ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇಟ್ ಲಿಫ್ಟಿಂಗ್ ಪ್ರತಿಭೆ ಅಕ್ಷತಾ ಬಿರಾದಾರ

ಕೃಷಿ ಹಿನ್ನೆಲೆಯ ಕುಟುಂಬದ ಬಡತನದ ಬೇಗೆಯಲ್ಲೂ ಬೆಳಗುತ್ತಿರುವ ಭಾರ ಎತ್ತುವ ಸ್ಪರ್ಧಿ
Last Updated 11 ಡಿಸೆಂಬರ್ 2018, 19:46 IST
ಅಕ್ಷರ ಗಾತ್ರ

ದೇವರ ಹಿಪ್ಪರಗಿ:ವೇಟ್ ಲಿಫ್ಟಿಂಗ್ (ಭಾರ ಎತ್ತುವುದು) ಎಂಬ ಕ್ರೀಡಾ ಪದವೇ ತಿಳಿಯದ, ಪಟ್ಟಣದ ಕೃಷಿ ಮನೆತನದ ಅಕ್ಷತಾ ಬಿರಾದಾರ ಅಂತರ ಕಾಲೇಜು ಮಟ್ಟದ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾಗಿಯಾಗಿ ತನ್ನ ಸಾಧನೆಯಿಂದ, ಎಲ್ಲರ ಗಮನ ಸೆಳೆಯುವ ಜತೆ ಭರವಸೆಯ ಕ್ರೀಡಾಪಟುವಾಗಿ ಹೊರಹೊಮ್ಮಿದ್ದಾಳೆ.

ಬೆಳಗಾವಿಯ ಬಾಹುರಾವ್ ಕಾಕತ್ಕರ್ ಕಾಲೇಜಿನಲ್ಲಿ ಈಚೆಗೆ ನಡೆದ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಅಂತರ ಕಾಲೇಜು ಏಕ ವಲಯದ ವೇಟ್ ಲಿಫ್ಟಿಂಗ್ ಸ್ಪರ್ಧೆಯ 2018-19ನೇ ಸಾಲಿನ 49 ಕೆ.ಜಿ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆಯುವುದರ ಮೂಲಕ, ತಾನು ಕಲಿಯುತ್ತಿರುವ ಜಮಖಂಡಿಯ ಬಿ.ಎಚ್.ಎಸ್ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಜತೆಗೆ ಪಟ್ಟಣಕ್ಕೂ ಕೀರ್ತಿ ತಂದಿದ್ದಾಳೆ.

‘ಪಟ್ಟಣದ ನಿವಾಸಿ, ಕೃಷಿ ಕಾಯಕದಲ್ಲಿ ತಲ್ಲೀನರಾಗಿರುವ ಯರನಾಳ ಕುಟುಂಬಕ್ಕೆ ಸೇರಿದ ನನಗೆ ಈ ಕ್ರೀಡೆಯ ಕುರಿತು ಯಾವುದೇ ಮಾಹಿತಿಯಿರಲಿಲ್ಲ. ಪಟ್ಟಣದ ಕಾಲೇಜಿನಲ್ಲಿ ಎನ್.ಸಿ.ಸಿ.ಗೆ ಸೇರಲು ಅವಕಾಶ ಇಲ್ಲದ ಕಾರಣವಾಗಿ ಸ್ನೇಹಿತೆ ಶ್ವೇತಾ ಮಠಳೊಂದಿಗೆ ಜಮಖಂಡಿಯ ಬಿ.ಎಚ್.ಎಸ್ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪ್ರವೇಶ ಪಡೆದೆ.

