ವಿಪರೀತ ತೊಳೆದರೂ ಕೂದಲಿಗೆ ತೊಂದರೆ

7

ವಿಪರೀತ ತೊಳೆದರೂ ಕೂದಲಿಗೆ ತೊಂದರೆ

Published:
Updated:

‘ಅಯ್ಯೋ ಕೂದಲನ್ನು ಎಷ್ಟು ಮುತುವರ್ಜಿ ಮಾಡಿದರೂ ಉದುರುವುದು ನಿಲ್ಲುತ್ತಿಲ್ಲ. ದೂಳು, ಮಾಲಿನ್ಯದಿಂದ ಕೇಶರಾಶಿಯನ್ನು ಕಾಪಾಡಲು ನಿತ್ಯ ಕೂದಲನ್ನು ಚೆನ್ನಾಗಿ  ತೊಳೆಯುತ್ತೇನೆ’ ಆದರೂ ಏನೂ ‍ಪ್ರಯೋಜನವಾಗಿಲ್ಲ ಎಂದು ಅನೇಕರು ತಲೆಮೇಲೆ ಕೈಹೊತ್ತು ಕೂರುತ್ತಾರೆ. ಹೀಗೆ ಗೊಣಗುವವರು ಮೊದಲು ಅತಿಯಾಗಿ ಕೂದಲನ್ನು ತೊಳೆಯುವುದನ್ನು ನಿಲ್ಲಿಸುವುದೇ ಒಳಿತು.

ೀವನಶೈಲಿ, ಮಾಲಿನ್ಯ, ಆಹಾರಕ್ರಮ, ಆನುವಂಶಿಕ, ಒತ್ತಡ, ನೆತ್ತಿಯ ಸಮಸ್ಯೆ, ಗಡಸುನೀರು ಇವುಗಳನ್ನು ಕೂದಲುದುರುವಿಕೆಯ ಸಾಮಾನ್ಯ ಕಾರಣಗಳೆಂದು ಗುರುತಿಸಬಹುದಾದರೂ, ಕೂದಲನ್ನು ಹೆಚ್ಚು ತೊಳೆಯುವುದು ಸಹ ಕೂದಲ ಉದುರುವಿಕೆಗೆ ಮತ್ತೊಂದು ಪ್ರಮುಖ ಕಾರಣವೇ ಆಗಿದೆ.

ಮಾಲಿನ್ಯದಿಂದಾಗಿ ಕೂದಲಿನಲ್ಲಿ ದೂಳು, ಕೊಳಕು ಸೇರಿಕೊಳ್ಳುವ ಸಾಧ್ಯತೆಗಳು ಹೆಚ್ಚು. ಇದು ಕೂದಲು ಕಳಾಹೀನವಾಗಿಯೂ ಕಾಣುವಂತೆ ಮಾಡುತ್ತದೆ. ಹಾಗಾಗಿ ನಿಯಮಿತವಾಗಿ ಕೂದಲನ್ನು ತೊಳೆಯುವುದು ಅಗತ್ಯ. ಆದರೆ, ಕೂದಲನ್ನು ಅಗತ್ಯಕ್ಕಿಂತ ಹೆಚ್ಚು ತೊಳೆದಾಗ ಕೂದಲು ಶುಷ್ಕವಾಗಿ ಉದುರಲು ಆರಂಭವಾಗುತ್ತದೆ.

