ಶತಕಗಳ ಹೊಳಪು; ತಿರುಗೇಟಿನ ಬಿಸುಪು

7
ಟೆಸ್ಟ್‌ ಕ್ರಿಕೆಟ್‌ಗೆ ಅಫ್ಗಾನಿಸ್ತಾನ ಪದಾರ್ಪಣೆ: ಶಿಖರ್ ದಾಖಲೆಯ ಶತಕ; ಮುರಳಿ ಮಿಂಚು

ಶತಕಗಳ ಹೊಳಪು; ತಿರುಗೇಟಿನ ಬಿಸುಪು

Published:
Updated:
ಶತಕಗಳ ಹೊಳಪು; ತಿರುಗೇಟಿನ ಬಿಸುಪು

ಬೆಂಗಳೂರು: ಮುಂಗಾರು ಮಳೆಯಲ್ಲಿ ಮಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ಭಾರತ ತಂಡದ ಬ್ಯಾಟಿಂಗ್ ವೈಭವ ಗರಿಗೆದರಿತು. ತನ್ನ ಮೊಟ್ಟಮೊದಲ ಟೆಸ್ಟ್ ಆಡುತ್ತಿರುವ ಅಫ್ಗಾನಿಸ್ತಾನ ತಂಡದ ದಿಟ್ಟತನದ ಆಟವೂ ಕಳೆಗಟ್ಟಿತು.

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಭಾರತ ತಂಡಕ್ಕೆ ಶಿಖರ್ ಧವನ್ (107; 96ಎ, 19ಬೌಂ, 3ಸಿ) ಮತ್ತು ಮುರಳಿ ವಿಜಯ್ (105; 153ಎ, 15ಬೌಂ, 1ಸಿ) ಅವರ ಅಮೋಘ ಶತಕಗಳ ಉತ್ತಮ ಆರಂಭ ದೊರೆಯಿತು. ಊಟಕ್ಕೂ ಮುನ್ನದ ಅವಧಿಯಲ್ಲಿ ಶತಕ ಹೊಡೆದ ಭಾರತದ ಮೊದಲ ಆಟಗಾರನೆಂಬ ಹೆಗ್ಗಳಿಕೆಗೆ ಶಿಖರ್ ಪಾತ್ರರಾದರು. ಅವರ ಅಬ್ಬರದ ಬ್ಯಾಟಿಂಗ್‌ನಿಂದಾಗಿ ಪಂದ್ಯದ ಮೊದಲ ಅವಧಿಯು ಟ್ವೆಂಟಿ–20 ಕ್ರಿಕೆಟ್‌ನಂತೆ ಕಂಡಿತು. ಅದರಿಂದಾಗಿ ತಂಡವು ಬೃತಹ್ ಮೊತ್ತ ಗಳಿಸುವ ನಿರೀಕ್ಷೆ ಮೂಡಿತ್ತು.

ಆದರೆ ಎರಡನೇ ಅವಧಿಯಲ್ಲಿ  ಸುರಿದ ಮಳೆಯಿಂದಾಗಿ ಹೆಚ್ಚು ಆಟ ನಡೆಯಲಿಲ್ಲ.  ಆದರೆ, ಚಹಾ ವಿರಾಮದ ನಂತರ ಅವಧಿಯಲ್ಲಿ  ಅಫ್ಗನ್ ಬೌಲರ್‌ಗಳು ವಿಜೃಂಭಿಸಿದರು. ಇದೊಂದೇ ಅವಧಿಯಲ್ಲಿ 99 ರನ್‌ಗಳನ್ನು ನೀಡಿ ಐದು ವಿಕೆಟ್‌ಗಳನ್ನು ಕಬಳಿಸಿದರು. ಇದರಿಂದಾಗಿ ಆತಿಥೇಯ ತಂಡವು ದಿನದಾಟದ ಕೊನೆಗೆ 78 ಓವರ್‌ಗಳಲ್ಲಿ  6 ವಿಕೆಟ್‌ಗಳ ನಷ್ಟಕ್ಕೆ 347 ರನ್‌ಗಳನ್ನು ಗಳಿಸಿತು.