ಅಲ್ಲಿ ನಿತ್ಯವೂ ಸ್ನೇಹಿತೆಯೊಂದಿಗೆ ಸೇರಿ ಜಿಮ್‌ಗೆ ತೆರಳುತ್ತಿದ್ದು, ನಾನು ಯಾಕೆ ಅವಳ ಹಾಗೆ ಈ ಕ್ರೀಡೆಯಲ್ಲಿ ಭಾಗವಹಿಸಬಾರದು ? ಎಂದು ಯೋಚಿಸಿ ಕಠಿಣ ಅಭ್ಯಾಸದಲ್ಲಿ ತೊಡಗಿದೆ. ಕಾಲೇಜಿನ ದೈಹಿಕ ಶಿಕ್ಷಣಾಧಿಕಾರಿ ಕೆ.ಎಂ.ಶಿರಹಟ್ಟಿ ನನ್ನ ಸಾಮರ್ಥ್ಯ ಅರಿತು ಎಷ್ಟು ಕೆ.ಜಿ. ವಿಭಾಗದಲ್ಲಿ ಸ್ಪರ್ಧೆ ಮಾಡಬೇಕು ? ತಯಾರಿ ಹೇಗಿರಬೇಕು ? ಎಂಬ ವಿಷಯಗಳ ಕುರಿತಾಗಿ ಅಗತ್ಯ ತರಬೇತಿ ನೀಡಿದರು. ಇದೇ ಸಂದರ್ಭದಲ್ಲಿ ಹತ್ತು ದಿನ ಎನ್.ಸಿ.ಸಿ. ತರಬೇತಿ ಶಿಬಿರ ಸಹ ಸ್ಪರ್ಧೆಗೆ ಅನುಕೂಲಕರವಾಗಿ ಪರಿಣಮಿಸಿತು’ ಎಂದು ತನ್ನ ಕ್ರೀಡಾ ಪ್ರವೇಶದ ಕುರಿತಂತೆ ಅಕ್ಷತಾ ಬಿರಾದಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಾಲೇಜು ಅಭ್ಯಾಸದೊಂದಿಗೆ ವೇಟ್ ಲಿಫ್ಟಿಂಗ್ ಕ್ರೀಡೆಯಲ್ಲಿ ಮಾಡಿದ ಸಣ್ಣ ಸಾಧನೆಯಿಂದ ದೊಡ್ಡಪ್ಪ ಬಾಬುಗೌಡ, ಅಜ್ಜ ನಿಂಗೊಂಡಪ್ಪಗೌಡ, ಅಜ್ಜಿ ತಾರಾಬಾಯಿ ಸಂತಸಗೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ತರಬೇತಿ ಪಡೆದು ಮೊದಲು ಯೂನಿವರ್ಸಿಟಿ ಬ್ಲೂ ಆಗಬೇಕೆಂದು ಬಯಸಿದ್ದೇನೆ’ ಎಂದು ಅಕ್ಷತಾ ತನ್ನ ಕನಸು ಬಿಚ್ಚಿಟ್ಟರು.

‘ಭಾರ ಎತ್ತುವಿಕೆಯ ಸ್ಪರ್ಧೆ ಗಂಡಸರಿಗೆ ಮಾತ್ರ ಅನ್ವಯಿಸುವಂತದ್ದು ಎಂದು ತಿಳಿದಿದ್ದೇ. ಆದರೆ ಮಹಿಳೆಯರು ಇದರಲ್ಲಿ ಮುಂದು ಎಂಬುದನ್ನು ಮಗಳ ಸಾಧನೆಯಿಂದ ತಿಳಿಯುವಂತಾಯಿತು. ನಮ್ಮದು ಕೃಷಿಯನ್ನೇ ಅವಲಂಬಿಸಿದ ಕುಟುಂಬ. ಈಗೀಗ ಮಳೆಯ ಕೊರತೆಯಿಂದ ಉತ್ಪನ್ನ ಕಡಿಮೆಯಾಗಿದ್ದು, ಮನೆ ನಿರ್ವಹಣೆ ಜತೆಗೆ ಮಗಳ ಕ್ರೀಡಾ ತರಬೇತಿ ವೆಚ್ಚವೂ ಸೇರಿದೆ. ಪರಿಸ್ಥಿತಿ ಹೇಗೆ ಇರಲಿ, ಮಗಳ ಸಾಧನೆಗೆ ಯಾವುದೇ ಅಡ್ಡಿಯಾಗದಂತೆ, ಅವಳ ಎಲ್ಲ ಪೂರೈಕೆಗಳಿಗೆ ಬೆಂಗಾವಲಾಗುತ್ತೇನೆ’ ಎನ್ನುತ್ತಾರೆ ಅಕ್ಷತಾ ತಂದೆ ಶಿವನಗೌಡ ಬಿರಾದಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT