.(ರಿಲ್ಯಾಕ್ಸ್‌ ಆಗುತ್ತದೆ) ರಕ್ತ ಸಂಚಾರ ಸುಗಮವಾಗುತ್ತದೆ. ಆಗ ಕೂದಲಿನ ಬೇರುಗಳಿಗೆ ಶಕ್ತಿ ದೊರೆತು, ಕೂದುಲುದುರುವಿಕೆಯ ‍ಪ್ರಮಾಣ ನಿಧಾನವಾಗಿ ಕಡಿಮೆಯಾಗುತ್ತದೆ.

ಒತ್ತಡದಿಂದ ಪಾರಾಗಲು ಆರೋಗ್ಯಕರ ನಿದ್ದೆಯೂ ಕೂಡ ಅತಿಮುಖ್ಯ. ದಿನದಲ್ಲಿ ಕನಿಷ್ಠ 7 ರಿಂದ 8 ಗಂಟೆ ನಿದ್ರಿಸಬೇಕು. ಉತ್ತಮ ಆಹಾರ ಸೇವನೆ ಕ್ರಮವನ್ನು ರೂಢಿಸಿಕೊಳ್ಳುವುದು ಅಗತ್ಯ. ಸಮತೋಲನ ಆಹಾರ ಸೇವನೆ, ವಿಟಮಿನ್‌ ಹಾಗೂ ಮಿನರಲ್ಸ್‌ ಹೆಚ್ಚಿರುವ ಆಹಾರ ಸೇವನೆ ಮುಖ್ಯ. ನಿತ್ಯ ವ್ಯಾಯಾಮ ಮಾಡುವುದರಿಂದ ಮಾನಸಿಕ ಒತ್ತಡವನ್ನು ಹತೋಟಿಯಲ್ಲಿಟ್ಟುಕೊಳ್ಳಬಹುದು. ಜೊತೆಗೆ ಹೆಚ್ಚು ಸಂತೋಷದಿಂದ ದಿನಕಳೆಯುವುದು ಪರಿಣಾಮಕಾರಿ.

ನಿಮ್ಮ ದೇಹಕ್ಕೆ ಹೊಂದಿಕೆಯಾಗುವ ಎಣ್ಣೆಯನ್ನು ಉಗುರು ಬೆಚ್ಚಗೆಮಾಡಿ ಕನಿಷ್ಠ ವಾರಕ್ಕೊಮ್ಮೆ ತಲೆಗೆ ಮಸಾಜ್‌ ಮಾಡುವುದನ್ನು ರೂಢಿಸಿಕೊಳ್ಳಿ. ಇದರಿಂದ ಮಿದುಳಿನ ನರಗಳು ರಿಲ್ಯಾಕ್ಸ್‌ ಆಗುತ್ತವೆ. ಕೂದಲಿಗೆ ಅಗತ್ಯ ಪೋಷಕಾಂಶಗಳೂ ಪೂರೈಕೆಯಾಗುತ್ತವೆ. ಧಾವಂತದ ಬದುಕಿನ ನಡುವೆಯೂ ಕೂದಲಿನ ಆರೈಕೆಗೆ ಕೊಂಚ ಗಮನ ನೀಡಿದರೆ ಕೂದಲಿನ ಆರೋಗ್ಯದ ಜೊತೆಗೆ ಸೌಂದರ್ಯವನ್ನೂ ಕಾಪಾಡಿಕೊಳ್ಳಬಹುದು.

 

ಬರಹ ಇಷ್ಟವಾಯಿತೆ?

 • 20

  Happy
 • 5

  Amused
 • 1

  Sad
 • 0

  Frustrated
 • 0

  Angry