ಸೋಮವಾರ, ಮೇ 25, 2020
27 °C

ಬೆಳ್ಳಿ ತೆರೆಯಲ್ಲಿ ಜೀವನಗಾಥೆ

ಎನ್.ಎಸ್. ಶಂಕರ್ Updated:

ಅಕ್ಷರ ಗಾತ್ರ : | |

Prajavani

ಢುಂಢಿರಾಜ್ ಗೋವಿಂದ ಫಾಳ್ಕೆ- ಈಗ ಅವರನ್ನು ಎಲ್ಲರೂ ನೆನೆಯುವುದು ದಾದಾಸಾಹೇಬ ಫಾಳ್ಕೆ ಎಂದೇ- ಅವರು 1913ರಲ್ಲಿ ತೆರೆಯ ಮೇಲೆ ತಂದ ರಾಜಾ ಹರಿಶ್ಚಂದ್ರ- ಭಾರತದ ಮೊಟ್ಟಮೊದಲ ಕಥಾಚಿತ್ರ. ಇದು ಪ್ರಥಮ ಮರಾಠಿ ಚಿತ್ರವೂ ಹೌದು. ಅದಕ್ಕೇ ಫಾಳ್ಕೆಯವರಿಗೆ ಭಾರತೀಯ ಚಿತ್ರರಂಗದ ಪಿತಾಮಹ ಎಂಬ ಗೌರವ. (ನಾವು ತಪ್ಪಾಗಿ ಫಾಲ್ಕೆ ಎಂದು ಉಚ್ಚರಿಸುತ್ತೇವೆ). ಸಿನಿಮಾ ರಂಗದ ಸಾಧಕರಿಗೆ ದೊರೆಯುವ ಅತ್ಯುನ್ನತ ಮನ್ನಣೆ ಕೂಡ ಈ ಸಾಹಸಿಯನ್ನು ಸ್ಮರಿಸುವ ದಾದಾಸಾಹೇಬ ಫಾಳ್ಕೆ ಪ್ರಶಸ್ತಿ.

ಭಾರತೀಯ ಚಿತ್ರರಂಗದ ಮೊದಲ ಚಿತ್ರವೇ ಹರಿಶ್ಚಂದ್ರನ ಕಥೆ ಆಗಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ. ಯಾಕೆಂದರೆ ಹರಿಶ್ಚಂದ್ರನ ಸತ್ಯನಿಷ್ಠೆಯ ಆ ವೃತ್ತಾಂತ, ನಮ್ಮ ಜನಮಾನಸದಲ್ಲಿ ಆಳವಾಗಿ ಬೇರೂರಿದ ಭಾವಪೂರ್ಣ ಕಥೆ. ಕೊಟ್ಟ ಮಾತಿಗೆ ಬದ್ಧನಾಗಿ, ರಾಜ್ಯಭ್ರಷ್ಟನಾಗಿ ಸ್ಮಶಾನ ಕಾಯ್ದು ಕಡೆಗೆ ಹೆಂಡತಿ ಎಂದರಿಯದೆ ತನ್ನ ಮಗನ ಶವಸಂಸ್ಕಾರಕ್ಕಾಗಿಯೇ ಶುಲ್ಕ ಕೇಳುವ ಹೃದಯವಿದ್ರಾವಕ ತಿರುಳಿನ ಹರಿಶ್ಚಂದ್ರನ ಕಥೆ ಹಲವಾರು ಭಾರತೀಯ ಭಾಷೆಗಳಲ್ಲಿ ಲೆಕ್ಕವಿಲ್ಲದಷ್ಟು ಬಾರಿ ತೆರೆಗೆ ಬಂದಿದೆ. ಕನ್ನಡದಲ್ಲಿ ಕೂಡ 1943ರಲ್ಲಿ ಮೊದಲ ಬಾರಿ (ಸುಬ್ಬಯ್ಯ ನಾಯ್ಡು ಹರಿಶ್ಚಂದ್ರ ಪಾತ್ರದಲ್ಲಿದ್ದ ಆರ್. ನಾಗೇಂದ್ರರಾವ್ ನಿರ್ದೇಶನದ ಚಿತ್ರ) ಮತ್ತು 1965ರಲ್ಲಿ ಡಾ. ರಾಜ್ ಅಭಿನಯದಲ್ಲಿ ಎರಡನೇ ಬಾರಿ ಈ ಕಥೆ ಸಿನಿಮಾ ರೂಪದಲ್ಲಿ ಬಂತು. ಜೊತೆಗೆ, ರಾಜ್ ಅಭಿನಯದ ಕಪ್ಪು ಬಿಳುಪು ಸತ್ಯ ಹರಿಶ್ಚಂದ್ರನನ್ನು ಈಚೆಗೆ ಬಣ್ಣದ ಚಿತ್ರವಾಗಿ ಮಾರ್ಪಡಿಸಿದ ಸಾಹಸವೂ ಯಶಸ್ಸು ಕಂಡಿದೆ. ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಸತ್ಯ ಹರಿಶ್ಚಂದ್ರ ಇಂದಿಗೂ ಒಂದು ಮೈಲಿಗಲ್ಲಾಗಿಯೇ ಉಳಿದುಕೊಂಡಿದೆ; ‘ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ...’ ಹಾಡು ಕೂಡ ಇಂದಿಗೂ ಆ ಸಿನಿಮಾದಷ್ಟೇ ಖ್ಯಾತವಾಗಿದೆ. ಸಿನಿಮಾ ರೂಪ ತಾಳುವ ಮುನ್ನ ಈ ಕಥೆ ದೇಶದ ವೃತ್ತಿ ರಂಗಭೂಮಿಯಲ್ಲಿ ಜನಪ್ರಿಯ ಪ್ರಯೋಗವಾಗಿದ್ದ ಕಾರಣದಿಂದಲೇ ಫಾಳ್ಕೆ ತಮ್ಮ ಹೊಸ ಸಾಹಸಕ್ಕೆ ಹರಿಶ್ಚಂದ್ರನನ್ನು ಆರಿಸಿಕೊಂಡರು. ಅಷ್ಟಕ್ಕೂ ಸಿನಿಮಾ ತಂತ್ರಜ್ಞಾನ ಹುಟ್ಟಿದ್ದು ಪಶ್ಚಿಮದಲ್ಲಾದರೂ, ಅದು ಭಾರತಕ್ಕೆ ಕಾಲಿಡುವ ಹೊತ್ತಿಗೆ ಇಲ್ಲಿನ ಪರಂಪರಾಗತ ಕಲೆಗಳಾದ ವೃತ್ತಿ ನಾಟಕ ಮತ್ತು ಹರಿಕಥೆಗಳ ಬುನಾದಿಯ ಮೇಲೆ, ಆ ಪ್ರಕಾರಗಳ ವಿಸ್ತರಣೆಯಾಗಿಯೇ ಅವತರಿಸಿತು. ಹಾಗಾಗಿಯೇ ಹರಿಶ್ಚಂದ್ರನಂಥ ಪ್ರಸಂಗಗಳು ಎಷ್ಟು ಕಾಲವಾದರೂ ಭಾರತೀಯ ಚಿತ್ರಕರ್ತರ ಮೆಚ್ಚಿನ ಕಥಾಮೂಲವಾಗಿಯೇ ಉಳಿದುಬಂದಿವೆ...

ಸಿನಿಮಾದ ತವರು ಅಮೆರಿಕ ಯಾವುದೇ ಸಾಂಸ್ಕೃತಿಕ ಪರಂಪರೆಯಿಲ್ಲದ ನಾಡು. ಹಾಗಾಗಿ ತನ್ನ ಚಿತ್ರಗಳಿಗಾಗಿ ಬಲು ಬೇಗ ಹೊಸ ಹೊಸ ಸಾಮಾಜಿಕ ಕಥೆಗಳನ್ನು ಸೃಷ್ಟಿಸಿಕೊಳ್ಳತೊಡಗಿತು. ಕಣ್ಣೆದುರಿನ ಅಂತರ್ಯುದ್ಧ, ವಿಶ್ವಯುದ್ಧಗಳು ಅವರ ಬೆಳ್ಳಿತೆರೆಯ ಕಥನಗಳಾಗತೊಡಗಿದವು. ಅಷ್ಟಾಗಿಯೂ ಬೈಬಲ್ ಮೂಲದ ಕಥೆಗಳು ಹಾಗೂ ಜೀವನಚರಿತ್ರೆಗಳು ಅಲ್ಲಿ ಆರಂಭದ ಸಿನಿಮಾಗಳ ಹೂರಣವಾಗಿದ್ದುಂಟು. ಯಾಕೆಂದರೆ ಜೀವನಕಥನಗಳು ಜಗತ್ತಿನಾದ್ಯಂತ ನಿರ್ಮಾಪಕ ನಿರ್ದೇಶಕರನ್ನು ಸದಾ ಸೆಳೆಯುತ್ತಲೇ ಬಂದಿವೆ.

ಇದಕ್ಕೆ ಭಾರತವೂ ಹೊರತಲ್ಲ. ಆದರೆ ಇಲ್ಲಿನ ಚಿತ್ರರಂಗದಲ್ಲಿ ಜೀವನಕಥನಗಳು ಪಾಶ್ಚಾತ್ಯರ ಮೇಲ್ಪಂಕ್ತಿ ಅನುಸರಿಸಿಲ್ಲ. ಅಂದರೆ ಇವು ಉಗ್ರ ಇತಿಹಾಸ ನಿಷ್ಠೆಯ ಪುಟಗಳಲ್ಲ. ಇಲ್ಲಿ ಇತಿಹಾಸವೂ ಪುರಾಣದ, ಜಾನಪದದ ರೂಪ ತಾಳಿಯೇ ಬರಬೇಕು! ನಮ್ಮಲ್ಲಿ ಹರಿಶ್ಚಂದ್ರನನ್ನೂ ನಾವು ನಮ್ಮ ಸಂಸ್ಕೃತಿಯ ಜೀವಂತ ಹೀರೋ ಆಗಿಯೇ ಪರಿಭಾವಿಸುವುದರಿಂದ ಭಾರತೀಯ ಚಿತ್ರರಂಗವು- ಹರಿಶ್ಚಂದ್ರನೆಂಬ ಕಾಲ್ಪನಿಕ ವ್ಯಕ್ತಿಯ ಜೀವನಕಥನದ ಮೂಲಕವೇ ತನ್ನ ನಡಿಗೆ ಆರಂಭಿಸಿತೆಂದು ಹೇಳಬೇಕು. ನಮಗೆ ಹರಿಶ್ಚಂದ್ರನೆಂಬ ವ್ಯಕ್ತಿ ಇದ್ದನೋ ಇಲ್ಲವೋ ಎಂಬುದು ಅಷ್ಟು ಮುಖ್ಯವಲ್ಲ; ಆತನ ಕಥೆಯ ಮೂಲಕ ಸಿಗುವ ಭಾವಾನುಭೂತಿ, ನೀತಿಬೋಧೆ ಮುಖ್ಯ. ಸ್ವತಃ ಗಾಂಧೀಜಿಯೇ ಎಳವೆಯಲ್ಲಿ ಹರಿಶ್ಚಂದ್ರನ ಕಥೆಗೆ ಮಾರುಹೋಗಿದ್ದರಲ್ಲ!

ಅದಕ್ಕೇ ಒಟ್ಟು ಸಿನಿಮಾ ಪರಂಪರೆ ಬಗ್ಗೆ ಮಾತಾಡುವಾಗ, ಆ ಧಾರೆಯಲ್ಲಿ ಜೀವನಕಥನಗಳದ್ದೇ ಒಂದು ಗಣ್ಯ ಅಧ್ಯಾಯ ಎಂಬುದು ನಮ್ಮ ಮನಸ್ಸಿನಲ್ಲಿರಬೇಕು.

ಹರಿಶ್ಚಂದ್ರನಂತೆಯೇ ಕನ್ನಡದಲ್ಲಿ ಕವಿ ಕಾಳಿದಾಸನ ಬಗ್ಗೆಯೂ ಎರಡು ಆವೃತ್ತಿಗಳು ಬಂದಿವೆ. 1955ರಲ್ಲಿ ಹೊನ್ನಪ್ಪ ಭಾಗವತರ್ ನಟಿಸಿದ್ದ ಮಹಾಕವಿ ಕಾಳಿದಾಸ, ಮತ್ತೆ 1983ರಲ್ಲಿ ರಾಜ್, ಜಯಪ್ರದಾ ಅಭಿನಯದ ಅವಿಸ್ಮರಣೀಯ ಕವಿರತ್ನ ಕಾಳಿದಾಸ. ಶಾಕುಂತಲೆಯಾಗಿ ಸೌಂದರ್ಯದ ಖನಿ ಜಯಪ್ರದಾ, ಎಂ. ರಂಗರಾವ್ ನಿರ್ದೇಶನದ ಚಿರನೂತನ ಮಾಧುರ್ಯದ ಗೀತೆಗಳು...