ಬೆಳಿಗ್ಗೆ ಶಿಖರ್ ಅಬ್ಬರಕ್ಕೆ ಬಸವಳಿದಿದ್ದ ಅಸ್ಗರ್ ಸ್ಥಾನಿಕ್‌ಜಾಯ್ ಅವರ ಬಳಗವು ಸಂಜೆಯ ಹೊತ್ತಿಗೆ ನಗುಮೊಗದೊಂದಿಗೆ ಪೆವಿಲಿಯನ್‌ಗೆ ಮರಳಿತು.

**

**

ಶಿಖರ್ ದಾಖಲೆ: ಆರಂಭದಿಂದಲೇ ಬಿರುಸಿನ ಆಟವಾಡಿದ ಎಡಗೈ ಬ್ಯಾಟ್ಸ್‌ಮನ್ ಶಿಖರ್ ಧವನ್ 87 ಎಸೆತಗಳಲ್ಲಿ ಶತಕದ ಗಡಿ ತಲುಪಿದರು. ಕೇವಲ 116 ನಿಮಿಷಗಳಲ್ಲಿ ಈ ಸಾಧನೆ ಮಾಡಿದರು. ಊಟದ ವಿರಾಮಕ್ಕೂ ಮುನ್ನ ಶತಕ ದಾಖಲಿಸಿದ ಭಾರತದ ಮೊದಲ ಆಟಗಾರನಾದರು. 

ಅವರು 24 ರನ್‌ಗಳನ್ನು ಗಳಿಸಿದ್ದ ಸಂದರ್ಭದಲ್ಲಿ ಮೊಹಮ್ಮದ್ ನಬಿ ಬಿಟ್ಟ ಕ್ಯಾಚ್‌ನಿಂದ ಜೀವದಾನ ಪಡೆದಿದ್ದರು. ಶಿಖರ್ ಅವರು ರಶೀದ್ ಖಾನ್ ಅವರನ್ನು ಹೆಚ್ಚು ದಂಡಿಸಿದರು. ಮುರಳಿ ವಿಜಯ್ ಜೊತೆಗೆ ಮೊದಲ ವಿಕೆಟ್‌ಗೆ 168 ರನ್ ಸೇರಿಸಿದ ಶಿಖರ್ ಅವರು ಅಹಮದ್‌ ಜಾಯ್ ಎಸೆತದಲ್ಲಿ ನಬಿ ಅವರಿಗೆ ಕ್ಯಾಚಿತ್ತು ಮರಳಿದರು.

ಕ್ರೀಸ್‌ನಲ್ಲಿದ್ದ ಮುರಳಿ ವಿಜಯ್ ಅವರು ಕರ್ನಾಟಕದ ಕೆ.ಎಲ್. ರಾಹುಲ್ ಜೊತೆಗೂಡಿ  ರನ್‌ ಗಳಿಕೆಯ ವೇಗವನ್ನು ಮುಂದುವರಿಸಿದರು. ಇವರಿಬ್ಬರ  ಜೊತೆಯಾಟದಲ್ಲಿ  112 ರನ್‌ ಗಳು ಸೇರಿದವು. ಟೆಸ್ಟ್‌ ಕ್ರಿಕೆಟ್‌ನಲ್ಲಿ 12ನೇ ಶತಕವನ್ನು ದಾಖಲಿಸಿದರು.

52ನೇ ಓವರ್‌ನಲ್ಲಿ ವಫಾದರ್ ಅವರ ಎಸೆತದಲ್ಲಿ ವಿಜಯ್ ಎಲ್‌ಬಿಡಬ್ಲ್ಯು ಆದರು. ಅರ್ಧಶತಕ ಗಳಿಸಿ ಆಡುತ್ತಿದ್ದ ಕೆ.ಎಲ್. ರಾಹುಲ್ (54; 64ಎ, 8ಬೌಂ) 53ನೇ ಓವರ್‌ನಲ್ಲಿ ಔಟಾದರು. ನಂತರ ಬಂದ ಬ್ಯಾಟ್ಸ್‌ಮನ್‌ಗಳು ಹೆಚ್ಚು ರನ್‌ ಗಳಿಸಲಿಲ್ಲ.


**

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry