ಶುಕ್ರವಾರ, ಜೂಲೈ 10, 2020
26 °C

ಚಂಚಲೆಯಲ್ಲ, ಮಂಥರೆಯ ಮನಸ್ಸಿನ ಪಿಚ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಯುದ್ಧ  ಹಾಗೂ ಪ್ರೇಮದಲ್ಲಿ ಮಾಡಿದ್ದೆಲ್ಲವೂ ಸರಿ’ ಎಂದು ಹೇಳಲಾಗುತ್ತದೆ. ಅದೇ ರೀತಿ ಕ್ರಿಕೆಟ್‌ನಲ್ಲೂ ಮಾಡಿದ್ದೆಲ್ಲವೂ ಸರಿ ಎನ್ನುವ ದಿನಗಳಿವು. ಯುದ್ಧಭೂಮಿಯಲ್ಲಿ ಯೋಧರು ಮುನ್ನುಗ್ಗುವಾಗ, ನೆಲದಲ್ಲಿ ಹುದುಗಿಸಿರುವ ಸಿಡಿಮದ್ದಿನಿಂದ ಪಾರಾಗಲು ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಾರೆ. ಪ್ರೇಮಿಗಳಿಗೂ ಕದ್ದುಮುಚ್ಚಿ ಭೇಟಿಯಾಗುವುದರಲ್ಲೇ ಸುಖ.ಕ್ರಿಕೆಟ್‌ನಲ್ಲೂ ಎದುರಾಳಿಗಳನ್ನು ಉಡಾಯಿಸಲು ಸಿಡಿಮದ್ದು ಹುಗಿದಿರುವಂಥ ಪಿಚ್‌ಅನ್ನು ಯಾರಿಗೂ ಗೊತ್ತಾಗದಂತೆ ಸಿದ್ಧಪಡಿಸುವ ದುರಭ್ಯಾಸ ಮೊದಲಿನಿಂದಲೂ ಇದೆ. ಅಂಥ ಪಿಚ್ ಒಮ್ಮೊಮ್ಮೆ ತಮಗೂ ತಿರುಗುಬಾಣವಾಗುವದೆಂಬ ಕಲ್ಪನೆ ಇದ್ದರೂ ಇಲ್ಲದಂತೆ, ಆ ಪಿಚ್ ಮೇಲೆ ತಮ್ಮ ಗೆಲುವು ಖಚಿತ ಎಂಬಂತೆ ಆತಿಥೇಯ ತಂಡಗಳು ‘ಕ್ರಿಕೆಟ್ ಅಲ್ಲದ’ ರೀತಿಯಲ್ಲಿ ಆಟಕ್ಕಿಳಿಯುತ್ತವೆ. ಆಡಲು ಯೋಗ್ಯವಲ್ಲದ ಪಿಚ್ ಮೇಲೆ ಬಂದ ಗೆಲುವಿನ ವಿರುದ್ಧ ಬರುವ ಟೀಕೆಗಳಿಗೆ ಯಾರೂ ಉತ್ತರ ಕೊಡಲು ಹೋಗುವುದಿಲ್ಲ.ಕಳೆದ ವಾರ ವಡೋದರದಲ್ಲಿ ನಡೆದ ರಣಜಿ ಟ್ರೋಫಿ ಕ್ರಿಕೆಟ್ ಸೆಮಿಫೈನಲ್ ಪಂದ್ಯದಲ್ಲಿ ಬರೋಡಾ ತಂಡ ಕರ್ನಾಟಕ ತಂಡವನ್ನು ಹೀಗೆಯೇ ಸೋಲಿಸಿತು. ಒಂದೂವರೆ ದಿನದಲ್ಲಿ ಆಟ ಮುಗಿದುಹೋಯಿತು. ‘ಪಿಚ್ ಆಡಲು ಅಪಾಯಕಾರಿಯಾಗಿರಲಿಲ್ಲ’ ಎಂದು ನಿಯಮದ ಪ್ರಕಾರ ಆತಿಥೇಯರು ಸಮಜಾಯಿಷಿ ಕೊಟ್ಟರಾದರೂ ಆ ಪಿಚ್ ಖಂಡಿತವಾಗಿಯೂ ಆಡಲು ಯೋಗ್ಯವಾಗಿರಲಿಲ್ಲ. ಒಂದು ರಣಜಿ ಸೆಮಿಫೈನಲ್ ಹಂತದ ನಾಲ್ಕು ದಿನಗಳ ಪಂದ್ಯ ಕೇವಲ ಒಂದೂವರೆ ದಿನದಲ್ಲಿ ಮುಗಿಯುವುದು ಆಟಕ್ಕೆ ಯಾವ ರೀತಿಯಲ್ಲೂ ಯೋಗ್ಯವಲ್ಲ. ಆತಿಥೇಯರು ಗೆದ್ದಿರಬಹುದು. ಆದರೆ ಅದರಲ್ಲಿ ಮೋಸದ ವಾಸನೆ ಬಡಿಯುತ್ತದೆ. ಆ ಪಿಚ್ ಎರಡೂ ತಂಡಗಳಿಗೆ ಒಂದೇ ರೀತಿಯದಾಗಿರುತ್ತಾದರೂ, ಆತಿಥೇಯ ತಂಡ ತನ್ನ ಬೌಲಿಂಗ್ ಶಕ್ತಿಗೆ ಪೂರಕವಾಗುವ ರೀತಿ ಅದನ್ನು ಸಿದ್ಧಪಡಿಸಿರುತ್ತದೆ. ಬರೋಡಾ ತಂಡವೂ ತನ್ನ ಸ್ಪಿನ್ನರುಗಳಿಗೆ ಅನುಕೂಲವಾಗುವ ಹಾಗೆ ಪಿಚ್ ತಯಾರಿಸಿತು. ಸುನೀಲ್ ಜೋಶಿಯಂಥ ಹಿರಿಯ ಸ್ಪಿನ್ನರ್ ಇದರ ಪ್ರಯೋಜನ ಪಡೆದು ಬರೋಡಾಕ್ಕೆ ತಿರುಮಂತ್ರ ಹೇಳುವಲ್ಲಿ ಮಾತ್ರ ವಿಫಲರಾದರು. ಕರ್ನಾಟಕ ಆ ಪಿಚ್ ಮೇಲೆ ಪರದಾಡಿತು.ಕೆಟ್ಟ ಪಿಚ್ ಅಂದರೆ ಏನು? ಚೆಂಡು ದಿಢೀರನೆ ಬ್ಯಾಟ್ಸಮನ್‌ಗೆ ಅಪಾಯಕಾರಿಯಾಗುವಂತೆ ಪುಟಿಯುವುದು, ಯದ್ವಾತದ್ವಾ ತಿರುಗುವುದು ಹಾಗೂ ಬ್ಯಾಟ್ಸಮನ್‌ಗೆ ಅದರ ಗತಿಯನ್ನೇ ಗುರುತಿಸಲು ಸಾಧ್ಯವಾಗದಿರುವುದು ಕೆಟ್ಟ ಪಿಚ್‌ಗೆ ಉದಾಹರಣೆ. ಬಹುಶಃ ಕೆಟ್ಟ ಪಿಚ್ ತಯಾರಿಸಲು ಆಗಲಿಕ್ಕಿಲ್ಲ. ಅದನ್ನು ಹಾಗೆಯೇ ಬಿಡುವುದರಿಂದ ಅಂದರೆ ರೋಲ್ ಮಾಡದಿರುವುದರಿಂದ (ಅಂಡರ್ ಪ್ರಿಪೇರ್ಡ್) ಅದೊಂದು ಆಟಕ್ಕೆ ಯೋಗ್ಯವಲ್ಲದ ಪಿಚ್ ಆಗಿ ರೂಪುಗೊಳ್ಳುತ್ತದೆ. ಅಂದರೆ ಪ್ರಥಮ ದರ್ಜೆ ಪಂದ್ಯಕ್ಕೆ ಸಿದ್ಧಪಡಿಸಬೇಕಾದ ಪಿಚ್ ಅದಾಗಿರುವುದಿಲ್ಲ. ಸಾಮಾನ್ಯವಾಗಿ ಭಾರತದಲ್ಲಿ ಇಂಥ ಪಿಚ್‌ಗಳು ಸ್ಪಿನ್ನರುಗಳ ಸ್ವರ್ಗವಾಗಿ ಮಾರ್ಪಡುತ್ತವೆ. ಎರಡೂ ತಂಡಗಳಲ್ಲಿ ಉತ್ತಮ ಸ್ಪಿನ್ನರುಗಳಿದ್ದಾಗ ಗೆಲುವಿನ ಅದೃಷ್ಟ ಯಾರಿಗೆ ಒಲಿಯುತ್ತದೆಯೋ ಹೇಳಲಿಕ್ಕಾಗದು.ಹಿಂದೆ ಈ ರೀತಿ ಹಲವು ಸಲ ಆಗಿದೆ. 1972-73 ರಲ್ಲಿ ಮದರಾಸಿನಲ್ಲಿ ನಡೆದ ರಣಜಿ ಫೈನಲ್ ಇದಕ್ಕೆ ಉತ್ತಮ ಉದಾಹರಣೆ. ಮುಂಬೈ ತಂಡವನ್ನು ಎದುರಿಸಲಿದ್ದ ತಮಿಳುನಾಡು, ಆಫ್ ಸ್ಪಿನ್ನರ್ ವೆಂಕಟರಾಘವನ್ ಹಾಗೂ ಲೆಗ್‌ಸ್ಪಿನ್ನರ್ ವಿ.ವಿ. ಕುಮಾರ್ ಅವರಿಗೆ ಅನುಕೂಲವಾಗುವಂತೆ ಪಿಚ್ ಕಾಯ್ದಿಟ್ಟುಕೊಂಡಿತ್ತು. ಆದರೆ ಮುಂಬೈನ ಎಡಗೈ ಸ್ಪಿನ್ನರ್ ಪದ್ಮಾಕರ್ ಶಿವಾಳ್ಕರ್ ಅವರ ಸಾಮರ್ಥ್ಯವನ್ನು ನಿರ್ಲಕ್ಷಿಸಲಾಗಿತ್ತು.  ಮುಂಬೈ ಪಂದ್ಯ ಗೆದ್ದು ತಮಿಳುನಾಡಿಗೆ ತಿರುಗೇಟು ನೀಡಿತ್ತು. ಪಂದ್ಯ ಒಂದು ದಿನ ಮತ್ತು ಒಂದು ಎಸೆತದಲ್ಲಿ ಮುಗಿದುಹೋಗಿತ್ತು. ಇನ್ನೊಮ್ಮೆ ಅದೇ ರೀತಿ ಕರ್ನಾಟಕವನ್ನು ಬಲಿ ಹಾಕಲು ಹೋದ ತಮಿಳುನಾಡು, ವಿಜಯಕೃಷ್ಣ ಅವರ ಎಡಗೈ ಸ್ಪಿನ್ ದಾಳಿಯೆದುರು ಶರಣಾಗಿತ್ತು. ಆದರೆ 1934 ರಲ್ಲಿ ಮೈಸೂರು ಮತ್ತು ಮದರಾಸು ನಡುವೆ ಒಂದೇ ದಿನದಲ್ಲಿ ಮುಗಿದ ಮೊಟ್ಟಮೊದಲ ರಣಜಿ ಪಂದ್ಯಕ್ಕೆ ಕೆಟ್ಟ ಪಿಚ್ ಕಾರಣವಾಗಿತ್ತು ಎಂದು ಎಲ್ಲೂ ಓದಿದ ನೆನಪಿಲ್ಲ.ಟೆಸ್ಟ್ ಸರಣಿಗಳಲ್ಲೂ ಹೀಗಾಗಿದೆ. 1987 ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಾಕಿಸ್ತಾನ ಗೆದ್ದದ್ದೂ ಹೀಗೆಯೇ. ಅದು ಭಾರತದ ಸ್ಪಿನ್ನರುಗಳಾದ ಶಿವಲಾಲ್ ಯಾದವ್, ಮಣಿಂದರ್ ಸಿಂಗ್, ರವಿ ಶಾಸ್ತ್ರಿ  ಅವರಿಗಿಂತ ಹೆಚ್ಚು ಪಾಕಿಸ್ತಾನದ ತೌಸೀಫ್ ಅಹ್ಮದ್ ಮತ್ತು ಇಕ್ಬಾಲ್ ಕಾಸಿಮ್ ಅವರಿಗೆ ಅನುಕೂಲಕರವಾಗಿ ಪರಿಣಮಿಸಿತ್ತು. ಇಂಥ ಪಿಚ್ ಮೇಲೆ ಹೇಗೆ ಬೌಲ್ ಮಾಡಬೇಕೆಂದು ಬಿಷನ್ ಸಿಂಗ್ ಬೇಡಿ ಪಾಕಿಸ್ತಾನದ ಸ್ಪಿನ್ನರುಗಳಿಗೆ ಕಿವಿಮಾತು ಹೇಳಿದ್ದರು. ‘ಚೆಂಡನ್ನು ಸುಮ್ಮನೆ ತೂರಿಬಿಡಿ, ಮುಂದಿನ ಕೆಲಸ ಅದು ಮಾಡುತ್ತದೆ’ ಎಂಬ ತತ್ವದಂತೆ ಅವರಿಬ್ಬರೂ ಒಟ್ಟು 18 ವಿಕೆಟ್ ಪಡೆದು ಭಾರತದ ಬ್ಯಾಟ್ಸಮನ್ನರನ್ನು ಮಟ್ಟ ಹಾಕಿದ್ದರು. ಸುನೀಲ್ ಗಾವಸ್ಕರ್ ಒಬ್ಬರೇ ತಮ್ಮ ಕೌಶಲ ಪ್ರದರ್ಶಿಸಿದರಾದರೂ ಅವರ ಅಜೇಯ 96 ರನ್ನುಗಳು ಭಾರತಕ್ಕೆ ಗೆಲುವು ತಂದುಕೊಡಲಿಲ್ಲ.ಸ್ಪಿನ್ನರುಗಳು ಮೆರೆಯುವ ಪಿಚ್ ಮೇಲೆ ತಾಂತ್ರಿಕವಾಗಿ ಒಬ್ಬ ಪರಿಪೂರ್ಣ ಬ್ಯಾಟ್ಸಮನ್ ಹೇಗೆ ಆಡುತ್ತಾನೆ, ಆಡಬೇಕು ಎಂಬುದಕ್ಕೆ ಗಾವಸ್ಕರ್ ಅವರ ಆ ಇನಿಂಗ್ಸ್ ಉದಾರಣೆಯಾಗಿತ್ತು. 1982 ರಲ್ಲಿ, ಅದೇ ರೀತಿಯ ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಮೇಲೆ ನಡೆದ ರಣಜಿ ಪಂದ್ಯದಲ್ಲಿ ಗಾವಸ್ಕರ್ ಮುಂಬೈ ತಂಡವನ್ನು ಸೋಲಿನಿಂದ ಪಾರುಮಾಡಿದ್ದರು. ಕರ್ನಾಟಕದ ಎಡಗೈ ಸ್ಪಿನ್ನರುಗಳಾದ ರಘುರಾಮ್ ಭಟ್ ಮತ್ತು ವಿಜಯಕೃಷ್ಣ ಎದುರು ಎಡಗೈನಲ್ಲಿ ಬ್ಯಾಟ್ ಮಾಡಿದ ಅವರು ಆಫ್‌ಸ್ಪಿನ್ನರುಗಳೆದುರು ಬಲಗೈ ಆಡಿದ್ದರು. ಇದು ತೀವ್ರ ಟೀಕೆಗೆ ಗುರಿಯಾಗಿತ್ತಾದರೂ ಅವರ ದಿಟ್ಟ ಆಟವನ್ನು ಮೆಚ್ಚಿಕೊಳ್ಳಲೇಬೇಕಾಗಿತ್ತು. ‘ಅಂಥ ಪಿಚ್ ಮೇಲೆ ಇಂಥ ಬ್ಯಾಟಿಂಗ್ ನೋಡಿಯೇ ಇರಲಿಲ್ಲ. ಸನ್ನಿ ಇನಿಂಗ್ಸ್ ಅದ್ಭುತವಾಗಿತ್ತು’ ಎಂದು ಜಿ.ಆರ್. ವಿಶ್ವನಾಥ್ ಹೇಳಿದ್ದರು. ಕಳೆದ ಗುರುವಾರ ಕೇಪ್‌ಟೌನ್‌ನಲ್ಲಿ ಮುಗಿದ ಟೆಸ್ಟ್‌ನಲ್ಲಿ ಹರಭಜನ್ ಸಿಂಗ್ ವಿರುದ್ಧ ಅದೇ ರೀತಿ ದಿಟ್ಟ, ಕೌಶಲಪೂರ್ಣ ಆಟವಾಡಿ ದಕ್ಷಿಣ ಆಫ್ರಿಕವನ್ನು ಇಕ್ಕಟ್ಟಿನಿಂದ ಪಾರುಮಾಡಲಿಲ್ಲವೇ?ಕೆಲವು ವರ್ಷಗಳ ಹಿಂದೆ ಮುಂಬೈನ ವಾಂಖೇಡೆ ಕ್ರೀಡಾಂಗಣದ ಪಿಚ್ ಪಂದ್ಯವನ್ನು ಮೂರೇ ದಿನಗಳಲ್ಲಿ (ಮೂರನೇ ದಿನ ಬೆಳಿಗ್ಗೆ 30 ಓವರುಗಳು ಮಾತ್ರ) ಮುಗಿಸಿಬಿಟ್ಟಿತು. ಭಾರತ ಪಂದ್ಯ ಗೆದ್ದರೂ ಅದು ಕ್ರಿಕೆಟ್ ಘನತೆಗೆ ಪೆಟ್ಟುಕೊಟ್ಟಿತ್ತು. ‘ನೀವು ಆಸ್ಟ್ರೇಲಿಯಕ್ಕೆ ಬನ್ನಿ, ಅಲ್ಲಿ ವೇಗದ ಹಾಗೂ ಚೆಂಡು ಅನಿರೀಕ್ಷಿತವಾಗಿ ಪುಟಿದೇಳುವ ಪಿಚ್ ನಿಮ್ಮನ್ನು ಸ್ವಾಗತಿಸುತ್ತದೆ’ ಎಂಬ ಸವಾಲಿಗೂ ಕಾರಣವಾಯಿತು. ಭಾರತದ ಬ್ಯಾಟ್ಸಮನ್‌ಗಳು ಆಸ್ಟ್ರೇಲಿಯ, ವೆಸ್ಟ್‌ಇಂಡೀಸ್ ಮತ್ತು ದಕ್ಷಿಣ ಆಫ್ರಿಕದಲ್ಲಿ ಇಂಥ ಸವಾಲಿನೆದುರು ಸೋತ ಉದಾಹರಣೆಗಳು ಸಾಕಷ್ಟಿವೆ. ಭಾರತ ತನ್ನ ಮೂಲ ಶಕ್ತಿಯಾದ ಸ್ಪಿನ್ನರುಗಳಿಗೆ ನೆರವಾಗುವ ಪಿಚ್ ಸಿದ್ಧಪಡಿಸಿದರೆ ಆಸ್ಟ್ರೇಲಿಯ, ದಕ್ಷಿಣ ಆಫ್ರಿಕ, ವೆಸ್ಟ್‌ಇಂಡೀಸ್ ತಮ್ಮ ವೇಗದ ದೈತ್ಯರಿಗೆ ಅನುಕೂಲಕರ ಪಿಚ್‌ಗಳನ್ನೇ ತಯಾರಿಸುತ್ತಿದ್ದರು.ಆದರೆ ಇಂಥ ಪಿಚ್‌ಗಳು ಒಮ್ಮೊಮ್ಮೆ ತೀರ ಅಪಾಯಕಾರಿಯಾಗಿರುತ್ತವೆ. 2009 ರಲ್ಲಿ ನವದೆಹಲಿಯ ಫಿರೋಜ್ ಷಾ ಕೋಟ್ಲ ಮೈದಾನದ ಪಿಚ್ ಎಷ್ಟೊಂದು ಅಪಾಯಕಾರಿಯಾಗಿತ್ತೆಂದರೆ ಭಾರತ ಮತ್ತು ಶ್ರೀಲಂಕಾ ನಡುವಣ ಒಂದು ದಿನದ ಅಂತರರಾಷ್ಟ್ರೀಯ ಪಂದ್ಯ ಕೆಲವು ಓವರುಗಳ ನಂತರ ರದ್ದಾಗಿಹೋಯಿತು. ಕೋಟ್ಲ ಮೈದಾನವನ್ನು ನಿಷೇಧಿಸಲಾಯಿತು. ಬರುವ ಫೆಬ್ರುವರಿ-ಮಾರ್ಚ್‌ನಲ್ಲಿ ಅದೇ ಮೈದಾನದಲ್ಲಿ ವಿಶ್ವ ಕಪ್ ಪಂದ್ಯಗಳು ನಡೆಯಲಿವೆ. ಪಿಚ್ ಅನ್ನು ಹೊಸದಾಗಿ ಸಿದ್ಧಪಡಿಸಲಾಗಿದೆ. ಐಸಿಸಿ ಅದನ್ನು ಪರೀಕ್ಷಿಸಿಯೇ ಒಪ್ಪಿಗೆ ನೀಡಿದೆ. ಆದರೆ ಪಂದ್ಯ ರದ್ದಾದ ಕಳಂಕ ಎಂದಿಗೂ ಹೋಗುವುದಿಲ್ಲ.ಕೆಲವು ಪಿಚ್‌ಗಳ ಮೇಲೆ ಬ್ಯಾಟ್ಸಮನ್ನರು ಪೆಟ್ಟು ತಿಂದ ಉದಾಹರಣೆಗಳೂ ಇವೆ. ಭಾರತದ ನಾರಿ ಕಂಟ್ರಾಕ್ಟರ್ 1962 ರಲ್ಲಿ ವೆಸ್ಟ್‌ಇಂಡೀಸ್‌ನಲ್ಲಿ ಆಡುವಾಗ ಬಾರ್ಬಡೀಸ್‌ನ ಗ್ರಿಫಿತ್ ಅವರ ಬೌಲಿಂಗ್‌ನಲ್ಲಿ ತಲೆಗೆ ಪೆಟ್ಟು ತಿಂದು ಆರು ದಿನಗಳ ಕಾಲ ಎಚ್ಚರ ತಪ್ಪಿದ್ದರು. ಅದು ಅವರ ಕ್ರಿಕೆಟ್ ಜೀವನಕ್ಕೇ ಇತಿಶ್ರೀ ಹಾಡಿತ್ತು. ಆಗ ಹೆಲ್ಮೆಟ್ ಇರಲಿಲ್ಲ. ಈಗ ಹೆಲ್ಮೆಟ್ ಹಾಕಿಕೊಂಡೇ ಬ್ಯಾಟ್ಸಮನ್ನರು ಮೈದಾನಕ್ಕಿಳಿಯುತ್ತಾರೆ. ಈಗ ಓವರ್‌ಗೆ ಎರಡಕ್ಕಿಂತ ಹೆಚ್ಚು ಬೌನ್ಸರ್ ಹಾಕಿದರೆ ಅದು ನೋಬಾಲ್. ಬೌಲರ್‌ಗೆ ಎಚ್ಚರಿಕೆ ಕೊಡಲಾಗುತ್ತದೆ. ಮೂವತ್ತರ ದಶಕದಲ್ಲಿ ಇಂಗ್ಲೆಂಡಿನ ಡಗ್ಲಸ್ ಜಾರ್ಡೀನ್ ಅವರ ಬಾಡಿಲೈನ್ ಬೌಲಿಂಗ್ ತಂತ್ರದೆದುರು ಡಾನ್ ಬ್ರಾಡ್ಮನ್ ಸೇರಿ ಆಸ್ಟ್ರೇಲಿಯದ ಬ್ಯಾಟ್ಸಮನ್ನರು ತತ್ತರಿಸಿಹೋಗಿದ್ದರು.ಸಭ್ಯರ ಆಟ ಎಂದು ಹೆಸರಾದ ಕ್ರಿಕೆಟ್‌ನಲ್ಲೇ ಇಂಥ ಕುತಂತ್ರಗಳು ಸಾಕಷ್ಟು ನಡೆಯುತ್ತವೆ. ಕ್ರಿಕೆಟ್‌ನಲ್ಲಿ ‘ಪಿಚ್ ಎಂದರೆ ಚಂಚಲೆ ಮನಸ್ಸಿನಂತೆ. ಅದನ್ನು ಗುರುತಿಸಲು ಯಾರಿಂದಲೂ ಸಾಧ್ಯವಿಲ್ಲ’ ಎಂಬ ಚೇಷ್ಟೆಯ ಮಾತೂ ಕೇಳಿಬರುತ್ತದೆ. ಆದರೆ, ಉದ್ದೇಶಪೂರ್ವಕವಾಗಿ ಕಳಪೆ ಪಿಚ್ ಆಡಲು ಒದಗಿಸುವುದು ಚಂಚಲೆಯಲ್ಲ ಮಂಥರೆಯ    ಮನಸ್ಸಾಗುತ್ತದೆ. ಬ್ಯಾಟ್ಸಮನ್ನರು ಮತ್ತು ಬೌಲರುಗಳಿಬ್ಬರೂ ಮೇಲುಗೈ ಸಾಧಿಸಲು ಅವಕಾಶವಿರುವ ಪಿಚ್ ಮೇಲೆ ಆಟ ಯಾವಾಗಲೂ ರೋಚಕವಾಗಿರುತ್ತದೆ. ಉತ್ತಮ ಫಲಿತಾಂಶ ಬರುತ್ತದೆ. ಆಟ ನೋಡಲು ಬರುವ ಪ್ರೇಕ್ಷಕನಿಗೂ ಮಜಾ ಸಿಗುತ್ತದೆ. ರಣಜಿ ಪಂದ್ಯಗಳಿಗೆ ಆತಿಥೇಯ ತಂಡಗಳು ವಡೋದರ ಮಾದರಿಯ ಪಿಚ್ ಸಿದ್ಧ ಪಡಿಸುತ್ತ ಹೋದಲ್ಲಿ ಭಾರತಕ್ಕೆ ಉತ್ತಮ ಆಟಗಾರರು ಸಿಗುವುದೇ ಇಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.