ಕನ್ನಡದಲ್ಲಿ ಮುಂದಕ್ಕೆ ಬಂದ ಜೀವನಕಥನಾತ್ಮಕ ಚಿತ್ರಗಳು- ಭಕ್ತ ಕನಕದಾಸ, ನವಕೋಟಿ ನಾರಾಯಣ, ಸರ್ವಜ್ಞಮೂರ್ತಿ, ರಣಧೀರ, ಇಮ್ಮಡಿ ಪುಲಿಕೇಶಿ, ಶ್ರೀಕೃಷ್ಣದೇವರಾಯ, ಮಯೂರ ಇತ್ಯಾದಿ- ಇವರೆಲ್ಲರೂ ಐತಿಹಾಸಿಕ ವ್ಯಕ್ತಿಗಳೇ. ಆದರೂ ಈ ಇತಿಹಾಸ ಪುರುಷರೂ ಜಾನಪದ ನಾಯಕರ ವೇಷ ತಳೆದೇ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ‘ಇನ್ನು ನಿನಗೇಕೆ ಕೊಡಬೇಕು ಕಪ್ಪ?’ ಎಂದು ಬ್ರಿಟಿಷರಿಗೆ ಸವಾಲೆಸೆದ- ಬಿ. ಸರೋಜಾದೇವಿಯವರ ಕಿತ್ತೂರು ಚೆನ್ನಮ್ಮ ಮರೆಯಲುಂಟೇ? ಚೆನ್ನಮ್ಮನ ಬಲಗೈ ಭಂಟ ಸಂಗೊಳ್ಳಿ ರಾಯಣ್ಣ ಕೂಡ ಕನ್ನಡ ಪ್ರೇಕ್ಷಕರ ಮುಂದೆ ಎರಡು ಬಾರಿ ಬಂದಿದ್ದಾನೆ. 1966ರಲ್ಲಿ ಬಿ.ಟಿ ಅಥಣಿ ಎಂಬುವವರ ನಿರ್ದೇಶನದಲ್ಲಿ ಒಮ್ಮೆ. ಮತ್ತೆ 2012ರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ. (ಲತಾ ಮಂಗೇಶ್ಕರ್ ‘ಬೆಳ್ಳನೆ ಬೆಳಗಾಯಿತು’ ಎಂದು ಹಾಡಿದ್ದು ಅದೇ ಹಳೇ ಸಂಗೊಳ್ಳಿ ರಾಯಣ್ಣದಲ್ಲಿ...) ಈ ಪಟ್ಟಿಗೆ ‘ಅಮರಶಿಲ್ಪಿ ಜಕಣಾಚಾರಿ’ ಮತ್ತು ‘ಬೇಡರ ಕಣ್ಣಪ್ಪ’ ಚಿತ್ರಗಳನ್ನು ಸೇರಿಸಬೇಕೋ ಬೇಡವೋ ತಿಳಿಯುತ್ತಿಲ್ಲ. ಯಾಕೆಂದರೆ ಜಕಣ ಐತಿಹಾಸಿಕ ವ್ಯಕ್ತಿ ಎಂಬುದಕ್ಕೆ ಆಧಾರಗಳಿಲ್ಲ, ಕಣ್ಣಪ್ಪನ ದೇವಸ್ಥಾನ ಕಾಳಹಸ್ತಿಯಲ್ಲಿದ್ದರೂ ಆತ ಇತಿಹಾಸವೋ ದಂತಕತೆಯೋ ತಿಳಿಯದು.

ಇನ್ನು ಇಡೀ ದೇಶದಲ್ಲಿ ವಿವಿಧ ಭಾಷೆಗಳಲ್ಲಿ ಬಂದಿರುವ ಜೀವನಕಥನ ಆಧಾರಿತ ಸಿನಿಮಾಗಳು ಸುಮಾರು ಮುನ್ನೂರು! ಅವುಗಳಲ್ಲಿ ಇತ್ತೀಚಿನ ಕೆಲವು ಚಿತ್ರಗಳೆಂದರೆ: ಮಣಿಕರ್ಣಿಕಾ, ಸಂಜು, ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್, ಎನ್‌ಟಿಆರ್: ಕಥಾನಾಯಕುಡು, ಮಹಾನಟಿ, ಠಾಕ್ರೆ, ಮಾಂಝಿ, ಡರ್ಟಿ ಪಿಕ್ಚರ್, ಮಂಟೊ, ಜೋಧಾ ಅಕ್ಬರ್, ಹಸೀನಾ ಪಾರ್ಕರ್, ಶಹೀದ್, ಸರಬ್ಜಿತ್, ಡ್ಯಾಡಿ, ಪಾನ್‌ಸಿಂಗ್ ತೋಮರ್, ನೇತಾಜಿ ಸುಭಾಷ್‌ಚಂದ್ರ ಬೋಸ್, ದಿ ಲೆಜೆಂಡ್ ಆಫ್ ಭಗತ್ ಸಿಂಗ್, ಮಂಗಲ್ ಪಾಂಡೆ, ರಂಗ್ ರಸಿಯಾ, ಬ್ಯಾಂಡಿಟ್ ಕ್ವೀನ್, ಡಾ. ಪ್ರಕಾಶ್ ಬಾಬಾ ಆಮ್ಟೆ, ಅಂಬೇಡ್ಕರ್, ಕಾಮರಾಜ್... ಪಟ್ಟಿ ಮುಗಿಯುವುದೇ ಇಲ್ಲ! ಅಷ್ಟೇಕೆ, ಹರಿಶ್ಚಂದ್ರನ ಚಿತ್ರ ತೆಗೆದ ದಾದಾಸಾಹೇಬ್ ಫಾಳ್ಕೆ ಜೀವನವೂ ಮತ್ತೊಂದು ಮರಾಠಿ ಚಿತ್ರದ ವಸ್ತುವಾಯಿತು- ಹರಿಶ್ಚಂದ್ರಾಚಿ ಫ್ಯಾಕ್ಟರಿ!

ಇನ್ನು ಹಲವು ಆಸ್ಕರ್ ಪ್ರಶಸ್ತಿಗಳನ್ನು ಬಾಚಿಕೊಂಡ ರಿಚರ್ಡ್ ಅಟೆನ್‌ಬರೋನ ‘ಗಾಂಧಿ’ ಬ್ರಿಟಿಷ್- ಭಾರತಗಳ ಜಂಟಿ ನಿರ್ಮಾಣದ ಅಮೋಘ ಚಿತ್ರ. ಇದಲ್ಲದೆ ಗಾಂಧೀಜಿ ಬಗ್ಗೆ ಭಾರತದಲ್ಲೇ ಇನ್ನೂ ಹಲವಾರು ಚಿತ್ರಗಳು ಬಂದಿವೆ: ಶ್ಯಾಂ ಬೆನೆಗಲ್‌ರ ಮೇಕಿಂಗ್ ಆಫ್ ದಿ ಮಹಾತ್ಮ, ಗಾಂಧಿ, ಮೈ ಫಾದರ್, ಗಾಂಧಿ ತತ್ವದಿಂದ ರೂಪುಗೊಂಡ ಮೈನೆ ಗಾಂಧಿ ಕೊ ನಹೀ ಮಾರಾ...

ಉಜ್ವಲ ರಾಷ್ಟ್ರನಾಯಕರು, ಇಲ್ಲವೇ ಹೆಸರಾಂತ ಕೇಡಿಗಳು (ಡ್ಯಾಡಿ, ಹಸೀನಾ ಪಾರ್ಕರ್...), ಇತಿಹಾಸ ಪುರುಷರು, ಇಲ್ಲವೇ ಜಾನಪದ ನಾಯಕರು- ಇವರೆಲ್ಲರೂ ಚಲನಚಿತ್ರಗಳಿಗೆ ಕಥಾವಸ್ತುವಾಗಿ ಕಂಗೊಳಿಸಿರುವುದು ಒಂದು ಧಾರೆಯಾದರೆ, ಕ್ರೀಡಾಪಟುಗಳನ್ನು ಕುರಿತ ಚಿತ್ರಗಳದ್ದೇ ಮತ್ತೊಂದು ಹೊನಲು. ಎಷ್ಟೊಂದು ಚಿತ್ರಗಳು ಬಂದಿವೆ ನೋಡಿ: ಮಹಿಳಾ ಕುಸ್ತಿಪಟುಗಳಾಗಿ ಒಲಿಂಪಿಕ್ಸ್ ಗಡಿ ಮುಟ್ಟಿದ ಗೀತಾ ಹಾಗೂ ಬಬಿತಾ ಪೊಗಟ್ ಸೋದರಿಯರ ಸಾಹಸಮಯ ಜೀವನ ಕಥನ ‘ದಂಗಲ್’, ‘ಎಂ.ಎಸ್. ಧೋನಿ’, ಬಾಕ್ಸಿಂಗ್ ಪಟು ‘ಮೇರಿ ಕೋಮ್’, ಅಥ್ಲೀಟ್ ಮಿಲ್ಖಾ ಸಿಂಗ್‌ನ ಸಾಧನೆಯನ್ನು ತೆರೆಗೆ ತಂದ ‘ಭಾಗ್ ಮಿಲ್ಖಾ ಭಾಗ್’, ‘ಅಜ಼ರ್’, ‘ಬುಧಿಯಾ ಸಿಂಗ್- ಬಾರ್ನ್ ಟು ರನ್’, ‘ಸಚಿನ್: ಎ ಬಿಲಿಯನ್ ಡ್ರೀಮ್ಸ್’, ‘ಸೂರ್ಮಾ’, ‘ಗೋಲ್ಡ್’... ಈ ಪಟ್ಟಿಯೂ ಚಿಕ್ಕದಲ್ಲ. ಇನ್ನು ಕ್ರೀಡೆಗಳನ್ನೇ ಕೇಂದ್ರವಾಗಿಟ್ಟುಕೊಂಡು ಬಂದ ಚಿತ್ರಗಳೂ ಕಮ್ಮಿಯಲ್ಲ. ‘ಚಕ್‌ದೇ ಇಂಡಿಯಾ’, ‘ಸುಲ್ತಾನ್’, ‘ಆಡುಕಳಂ’... ಈ ಯಾದಿಯಲ್ಲಿ ‘ಲಗಾನ್’ ಮರೆತವರುಂಟೆ?

ಸಿನಿಮಾ ಮೂಲತಃ ಮನರಂಜನಾ ಮಾಧ್ಯಮ. ಅಷ್ಟಾಗಿಯೂ ಈ ಖ್ಯಾತನಾಮರ ಬಗ್ಗೆ, ಕ್ರೀಡಾಪಟುಗಳ ಬಗ್ಗೆ ಯಾಕಿಷ್ಟು ಆಕರ್ಷಣೆ? ಇದಕ್ಕೆ ಉತ್ತರವಾಗಿ ಸಿನಿಮಾ ಎಂಬ ಕಲಾಮಾಧ್ಯಮದ ಮೂಲ ತಿಳಿವಳಿಕೆಗಳನ್ನು ಗಮನಿಸಬೇಕು.

ದೃಶ್ಯಮಾಧ್ಯಮದಲ್ಲಿ ಬಹುತೇಕ ಎಲ್ಲರೂ ಅನುಸರಿಸುವ ಕಥಾವಿನ್ಯಾಸವೊಂದಿದೆ. ಕಥೆಗೊಬ್ಬ ನಾಯಕ/ ನಾಯಕಿ ಕಡ್ಡಾಯ. ಆತನಿಗೆ/ ಆಕೆಗೆ ದೊಡ್ಡ ಗುರಿಯೊಂದಿದೆ. ಆ ಗುರಿಸಾಧನೆ ಸಲೀಸಲ್ಲ. ಅದಕ್ಕಾಗಿ ಆತ/ ಆಕೆ ಯಮಸಾಹಸ ಮಾಡಿ, ಪಡಬಾರದ ಪಾಡು ಪಟ್ಟು, ನೂರೆಂಟು ಅಡ್ಡಿ ಆತಂಕಗಳನ್ನು ಎದುರಿಸಿ ಕಟ್ಟಕಡೆಗೆ ಗುರಿ ಮುಟ್ಟಬಹುದು, ಇಲ್ಲವೇ ಸೋಲಬಹುದು. ಕೊನೆಗೆ ಆ ಕೇಂದ್ರ ಪಾತ್ರದ ಗೆಲುವಿನ ಜೊತೆಯೇ ಪ್ರೇಕ್ಷಕರೂ ಗೆದ್ದ ಭಾವ ಅನುಭವಿಸುತ್ತಾರೆ, ಅಥವಾ ಆ ಸೋಲಿಗೆ ನಿಡುಸುಯ್ದು ಚಿತ್ರಮಂದಿರದಿಂದ ಹೊರನಡೆಯುತ್ತಾರೆ.

ಈಗ ಈ ಕಥಾವಿನ್ಯಾಸಕ್ಕೆ ಕ್ರೀಡಾತಾರೆಯ ಅಥವಾ ಇತಿಹಾಸಪುರುಷರ ಜೀವನದ ಏಳುಬೀಳುಗಳು ಹೇಳಿ ಮಾಡಿಸಿದಂತಿಲ್ಲವೇ? ಮೇರಿ ಕೋಮ್ ಜೀವನವನ್ನೇ ಗಮನಿಸಿ. ಗುಡ್ಡಗಾಡಿನ ಪ್ರದೇಶ ಮಣಿಪುರದ ಸರ್ವೇಸಾಧಾರಣ ಕುಟುಂಬದ ಮೇರಿ ಸ್ವಂತ ಬಲದಿಂದ ಅಥ್ಲೀಟ್ ಆಗಿ, ಬಾಕ್ಸರ್ ಆಗಿ, ಮದುವೆ ಮಕ್ಕಳಾದ ಮೇಲೂ, ಬಾಕ್ಸಿಂಗ್‌ನಲ್ಲಿ ದೊಡ್ಡ ಸಾಧನೆ ಮಾಡಲು ಹೆಣಗುವ, ಅದರಲ್ಲಿ ನಿರಂತರ ಪರಿಶ್ರಮದಿಂದ ಯಶಸ್ವಿಯಾಗುವ ಚಿತ್ರಣವದು. ಆಕೆಯ ಕಷ್ಟ ಕಾರ್ಪಣ್ಯ, ಗರ್ಭಿಣಿಯಾದಾಗ ಆಸ್ಪತ್ರೆ ಸೇರುವ ಪಡಿಪಾಟಲು, ಕಡೆಯ ಪಂದ್ಯದ ಸಮಯಕ್ಕೇ ಆಸ್ಪತ್ರೆಯಲ್ಲಿ ಜೀವನ್ಮರಣದ ಹೋರಾಟ ನಡೆಸಿರುವ ಆಕೆಯ ಮಗು... ಭಾವಸಮೃದ್ಧ ಚಿತ್ರಕಥೆ ಹೆಣೆಯಲು ಇಷ್ಟು ಸಾಕಲ್ಲವೇ?

ಆದರೆ ಈ ಭಾವಯಾತ್ರೆ ಸಾಧಿಸುವ ಸಲುವಾಗಿ ನಿರ್ದೇಶಕ ಬಹಳಷ್ಟು ಬಾರಿ, ವಾಸ್ತವದಿಂದ ದೂರ ಸರಿದು ಮನಸೋ ಇಚ್ಛೆ ಕಥೆ ತಿರುಚಿಕೊಳ್ಳುವುದಿದೆ. ಎಷ್ಟೆಂದರೂ ಸಿನಿಮಾದಲ್ಲಿ ವಾಸ್ತವಕ್ಕಿಂತ ಭಾವಸಂತೃಪ್ತಿಗೇ ಹೆಚ್ಚು ಬೆಲೆ!

ಎಂ.ಎಸ್. ಧೋನಿ ಚಿತ್ರವನ್ನೇ ನೋಡಿ: ಅದರಲ್ಲಿ ಧೋನಿಯ ಮೊದಲ ಪ್ರೇಮಿ ಪಾತ್ರಧಾರಿ ದಿಶಾ ಪಟಾನಿ ಕಾರು ಅಪಘಾತದಲ್ಲಿ ತೀರಿಹೋದ ಮೇಲೆ ಧೋನಿಗೆ ಪರಿಚಯವಾಗುವವಳು ಸಾಕ್ಷಿ (ಕಿಯಾರಾ ಅಡ್ವಾಣಿ). ಕ್ರಿಕೆಟ್ ಮ್ಯಾಚ್‌ಗೆಂದು ಬಂದು ಆತ ತಂಗಿರುವ ಪಂಚತಾರಾ ಹೋಟೆಲಿನಲ್ಲಿ, ತರಬೇತಿಗಾಗಿ ಬಂದ ಹೋಟೆಲ್ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿ ಸಾಕ್ಷಿ. ಧೋನಿ ಆ ವೇಳೆಗಾಗಲೇ ಖ್ಯಾತ ಕ್ರಿಕೆಟ್ ಪಟುವಾದರೂ, ಈತನಾರೆಂದು ಆಕೆಗೆ ತಿಳಿದಿಲ್ಲ! ಧೋನಿ ಹೋಟೆಲ್ ಪ್ರವೇಶಿಸಿ ರೂಂ ಕೀಲಿ ಕೈ ಕೇಳಿದಾಗ, ಸಾಕ್ಷಿ ಆತನ ಗುರುತಿನ ಚೀಟಿ ಕೇಳುತ್ತಾಳೆ! ಮೊದಲ ನೋಟಕ್ಕೆ ಆಕೆಯ ಮುಗ್ಧತೆ ಈತನನ್ನು ಸೆಳೆಯುತ್ತದೆ. ಆಗ ಧೋನಿ ಗುರುತಿನ ಕಾರ್ಡು ರೂಮಿನಲ್ಲಿದೆ, ನನ್ನೊಂದಿಗೆ ಬನ್ನಿ, ಕೊಡುತ್ತೇನೆ ಎಂದು ಕರೆದೊಯ್ಯುತ್ತಾನೆ. ಆಕೆ ಆ ಕಾರ್ಡು ನೋಡಿ ಇತ್ತ ತಿರುಗುವಷ್ಟರಲ್ಲಿ ಇಡೀ ಹೋಟೆಲ್ ಆತನಿಗಾಗಿ ಹೂಗುಚ್ಛ ಹಿಡಿದು ಕಾದಿದೆ. ಆತ ಧೋನಿ, ಖ್ಯಾತ ಕ್ರಿಕೆಟಿಗ ಎಂದು ಅವಳಿಗೆ ತಿಳಿಯುವುದೇ ಆವಾಗ! ಹಾಗೆ ಶುರುವಾದ ಅವರ ಪರಿಚಯ, ಸ್ನೇಹಕ್ಕೆ, ಪ್ರೀತಿಗೆ ತಿರುಗಿ ಕಡೆಗೆ ಮದುವೆಯಾಗುತ್ತಾರೆ ಎಂಬುದು ಚಿತ್ರದ ಕಥೆ. ಆದರೆ ವಾಸ್ತವವೇನು?

