ಲಂಡನ್ (ಪಿಟಿಐ/ಐಎಎನ್‌ಎಸ್): ಹಾಲಿ ಚಾಂಪಿಯನ್ ಹಾಗೂ ಈ ಸಲವೂ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರ್ತಿ ಎನಿಸಿದ್ದ ಅಮೆರಿಕಾದ ಸೆರೆನಾ ವಿಲಿಯಮ್ಸ ವಿಂಬಲ್ಡನ್ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿಯ ಮಹಿಳಾ ವಿಭಾಗದ ಸಿಂಗಲ್ಸ್‌ನ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದರು.
ಆಲ್ ಇಂಗ್ಲೆಂಡ್ ಕ್ಲಬ್‌ನ ಸೆಂಟರ್ ಕೋರ್ಟ್‌ನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಯಾರೂ ನಿರೀಕ್ಷೆಯೇ ಮಾಡಿರಂತಹ ಫಲಿತಾಂಶ ಹೊರಬಿತ್ತು. ಗ್ರ್ಯಾನ್ ಸ್ಲಾಮ್ ಟೂರ್ನಿಯಲ್ಲಿ 16 ಸಲ ಟ್ರೋಫಿ ಎತ್ತಿ ಹಿಡಿದಿರುವ ಸೆರೆನಾ ಇಷ್ಟೊಂದು ಸುಲಭವಾಗಿ ಸೋಲು ಅನುಭವಿಸುತ್ತಾರೆ ಎಂದು ಲೆಕ್ಕಾಚಾರವೇ ಇರಲಿಲ್ಲ. ಅಮೆರಿಕದ ಆಟಗಾರ್ತಿಗೆ ಆಘಾತ ನೀಡಿದ್ದು ಜರ್ಮನಿಯ ಸಬಿನ್ ಲಿಸಿಕಿ.
31ರ ಹರೆಯದ ಸೆರೆನಾ 2-6, 6-1, 4-6ರಲ್ಲಿ ಸಬಿನ್ ಎದುರು ಮುಗ್ಗರಿಸಿದರು. ವಿಂಬಲ್ಡನ್‌ನಲ್ಲಿ ಐದು ಸಲ ಚಾಂಪಿಯನ್ ಎನಿಸಿಕೊಂಡಿರುವ ಸೆರೆನಾ 23ನೇ ಶ್ರೇಯಾಂಕದ ಲಿಸಿಕಿ ಎದುರು ಮೊದಲ ಸೆಟ್‌ನಲ್ಲಿ ಸುಲಭವಾಗಿ ಸೋಲು ಕಂಡಿದ್ದು ಅಚ್ಚರಿಗೆ ಕಾರಣವಾಯಿತು. ಆದರೆ, ಚೇತರಿಸಿಕೊಂಡು ಎರಡನೇ ಸೆಟ್ ಸರಾಗವಾಗಿ ಗೆದ್ದರು. ಆದರೆ, ಕೊನೆಯ ಸೆಟ್‌ನಲ್ಲಿ ಮೇಲುಗೈ ಸಾಧಿಸಿದ್ದು ಲಿಸಿಕಿ.
ಗ್ರ್ಯಾನ್ ಸ್ಲಾಮ್ ಟೂರ್ನಿಯ ಸಿಂಗಲ್ಸ್‌ನಲ್ಲಿ ಒಮ್ಮೆಯೂ ಪ್ರಶಸ್ತಿ ಜಯಿಸದ 23 ವರ್ಷದ ಯುವ ಆಟಗಾರ್ತಿ ಲಿಸಿಕಿ ಅನುಭವಿ ಸೆರೆನಾ ಎದುರು ತೋರಿದ ಪ್ರದರ್ಶನ ಮಾತ್ರ ಎಲ್ಲರಲ್ಲೂ ಅಚ್ಚರಿ ಉಂಟುಮಾಡಿತು.
`ಸೆರೆನಾ ಅಮೋಘ ಆಟವಾಡಿದರು. ಕೋರ್ಟ್‌ನ ಸುತ್ತಲಿದ್ದ ಅಭಿಮಾನಿಗಳನ್ನು ಕಂಡು ಒಂದುಕ್ಷಣ ರೋಮಾಂಚನಗೊಂಡೆ. ಬಲಿಷ್ಠ ಆಟಗಾರ್ತಿಯ ಎದುರು ಲಭಿಸಿದ ಗೆಲುವು ಖುಷಿ ನೀಡಿದೆ' ಎಂದು ಲಿಸಿಕಿ ಹರ್ಷ ವ್ಯಕ್ತಪಡಿಸಿದರು.
ಮಹಿಳಾ ವಿಭಾಗದ ಸಿಂಗಲ್ಸ್‌ನ ಇತರ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪೋಲೆಂಡ್‌ನ ಅಗ್ನೆಸಿಕಾ ರಾಡ್ವಾಸ್ಕಾ 4-6, 6-3, 6-3ರಲ್ಲಿ ಬಲ್ಗೇಗಿಯಾದ ಸೆವೆಟಾನಾ ಪಿರೊಂಕೊವಾ ಮೇಲೂ, ಚೀನಾದ ಲೀ ನಾ 6-2, 6-0ರಲ್ಲಿ ಇಟಲಿಯ ರಾಬೆರ್ಟಾ ವಿಂಚಿ ವಿರುದ್ಧವೂ, ಅಮೆರಿಕದ ಸ್ಲೊಯೆನಾ ಸ್ಪೆಫನ್ಸ್ 4-6, 7-5, 6-1ರಲ್ಲಿ ಮೊನಿಕಾ ಪುಯಿಗ್ ಮೇಲೂ ಗೆಲುವು ಪಡೆದರು.
ಕ್ವಾರ್ಟರ್ ಫೈನಲ್‌ಗೆ ಫೆರರ್, ಮರ‌್ರೆ: ಸ್ಪೇನ್‌ನ ಡೇವಿಡ್ ಫೆರರ್ ಪುರುಷರ ವಿಭಾಗದ ಸಿಂಗಲ್ಸ್‌ನ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 6-7, 7-6, 6-1, 6-1ರಲ್ಲಿ ಕ್ರೊಯೇಷಿಯಾದ ಇವಾನ್ ದೊಡಿಗ್ ಎದುರು ಗೆಲುವು ಸಾಧಿಸಿ ಎಂಟರ ಘಟ್ಟಕ್ಕೆ ಲಗ್ಗೆ ಇಟ್ಟರು. ಬ್ರಿಟನ್‌ನ ಆ್ಯಂಡಿ ಮರ‌್ರೆ 6-4, 7-6, 6-1ರಲ್ಲಿ ರಷ್ಯಾದ ಮಿಖಾಯಲ್ ಯೂಜಿನಿ ಎದುರು ಜಯ ಪಡೆದು ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.
ಅರ್ಜೇಂಟೀನಾದ ಜುವಾನ್ ಮಾರ್ಟಿನ್ ಡೆಲ್ ಪೆಟ್ರೊ 6-4, 7-6, 6-3ರಲ್ಲಿ ಇಟಲಿಯ ಆ್ಯಂಡ್ರೆಸ್ ಸಿಪ್ಪಿ ಎದುರು ಜಯಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.
ಗೆದ್ದ ಭೂಪತಿ, ಸೋತ ಸಾನಿಯಾ: ಪುರುಷರ ವಿಭಾಗದ ಡಬಲ್ಸ್‌ನಲ್ಲಿ ಭಾರತದ ಮಹೇಶ್ ಭೂಪತಿ ಹಾಗೂ ಅಸ್ಟ್ರಿಯಾದ ಜೂಲಿಯಾನ್ ನೋಲ್ ಜೋಡಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರೆ, ಭಾರತದ ಸಾನಿಯಾ ಮಿರ್ಜಾ ಮತ್ತು ಅಮೆರಿಕದ ಲಿಜಿಯಲ್ ಹಬರ್ ಮಹಿಳಾ ವಿಭಾಗದ ಡಬಲ್ಸ್‌ನಲ್ಲಿ ಸೋಲು ಕಂಡು ಟೂರ್ನಿಯಿಂದ ಹೊರ ಬಿದ್ದರು.
ಆರನೇ ಶ್ರೇಯಾಂಕದ ಸಾನಿಯಾ-ಹಬರ್ ಜೋಡಿ 2-6, 6-3, 2-6ರಲ್ಲಿ ಜಪಾನ್‌ನ ಶುಕೊ ಅಯೊಮಾ-ದಕ್ಷಿಣ ಆಫ್ರಿಕಾದ ಸಿನೆಲ್ಲಾ ಸಿಹೀಪಿರ್ಸ್ ಎದುರು ಸೋಲು ಕಂಡರು. ಆದರೆ, ಎಂಟನೇ ಶ್ರೇಯಾಂಕ ಹೊಂದಿರುವ ಭೂಪತಿ-ನೋಲ್ ಅವರು 6-2, 6-4, 3-6, 6-4ರಲ್ಲಿ ಕೆನಡಾದ ಆಟಗಾರರಾದ ಜೆಸ್ಸಿ ಲೆವಿನಿ- ವಸೆಕ್ ಪೊಸ್ಪಿಸಿಲ್ ಎದುರು ಗೆಲುವು ಸಾಧಿಸಿದರು.
ಪುರುಷರ ವಿಭಾಗದ ಡಬಲ್ಸ್‌ನಲ್ಲಿ ಗೆಲುವಿನ ಓಟ ಮುಂದುವರಿಸಿರುವ ಭಾರತದ ರೋಹನ್ ಬೋಪಣ್ಣ ಹಾಗೂ ಫ್ರಾನ್ಸ್‌ನ ಎಡ್ವರ್ಡ್ ರೋಜರ್ ವೆಸ್ಸಲಿನ್ ಅವರೂ ಎಂಟರ ಘಟ್ಟ ತಲುಪಿದರು. ಈ ಜೋಡಿ ಮೂರನೇ ಸುತ್ತಿನ ಪಂದ್ಯದಲ್ಲಿ 6-4, 4-6, 7-6, 6-2ರಲ್ಲಿ ಅಸ್ಟ್ರೀಯಾದ ಅಲೆಕ್ಸಾಂಡರ್ ಪೇಯಾ ಹಾಗೂ ಬ್ರೆಜಿಲ್‌ನ ಬ್ರೂನೊ ಸೊಯಿರೆಸಾ ಎದುರು ಗೆಲುವು ಪಡೆದು ಎಂಟರ ಘಟ್ಟಕ್ಕೆ ಮುನ್ನಡೆದರು. ಇದಕ್ಕಾಗಿ ಎರಡು ಗಂಟೆ 17 ನಿಮಿಷ ಹೋರಾಟ ನಡೆಸಬೇಕಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.