‘ಕೂದಲನ್ನು ಹೆಚ್ಚು ತೊಳೆಯುವುದರಿಂದ ಕೂದಲು ಕಾಂತಿಯುತವಾಗುತ್ತದೆ ಎಂಬ ಭ್ರಮೆ ಸಾಕಷ್ಟು ಜನರಲ್ಲಿದೆ. ಆದರೆ, ಅತಿಯಾಗಿ ಕೂದಲು ತೊಳೆಯುವುದೇ ಒಣಕೂದಲಿಗೆ ಪ್ರಮುಖ ಕಾರಣ. ಕೂದಲು ಶುಷ್ಕವಾದಾಗ ತುದಿಯಲ್ಲಿ ಸೀಳುಗಳು ಕಾಣಿಸಿಕೊಂಡು ಬೆಳವಣಿಗೆ ಕುಂಠಿತವಾಗುತ್ತದೆ. ಜೊತೆಗೆ ಕೂದಲು ಕಳೆಗುಂದುತ್ತದೆ ಮಾತ್ರವಲ್ಲದೆ, ಉದುರುವಿಕೆಯು ವಿಪರೀತವಾಗುತ್ತದೆ’ ಎನ್ನುತ್ತಾರೆ ಆಯುರ್ವೇದ ತಜ್ಞ ಮಲ್ಲಿಕಾರ್ಜುನ್‌.

‘ಕೂದಲನ್ನು ಅತಿಯಾಗಿ ತೊಳೆದರೆ, ವಿಪರೀತ ಪ್ರಮಾಣದಲ್ಲಿ ಶ್ಯಾಂಪೂ ಬಳಸಿದರೆ ಕೂದಲು ಒಣಗುವ ಸಾಧ್ಯತೆ ಹೆಚ್ಚು. ಕೂದಲನ್ನು ಹೆಚ್ಚು ತೊಳೆದರೆ ಅದು ತಲೆಬುರುಡೆಯಲ್ಲಿರುವ ನೈಸರ್ಗಿಕ ಎಣ್ಣೆಯನ್ನು ತೆಗೆದುಹಾಕಿ ಕೂದಲು ಒಣಗುವಂತೆ ಮಾಡುತ್ತದೆ. ದಿನ ಬಿಟ್ಟು ದಿನ ಕೂದಲನ್ನು ತೊಳೆಯುವುದು ಒಳ್ಳೆಯದು’ ಎನ್ನುವುದು ಚರ್ಮರೋಗ ತಜ್ಞ ಪ್ರಸಾದ್ ಅವರ ಅಭಿಪ್ರಾಯ.

ದಿನಬಿಟ್ಟು ದಿನ ಕೂದಲು ತೊಳೆಯುವುದು ಉತ್ತಮ. ಶ್ಯಾಂಪು, ಕಂಡೀಷನರ್‌ಗಳಂತಹ ರಾಸಾಯನಿಕಗಳ ಅತಿಯಾದ ಬಳಕೆಯನ್ನು ನಿಲ್ಲಿಸಬೇಕು. ನೈಸರ್ಗಿಕವಾಗಿ ದೊರೆಯುವ ಗಿಡಮೂಲಿಕೆಗಳನ್ನು ಬಳಸಿ ಕೂದಲು ತೊಳೆಯುವುದರಿಂದ ಕೂದಲು ಕಾಂತಿಯುತವಾಗುತ್ತದೆ. ಉದುರುವಿಕೆಯೂ ನಿಲ್ಲುತ್ತದೆ.

ಕೂದಲು ತೊಳೆಯುವ 2 ಗಂಟೆಗಳ ಮುನ್ನ ನಿಮ್ಮ ದೇಹಕ್ಕೆ ಹೊಂದಿಕೆಯಾಗುವ ಎಣ್ಣೆಯನ್ನು ಉಗುರು ಬೆಚ್ಚಗೆಮಾಡಿ ಹತ್ತಿಯಲ್ಲಿ ಅದ್ದಿ ತಲೆಗೆ ಮಸಾಜ್‌ ಮಾಡುವುದರಿಂದ ಮೆದುಳಿನ ನರಗಳಿಗೆ ರಿಲ್ಯಾಕ್ಸ್‌ ಆಗುತ್ತದೆ. ಕೂದಲಿಗೆ ಅಗತ್ಯ ಪೋಷಕಾಂಶಗಳು ಪೂರೈಕೆಯಾಗುತ್ತವೆ. ಕೂದಲಿನ ತುದಿಗೆ ಎಣ್ಣೆ ಹಚ್ಚುವುದರಿಂದ ಕೂದಲ ಸೀಳುವಿಕೆ ಸಮಸ್ಯೆ ದೂರವಾಗುತ್ತದೆ.  ತರುವಾಯ ಕೂದಲನ್ನು ಮೃದುವಾಗಿ ತೊಳೆಯುವುದರಿಂದ ಕೂದಲು ಶುಷ್ಕವಾಗುವುದಿಲ್ಲ. ತೇವಾಂಶ ಉಳಿದುಕೊಳ್ಳುತ್ತದೆ.

ಅತಿಯಾದ ಬಿಸಿ ಅಥವಾ ತಣ್ಣನೆ ನೀರಿನಿಂದ ಕೂದಲು ತೊಳೆಯುವುದು ಅಪಾಯ. ಉಗುರು ಬೆಚ್ಚಗಿನ ನೀರಿನ ಸ್ನಾನ ಕೂದಲಿನ ಆರೈಕೆಗೆ ಉತ್ತಮ. ತೊಳೆದ ನಂತರ ನೈಸರ್ಗಿಕ ಗಾಳಿಯಲ್ಲಿ ಕೂದಲನ್ನು ಒಣಗಿಸಿಕೊಳ್ಳಿ. ಒದ್ದೆ ಕೂದಲು ಶಕ್ತಿಹೀನವಾಗಿರುತ್ತದೆ ಹಾಗಾಗಿ ಸ್ನಾನ ಮಾಡಿದ ನಂತರ ಕೂದಲು ಬಾಚುವುದು ಅಥವಾ ಒರಟು ಟವೆಲ್‌ನಿಂದ ಗಟ್ಟಿಯಾಗಿ ಒರೆಸುವುದು ಮತ್ತು ಕೂದಲನ್ನು ಕಟ್ಟಬಾರದು ಇದರಿಂದಲೂ ಕೂದಲು ಉದುರುವಿಕೆ ಹೆಚ್ಚುತ್ತದೆ. ಪ್ಯಾನ್ ಅಥವಾ ಹೇರ್‌ ಡ್ರೈಯರ್‌ಗಿಂತ ಬೆಳಗಿನ ಎಳೆ ಬಿಸಿಲಿನಲ್ಲಿ ಕೂದಲು ಒಣಗಿಸುವುದರಿಂದ ಕೂದಲಿಗೆ ಡಿ ವಿಟಮಿನ್ ಪೂರೈಕೆಯಾಗುತ್ತದೆ.

ಉಸಿರಾಟದ ವ್ಯಾಯಾಮ ಮಾಡುವುದು ಒಳ್ಳೆಯದು. ಧ್ಯಾನ ಮತ್ತು ಉಸಿರಾಟ ಸಂಬಂಧಿ ವ್ಯಾಯಾಮ ಮಾಡುವುದರಿಂದ ಮಿದುಳು ಮತ್ತು ನೆತ್ತಿಯ ನರಗಳು ಶಾಂತವಾಗುತ್ತವೆ.(ರಿಲ್ಯಾಕ್ಸ್‌ ಆಗುತ್ತದೆ) ರಕ್ತ ಸಂಚಾರ ಸುಗಮವಾಗುತ್ತದೆ. ಆಗ ಕೂದಲಿನ ಬೇರುಗಳಿಗೆ ಶಕ್ತಿ ದೊರೆತು, ‍ಕೂದಲು ಉದುರುವುದು ಕಡಿಮೆಯಾಗುತ್ತದೆ.

ಬರಹ ಇಷ್ಟವಾಯಿತೆ?

 • 9

  Happy
 • 2

  Amused
 • 0

  Sad
 • 1

  Frustrated
 • 0

  Angry