ನಿಜಜೀವನದಲ್ಲಿ ಧೋನಿ ಕೈ ಹಿಡಿದ ಸಾಕ್ಷಿ ಸಿಂಗ್ ರಾವತ್, ಧೋನಿ ಓದಿದ ಶ್ಯಾಮಲಿಯ ಡಿಎವಿ ಜವಾಹರ್ ವಿದ್ಯಾಮಂದಿರದಲ್ಲಿ ಆತನ ಸಹಪಾಠಿ!...

ಇನ್ನು ‘ದಂಗಲ್‌’ನಲ್ಲಿ ಕುಸ್ತಿ ಕಲೆಯ ಉನ್ನತ ತರಬೇತಿಗಾಗಿ ರಾಷ್ಟ್ರೀಯ ಕ್ರೀಡಾಶಾಲೆ ಸೇರುವ ಗೀತಾ ಪೊಗಟ್‌ಗೆ ಅಲ್ಲಿ ಸಿಕ್ಕುವ ಕೋಚ್ ಕದಂನನ್ನು ಆ ಚಿತ್ರದಲ್ಲಿ ಖಳನಾಯಕನಾಗಿ ಬಿಂಬಿಸಲಾಗಿದೆ. ಗೀತಾ ಚಿಕ್ಕಂದಿನಿಂದಲೂ ತನ್ನ ತಂದೆಯಿಂದ ಕಲಿತ ಕುಸ್ತಿಯ ಶೈಲಿಯೇ ಬೇರೆ. ಈಗ ಕದಂ ಬೇಕಾಗಿಯೇ ಕಲಿಸುವ ಶೈಲಿಯೇ ಬೇರೆ. ಇದು ಕದಂ ಹಾಗೂ ತಂದೆ ಮಹಾವೀರ್ ಸಿಂಗ್ ನಡುವಣ ಜಿದ್ದಿನ ರೂಪ ತಾಳುತ್ತದೆ. ಕ್ಲೈಮ್ಯಾಕ್ಸ್‌ನಲ್ಲಂತೂ, ತಂದೆ ಆ ಪಂದ್ಯಕ್ಕೇ ಕಾಲಿಡದಂತೆ ಆತನನ್ನು ಕೂಡಿಹಾಕಿಬಿಡುತ್ತಾರೆ... ಕಡೆಗೆ ಗೀತಾ ಪದಕ ಗೆದ್ದು ಜನಗಣಮನ ಶುರುವಾದಾಗಲೇ ತನ್ನ ಮಗಳೇ ಚಾಂಪಿಯನ್ ಆಗಿದ್ದೆಂದು ತಂದೆಗೆ ತಿಳಿಯುತ್ತದೆ... ಇಲ್ಲಿ ನಿಜ ಸಂಗತಿಯೇನು?

ವಾಸ್ತವದಲ್ಲಿ ಗೀತಾ ಪೊಗಟ್‌ಗೆ ಅಂಥ ಖಳ ತರಬೇತುದಾರ ಇರಲೇ ಇಲ್ಲ! ಆದರೆ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಈ ಬದಲಾವಣೆಗಳು, ಪ್ರೇಕ್ಷಕನನ್ನು ಭಾವನಾತ್ಮಕವಾಗಿ ಸೆಳೆದು ನಿರೂಪಣೆಯಲ್ಲಿ ಮುಳುಗಿಸಿಕೊಳ್ಳುವ ವಿಧಾನಗಳು. ಯಾಕೆಂದರೆ ಸಿನಿಮಾದಲ್ಲಿ ವಾಸ್ತವಕ್ಕಿಂತ ಭಾವಸಮೃದ್ಧಿ ಮುಖ್ಯ. ರಸಾನುಭವ ಮುಖ್ಯ.

ಹಾಗಾಗಿ ಇವೆಲ್ಲ ಜೀವನಕಥನಗಳು ಎಂದು ಎಷ್ಟೇ ಬಂಬಡಾ ಬಜಾಯಿಸಿದರೂ, ಅಂತಿಮವಾಗಿ ಸಿನಿಮಾ ಎಂಬುದು ಸಿನಿಮಾನೇ!

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು