ಬುಧವಾರ, ನವೆಂಬರ್ 20, 2019
25 °C
ಖಾಸಗಿ ಶಾಲಾ ಕಾಲೇಜು ಆಡಳಿತ ಮಂಡಳಿಗಳ ಒಕ್ಕೂಟದ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಮಟ್ಟದ ಕ್ರೀಡಾಕೂಟ

ವ್ಯಕ್ತಿತ್ವಕ್ಕೆ ಕ್ರೀಡೆ ಅತಿ ಮುಖ್ಯ

Published:
Updated:
Prajavani

ಚಿಕ್ಕಬಳ್ಳಾಪುರ: ‘ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯಲ್ಲಿ ಕ್ರೀಡೆಗಳು ಮಹತ್ವದ ಪಾತ್ರ ವಹಿಸುತ್ತವೆ. ಆದ್ದರಿಂದ ವಿದ್ಯಾರ್ಥಿಗಳು ಪಾಠದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಕೂಡ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು’ ಎಂದು ಖಾಸಗಿ ಶಾಲಾ ಕಾಲೇಜು ಆಡಳಿತ ಮಂಡಳಿಗಳ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ತಿಳಿಸಿದರು.

ನಗರದ ಸರ್.ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಖಾಸಗಿ ಶಾಲಾ ಕಾಲೇಜು ಆಡಳಿತ ಮಂಡಳಿಗಳ ಸಂಘದ ಜಿಲ್ಲಾ ಘಟಕದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಮೊದಲ ವರ್ಷದ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಪ್ರತಿಯೊಬ್ಬರು ದೈಹಿಕವಾಗಿ ಬಲಿಷ್ಠರಾದಾಗ ಮಾತ್ರ ಮಾನಸಿಕವಾಗಿ ಏನಾದರೂ ಸಾಧಿಸಲು ಸಾಧ್ಯ. ಆದ್ದರಿಂದ ಕ್ರೀಡೆ ಅತಿ ಪ್ರಮುಖ. ವಿದ್ಯಾರ್ಥಿಗಳು ಕಲಿಕಾಸಕ್ತಿ ಜತೆಗೆ ಕ್ರೀಡೆಗಳಲ್ಲಿ ಪಾಲ್ಗೊಂಡು ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯನ್ನು ಇನ್ನಷ್ಟು ವೃದ್ಧಿಸಿಕೊಳ್ಳಬೇಕು. ಕ್ರೀಡೆಗಳಿಂದ ಬುದ್ಧಿ ಚುರಾಕಾಗುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಸ್ಪರ್ಧಾಸ್ಫೂರ್ತಿಯಿಂದ ಭಾಗವಹಿಸಬೇಕು’ ಎಂದು ಹೇಳಿದರು.

‘ಯುವ ಪ್ರತಿಭೆಗಳು ಶಾಲಾ ಕಾಲೇಜುಗಳಲ್ಲಿ ಆಯೋಜಿಸುವ ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ಕ್ರೀಡೆಯಲ್ಲಿ ಎಲ್ಲರೂ ಗೆಲ್ಲಲು ಸಾಧ್ಯವಿಲ್ಲ. ಸೋಲು ಯಾವುದೇ ಕಾರಣಕ್ಕೂ ನಿರಾಶೆ ಉಂಟು ಮಾಡದೇ ಪುನಃ ಗೆಲ್ಲುವ ಛಲ ಹುಟ್ಟಿಸಬೇಕು’ ಎಂದರು.

ಕ್ರೀಡಾಕೂಟದಲ್ಲಿ ಕ್ರಿಕೆಟ್, ವಾಲಿಬಾಲ್, ಥ್ರೋಬಾಲ್, ಮ್ಯೂಸಿಕಲ್ ಚೇರ್, ಭಾವಗೀತೆ, ಜನಪದ ಗೀತೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಿಗೆ ಸೆ.14 ರಂದು ನಗರದ ಹರ್ಷೋದಯ ಕಲ್ಯಾಣ ಮಂಟಪದಲ್ಲಿ ಆಯೋಜಿಸುವ ಶಿಕ್ಷಕರ ದಿನಾಚರಣೆಯಲ್ಲಿ ಬಹುಮಾನ ವಿತರಿಸಲಾಗುವುದು.

ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಹೆನ್ರಿ ಪ್ರಸನ್ನಕುಮಾರ್, ಗೌರಿಬಿದನೂರಿನ ತಾಲ್ಲೂಕು ಘಟಕದ ಕಾರ್ಯದರ್ಶಿ ಚಂದ್ರಮೌಳಿ, ಉಪಾಧ್ಯಕ್ಷ ರಂಗನಾಥ್, ಪದಾಧಿಕಾರಿಗಳಾದ ಚಿಂತಾಮಣಿಯ ಹೇಮಾ ನಾರಾಯಣ್, ನಾಗರಾಜ್, ಬಾಗೇಪಲ್ಲಿ ಶಿವಣ್ಣ, ಹರೀಶ್, ಗುಡಿಬಂಡೆ ರಾಮಾಂಜಿನಪ್ಪ, ದೈಹಿಕ ಶಿಕ್ಷಕ ಮಾರುತಿ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)