ಶುಕ್ರವಾರ, ಸೆಪ್ಟೆಂಬರ್ 20, 2019
27 °C

ಅಫ್ಗಾನಿಸ್ತಾನ ತಂಡಕ್ಕೆ ಅಮುಲ್‌ ಪ್ರಾಯೋಜಕತ್ವ

Published:
Updated:

ನವದೆಹಲಿ: ಈ ಬಾರಿಯ ವಿಶ್ವಕಪ್‌ನಲ್ಲಿ ಆಡುವ ಅಫ್ಗಾನಿಸ್ತಾನ ತಂಡದ ಪ್ರಮುಖ ಪ್ರಾಯೋಜಕತ್ವವನ್ನು ಅಮುಲ್ ವಹಿಸಿಕೊಂಡಿದೆ. ಅಫ್ಗಾನಿಸ್ತಾನ ತಂಡದ ಆಟಗಾರರ ಪೋಷಾಕಿನ ಬಲಗೈ ಮೇಲೆ ಅಮುಲ್‌ನ ಲಾಂಛನವನ್ನು ಮುದ್ರಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

‘ತಂಡದ ಪ್ರಾಯೋಜಕತ್ವ ವಹಿಸಲು ಕಂಪನಿಗೆ ತುಂಬ ಹೆಮ್ಮೆಯಾಗುತ್ತಿದೆ. ಕ್ರಿಕೆಟ್‌ ತಂಡವೊಂದನ್ನು  ಇದೇ ಮೊದಲ ಬಾರಿ ಪ್ರಾಯೋಜಿಸುತ್ತಿದ್ದು ವೇಗವಾಗಿ ಬೆಳೆಯುತ್ತಿರುವ ಅಫ್ಗಾನಿಸ್ತಾನ ತಂಡ ವಿಶ್ವಕಪ್‌ನಲ್ಲಿ ಉತ್ತಮ ಸಾಮರ್ಥ್ಯ ತೋರುವ ಭರವಸೆ ಇದೆ’ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಆರ್‌.ಎಸ್‌. ಸೋಧಿ ಭರವಸೆ ವ್ಯಕ್ತಪಡಿಸಿದರು.

‘ಅಮುಲ್ ಮತ್ತು ಅಫ್ಗಾನಿಸ್ತಾನಕ್ಕೆ ಹತ್ತಿರದ ನಂಟಿದೆ. 1969ರಲ್ಲಿ ಅಲ್ಲಿನ ಸಾಮಾಜಿಕ ಕಾರ್ಯಕರ್ತ ಖಾನ್ ಅಬ್ದುಲ್ ಗಾಫರ್‌ ಖಾನ್‌ ಅಮುಲ್‌ಗೆ ಭೇಟಿ ನೀಡಿದ್ದರು. ಇತ್ತೀಚೆಗೆ ಇಲ್ಲಿನ ಅನೇಕ ಹಾಲು ಉತ್ಪಾದಕ ಮಹಿಳಾ ಸಂಘಗಳು ಅಫ್ಗಾನಿಸ್ತಾನಕ್ಕೆ ಭೇಟಿ ನೀಡಿವೆ. ಗ್ರಾಮೀಣ ಬದುಕು ಮತ್ತು ಮಹಿಳೆಯರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ಅಮುಲ್ ಅಫ್ಗಾನಿಸ್ತಾನದಲ್ಲಿ ಸಾಮಾಜಿಕ ಕ್ರಾಂತಿಗೆ ಪರೋಕ್ಷವಾಗಿ ನೆರವಾಗಿದೆ’ ಎಂದು ಅವರು ತಿಳಿಸಿರು.

‘ಅಮುಲ್‌ನ ಸಹಕಾರಕ್ಕೆ ತಂಡ ಅಭಾರಿಯಾಗಿದೆ. ಇದು ಈ ಬಾರಿಯ ಟೂರ್ನಿಯಲ್ಲಿ ಉತ್ತಮ ಸಾಧನೆ ಮಾಡಲು ಪ್ರೇರಣೆಯಾಗಲಿದೆ’ ಎಂದು ತಂಡದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಸಾದುಲ್ಲಾ ಖಾನ್ ಹೇಳಿದರು.

Post Comments (+)